#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Rishabh Shetty: ಕುಂದಾಪುರಕ್ಕೆ ಬಂದು ರಿಷಬ್‌ ಶೆಟ್ಟಿಯನ್ನು ಭೇಟಿಯಾದ ರಾಣಾ ದಗ್ಗುಬಾಟಿ; 'ಕಾಂತಾರ'ದಲ್ಲಿ ನಟಿಸ್ತಾರಾ ಟಾಲಿವುಡ್‌ ನಟ?

Rishabh Shetty: ಟಾಲಿವುಡ್‌ ಸ್ಟಾರ್‌ ರಾಣಾ ದಗ್ಗುಬಾಟಿ ಕುಂದಾಪುರಕ್ಕೆ ಆಗಮಿಸಿ ಸ್ಯಾಂಡಲ್‌ವುಡ್‌ ನಟ ರಿಷಬ್‌ ಶೆಟ್ಟಿ ಅವರನ್ನು ಭೇಟಿ ಮಅಡಿದ್ದಾರೆ. ಅದಕ್ಕೇನು ಕಾರಣ ಎನ್ನುವ ವಿವರ ಇಲ್ಲಿದೆ.

Profile Ramesh B Dec 20, 2024 10:18 PM
ಉಡುಪಿ: ಸ್ಯಾಂಡಲ್‌ವುಡ್‌ನ ಡಿವೈನ್‌ ಸ್ಟಾರ್‌, ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ರಿಷಬ್‌ ಶೆಟ್ಟಿ (Rishabh Shetty) ಸದ್ಯ ಬಹು ನಿರೀಕ್ಷಿತ ʼಕಾಂತಾರ: ಚಾಪ್ಟರ್‌ 1ʼ (Kantara Chapter 1) ಚಿತ್ರದಲ್ಲಿ ನಿರತರಾಗಿದ್ದಾರೆ. 2022ರಲ್ಲಿ ತೆರೆಕಂಡ ʼಕಾಂತಾರʼ (Kantara) ಸಿನಿಮಾದ ಮೂಲಕ ಇಡೀ ದೇಶವೇ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದ್ದ ಅವರು ಅದರ 2ನೇ ಭಾಗವಾಗಿ ʼಕಾಂತಾರ: ಚಾಪ್ಟರ್‌ 1ʼ ಕೈಗೆತ್ತಿಕೊಂಡಿದ್ದಾರೆ. ʼಕಾಂತಾರʼದಲ್ಲಿ ತುಳುನಾಡಿನ ವಿಶಿಷ್ಟ ದೈವಾರಾಧನೆಯನ್ನು ತೆರೆ ಮೇಲೆ ತಂದಿದ್ದ ಅವರು ಕರಾವಳಿಯ ವಿಶಿಷ್ಟ ಸಂಸ್ಕೃತಿಯನ್ನು ಇಡೀ ದೇಶಕ್ಕೆ ಪರಿಚಯಿಸಿದ್ದರು. ಇದೇ ಕಾರಣಕ್ಕೆ ʼಕಾಂತಾರʼ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆದಿತ್ತು. ಕೇವಲ 16 ಕೋಟಿ ರೂ. ವೆಚ್ಚದಲ್ಲಿ ಚಿತ್ರವನ್ನು ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್‌ ಬರೋಬ್ಬರಿ 400 ಕೋಟಿ ರೂ. ಬಾಚಿಕೊಂಡಿತ್ತು. ಹುಟ್ಟೂರಾದ ಕುಂದಾಪುರದಲ್ಲಿ ಸದ್ಯ ಬೀಡು ಬಿಟ್ಟಿರುವ ರಿಷಬ್‌ ಶೆಟ್ಟಿ ಈಗಾಗಲೇ ʼಕಾಂತಾರ: ಚಾಪ್ಟರ್‌ 1ʼ ಸಿನಿಮಾದ ಚಿತ್ರೀಕರಣ ಆರಂಭಿಸಿದ್ದಾರೆ. ಈ ಮಧ್ಯೆ ಕುಂದಾಪುರಕ್ಕೆ ಆಗಮಿಸಿದ ಟಾಲಿವುಡ್‌ ಸ್ಟಾರ್‌ ರಾಣಾ ದಗ್ಗುಬಾಟಿ (Rana Daggubati) ಅವರು ರಿಷಬ್‌ ಶೆಟ್ಟಿ ಅವರನ್ನು ಭೇಟಿಯಾಗಿದ್ದಾರೆ. ಹಾಗಾದರೆ ಅವರೂ ಚಿತ್ರದ ಭಾಗವಾಗುತ್ತಿದ್ದಾರಾ?
ಕೆಲವು ತಿಂಗಳ ಹಿಂದೆಯೇ ಚಿತ್ರದ ಶೂಟಿಂಗ್‌ ಆರಂಭಿಸಿರುವ ರಿಷಬ್‌ ಶೆಟ್ಟಿ ಎಲ್ಲೂ ಯಾವೆಲ್ಲ ಕಲಾವಿದರು ಅಭಿನಯಿಸುತ್ತಿದ್ದಾರೆ ಎನ್ನುವ ಗುಟ್ಟು ಬಿಟ್ಟು ಕೊಟ್ಟಿಲ್ಲ. ಅವರ ಹೊರತು ಬೇರೆ ಯಾರೆಲ್ಲ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವ ವಿಚಾರ ಬಹಿರಂಗಗೊಂಡಿಲ್ಲ. ಕುಂದಾಪುರದಲ್ಲಿ ಬೃಹತ್‌ ಸೆಟ್‌ ಹಾಕಿ ಚಿತ್ರೀಕರಣವನ್ನು ಬಹಳ ಗುಟ್ಟಾಗಿ ನಡೆಸಲಾಗುತ್ತಿದೆ. ಇದೀಗ ರಾಣಾ ದಗ್ಗುಬಾಟಿ ಕುಂದಾಪುರಕ್ಕೆ ಭೇಟಿ ನೀಡಿದ್ದು ಕುತೂಹಲ ಕೆರಳಿಸಿದೆ. ಆದರೆ ಇಲ್ಲೊಂದು ಟ್ವಿಸ್ಟ್‌ ಇದೆ.
View this post on Instagram A post shared by Rana Daggubati (@ranadaggubati)
ರಾಣಾ ದಗ್ಗುಬಾಟಿ ಬಂದಿದ್ದೇಕೆ?
ವಿಶೇಷ ಎಂದರೆ ರಾಣಾ ದಗ್ಗುಬಾಟಿ ಕುಂದಾಪುರಕ್ಕೆ ಆಗಮಿಸಿದ್ದು ಚಿತ್ರದ ಸಲುವಾಗಿ ಅಲ್ಲ. ಬದಲಾಗಿ ತಮ್ಮ ಶೋದ ಸಲುವಾಗಿ. ಹೌದು, ಅಮೆಜಾನ್‌ ಪ್ರೈಂಗಾಗಿ ರಾಣಾ ದಗ್ಗುಬಾಟಿ ನಡೆಸಿಕೊಡುವ ʼದಿ ರಾಣಾ ದಗ್ಗುಬಾಟಿ ಶೋʼದ ಚಿತ್ರೀಕರಣಕ್ಕಾಗಿ ಅವರು ಕುಂದಾಪುರಕ್ಕೆ ಆಗಮಿಸಿದ್ದಾರೆ. ನೇಹಾ ಶೆಟ್ಟಿ ಜತೆಗೆ ಆಗಮಿಸಿ ರಿಷಬ್‌ ಶೆಟ್ಟಿ ಅವರ ಸಂದರ್ಶನ ನಡೆಸಿದ್ದಾರೆ. ಜತೆಗೆ ರಿಷಬ್‌ ಪತ್ನಿ ಪ್ರಗತಿ ಶೆಟ್ಟಿ ಅವರೊಂದಿಗೂ ಮಾತುಕತೆ ನಡೆಸಿದ್ದಾರೆ. ಅವರು ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುತ್ತಿರುವ ಕುಂದಾಪುರಕ್ಕೆ ಆಗಮಿಸುವ ವಿಡಿಯೊವನ್ನು, ಶೋದ ಪ್ರೋಮೊವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ರಿಷಬ್‌ ಶೆಟ್ಟಿ ಅವರು ರಾಣಾ ದಗ್ಗುಬಾಟಿ ಅವರಿಗೆ ಕನ್ನಡ ಪಾಠ ಮಾಡುವುದೂ ಕಂಡು ಬಂದಿದೆ. ಜತೆಗೆ ರಾಜ್‌ಕುಮಾರ್ ಅವರ ‘ʼಹೇಳು ಪಾರ್ಥʼ’ ಡೈಲಾಗ್ ಅನ್ನು ರಾಣಾಗೆ ರಿಷಬ್ ಹೇಳಿ ಕೊಟ್ಟಿದ್ದಾರೆ.
ʼಅನಿಮಲ್‌ʼ ನಿರ್ದೇಶಕರ ಜತೆ ಕೆಲಸ ಮಾಡುವ ಆಸೆ
ಮಾತುಕತೆ ವೇಳೆ ರಿಷಬ್‌ ಶೆಟ್ಟಿ ಬಾಲಿವುಡ್‌ನ ʼಅನಿಮಲ್‌ʼ ಚಿತ್ರ ಖ್ಯಾತಿಯ ಸಂದೀಪ್ ರೆಡ್ಡಿ ವಂಗ ಜತೆ ಕೆಲಸ ಮಾಡುವ ಆಸೆ ವ್ಯಕ್ತಪಡಿಸಿದ್ದಾರೆ. ʼʼಸಂದೀಪ್ ಅವರ ರೀತಿ ಯೋಚಿಸಲು ಯಾರಿಂದಲೂ ಸಾಧ್ಯವಿಲ್ಲ. ಒಮ್ಮೆ ಆಲೋಚಿಸಿದಂತೆ ಅವರು ಮತ್ತೆ ಯೋಚಿಸುವುದಿಲ್ಲ ಎಂದು ನನಗೆ ಅನಿಸುತ್ತದೆ. ಅವರು ಮಾಡುತ್ತಿರುವ ಯಾವುದೇ ಸಿನಿಮಾದಲ್ಲಿ ಬೇಕಿದ್ದರೂ ನಾನು ನಟಿಸಲು ಸಿದ್ಧʼʼ ಎಂದಿದ್ದಾರೆ ರಿಷಬ್ ಶೆಟ್ಟಿ.
ಮೂಲತಃ ಟಾಲಿವುಡ್‌ ನಿರ್ದೇಶಕರಾದ ಸಂದೀಪ್‌ ರೆಡ್ಡಿ ತೆಲುಗಿನಲ್ಲಿ ʼಅರ್ಜುನ್‌ ರೆಡ್ಡಿʼ ಚಿತ್ರ ನಿರ್ದೇಶಿಸುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಬಳಿಕ ಬಾಲಿವುಡ್‌ಗೂ ತೆರಳಿದರು. ಅವರ ಚಿತ್ರದಲ್ಲಿ ಲೈಂಗಿಕತೆ ಮತ್ತು ಹಿಂಸೆಗೆ ಒತ್ತು ನೀಡಲಾಗುತ್ತದೆ ಎನ್ನುವ ಆರೋಪವೂ ಇದೆ.
ಇನ್ನು ʼಕಾಂತಾರʼದ ಬಗ್ಗೆ ಮಾತನಾಡಿದ ರಿಷಬ್‌ ಶೆಟ್ಟಿ ಅವರು, ʼʼನನ್ನ ಗ್ರಾಮ ಕೆರಾಡಿ ಹಾಗೂ ಇಲ್ಲಿನ ಕಾಡಿನಲ್ಲಿ ಸಿನಿಮಾ ಶೂಟ್ ಮಾಡಬೇಕು ಎಂಬ ಕನಸು ಇತ್ತು. ನಾನು ಸಾಕಷ್ಟು ಸಿನಿಮಾಗಳಿಗೆ ಈ ಜಾಗ ಬಳಸಿಕೊಳ್ಳಲು ಹೋದೆ. ಆದರೆ ಹೊಂದಿಕೆ ಆಗಲಿಲ್ಲ. ಕೊನೆಗೆ ʼಕಾಂತಾರʼ ಸಿನಿಮಾ ಕಥೆಗೂ ಈ ಜಾಗಕ್ಕೂ ಹೊಂದಿಕೆ ಆಯಿತು. ಗ್ರಾಮದ 700 ಜನರು ಈ ಚಿತ್ರಕ್ಕಾಗ ಕೆಲಸ ಮಾಡಿದ್ದಾರೆʼʼ ಎಂದು ತಿಳಿಸಿದ್ದಾರೆ. ಹೀಗೆ ಹಲವು ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೊ ಡಿ. 21ರಂದು ಪ್ರೈಂ ವಿಡಿಯೊದಲ್ಲಿ ಪ್ರಸಾರವಾಗಲಿದೆ.
ಈ ಸುದ್ದಿಯನ್ನೂ ಓದಿ: Kantara Chapter 1: ಬಿಗ್‌ ಅಪ್‌ಡೇಟ್‌ ಕೊಟ್ಟ ‘ಕಾಂತಾರ ಚಾಪ್ಟರ್‌ 1’ ಚಿತ್ರತಂಡ; ರಿಲೀಸ್‌ ಡೇಟ್‌ ಅನೌನ್ಸ್‌