ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Mysuru Fire accident: ಮೈಸೂರಿನ ಪಬ್‌ನಲ್ಲಿ ಬೆಂಕಿ ಅವಘಡ; ಇಬ್ಬರ ಸಾವು, ಏಳು ಮಂದಿಗೆ ಗಾಯ

FoxDen Restobar Fire Accident in mysuru: ಮೈಸೂರಿನ ದಟ್ಟಗಳ್ಳಿ 4ನೇ ಹಂತದ ಬಳಿ ಇರುವ ಪಬ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲೇ ಬೆಂಕಿ ವ್ಯಾಪಿಸಿ ಪಬ್ ಸಂಪೂರ್ಣ ಸುಟ್ಟು ಹೋಗಿದೆ. ಅವಘಡದಲ್ಲಿ ಇಬ್ಬರು ಸಜೀವ ದಹನರಾಗಿದ್ದಾರೆ ಎಂದು ತಿಳಿದುಬಂದಿದೆ.

ಮೈಸೂರಿನ ಪಬ್‌ನಲ್ಲಿ ಅಗ್ನಿ ಅವಘಡ.

ಮೈಸೂರು: ಮೈಸೂರಿನ ರಿಂಗ್ ರಸ್ತೆ ಸಮೀಪದ ಫಾಕ್ಸ್ ಡೆನ್ ಪಬ್‌ನಲ್ಲಿ ನಡೆದ ಭೀಕರ ಅಗ್ನಿ ಅವಘಡದಲ್ಲಿ (FoxDen Restobar Fire Accident) ಇಬ್ಬರು ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ದಟ್ಟಗಳ್ಳಿ 4ನೇ ಹಂತದ ಬಳಿ ಇರುವ ಪಬ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲೇ ಬೆಂಕಿ ವ್ಯಾಪಿಸಿ ಪಬ್ ಸಂಪೂರ್ಣ ಸುಟ್ಟು ಹೋಗಿದೆ.

ಅವಘಡದಲ್ಲಿ ಡಾರ್ಜಿಲಿಂಗ್ ಮೂಲದ ಸಾಹಿನ್ (26) ಮತ್ತು ನೇಪಾಳ ಮೂಲದ ಪ್ರಕಾಶ್ (24) ಎಂಬ ಇಬ್ಬರು ಯುವಕರು ದುರ್ಮರಣಕ್ಕೀಡಾಗಿದ್ದಾರೆ. ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪಬ್‌ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಅವಘಡ ನಡೆದಿದೆ ಎಂದು ತಿಳಿದುಬಂದಿದೆ.

ಏಕಾಏಕಿ ಸಂಭವಿಸಿದ ಘಟನೆಯಿಂದ ಪಬ್‌ನಲ್ಲಿದ್ದ ಗ್ರಾಹಕರು ಹಾಗೂ ಸಿಬ್ಬಂದಿ ದಿಕ್ಕುತೋಚದೆ ಕಂಗಾಲಾಗಿದ್ದಾರೆ. ಕಟ್ಟಡದ ಒಳಗೆ ಹೊಗೆ ತುಂಬಿಕೊಂಡು ಉಸಿರಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾದಾಗ, ಒಳಗಿದ್ದ ಕೆಲವರು ತಮ್ಮ ಪ್ರಾಣ ಉಳಿಸಿಕೊಳ್ಳಲು ಪಬ್‌ನ ಮೇಲಂತಸ್ತಿನಿಂದ ಕೆಳಗೆ ಜಿಗಿದು ಪಾರಾಗಲು ಯತ್ನಿಸಿದ್ದಾರೆ. ಈ ವೇಳೆ ಕೆಲವರಿಗೆ ಮೂಳೆ ಮುರಿತ ಹಾಗೂ ಗಂಭೀರ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಹಲವಾರು ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದರು. ಇಡೀ ಕಟ್ಟಡವನ್ನು ಆವರಿಸಿದ್ದ ಭಾರಿ ಬೆಂಕಿಯನ್ನು ನಂದಿಸಲು ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಸದ್ಯ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲಾಗಿದ್ದು, ಕಟ್ಟಡದ ಒಳಗಿದ್ದವರನ್ನು ಸುರಕ್ಷಿತವಾಗಿ ಹೊರತರಲಾಗಿದೆ.

ಅವಘಡದಲ್ಲಿ ಸ್ಯಾಂಡಲ್‌ವುಡ್‌ ನಟನಿಗೂ ಗಾಯ

ಮೈಸೂರು ನಗರದ ಹೊರವಲಯದ ದಟ್ಟಗಳ್ಳಿ ಸಮೀಪವಿರುವ ರೆಸ್ಟೋ ಡೆನ್‌ ಬಾರ್‌ನಲ್ಲಿ ನಡೆದ ಅಗ್ನಿ ಅವಘಡದಲ್ಲಿ ಪಬ್ ಮಾಲೀಕ ಸ್ಯಾಂಡಲ್‌ವುಡ್‌ ಚಿತ್ರನಟ ಎಂದು ತಿಳಿದುಬಂದಿದೆ. ಕನ್ನಡದ ‘ಬ್ರಹ್ಮ ವಿಷ್ಣು ಮಹೇಶ್ವರ’ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದ ಪ್ರೀತಂ ಪುನೀತ್ ಅವರು ರೆಸ್ಟೋ ಪಬ್ ನಡೆಸುತ್ತಿದ್ದರು. ನಟನೂ ಸೇರಿ ಹಲವರಿಗೆ ಗಾಯಗಳಾಗಿವೆ.

ನಟ ಪ್ರೀತಂ ಅವರ ಗೆಳೆಯ ಅವಿನಾಶ್ (27) ಅವರಿಗೂ ತೀವ್ರ ಸುಟ್ಟ ಗಾಯಗಳಾಗಿವೆ. ಇನ್ನು ಪಬ್‌ಗೆ ಬಂದಿದ್ದ ಸೋನು (25), ರಮೇಶ್ (25), ಮಹದೇವಪ್ರಸಾದ್ (32), ಮತ್ತು ಪ್ರಜ್ವಲ್ (26 ) ಎಂಬುವವರಿಗೂ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಆಫರ್ ತಂದೊಡ್ಡಿತಾ ದುರಂತ?

ಸಾಮಾನ್ಯವಾಗಿ ವಾರದ ಮೊದಲ ದಿನವಾದ ಸೋಮವಾರದಂದು ಪಬ್‌ಗಳಲ್ಲಿ ಗ್ರಾಹಕರ ಸಂಖ್ಯೆ ಕಡಿಮೆ ಇರುತ್ತದೆ. ಹೀಗಾಗಿ, ಗ್ರಾಹಕರನ್ನು ಆಕರ್ಷಿಸಲು ಮಾಲೀಕ ಪ್ರೀತಂ ಇಂದು ವಿಶೇಷ ಆಫರ್ ಘೋಷಿಸಿದ್ದರು. ರೆಸ್ಟೋ ಪಬ್‌ನಲ್ಲಿ ಗ್ರಾಹಕರು ಯಾವುದೇ ಆಹಾರ ಪದಾರ್ಥ ಆರ್ಡರ್ ಮಾಡಿದರೂ ಕೇವಲ 175 ರೂಪಾಯಿ ಮಾತ್ರ ಎಂದು ನಿಗದಿಪಡಿಸಲಾಗಿತ್ತು.

ಈ ಆಕರ್ಷಕ ಆಫರ್‌ನಿಂದಾಗಿ ಸೋಮವಾರವಾಗಿದ್ದರೂ ಸಹ ಪಬ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಜಮಾಯಿಸಿದ್ದರು ಎನ್ನಲಾಗಿದೆ. ಗ್ರಾಹಕರು ಆಹಾರ ಮತ್ತು ಪಾನೀಯದ ಮಜಾ ಸವಿಯುತ್ತಿದ್ದಾಗಲೇ ಕಿಚನ್ ಭಾಗದಲ್ಲಿ ಹಠಾತ್ತನೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಇಡೀ ರೆಸ್ಟೋ ಪಬ್ ಕ್ಷಣಾರ್ಧದಲ್ಲಿ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ.