ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ (Womens premier league) ಟೂರ್ನಿಯ ಮೂರನೇ ಆವೃತ್ತಿಯ ನಿಮಿತ್ತ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಎಲಿಸ್ ಪೆರಿ (Ellyse perry) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಆರ್‌ಸಿಬಿ ಕಳೆದ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪೆರಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದರು. ಆದರೆ ಗಾಯದ ಸಮಸ್ಯೆಯಿಂದಾಗಿ ಈ ಸೀಸನ್‌ನಲ್ಲಿ ಆಡುವುದು ಅನುಮಾನ ಎನ್ನಲಾಗುತ್ತಿತ್ತು. ಆದರೆ, ಈ ಬಗ್ಗೆ ಸ್ವತಃ ಆಸೀಸ್ ಆಲ್‌ರೌಂಡರ್ ಸ್ಪಷ್ಟಪಡಿಸಿದ್ದಾರೆ.
ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ನಡೆದ ಏಕೈಕ ಟೆಸ್ಟ್ ಪಂದ್ಯದ ವೇಳೆ ಆಸೀಸ್ ಆಲ್‌ರೌಂಡರ್ ಎಲಿಸ್ ಪೆರಿ ಸೊಂಟದ ಗಾಯಕ್ಕೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿಅವರು ಕ್ಷೇತ್ರ ರಕ್ಷಣೆಯನ್ನು ತೊರೆದಿದ್ದರು ಹಾಗೂ 10ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲುಯ ಕ್ರೀಸ್‌ಗೆ ಬಂದಿದ್ದರು ಹಾಗೂ ಅವರಿಂದ ನೈಜ ಆಟ ಮೂಡಿ ಬಂದಿರಲಿಲ್ಲ. ಇದರ ನಡುವೆ ಈ ಬಾರಿ ಮಹಿಳಾ ಪ್ರೀಮಿಯರ್ ಲೀಗ್‌ಗೆ ಅಲಭ್ಯರಾಗಲಿದ್ದಾರೆಂದು ವರದಿಯಾಗಿತ್ತು. ಬೆಂಗಳೂರಿಗೆ ಆಗಮಿಸಿದ ಅವರು, ತಾನು ಸಂಪೂರ್ಣ ಫಿಟ್ ಇದ್ದಿದ್ದೇನೆ ಹಾಗೂ ಟೂರ್ನಿಗೆ ಲಭ್ಯರಿರುವುದಾಗಿ ತಿಳಿಸಿದ್ದಾರೆ.
WPL 2025: ಚಾಂಪಿಯನ್ ಆರ್‌ಸಿಬಿ ತಂಡ ಸೇರಿಕೊಂಡ ಆಸ್ಟ್ರೇಲಿಯಾ ಸ್ಟಾರ್‌ಗಳು!
ಆರ್‌ಸಿಬಿ ಕ್ಯಾಂಪ್ ಸೇರಿದ ಎಲಿಸ್ ಪೆರಿ
ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಎಲಿಸ್ ಪೆರಿ ತಂಡಕ್ಕೆ ಸೇರ್ಪಡೆಯಾಗಿದ್ದಾರೆಂಬ ವಿಷಯವನ್ನು ಆರ್‌ಸಿಬಿ ತಂಡ ತನ್ನ ವಿಡಿಯೊ ಮೂಲಕ ಬಹಿರಂಗಪಡಿಸಿದೆ. ತಮ್ಮ ಸಹ ಆಟಗಾರ್ತಿಯೊಂದಿಗೆ ವಿಡಿಯೊ ಕರೆಯಲ್ಲಿ ಮಾತನಾಡುತ್ತಾ ವಿಭಿನ್ನ ರೀತಿಯಲ್ಲಿ ಆರ್‌ಸಿಬಿ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದನ್ನು ವೀಕ್ಷಿಸಿದ ಆರ್‌ಸಿಬಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಸ್ಟಾರ್ ಆಟಗಾರ್ತಿಯರ ಸೇವೆ ಕಳೆದುಕೊಂಡ ಆರ್‌ಸಿಬಿ
ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗಾಗಲೇ ಗಾಯದ ಸಮಸ್ಯೆಯಿಂದ ಸ್ಟಾರ್ ಆಟಗಾರ್ತಿಯರಾದ ಸೋಫಿ ಮೊಲನಿಕ್ಸ್ ಹಾಗೂ ಕೇಟ್ ಕ್ರಾಸ್ ಹಾಗೂ ವೈಯಕ್ತಿಕ ಕಾರಣಕ್ಕಾಗಿ ಸೋಫಿ ಡಿವೈನ್ ಸೇವೆ ಕಳೆದುಕೊಂಡಿದೆ. ಆದರೆ ಎಲಿಸ್ ಪೆರಿ ಆಗಮನದಿಂದ ತಂಡಕ್ಕೆ ಆನೆ ಬಲ ಸಿಕ್ಕಂತಾಗಿದೆ.
2024ರ ಟೂರ್ನಿಯಲ್ಲಿ ಮಿಂಚಿದ್ದ ಎಲಿಸ್ ಪೆರಿ
2024ರ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ತಮ್ಮ ಆಲ್‌ರೌಂಡರ್ ಪ್ರದರ್ಶನದಿಂದ ಮಿಂಚಿದ್ದ ಎಲಿಸ್ ಪೆರ್ರಿ, 9 ಪಂದ್ಯಗಳಿಂದ 69.40ರ ಸರಾಸರಿಯಲ್ಲಿ ಎರಡು ಅರ್ಧಶತಕ ಸೇರಿದಂತೆ 347 ರನ್ ಗಳಿಸಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದರು.
ಫೆ.14 ರಂದು ಟೂರ್ನಿಗೆ ಅದ್ಧೂರಿ ಚಾಲನೆ
ಸತತ ಎರಡನೇ ಬಾರಿ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜಯಂಟ್ಸ್ ತಂಡದ ಸವಾಲನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಎಲಿಸ್ ಪೆರಿ ಆಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ)
ಸ್ಮೃತಿ ಮಂಧಾನಾ (ನಾಯಕಿ), ಸಬ್ಬಿನೇನಿ ಮೇಘನಾ, ರಿಚಾ ಘೋಷ್, ಎಲ್ಲಿಸ್ ಪೆರಿ, ಜಾರ್ಜಿಯಾ ವೇರ್‌ಹ್ಯಾಮ್, ಶ್ರೇಯಾಂಕ ಪಾಟೀಲ್, ಆಶಾ ಸೋಭಾನಾ, ಸೋಫಿ ಡಿವೈನ್, ರೇಣುಕಾ ಸಿಂಗ್. ಸೋಫಿ ಮೊಲಿನೆಕ್ಸ್, ಏಕ್ತಾ ಬಿಷ್ತ್, ಕೇಟ್ ಕ್ರಾಸ್, ಕನಿಕಾ ಅಹುಜಾ, ಡ್ಯಾನಿ ವ್ಯಾಟ್ (ವಿ.ಕೀ), ಮತ್ತು ಪ್ರೇಮಾ ರಾವತ್. ಜೋಶಿತಾ ವಿಜೆ, ರಾಘ್ವಿ ಬೀಸ್ಟ್, ಜಾಗ್ರವಿ ಪವಾರ್