ಮಂಗಳೂರು: ಮಂಗಳೂರಿನಲ್ಲಿ (Mangaluru crime news) ರೌಡಿ ಶೀಟರ್, ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ (Suhas Shetty Murder Case) ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 8 ಆರೋಪಿಗಳನ್ನು ಬಂಧಿಸಿದ್ದು, ಮೇ 9ರವರೆಗೆ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾದ 8 ಮಂದಿ ಆರೋಪಿಗಳನ್ನು ಜಿಲ್ಲಾ ಸತ್ರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಮೇ 9ರವರೆಗೆ ಪೊಲೀಸ್ ಕಸ್ಟಡಿಗೆ (police custody) ನೀಡಿ ನ್ಯಾಯಾಲಯ ಆದೇಶಿಸಿದೆ.
ಪೊಲೀಸರು ಆರೋಪಿಗಳನ್ನು ಕರೆತಂದು ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ತಲೆ ಮರೆಸಿಕೊಂಡಿರುವ ಇಬ್ಬರು ಆರೋಪಿಗಳಿಗೆ ಶೋಧ ನಡೆಸುತ್ತಿದ್ದಾರೆ. ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಕೊಲೆ ಮಾಡಿದ ಬಳಿಕ ಪರಾರಿಯಾಗಿದ್ದ ಹಂತಕರು ಮಂಗಳೂರಿನಲ್ಲಿಯೇ ಅವಿತುಕೊಂಡಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು 8 ಆರೋಪಿಗಳನ್ನು ಬಂಧಿಸಿದ್ದರು. ಇವರಲ್ಲಿ ಇಬ್ಬರು ಹಿಂದೂಗಳಾಗಿದ್ದಾರೆ.
ಬಂಧಿತರನ್ನು ಅಬ್ದುಲ್ ಸಫ್ವಾನ್, ಆದಿಲ್, ನಿಯಾಜ್, ಮೊಹಮ್ಮದ್ ಮುಝಮಿಲ್, ಕಲಂದರ್ ಶಾಫಿ, ಮೊಹಮ್ಮದ್ ರಿಜ್ವಾನ್, ರಂಜಿತ್ ಹಾಗೂ ನಾಗರಾಜ್ ಎಂದು ಗುರುತಿಸಲಾಗಿದೆ. ಈ ಎಂಟು ಆರೋಪಿಗಳ ಪೈಕಿ ಆರು ಜನರು ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದರೆ, ರಂಜಿತ್ ಹಾಗೂ ನಾಗರಾಜ್ ಚಿಕ್ಕಮಗಳೂರು ಮೂಲದವರಾಗಿದ್ದಾರೆ. ಇವರು ಮಂಗಳೂರಿನ ನಟೋರಿಯಸ್ ಸಫ್ವಾನ್ ಗ್ಯಾಂಗ್‌ಗೆ ಕೆಲಸ ಮಾಡಲು ಸಾಥ್ ನೀಡುತ್ತಿದ್ದರು. ವಿಡಿಯೋ ಸಾಕ್ಷ್ಯದ ಆಧಾರದ ಮೇಲೆ ಮಂಗಳೂರು ಪೊಲೀಸರು ಎಂಟು ಮಂದಿ ಶಂಕಿತರನ್ನು ಬಂಧಿಸಿದ್ದರು.
ಸುಹಾಸ್ ಶೆಟ್ಟಿ ಬರುತ್ತಿದ್ದ ಇನ್ನೋವಾ ಕಾರನ್ನು ಮೀನಿನ ಟೆಂಪೋ ಹಾಗೂ ಒಂದು ಸ್ವಿಫ್ಟ್ ಕಾರು ಹಿಂಬಾಲಿಸಿಕೊಂಡು ಬಂದಿತ್ತು. ನಂತರ ಮೀನಿನ ಟೆಂಪೋವನ್ನು ಸುಹಾಸ್ ಇದ್ದ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆಸಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಇನ್ನೋವಾ ಕಾರು ಸಲೂನ್‌ಗೆ ನುಗ್ಗಿದೆ. ಬಳಿಕ ಸ್ವಿಫ್ಟ್ ಕಾರಿನಲ್ಲಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಸಾರ್ವಜನಿಕ ರಸ್ತೆಯಲ್ಲೇ ಸುಹಾಸ್‌ನನ್ನು ಬರ್ಬರವಾಗಿ ಕೊಲೆಗೈದು ಅಲ್ಲಿಂದ ಪರಾರಿಯಾಗಿದ್ದರು.
ಇದನ್ನೂ ಓದಿ: Suhas Shetty Murder Case: ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೇ ಇನ್ನಿಬ್ಬರು ಹಿಂದೂ ಮುಖಂಡರಿಗೆ ಕೊಲೆ ಬೆದರಿಕೆ