Madhuri Dixit: ಸೆಕೆಂಡ್ ಗ್ರೇಡ್ ಕಲಾವಿದೆ; ಮಾಧುರಿ ದೀಕ್ಷಿತ್ ವಿರುದ್ಧ ನಾಲಗೆ ಹರಿಬಿಟ್ಟ ಕಾಂಗ್ರೆಸ್ ನಾಯಕ
Madhuri Dixit: ''ಈಗ ಮಾಧುರಿ ದೀಕ್ಷಿತ್ ಸೆಕೆಂಡ್ ಗ್ರೇಡ್ ಕಲಾವಿದೆ ಎನಿಸಿಕೊಂಡಿದ್ದಾರೆ. ಅವರ ಚಾರ್ಮ್ ಈಗ ಉಳಿದಿಲ್ಲ. ʼದಿಲ್ʼ, ʼಬೇಟಾʼ ಚಿತ್ರಗಳ ವೇಳೆ ಅವರು ಸ್ಟಾರ್ ಆಗಿದ್ದರು'' ಎಂದು ಹೇಳುವ ಮೂಲಕ ರಾಜಸ್ಥಾನದ ಕಾಂಗ್ರೆಸ್ ನಾಯಕ ಟಿಕಾರಂ ಜುಲ್ಲಿ ವಿವಾದ ಹುಟ್ಟು ಹಾಕಿದ್ದಾರೆ.

ಮಾಧುರಿ ದೀಕ್ಷಿತ್.

ಜೈಪುರ: ಬಾಲಿವುಡ್ ನಟಿ, ಎವರ್‌ಗ್ರೀನ್ ಬ್ಯೂಟಿ ಮಾಧುರಿ ದೀಕ್ಷಿತ್ (Madhuri Dixit) ಯಾರಿಗೆ ಗೊತ್ತಿಲ್ಲ ಹೇಳಿ? ನಗು, ಸಹಜಾಭಿನಯ, ಭಾವಪೂರ್ಣ ಡ್ಯಾನ್ಸ್‌ನಿಂದಲೇ 90ರ ದಶಕದಲ್ಲಿ ಬಾಲಿವುಡ್ ಆಳಿದ್ದ ನಟಿ ಇವರು. ಈ 57ರ ವಯಸ್ಸಿನಲ್ಲಿಯೂ 30ರ ಯುವತಿಯರು ನಾಚುವಂತೆ ಕಂಗೊಳಿಸುವ ಇವರಿಗೆ ಈಗಲೂ ಬೇಡಿಕೆ ಕಡಿಮೆಯಾಗಿಲ್ಲ. ಇವರ ಕಾಲ್‌ಶೀಟ್‌ಗಾಗಿ ನಿರ್ಮಾಪಕರು ಸಾಲುಗಟ್ಟಿ ನಿಲ್ಲುತ್ತಾರೆ. ಆದರೆ ಇದೀಗ ಇವರನ್ನು ಸೆಕೆಂಡ್ ಗ್ರೇಡ್ ಕಲಾವಿದೆ ಎಂದು ಕರೆಯುವ ಮೂಲಕ ಕಾಂಗ್ರೆಸ್ ನಾಯಕರೊಬ್ಬರು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಸದ್ಯ ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.
ರಾಜಸ್ಥಾನದ ಕಾಂಗ್ರೆಸ್ ನಾಯಕ ಟಿಕಾರಂ ಜುಲ್ಲಿ (Tikaram Jully) ಗುರುವಾರ (ಮಾ. 13) ವಿಧಾನಸಭೆಯಲ್ಲಿ ಈ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ. ಇತ್ತೀಚೆಗೆ ಜೈಪುರದಲ್ಲಿ ಅದ್ಧೂರಿಯಾಗಿ ಐಫಾ (International Indian Film Academy Awards) ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಿಂದ ಸರ್ಕಾರಕ್ಕೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಪಾದಿಸುವ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ.
#WATCH | Jaipur | Congress MLA & LoP Rajasthan Assembly Tikaram Jully yesterday said, "In the name of IIFA, over Rs 100 crore of public money was spent. If you saw the hoardings, it was only a promotion of IIFA and not of Rajasthan. Did any big actors come here? Did the actors… pic.twitter.com/z1irGVuTtE
— ANI (@ANI) March 13, 2025
ಟಿಕಾರಂ ಜುಲ್ಲಿ ಹೇಳಿದ್ದೇನು?
ಈ ಕಾರ್ಯಕ್ರಮಕ್ಕಾಗಿ ಸರ್ಕಾರ ಖರ್ಚು ಮಾಡಿದ್ದು ಬಿಟ್ಟರೆ ಯಾವುದೇ ಲಾಭವಾಗಿಲ್ಲ ಎಂದು ದೂರಿದ್ದಾರೆ. ʼʼಐಫಾ ಹೆಸರಿನಲ್ಲಿ ಸಾರ್ವಜನಿಕರ 100 ಕೋಟಿ ರೂ.ಗಿಂತ ಅಧಿಕ ಖರ್ಚು ಮಾಡಲಾಗಿದೆ. ಹೋರ್ಡಿಂಗ್, ಬ್ಯಾನರ್ ಗಮನಿಸಿದರೆ ಈ ಕಾರ್ಯಕ್ರಮದಿಂದ ಐಫಾಕ್ಕೆ ಭರ್ಜರಿ ಪ್ರಚಾರ ಸಿಕ್ಕಿದ್ದು ಬಿಟ್ಟರೆ ರಾಜಸ್ಥಾನಕ್ಕೆ ಯಾವುದೇ ಉಪಯೋಗವಾಗಿಲ್ಲʼʼ ಎಂದು ಕಿಡಿಕಾರಿದ್ದಾರೆ.
ಮುಂದುವರಿದು, ʼʼಐಫಾದಿಂದ ರಾಜಸ್ಥಾನಕ್ಕೆ ಸಿಕ್ಕಿದ್ದಾರೂ ಏನು? ಕಾರ್ಯಕ್ರಮಕ್ಕೆ ಆಗಮಿಸಿದ ಸ್ಟಾರ್‌ಗಳ್ಯಾರೂ ಪ್ರವಾಸಿ ತಾಣಕ್ಕೆ ಬೇಟಿ ನೀಡಿಲ್ಲ. ಶಾರುಖ್ ಖಾನ್ ಬಿಟ್ಟರೆ ಬಾಲಿವುಡ್‌ನ ಪ್ರಸಿದ್ಧ ಕಲಾವಿದರ್ಯಾರೂ ಬಂದಿಲ್ಲ. ಅವರನ್ನು ಬಿಟ್ಟು ಉಳಿದವರೆಲ್ಲ ದ್ವಿತೀಯ ದರ್ಜೆ ಕಲಾವಿದರೇ (Second-grade stars). ಸರಿಯಾಗಿ ಹೇಳಬೇಕೆಂದರೆ ಶಾರುಖ್ ಖಾನ್ ಹೊರತುಪಡಿಸಿದರೆ ಅಲ್ಲಿಗೆ ಯಾರೂ ಪ್ರಥಮ ದರ್ಜೆ ಕಲಾವಿದರೇ ಬಂದಿಲ್ಲʼʼ ಎಂದು ಹೇಳಿದ್ದಾರೆ.
ಇದಕ್ಕೆ ಇತರ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಆಗ ಪ್ರತಿಕ್ರಿಯಿಸಿದ ಅವರು, ʼʼಈಗ ಮಾಧುರಿ ದೀಕ್ಷಿತ್ ಸೆಕೆಂಡ್ ಗ್ರೇಡ್ ಕಲಾವಿದೆ ಎನಿಸಿಕೊಂಡಿದ್ದಾರೆ. ಅವರ ಚಾರ್ಮ್ ಈಗ ಉಳಿದಿಲ್ಲ. ʼದಿಲ್ʼ, ʼಬೇಟಾʼ ಚಿತ್ರಗಳ ವೇಳೆ ಅವರು ಸ್ಟಾರ್ ಆಗಿದ್ದರುʼʼ ಎಂದು ತಿಳಿಸಿದ್ದಾರೆ.
ಬಿಜೆಪಿಯಿಂದ ಆಕ್ಷೇಪ
ಈ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಬಿಜೆಪಿ ಶಾಸಕ ಬಾಲ್‌ಮುಕುಂದ್ ಆಚಾರ್ಯ ಅವರು ಐಫಾ ಸಮಾರಂಭದ ಪ್ರಾಧಾನ್ಯತೆಯನ್ನು ಎತ್ತಿ ಹಿಡಿದಿದ್ದಾರೆ. ʼʼಪ್ರಪಂಚದ ವಿವಿಧ ಪ್ರಸಿದ್ಧ ನಗರಗಳಲ್ಲಿ ಅಯೋಜನೆಗೊಳ್ಳುವ ಐಫಾ ಪ್ರಧಾನ ಸಮಾರಂಭ ಈ ಬಾರಿ ಜೈಪುರದಲ್ಲಿ ನಡೆದಿದೆʼʼ ಎಂದ ಅವರು ಈ ಕಾರ್ಯಕ್ರಮದಿಂದಾಗಿ ರಾಜ್ಯ ಜಗತ್ತಿನಾದ್ಯಂತದ ಪ್ರವಾಸಿಗರ ಗಮನ ಸೆಳೆಯುತ್ತದೆ. ಅಲ್ಲದೆ ರಾಜ್ಯಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ. ಸದ್ಯ ಮಾಧುರಿ ದೀಕ್ಷಿತ್ ಅವರ ವಿರುದ್ಧದ ಹೇಳಿಕೆ ಚಿತ್ರರಂಗದ, ವಿವಿಧ ಕ್ಷೇತ್ರಗಳ ಗಣ್ಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.