Ricky Rai Shoot out: ಮುತ್ತಪ್ಪ ರೈ ಮಗನ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಟ್ವಿಸ್ಟ್, ಗನ್ ಮ್ಯಾನ್ ವಶಕ್ಕೆ! ಗುಂಡಿನ ದಾಳಿಯ ನಾಟಕವಾಡಿದನಾ ರಿಕ್ಕಿ?
ರಿಕ್ಕಿ ರೈಗೆ ಮೂವರು ಗನ್ ಮ್ಯಾನ್ಗಳಿದ್ದು, ತನಿಖೆ ವೇಳೆ ಮೂವರು ವಿಭಿನ್ನ ಹೇಳಿಕೆ ನೀಡಿದ್ದಾರೆ. ಹೀಗಾಗಿ ರಿಕ್ಕಿ ರೈ ಗನ್ಮ್ಯಾನ್ಗಳ ಮೇಲೆ ಪೊಲೀಸರಿಗೆ ಅನುಮಾನ ಮೂಡಿದೆ. ಅಷ್ಟೇ ಅಲ್ಲ ಪ್ರಕರಣವನ್ನು ಡೈವರ್ಟ್ ಮಾಡಲು, ಮತ್ತಪ್ಪ ರೈ 2ನೇ ಪತ್ನಿ ಅನುರಾಧ, ರಾಕೇಶ್ ಮಲ್ಲಿ ಸೇರಿದಂತೆ ನಾಲ್ವರ ವಿರುದ್ಧ ದೂರು ಕೊಟ್ಟರೇ ಎಂಬ ಶಂಕೆ ಪೊಲೀಸರಿಗೆ ಮೂಡಿದೆ ಎಂದು ಮೂಲಗಳು ತಿಳಿಸಿವೆ.

ರಿಕ್ಕಿ ರೈ

ಬೆಂಗಳೂರು: ಮಾಜಿ ಡಾನ್ ಮುತ್ತಪ್ಪ ರೈ (Muthappa Rai) ಪುತ್ರ ರಿಕ್ಕಿ ರೈ (Ricky Rai) ಮೇಲಿನ ಗುಂಡಿನ ದಾಳಿ (Shoot out) ಕುರಿತು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ತನಿಖೆಯಲ್ಲಿ ದೊರೆತಿರುವ ಹಲವು ಲೀಡ್‌ಗಳ ಪ್ರಕಾರ, ಈತ ಗುಂಡಿನ ದಾಳಿಯ ನಾಟಕವಾಡಿಸಿದನೇ ಎಂಬ ಅನುಮಾನ ಮೂಡಿದೆ. ಪ್ರಕರಣಕ್ಕೆ ಇದರಿಂದ ಮಹತ್ವದ ತಿರುವು ಸಿಕ್ಕಿದ್ದು, ರಿಕ್ಕಿ ರೈ ಗನ್ ಮ್ಯಾನ್ ಮನ್ನಪ್ಪ ವಿಠ್ಠಲ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಡದಿ ಠಾಣೆ ಪೊಲೀಸರು, ಮನ್ನಪ್ಪ ವಿಠ್ಠಲ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈಗಾಗಲೇ ರಿಕ್ಕಿ ರೈ ಕಾರು ಚಾಲಕ ಬಸವರಾಜು ನೀಡಿದ ದೂರಿನ ಅನ್ವಯ ಮುತ್ತಪ್ಪ ರೈಯ 2ನೇ ಪತ್ನಿ ಅನುರಾಧಾ, ಮುತ್ತಪ್ಪ ರೈನ ಒಂದು ಕಾಲದ ಆಪ್ತ ರಾಕೇಶ್ ಮಲ್ಲಿ (Rakesh Malli) ಸೇರಿದಂತೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಗುಂಡಿನ ದಾಳಿ ನಡೆದ ಸ್ಥಳದಲ್ಲಿ ಸಿಕ್ಕ ಬುಲೆಟ್ ಕಾಟ್ರಿಡ್ಜ್ ಇಟ್ಟುಕೊಂಡು, ಈ ಬುಲೆಟ್ ಅನ್ನು ಯಾವ ಗನ್ ಮೂಲಕ ಹಾರಿಸಿದ್ದಾರೆ ಎಂಬುದನ್ನು ಪರಿಶೀಲನೆ ಮಾಡಿದ್ದಾರೆ. ಮೇಲ್ನೋಟಕ್ಕೆ ಎಸ್ಬಿಬಿಎಲ್, ಅಂದರೆ ಸಿಂಗಲ್ ಬ್ಯಾರೆಲ್ ಬ್ರೀಚ್ ಲೋಡರ್ ಬಂದೂಕು, ಅಥವಾ ಡಿಬಿಬಿಎಲ್, ಅಂದರೆ ಡಬಲ್ ಬ್ಯಾರೆಲ್ ಬ್ರೀಚ್ ಲೋಡರ್ ಬಂದೂಕು ಎಂಬುದು ಪತ್ತೆಯಾಗಿದೆ.
ಹೇಗೆ ಫೈರಿಂಗ್ ಮಾಡಿದ್ದರು ಎಂಬ ಕುರಿತು ತನಿಖೆ ಚುರುಕುಗೊಂಡಿದೆ. ರಸ್ತೆ ಪಕ್ಕದ ಲೇಔಟ್ನ ಕಾಂಪೌಂಡ್ ಒಳಭಾಗದಿಂದ ಫೈರಿಂಗ್ ಆಗಿರಬಹುದು. ಶಾರ್ಪ್ಶೂಟರ್ಸ್ಗಳು, ಕತ್ತಲಲ್ಲಿ ಕಾರಿನ ಹೆಡ್ಲೈಟ್ ಬೆಳಕಿನ ಸಹಾಯದಿಂದ ಕಾರಿನ ಮುಂಭಾಗದ ಡ್ರೈವರ್ ಸೀಟ್ನತ್ತ ಫೈರ್ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಫೈರ್ ಆಗಿರುವ ಗುಂಡು ಕಾರಿನಿಂದ ಹೊರಗೆ ಹೋಗಿಲ್ಲ. ಹೀಗಾಗಿ ಎಷ್ಟು ದೂರದಿಂದ ಫೈರ್ ಮಾಡಿದ್ದಾರೆ ಎಂಬುದನ್ನು ವಿಶ್ಲೇಷಿಸಲಾಗುತ್ತಿದೆ.
ಗುಂಡಿನ ದಾಳಿಯ ನಾಟಕ?
ಅನ್ಯರ ತಲೆಗೆ ಕಟ್ಟಲು ಗುಂಡಿನ ದಾಳಿಯ ನಾಟಕ ಮಾಡಿಸಿಕೊಂಡನೇ ರಿಕ್ಕಿ ರೈ ಎಂಬ ಅನುಮಾನ ಪೊಲೀಸರಿಗೂ ಮೂಡಿದೆ. ರಿಕ್ಕಿ ರೈಗೆ ಮೂವರು ಗನ್ ಮ್ಯಾನ್ಗಳಿದ್ದು, ತನಿಖೆ ವೇಳೆ ಮೂವರು ವಿಭಿನ್ನ ಹೇಳಿಕೆ ನೀಡಿದ್ದಾರೆ. ಹೀಗಾಗಿ ರಿಕ್ಕಿ ರೈ ಗನ್ಮ್ಯಾನ್ಗಳ ಮೇಲೆ ಪೊಲೀಸರಿಗೆ ಅನುಮಾನ ಮೂಡಿದೆ. ಅಷ್ಟೇ ಅಲ್ಲ ಪ್ರಕರಣವನ್ನು ಡೈವರ್ಟ್ ಮಾಡಲು, ಮತ್ತಪ್ಪ ರೈ 2ನೇ ಪತ್ನಿ ಅನುರಾಧ, ರಾಕೇಶ್ ಮಲ್ಲಿ ಸೇರಿದಂತೆ ನಾಲ್ವರ ವಿರುದ್ಧ ದೂರು ಕೊಟ್ಟರೇ ಎಂಬ ಶಂಕೆ ಪೊಲೀಸರಿಗೆ ಮೂಡಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ, ರಿಕ್ಕಿ ರೈ ಮನೆಯಲ್ಲಿನ ಗನ್ ಹಾಗೂ ಬುಲೆಟ್ಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ತನಿಖಾಧಿಕಾರಿಗಳಿಗೆ ಮಹತ್ವದ ಸುಳಿವು ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.
ಪೊಲೀಸರ ವಿಚಾರಣೆಗೆ ಹಾಜರಾದ A-1 ರಾಕೇಶ್ ಮಲ್ಲಿ
ರಿಕ್ಕಿ ರೈ ಮೇಲೆ ಗುಂಡಿನ ದಾಳಿ ಪ್ರಕರಣ ಸಂಬಂಧ ಮುತ್ತಪ್ಪ ರೈ ಒಂದು ಕಾಲದ ಆಪ್ತ ರಾಕೇಶ್ ಮಲ್ಲಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಸಹ ಕೊಟ್ಟಿದ್ದರು. ಮಂಗಳವಾರ ರಾಕೇಶ್ ಮಲ್ಲಿ ಬಿಡದಿ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾನೆ. ವಕೀಲರ ಜೊತೆ ಆಗಮಿಸಿದ ರಾಕೇಶ್ ಮಲ್ಲಿಯನ್ನು ಎಸ್ಪಿ ಶ್ರೀನಿವಾಸ್ಗೌಡ ವಿಚಾರಣೆ ನಡೆಸಿದ್ದಾರೆ.
ಇತ್ತ ಗುಂಡಿನ ದಾಳಿ ಪ್ರಕರಣದ A-2 ಆಗಿದ್ದ ಮುತ್ತಪ್ಪ ರೈ 2ನೇ ಪತ್ನಿ ಅನುರಾಧಾಗೆ ಹೈಕೋರ್ಟ್ ರಿಲೀಫ್ ನೀಡಿದೆ. ಅನುರಾಧಾ ಪ್ರಕರಣದಿಂದ ಕೈ ಬಿಡುವಂತೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅನುರಾಧ ಪರ ವಕೀಲ ವೆಂಕಟೇಶ್ ಅರಬಟ್ಟಿ ಮಂಗಳವಾರ ವಾದ ಮಂಡಿಸಿದರು.
ಪ್ರಕರಣದಲ್ಲಿ ವಿನಾಕಾರಣ ಅನುರಾಧಾ ಹೆಸರು ತಂದಿದ್ದಾರೆ. ಆಸ್ತಿ ವಿವಾದ 6 ತಿಂಗಳ ಹಿಂದೆಯೇ ಇತ್ಯರ್ಥವಾಗಿದೆ. ಏಪ್ರಿಲ್ 14 ರಂದೇ ಅನುರಾಧಾ ಯುರೋಪ್ಗೆ ತೆರಳಿದ್ದಾರೆ. ಕೊಲೆ ಯತ್ನ ಕೇಸ್ಗೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಅನುರಾಧ ಪರ ವಕೀಲ ವೆಂಕಟೇಶ್ ಅರಬಟ್ಟಿ ವಾದ ಮಂಡಿಸಿದರು. ವಾದ ಆಲಿಸಿದ ಜಡ್ಜ್ ಅನುರಾಧ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಮಧ್ಯಂತರ ಆದೇಶ ಹೊರಡಿಸಿದೆ. ಸದ್ಯಕ್ಕೆ ಅನುರಾಧಾಗೆ ರಿಲೀಫ್ ಸಿಕ್ಕಿದೆ.
ಇದನ್ನೂ ಓದಿ: Rickey Rai Case: ನನ್ನ ಮೇಲೆ ದಾಳಿ ಮಾಡಿದ್ದು ಇವರೇ ; ಪೊಲೀಸರಿಗೆ ಮಹತ್ವದ ಮಾಹಿತಿ ನೀಡಿ ರಿಕ್ಕಿ ರೈ