ತುಮಕೂರು: ವನ್ಯಪ್ರಾಣಿಗಳ ಮಾರಣಹೋಮದ (Wild life) ಘಟನೆಗಳು ರಾಜ್ಯಾದ್ಯಂತ ಕಳವಳ ಮೂಡಿಸುತ್ತಿವೆ. ತುಮಕೂರು (Tumkur news) ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿಯ ಹನುಮಂತಪುರದಲ್ಲಿ 19 ನವಿಲುಗಳು ನಿಗೂಢವಾಗಿ (Peacocks Death) ಸಾವನ್ನಪ್ಪಿವೆ. ನವಿಲುಗಳ ಸಾವಿನ ಬಗ್ಗೆ ಹಲವು ಶಂಕೆ ಮೂಡಿವೆ. ಸದ್ಯ ಎಫ್ಎಸ್ಎಲ್ಗೆ ಮಾದರಿ ರವಾನೆ ಮಾಡಲಾಗಿದ್ದು, ವರದಿ ಬಂದ ಬಳಿಕ ಸಾವಿಗೆ ಕಾರಣವೇನು ಎಂದು ತಿಳಿಯಲಿದೆ.
ಮಧುಗಿರಿ ತಾಲೂಕಿನ ಮಿಡಿಗೇಶಿಯ ಹನುಮಂತಪುರ ಗ್ರಾಮದ ಕೆರೆ ಕೋಡಿ ನೀರು ಹರಿಯುವ ಪಕ್ಕದ ಜಮೀನುಗಳಲ್ಲಿ 5 ಗಂಡು ಹಾಗೂ 14 ಹೆಣ್ಣು ಸೇರಿ ಒಟ್ಟು 19 ನವಿಲುಗಳು ನಿಗೂಢವಾಗಿ ಸಾವನ್ನಪ್ಪಿರುವುದು ಪತ್ತೆ ಆಗಿದೆ. ಬೆಳಗ್ಗೆ ರೈತರು ಜಮೀನಿಗೆ ಬಂದಾಗ ನವಿಲುಗಳ ಮೃತದೇಹಗಳು ಪತ್ತೆ ಆಗಿವೆ. ಆಗಸ್ಟ್ 1ರ ರಾತ್ರಿ ನವಿಲುಗಳು ಮೃತಪಟ್ಟ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ನವಿಲುಗಳ ಸಾವಿಗೆ ನಿಖರ ಮಾಹಿತಿ ತಿಳಿದುಬಂದಿಲ್ಲ. ಕ್ರಿಮಿನಾಶಕ ಸಿಂಪಡಣೆ ಮಾಡಿರುವ ಬೆಳೆಗಳನ್ನು ಸೇವಿಸಿ ಮೃತಪಟ್ಟಿರಬಹುದು ಅಥವಾ ಯಾರಾದರೂ ಏನಾದರೂ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ನ್ಯಾಯಾಧೀಶರ ಅನುಮತಿ ಬಳಿಕ ಎಫ್ಎಸ್ಎಲ್ಗೆ ರವಾನೆ ಮಾಡಲಾಗಿದೆ. ಆ ಮೂಲಕ ನವಿಲುಗಳ ಸಾವಿನ ಕಾರಣದ ವರದಿ ಪಡೆಯಲು ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ.
ಇತ್ತೀಚೆಗೆ ಚಾಮರಾಜನಗರದ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳ ಹತ್ಯೆ ಪ್ರಕರಣ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಹುಲಿಗಳನ್ನು ಕೊಂದ ಮೂವರನ್ನು ಪೊಲೀಸರು ಬಂಧಿಸಿದ್ದರು. ಅಷ್ಟೇ ಅಲ್ಲದೆ ಹುಲಿಗಳ ಹತ್ಯೆಗೆ ‘ಕಾರ್ಬೋಫ್ಯುರಾನ್ ಕೀಟನಾಶಕ’ ಬಳಕೆ ಮಾಡಿರುವುದು ವರದಿಯಲ್ಲಿ ದೃಢ ಪಟ್ಟಿತ್ತು. ಇದಾದ ಬಳಿಕ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ ಗ್ರಾಮದ ಹೊರವಲಯದಲ್ಲಿ 18 ಕೋತಿಗಳ ಶವಗಳು ಪತ್ತೆ ಆಗಿದ್ದವು. ಕಿಡಿಗೇಡಿಗಳು ವಿಷ ಹಾಕಿದ್ದರು. ವಿಷ ಸೇವಿಸಿ ನಿತ್ರಾಣವಾದ ವಾನರ ಸೇನೆಯನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಬಂದು ಕಂದೇಗಾಲ ಗ್ರಾಮದ ಹೊರ ವಲಯದಲ್ಲಿ ಬಿಸಾಡಿ ಹೋಗಿದ್ದರು.
ಇದನ್ನೂ ಓದಿ: ಅಕ್ರಮವಾಗಿ ಜಿಂಕೆ, ನವಿಲು ಮಾಂಸ ಮಾರಾಟ: ಮೂವರ ಬಂಧನ