ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Thalapathy Vijay: ದಳಪತಿ ವಿಜಯ್‌ ಈಗ ʼಜನ ನಾಯಕನ್‌ʼ; ಕೊನೆ ಚಿತ್ರದ ಟೈಟಲ್‌ ರಿವೀಲ್‌

ಕಾಲಿವುಡ್‌ ಸೂಪರ್‌ಸ್ಟಾರ್‌ ದಳಪತಿ ವಿಜಯ್‌ ಅಭಿನಯದ ಕೊನೆಯ ಚಿತ್ರಕ್ಕೆ ʼಜನ ನಾಯಕನ್‌ʼ ಎಂದು ಶೀರ್ಷಿಕೆ ಇಡಲಾಗಿದೆ. ಎಚ್‌.ವಿನೋದ್‌ ನಿರ್ದೇಶನದ ಈ ಸಿನಿಮಾದಲ್ಲಿ ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ.

ರಾಜಕೀಯಕ್ಕೆ ಎಂಟ್ರಿ ಕೊಡ್ತಿದ್ದಂತೆ ಜನ ನಾಯಕನಾದ ದಳಪತಿ ವಿಜಯ್‌

ವಿಜಯ್‌ ಮತ್ತು ಪೂಜಾ ಹೆಗ್ಡೆ.

Profile Ramesh B Jan 26, 2025 3:49 PM

ಚೆನ್ನೈ: ಕಾಲಿವುಡ್‌ ದಳಪತಿ ವಿಜಯ್‌‌ (Thalapathy Vijay) ಅಭಿನಯದ ಚಿತ್ರ ರಿಲೀಸಾದರೆ ಸಾಕು ಅವರ ಫ್ಯಾನ್ಸ್‌ ಶಿಳ್ಳೆ ಹೊಡೆದು ಅ‍ದ್ಧೂರಿಯಾಗಿ ಸ್ವಾಗತ ಕೋರುತ್ತಾರೆ. ತಮಿಳುನಾಡು ಮಾತ್ರವಲ್ಲ ದೇಶ-ವಿದೇಶದಲ್ಲಿಯೂ ಅವರಿಗೆ ಅಭಿಮಾನಿಗಳಿದ್ದಾರೆ. ಚಿತ್ರವು ತೆರೆಕಂಡ ಮೊದಲ ದಿನವೇ ಕೋಟಿ ಕೋಟಿ ದೋಚುತ್ತದೆ. ಇಂತಿಪ್ಪ ವಿಜಯ್‌ ಕಳೆದ ವರ್ಷ ಬಹು ದೊಡ್ಡ ನಿರ್ಧಾರ ಪ್ರಕಟಿಸಿದರು. ಸಕ್ರಿಯ ರಾಜಕೀಯಕ್ಕೆ ಧುಮುಕುವುದಾಗಿ ಘೋಷಿಸಿದ ಅವರು ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ತಿಳಿಸಿದರು. ಸದ್ಯ ಅವರು ನಟಿಸುತ್ತಿರುವ ಕೊನೆಯ ಚಿತ್ರದ ಶೂಟಿಂಗ್‌ ನಡೆಯುತ್ತಿದೆ. ʼದಳಪತಿ 69ʼ ಹೆಸರಿನಲ್ಲಿ ಆರಂಭವಾದ ಈ ಚಿತ್ರಕ್ಕೆ ಈಗ ಟೈಟಲ್‌ ಫಿಕ್ಸ್‌ ಮಾಡಲಾಗಿದೆ. ವಿಜಯ್‌ ಕೊನೆಯ ಚಿತ್ರ ಎನ್ನುವ ಕಾರಣಕ್ಕೆ ಇದು ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದು, ಕಾಲಿವುಡ್‌ನ ಜನಪ್ರಿಯ ನಿರ್ದೇಶಕ ಎಚ್‌.ವಿನೋದ್‌ (H.Vinoth) ಆ್ಯಕ್ಷನ್‌ ಹೇಳುತ್ತಿದ್ದಾರೆ. ಗಣರಾಜ್ಯೋತ್ಸವ ಪ್ರಯುಕ್ತ ಚಿತ್ರ ನಿರ್ಮಿಸುತ್ತಿರುವ ಕೆವಿಎನ್‌ ಪ್ರೊಡಕ್ಷನ್ಸ್‌ ಪೋಸ್ಟರ್‌ ರಿಲೀಸ್‌ ಮಾಡಿ ಟೈಟಲ್‌ ಲಾಂಚ್‌ ಮಾಡಿದೆ. ಸಿನಿಮಾಕ್ಕೆ ʼಜನ ನಾಯಕʼ (Jana Nayagan) ಎಂದು ಹೆಸರಿಡಲಾಗಿದೆ.

ಜನ ಸಮೂಹದ ಮುಂದೆ ವಿಜಯ್‌ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಪೋಸ್ಟರ್‌ನಲ್ಲಿ ಕಂಡು ಬಂದಿದೆ. ಇದೊಂದು ಪಾಲಿಟಿಕಲ್‌ ಥ್ರಿಲ್ಲರ್‌ ಎನ್ನುವ ಸೂಚನೆಯನ್ನು ಈ ಪೋಸ್ಟರ್‌ ಸಾರಿ ಹೇಳಿದ್ದು, ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ.

ರಾಜಕೀಯ ಪಕ್ಷ ಹುಟ್ಟುಹಾಕಿದ ವಿಜಯ್‌

ದಳಪತಿ ವಿಜಯನ್‌ ಕಳೆದ ವರ್ಷ ತಮ್ಮದೇ ಆದ ರಾಜಕೀಯ ಪಕ್ಷವನ್ನು ಹುಟ್ಟು ಹಾಕಿದ್ದಾರೆ. ತಮಿಳಗ ವೆಟ್ರಿ ಕಝಗಂ (Tamilaga Vettri Kazhagam-TVK) ಹೆಸರಿನ ಈ ಪಕ್ಷ ಮುಂದಿನ ವರ್ಷ ನಡೆಯಲಿರುವ ವಿದಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಈಗಾಗಲೇ ವಿಜಯ್‌ ತಮ್ಮ ರಾಜಕೀಯ ಚಟುವಟಿಕೆ ಆರಂಭಿಸಿದ್ದಾರೆ.

ವಿಜಯ್‌ಗೆ ಪೂಜಾ ಹೆಗ್ಡೆ ಮತ್ತೊಮ್ಮೆ ಜೋಡಿ

ʼಜನ ನಾಯಕನ್‌ʼ ಚಿತ್ರದಲ್ಲಿ ನಾಯಕಿಯಾಗಿ ಕರಾವಳಿ ಬೆಡಗಿ, ಬಹು ಭಾಷಾ ನಟಿ ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಎಂದರೆ ವಿಜಯ್‌ ಮತ್ತು ಪೂಜಾ ಜೋಡಿಯ 2ನೇ ಚಿತ್ರವಿದು. ಈ ಹಿಂದೆ ಇವರು 2022ರಲ್ಲಿ ಬಿಡುಗಡೆಯಾದ ನೆಲ್ಸನ್‌ ದಿಲೀಪ್‌ಕುಮಾರ್‌ ಅಭಿನಯದ ʼಬೀಸ್ಟ್‌ʼ ಸಿನಿಮಾದಲ್ಲಿ ಮೊದಲ ಬಾರಿಗೆ ಜತೆಯಾಗಿ ಅಭಿನಯಿಸಿದ್ದರು. ಬಾಕ್ಸ್‌ ಆಫೀಸ್‌ನಲ್ಲಿ ಸಾಧಾರಣ ಯಶಸ್ಸು ಕಂಡಿದ್ದ ಈ ಚಿತ್ರಕ್ಕೆ ಅನಿರುದ್ಧ್‌ ರವಿಚಂದರ್‌ ನೀಡಿದ ಸಂಗೀತ ಗಮನ ಸೆಳೆದಿತ್ತು. ʼಜನ ನಾಯಕನ್‌ʼ ಸಿನಿಮಾಕ್ಕೂ ಅನಿರುದ್ಧ್‌ ರವಿಚಂದರ್‌ ಮ್ಯೂಸಿಕ್‌ ಒದಗಿಸುತ್ತಿದ್ದಾರೆ.

ಇನ್ನು ಈ ಸಿನಿಮಾದಲ್ಲಿ ಮಮಿತಾ ಬೈಜು, ಪ್ರಿಯಾಮಣಿ, ಬಾಬ್ಬಿ ಡಿಯೋಲ್‌, ಗೌತಮ್‌ ವಾಸುದೇವ್‌ ಮೆನನ್ನ, ನರೇನ್‌, ವರಲಕ್ಷ್ಮೀ ಶರತ್‌ಕುಮಾರ್ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸುಮಾರು 300 ಕೋಟಿ ರೂ. ವೆಚ್ಚದಲ್ಲಿ ಈ ಸಿನಿಮಾ ತಯಾರಾಗಲಿದೆ. ಸದ್ಯ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ರಿಲೀಸ್‌ ದಿನಾಂಕವನ್ನು ಸಿನಿಮಾತಂಡ ಇನ್ನೂ ಪ್ರಕಟಿಸಿಲ್ಲ.