ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tiruapati Laddu: ತಿರುಪತಿ ಲಡ್ಡು ಆನ್‌ಲೈನ್‌ನಲ್ಲಿ ಅನಧಿಕೃತ ಮಾರಾಟಕ್ಕೆ ತಡೆ

Tirupati Laddu: ಭೌಗೋಳಿಕ ಸೂಚಕ ಸ್ಥಾನಮಾನ (ಜಿಐ ಟ್ಯಾಗ್) ಪಡೆದ ಉತ್ಪನ್ನಗಳು (ನೋಂದಣಿ ಮತ್ತು ರಕ್ಷಣೆ) ಕಾಯ್ದೆ 1999 ಅನ್ವಯ 'ತಿರುಪತಿ ಲಡ್ಡು'ವಿಗೆ ಕಾನೂನಿನ ರಕ್ಷಣೆ ದೊರೆತಿದೆ. ಟಿಟಿಡಿಯ ಮೇಲುಸ್ತುವಾರಿಯಲ್ಲಿ ತಿರುಪತಿ ಲಡ್ಡುವನ್ನು ಜಾಗರೂಕತೆಯಿಂದ ತಯಾರಿಸಲಾಗುತ್ತದೆ.

ತಿರುಪತಿ ಲಡ್ಡು

ಹೈದರಾಬಾದ್‌: ಭೌಗೋಳಿಕ ಸೂಚಕ ಸ್ಥಾನಮಾನ (GI Tag) ಪಡೆದಿರುವ 'ತಿರುಪತಿ ಲಡ್ಡು'ವನ್ನು (Tiruapati Laddu) ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಆನ್‌ಲೈನ್ (Online sale) ವಹಿವಾಟು ಸಂಸ್ಥೆಗಳು ಹಾಗೂ ಮಾರಾಟಗಾರರ ವಿರುದ್ಧ ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ (TTD) ಕಾನೂನು ಕ್ರಮ ಜರುಗಿಸಿದೆ. ಪುಷ್‌ಮೈಕಾರ್ಟ್‌ (ಮಹಿತಾ ಎಲ್‌ಎಲ್‌ಸಿ) ಮತ್ತು ಟ್ರಾನ್ಸಾಕ್ಟ್ ಫುಡ್ಸ್ ಲಿಮಿಟೆಡ್ ಸೇರಿದಂತೆ ಕೆಲ ಆನ್‌ಲೈನ್‌ ಪ್ಲಾಟ್‌ಫಾರ್ಮ್ಸ್ ಮತ್ತು ಮಾರಾಟಗಾರರಿಗೆ ನೋಟಿಸ್ ಜಾರಿಗೊಳಿಸಿದೆ.

ಪುಷ್‌ಮೈಕಾರ್ಡ್‌ ಲೀಗಲ್ ನೋಟಿಸ್ ಸ್ವೀಕರಿಸಿದ್ದು, ತಮ್ಮ ಉತ್ಪನ್ನಗಳ ಪಟ್ಟಿಯಿಂದ 'ತಿರುಪತಿ ಲಡ್ಡು'ವನ್ನು ಕೈಬಿಟ್ಟಿದೆ. ಇತರೆ ಮಾರಾಟಗಾರರು ತಮ್ಮ ಪಟ್ಟಿಯಿಂದ ತಿರುಪತಿ ಲಡ್ಡುವನ್ನು ತೆಗೆದುಹಾಕಿದ್ದಾರೆ.

'ತಿರುಪತಿ ಲಡ್ಡು ಕೇವಲ ಉತ್ಪನ್ನವಲ್ಲ; ಅದು ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಮೌಲ್ಯವನ್ನು ಹೊಂದಿರುವ ಪ್ರಸಾದವಾಗಿದೆ. ಜಗತ್ತಿನಾದ್ಯಂತ ಇರುವ ಕೋಟ್ಯಂತರ ಭಕ್ತರ ನಂಬಿಕೆಯನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳಲು ಸಿದ್ಧರಿದ್ದೇವೆ' ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಜೆ.ಶ್ಯಾಮಲಾ ರಾವ್ ತಿಳಿಸಿದ್ದಾರೆ. ಭೌಗೋಳಿಕ ಸೂಚಕ ಸ್ಥಾನಮಾನ ಪಡೆದ ಉತ್ಪನ್ನಗಳು (ನೋಂದಣಿ ಮತ್ತು ರಕ್ಷಣೆ) ಕಾಯ್ದೆ 1999 ಅನ್ವಯ 'ತಿರುಪತಿ ಲಡ್ಡು'ವಿಗೆ ಕಾನೂನಿನ ರಕ್ಷಣೆ ದೊರೆತಿದೆ.

ಟಿಟಿಡಿಯ ಮೇಲುಸ್ತುವಾರಿಯಲ್ಲಿ ತಿರುಪತಿ ಲಡ್ಡುವನ್ನು ಜಾಗರೂಕತೆಯಿಂದ ತಯಾರಿಸಲಾಗುತ್ತದೆ. 'ತಿರುಪತಿ ಲಡ್ಡು'ವಿನ ಅನಧಿಕೃತ ಬಳಕೆ ಹಾಗೂ ಮಾರಾಟವು ಕಾನೂನು ಉಲ್ಲಂಘನೆಯಾಗಿದ್ದು, ಧಾರ್ಮಿಕ ಭಾವನೆಗಳಿಗೂ ಧಕ್ಕೆ ತರುತ್ತದೆ. ತಿರುಮಲ ದೇವಸ್ಥಾನದ ಪಾಕಶಾಲೆ 'ಪೋಟು'ನಲ್ಲಿ ಹೆಚ್ಚಿನ ಶುದ್ಧತೆಯಿಂದ ʼಲಡ್ಡು'ವನ್ನು ತಯಾರಿಸಲಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ನಕಾರಾತ್ಮಕ ಕಾರಣಗಳಿಗಾಗಿ ಗಮನ ಸೆಳೆದಿದೆ. ಇತ್ತೀಚೆಗೆ, ಆಂಧ್ರದ ಹಿಂದಿನ ಸರಕಾರ ಲಡ್ಡುವಿನಲ್ಲಿ ಶುದ್ಧ ತುಪ್ಪದ ಬದಲಾಗಿ ಪ್ರಾಣಿಜನ್ಯ ತುಪ್ಪವನ್ನು ಬಳಸಿದೆ ಎಂದು ಚಂದ್ರಬಾಬು ನಾಯ್ಡು ಆರೋಪಿಸಿದ್ದರು. ಇದರಿಂದ ಕೋಲಾಹಲವೇ ಉಂಟಾಗಿತ್ತು. ಈ ಕುರಿತಾದ ತನಿಖೆ ನಡೆದಿದೆ.

ತಿರುಪತಿಯ ಪ್ರಧಾನ ದೇವರಾದ ವೆಂಕಟೇಶ್ವರ ಸ್ವಾಮಿಗೆ ಲಡ್ಡು ನೈವೇದ್ಯ ಇಡುವ ಪದ್ಧತಿ 1715ರಲ್ಲಿ ಆರಂಭವಾಯಿತು. ದೇವಾಲಯದ ಪಾಕಶಾಲೆಯು ಪ್ರತಿದಿನ 8 ಲಕ್ಷ ಲಡ್ಡುಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ. 620 ಮಂದಿ ಬಾಣಸಿಗರಿದ್ದು, ಪ್ರತಿದಿನ 3 ಲಕ್ಷದಿಂದ 3.5 ಲಕ್ಷ ಲಡ್ಡುಗಳನ್ನು ತಯಾರಿಸುತ್ತಾರೆ. ದೇವಸ್ಥಾನವು ಲಡ್ಡುಗಳ ಮಾರಾಟದಿಂದ ವಾರ್ಷಿಕ ಸುಮಾರು 7500 ಕೋಟಿ ವರಮಾನ ಗಳಿಸುತ್ತಿದೆ.

ಇದನ್ನೂ ಓದಿ: Tirupati Tirumala: ತಿರುಪತಿ ಲಡ್ಡು ಪ್ರಕರಣದಲ್ಲಿ ಬಿಗ್‌ ಟ್ವಿಸ್ಟ್‌ ; ದೇಶದ 4 ಪ್ರಮುಖ ಡೈರಿ ಮುಖ್ಯಸ್ಥರ ಬಂಧನ

ಹರೀಶ್‌ ಕೇರ

View all posts by this author