ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Basanagouda Patil Yatnal: ಬಿಜೆಪಿಯಿಂದ ಯತ್ನಾಳ್‌ ಉಚ್ಚಾಟನೆಗೆ ಇದೇ ಕಾರಣ!

ನಿರಂತರವಾಗಿ ಬಿಎಸ್‌ ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರ ಅವರ ವಿರುದ್ಧ ವಾಗ್ದಾಳಿ, ಬಿಜೆಪಿಯಲ್ಲೇ ಪ್ರತ್ಯೇಕ ಬಣ ರಚಿಸಲು ಯತ್ನ, ಹೈಕಮಾಂಡ್‌ ಹಲವು ಬಾರಿ ನೋಟೀಸ್‌ ನೀಡಿದ್ದರೂ ಉಡಾಫೆ ತೋರಿಸಿದ್ದು ಇವು ಯತ್ನಾಳ್‌ ಅವರಿಗೆ ಮುಳುವಾಗಿವೆ.

ಬಸವನಗೌಡ ಪಾಟೀಲ್‌ ಯತ್ನಾಳ್

ಬೆಂಗಳೂರು: ಬಿಜೆಪಿಯ (BJP) ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದ ವಿಜಯಪುರ (vijayapura) ಶಾಸಕ ಹಾಗೂ ಪ್ರಖರ ಹಿಂದುತ್ವವಾದಿ ಎಂದೇ ಗುರುತಿಸಿಕೊಂಡಿದ್ದ ಬಸನಗೌಡ ಪಾಟೀಲ್ (Basanagouda Patil Yatnal) ಅವರನ್ನು ಕೊನೆಗೂ ಬಿಜೆಪಿ ಹೈಕಮಾಂಡ್ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದೆ. ಈ ಹಿಂದೆಯೂ ಎರಡು ಬಾರಿ ಇವರು ಪಕ್ಷದಲ್ಲಿ ಉಚ್ಚಾಟನೆಗೆ ಈಡಾಗಿದ್ದು, ಇದು ಮೂರನೇ ಬಾರಿ ಶಿಸ್ತು ಕ್ರಮಕ್ಕೆ ಗುರಿಯಾಗಿದ್ದಾರೆ. ಇದೀಗ ಅವರನ್ನು ಬಿಜೆಪಿ ಹೈಕಮಾಂಡ್ ಬರೋಬ್ಬರಿ 6 ವರ್ಷಗಳ ಕಾಲ ಪಾರ್ಟಿಯಿಂದ ಉಚ್ಛಾಟನೆ (expulsion) ಮಾಡಿದೆ. ಪಕ್ಷದ ಶಿಸ್ತನ್ನು ಉಲ್ಲಂಘಿಸಿರುವುದು ಉಚ್ಚಾಟನೆಗೆ ಕಾರಣ ಎಂದು ಪಕ್ಷದ ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಕಾರಣಗಳು ಏನೇನು?

1) ಪಕ್ಷದ ಶಿಸ್ತು ಉಲ್ಲಂಘನೆ

'ಪಕ್ಷದ ಕೇಂದ್ರ ಶಿಸ್ತು ಸಮಿತಿಯು 2025 ಫೆಬ್ರುವರಿ 10ರಂದು ನೀಡಲಾದ ಶೋಕಾಸ್ ನೋಟಿಸ್‌ಗೆ ನಿಮ್ಮ ಪ್ರತಿಕ್ರಿಯೆಯನ್ನು ಪರಿಗಣಿಸಿದ್ದೇವೆ. ಹಿಂದಿನ ಶೋಕಾಸ್ ನೋಟಿಸ್‌ಗಳಿಗೆ ಉತ್ತರಿಸುವಾಗ ಉತ್ತಮ ನಡವಳಿಕೆಯ ಭರವಸೆ ನೀಡಿದ್ದರೂ ಕೂಡ, ನೀವು ಪಕ್ಷದ ಶಿಸ್ತನ್ನು ಪದೇ ಪದೇ ಉಲ್ಲಂಘಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಹೀಗಾಗಿ ನಿಮ್ಮನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣ ಜಾರಿಗೆ ಬರುವಂತೆ ನಿಮ್ಮನ್ನು 6 ವರ್ಷಗಳ ಅವಧಿಗೆ ಉಚ್ಚಾಟಿಸಲು ನಿರ್ಧರಿಸಲಾಗಿದೆ. ನೀವು ಇಲ್ಲಿಯವರೆಗೆ ಹೊಂದಿದ್ದ ಪಕ್ಷದ ಯಾವುದೇ ಹುದ್ದೆಯಿಂದ ನಿಮ್ಮನ್ನು ತೆಗೆದುಹಾಕಲಾಗಿದೆʼ ಎಂದು ಪಕ್ಷದ ಆದೇಶದಲ್ಲಿ ತಿಳಿಸಲಾಗಿದೆ.

2) ಬಿಎಸ್‌ವೈ, ಕುಟುಂಬದ ವಿರುದ್ಧ ವಾಗ್ದಾಳಿ

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಯತ್ನಾಳ್‌ ಪದೇ ಪದೆ ವಾಗ್ದಾಳಿ ನಡೆಸುತ್ತಿದ್ದರು. ನಮ್ಮದು ಹಿಂದುತ್ವ ಆಧಾರಿತ ಪಕ್ಷ, ಕುಟುಂಬ ರಾಜಕಾರಣದ ವಿರುದ್ಧ, ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ಎಂದು ಹೇಳುತ್ತಾ. ಪದೇ ಪದೆ ಬಿಎಸ್ ಯಡಿಯೂರಪ್ಪ ಹಾಗೂ ಬಿವೈ ವಿಜಯೇಂದ್ರ ವಿರುದ್ಧ ಕಿಡಿಕಾರುತ್ತಲೇ ಬಂದಿದ್ದರು.

3) ವಕ್ಫ್ ವಿರುದ್ಧ ಪ್ರತ್ಯೇಕ ಬಣ

ಇತ್ತೀಚೆಗೆ ನಡೆದ ವಕ್ಫ್ ಬೋರ್ಡ್ ವಿರುದ್ಧದ ಹೋರಾಟದಲ್ಲಿ ಶಾಸಕ ಬಸನಗೌಡ ಯತ್ನಾಳ್ ಅವರು ತಮ್ಮದೇ ಆದ ಬಣ ಒಂದನ್ನು ಕಟ್ಟಿಕೊಂಡು ವಕ್ಫ್ ಬೋರ್ಡ್ ವಿರುದ್ಧ ಹೋರಾಟ ನಡೆಸಿದ್ದರು. ಅನೇಕ ಸಂದರ್ಭದಲ್ಲಿ ಕಾಂಗ್ರೆಸ್ ಮುಸ್ಲಿಮರ ಪರ ಎಂದು ಆರೋಪಿಸಿ ಅವರ ವಿರುದ್ಧವೂ ಟೀಕೆ ಮಾಡುತ್ತಿದ್ದರು. ನನಗೆ ಮುಸಲ್ಮಾನರ ವೋಟ್ ಬೇಡ ಎಂದು ಹೇಳಿಕೆ ನೀಡುವ ಮೂಲಕ ಪಕ್ಷಕ್ಕೆ ಮುಜುಗರ ಸೃಷ್ಟಿಸಿದ್ದರು.

4) ಪ್ರತ್ಯೇಕ ಬಣ ರಚಿಸಲು ಯತ್ನ

ಕಳೆದ ಒಂದು ವರ್ಷದಿಂದ ಬಿವೈ ವಿಜಯೇಂದ್ರ ಬಿಜೆಪಿ ಅಧ್ಯಕ್ಷರಾದ ಬಳಿಕ ಯತ್ನಾಳ್‌ ಅವರು ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ, ಬಿಪಿ ಹರೀಶ್‌ರಂತಹ ಕೆಲವು ನಾಯಕರ ಗುಂಪು ಕಟ್ಟಿಕೊಂಡು ಪ್ರತ್ಯೇಕ ಸಭೆ ನಡೆಸುತ್ತಿದ್ದರು ಹಾಗೂ ವಿಜಯೇಂದ್ರ- ಯಡಿಯೂರಪ್ಪ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ಮಾಡುತ್ತಿದ್ದರು.

5) ಪಕ್ಷದ ನೋಟೀಸ್‌ಗೂ ಉಡಾಫೆ

ಇದಕ್ಕೂ ಮೊದಲು ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿ ಶಿಸ್ತು ಸಮಿತಿ 2 ಬಾರಿ ನೋಟಿಸ್ ನೀಡಿತ್ತು. ಎಷ್ಟೇ ಬಾರಿ ನೋಟಿಸ್ ನೀಡಿದರೂ ಕೂಡ ಯತ್ನಾಳ್ ತಮ್ಮ ವರಸೆಯನ್ನು ಬದಲಿಸಿಕೊಂಡಿರಲಿಲ್ಲ. ಅಷ್ಟೇ ಅಲ್ಲದೇ ಸ್ವಪಕ್ಷದ ನಾಯಕರ ವಿರುದ್ಧ ಹೇಳಿಕೆ ನೀಡಿರುವುದನ್ನು ಕೂಡ ಅವರು ನಿಲ್ಲಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ 6 ವರ್ಷ ಉಚ್ಚಾಟನೆ ಮಾಡಿ ಬಿಜೆಪಿ ಶಿಸ್ತು ಸಮಿತಿ ಆದೇಶಿಸಿದೆ.

ಇದನ್ನೂ ಓದಿ: Basangouda Patil Yatnal: ಯತ್ನಾಳ್‌ ಉಚ್ಚಾಟನೆ ಬೆನ್ನಲ್ಲೇ ಬೆಂಬಲಿಗರ ರಾಜೀನಾಮೆ ಪರ್ವ

ಹರೀಶ್‌ ಕೇರ

View all posts by this author