ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Thimmanna Bhagwat Column: ಯುನುಸ್‌ ತಾತ ಮತ್ತು ಸಪ್ತ ಸಹೋದರಿಯರು

ಈಶಾನ್ಯ ಭಾರತದ ಅರುಣಾಚಲಪ್ರದೇಶ, ಆಸ್ಸಾಂ, ಮೇಘಾಲಯ, ತ್ರಿಪುರ, ಮಣಿಪುರ, ಮಿಜೋರಾಂ ಮತ್ತು ನಾಗಾಲ್ಯಾಂಡ್ ರಾಜ್ಯಗಳನ್ನು ‘ಸೆವೆನ್ ಸಿಸ್ಟರ‍್ಸ್’ ಎನ್ನಲಾಗುತ್ತದೆ. ಉತ್ತರದಲ್ಲಿ ಭೂತಾನ್, ನೇಪಾಳ ಮತ್ತು ಚೀನಾ, ಪೂರ್ವದಲ್ಲಿ ಮ್ಯಾನ್ಮಾರ್, ದಕ್ಷಿಣ ಮತ್ತು ಪಶ್ಚಿಮದಲ್ಲಿ ಬಾಂಗ್ಲಾದ ಗಡಿಯಿಂದ ಆವೃತವಾಗಿರುವ ಈ ಪ್ರದೇಶಕ್ಕೆ ಕೇವಲ 20-22 ಕಿ.ಮೀ. ಅಗಲದ ಸಿಲಿಗುರಿ ಕಾರಿಡಾರ್ ಎಂಬ ದಾರಿಯ ಮೂಲಕ ಮಾತ್ರ ದೇಶದ ಮುಖ್ಯಭಾಗದ ಸಂಪರ್ಕವಿದೆ.

ಯುನುಸ್‌ ತಾತ ಮತ್ತು ಸಪ್ತ ಸಹೋದರಿಯರು

ಅಂಕಣಕಾರ ತಿಮ್ಮಣ್ಣ ಭಾಗ್ವತ್

Profile Ashok Nayak Apr 14, 2025 7:08 AM

ಕಟ್ಟೆ ಪಂಚಾಯ್ತಿ

ತಿಮ್ಮಣ್ಣ ಭಾಗ್ವತ್

ಸೆವೆನ್ ಸಿಸ್ಟರ‍್ಸ್ ಎನ್ನಲಾಗುವ ಈಶಾನ್ಯ ಭಾರತದ 7 ರಾಜ್ಯಗಳು ಭೂಮಿಯಿಂದ ಆವೃತವಾಗಿವೆ (Land Locked ). ಅವುಗಳ ಸಾಗರ ಸಂಪರ್ಕಕ್ಕೆ ನಮ್ಮ ದೇಶವೇ ಗತಿ. ಆದ್ದರಿಂದ ಆ ಪ್ರದೇಶವು ಚೀನಾದ ಆರ್ಥಿಕತೆಯ ವಿಸ್ತರಣೆಗೆ ದೊಡ್ಡ ಅವಕಾಶ. ಅದೊಂದು ನಿಮ್ಮ ದೊಡ್ಡ ಉತ್ಪಾದನಾ ಕೇಂದ್ರವಾಗಬಹುದು"- ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯಸ್ಥರಾಗಿರುವ 85 ವರ್ಷದ ಮೊಹಮ್ಮದ್ ಯುನುಸ್ ತಮ್ಮ ಚೀನಾ ಭೇಟಿಯ ವೇಳೆ ನೀಡಿದ ಪ್ರಚೋದನಕಾರಿ ಹೇಳಿಕೆಯಿದು. ಆಂತರಿಕ ಕ್ಷೋಭೆ, ಅತ್ಯಧಿಕ ಸಾಲ, ಆರ್ಥಿಕ ದಿವಾಳಿತನ, ರಾಜಕೀಯ ಅನಿಶ್ಚಿತತೆ ಹಾಗೂ ವ್ಯಾಪಕ ಹಿಂಸಾಚಾರಗಳಿಂದ ಕಂಗಾಲಾಗಿರುವ ಬಾಂಗ್ಲಾ ಆರ್ಥಿಕ ನೆರವಿಗಾಗಿ ಚೀನಾವನ್ನು ಅಂಗಲಾಚು‌ ತ್ತಿದೆ. ಭಾರತದ ಭೂಭಾಗವನ್ನು ಅತಿಕ್ರಮಿಸಲು ಪರೋಕ್ಷ ಪ್ರಚೋದನೆ ನೀಡುವ ಮೂಲಕ ಚೀನಾ ವನ್ನು ಓಲೈಸುತ್ತಿರುವ ಯುನುಸ್‌ರ ಹೊಸ ಆಡಳಿತವು, ಬಾಂಗ್ಲಾ ವಿಮೋಚನೆಯ ಸಂಗ್ರಾಮದಲ್ಲಿ ಭಾರತ ನೀಡಿದ ಬೆಂಬಲವನ್ನು ಮರೆತಂತಿದೆ.

ಈಶಾನ್ಯ ಭಾರತದ ಅರುಣಾಚಲಪ್ರದೇಶ, ಆಸ್ಸಾಂ, ಮೇಘಾಲಯ, ತ್ರಿಪುರ, ಮಣಿಪುರ, ಮಿಜೋರಾಂ ಮತ್ತು ನಾಗಾಲ್ಯಾಂಡ್ ರಾಜ್ಯಗಳನ್ನು ‘ಸೆವೆನ್ ಸಿಸ್ಟರ‍್ಸ್’ ಎನ್ನಲಾಗುತ್ತದೆ. ಉತ್ತರದಲ್ಲಿ ಭೂತಾನ್, ನೇಪಾಳ ಮತ್ತು ಚೀನಾ, ಪೂರ್ವದಲ್ಲಿ ಮ್ಯಾನ್ಮಾರ್, ದಕ್ಷಿಣ ಮತ್ತು ಪಶ್ಚಿಮದಲ್ಲಿ ಬಾಂಗ್ಲಾದ ಗಡಿಯಿಂದ ಆವೃತವಾಗಿರುವ ಈ ಪ್ರದೇಶಕ್ಕೆ ಕೇವಲ 20-22 ಕಿ.ಮೀ. ಅಗಲದ ಸಿಲಿಗುರಿ ಕಾರಿಡಾರ್ ಎಂಬ ದಾರಿಯ ಮೂಲಕ ಮಾತ್ರ ದೇಶದ ಮುಖ್ಯಭಾಗದ ಸಂಪರ್ಕವಿದೆ.

ಇದನ್ನೂ ಓದಿ: Thimmanna Bhagwat Column: ಸೀಮೆ ಮೀರದಿರಲಿ ಸೀಮಾಸುಂಕ ಸಮರ

‘ಕೋಳಿಯ ಕತ್ತು’ (Chiken-neck) ಎನ್ನಲಾಗುವ ಪಶ್ಚಿಮ ಬಂಗಾಳದ ಈ ಪ್ರದೇಶವು, ಉತ್ತರದ ನೇಪಾಳ ಮತ್ತು ಭೂತಾನ್ ಹಾಗೂ ದಕ್ಷಿಣದ ಬಾಂಗ್ಲಾದ ನಡುವೆ ಸ್ಯಾಂಡ್‌ವಿಚ್‌ನಂತೆ ಆಗಿದೆ. ಅತ್ಯಂತ ಕಿರಿದಾದ ಈ ಪ್ರದೇಶವೇನಾದರೂ ಚೀನಾದ ವಶವಾದರೆ ನಮ್ಮ ಈಶಾನ್ಯ ರಾಜ್ಯಗಳು ಭಾರತದ ಮುಖ್ಯಭಾಗದ ಸಂಪರ್ಕವನ್ನು ಪೂರ್ತಿಯಾಗಿ ಕಳೆದುಕೊಳ್ಳುತ್ತವೆ.

ಈ ಚಿಕನ್-ನೆಕ್‌ನ ಮಹತ್ವ 1962ರ ಭಾರತ-ಚೀನಾ ಯುದ್ಧದ ವೇಳೆ ಗಮನಕ್ಕೆ ಬಂದ ನಂತರ ಭಾರತೀಯ ಸೇನೆ ಇದನ್ನು ಅತಿ ಆಯಕಟ್ಟಿನ ಸೂಕ್ಷ್ಮ ರಕ್ಷಣಾ ಪ್ರದೇಶ ಎಂದು ಪರಿಗಣಿಸುತ್ತಿದೆ. ಇತ್ತೀಚಿನ ಡೋಕ್ಲಾಂ ಸಂಘರ್ಷದ ಸಮಯದಲ್ಲೂ ಈ ಚಿಕನ್-ನೆಕ್ ಮಹತ್ವ ಪಡೆಯಿತು. ಭಾರತದ ಗಡಿ ಪ್ರದೇಶದ ಪ್ರತಿಯೊಂದು ಸೂಕ್ಷ್ಮ ವಿಷಯಗಳ ಪೂರ್ತಿ ಅರಿವಿರುವ ಚೀನಾಕ್ಕೆ ಇದು ತಿಳಿಯದ ವಿಷಯವೇನಲ್ಲ.

ಹಿಂದೂ ಮಹಾಸಾಗರದ ಆಯಕಟ್ಟಿನ ಸ್ಥಳದಲ್ಲಿರುವ ಬಾಂಗ್ಲಾವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಚೀನಾದ ಪ್ರಯತ್ನಗಳಿಗೆ ಭಾರತದ ಪರ ಒಲವಿದ್ದ ಪ್ರಧಾನಿ ಬೇಗಂ ಶೇಖ್ ಹಸೀನಾ ಅವಕಾಶ ನೀಡಿರಲಿಲ್ಲ. ಆದರೆ ಅಗಸ್ಟ್ 2024ರಲ್ಲಿ ವಿದ್ಯಾರ್ಥಿ ಚಳವಳಿ ಹೆಸರಿನಲ್ಲಿ ನಡೆದ ವ್ಯಾಪಕ ಹಿಂಸಾಚಾರ, ದೊಂಬಿ, ಅವಾಮಿ ಲೀಗ್ ಸದಸ್ಯರ ಹಾಗೂ ಹಿಂದೂಗಳ ಮೇಲೆ ನಡೆದ ಹಲ್ಲೆ ಮುಂತಾದ ಘಟನೆಗಳ ಪರಿಣಾಮವಾಗಿ ಶೇಖ್ ಹಸೀನಾ ರಾಜೀನಾಮೆ ನೀಡಿ ಭಾರತದಲ್ಲಿ ಆಶ್ರಯ ಪಡೆದರು.

ನಂತರ ರಚನೆಯಾದ ಮಧ್ಯಂತರ ಸರಕಾರಕ್ಕೆ ಯುನುಸ್‌ರವರ ನೇಮಕ, ಚೀನಾ ಭೇಟಿ ವೇಳೆಗೆ ಅವರಿಗೆ ದೊರೆತ ಸ್ವಾಗತ, ಎರಡು ದೇಶಗಳ ನಡುವೆ ಆದ ಅನೇಕ ಒಡಂಬಡಿಕೆಗಳು ಹಾಗೂ ಅವರು ಅಲ್ಲಿ ನೀಡಿದ ಭಾರತ ವಿರೋಧಿ ಪ್ರಚೋದನಾತ್ಮಕ ಹೇಳಿಕೆಗಳನ್ನು ಒಟ್ಟಾಗಿ ಗಮನಿಸಿದರೆ ಈ ಪೂರ್ವನಿಯೋಜಿತ ಗಲಭೆಗಳ ಸಂಚಿನ ಎಲ್ಲ ಪಾತ್ರಧಾರಿಗಳ ಪರಿಚಯವಾಗುತ್ತದೆ.

ನಮ್ಮ ನೆರೆರಾಷ್ಟ್ರದಲ್ಲಿ ಭಾರತಕ್ಕೆ ಅಪಾಯಕಾರಿಯಗಬಲ್ಲ ಇಷ್ಟೊಂದು ದೊಡ್ಡ ಪ್ರಮಾಣದ ಸಂಚು ನಡೆಯುವ ಸುಳಿವು ನಮ್ಮ ಗುಪ್ತಚರ ವ್ಯವಸ್ಥೆಗೆ ತಿಳಿದಿರಲಿಲ್ಲವೆಂದಾದರೆ ಅದೊಂದು ದೊಡ್ಡ ವೈಫಲ್ಯವೆಂದೇ ಹೇಳಬೇಕಾಗುತ್ತದೆ. ಶೇಖ್ ಹಸೀನಾರಿಗೂ ಬಹುಶಃ ಇದರ ಸುಳಿವು ದೊರೆ ತಿರಲಿಕ್ಕಿಲ್ಲ.

ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರ ಎಂಬ ಆಧಾರದಲ್ಲಿ ದೇಶ ವಿಭಜನೆಯಾಗುವಾಗ, ಮುಸ್ಲಿಂ ಬಾಹುಳ್ಯವಿರುವ ಭಾಗಗಳು ಮಾತ್ರ ಪಾಕಿಸ್ತಾನಕ್ಕೆ ಸೇರಬೇಕಾಗಿತ್ತು. ಬೌದ್ಧರು ಮತ್ತು ಮುಸ್ಲಿಮೇತರ ಗುಡ್ಡಗಾಡು ಜನರೇ ಅಧಿಕವಾಗಿದ್ದ (97%) ಚಿತ್ತಗಾಂಗ್ ಮತ್ತು ಸುತ್ತಲಿನ ಪ್ರದೇಶಗಳು ವಿಭಜನೆಯ ಮೂಲತತ್ವಗಳ ಪ್ರಕಾರ ಭಾರತಕ್ಕೇ ಸೇರಬೇಕಿತ್ತು.

ಅಲ್ಲಿನ ಚಕ್ಮಾ ಮತ್ತು ಇತರ ಗುಡ್ಡಗಾಡು ಜನರು ಕೂಡಾ ಇದನ್ನೇ ಬಯಸಿದ್ದರು. ಅಲ್ಲಿನ ಮುಖಂಡರಿಗೆ ಕಾಂಗ್ರೆಸ್ಸಿನ ನಾಯಕರಿಂದ ಚಿತ್ತಗಾಂಗ್ ಭಾರತಕ್ಕೆ ಸೇರುವುದೆಂಬ ಆಶ್ವಾಸನೆಯೂ ಸಿಕ್ಕಿತ್ತು. ಇದನ್ನು ನಂಬಿದ ಅವರು 1947ರ ಅಗಸ್ಟ್ 15ರಂದು ತ್ರಿವರ್ಣ ಧ್ವಜವನ್ನು ಹಾರಿಸಿದರು. ಆದರೆ ದೇಶ ವಿಭಜನೆಯ ಗಡಿರೇಖೆಗಳನ್ನು ನಿರ್ಣಯಿಸಲು ನಿಯುಕ್ತರಾದ ಬ್ರಿಟಿಷ್ ಅಧಿಕಾರಿ ಭಾರತಕ್ಕೆ ಕಲ್ಕತ್ತಾ ಬಂದರು ನೀಡಿದ್ದಕ್ಕೆ ಪ್ರತಿಯಾಗಿ ಚಿತ್ತಗಾಂಗನ್ನು ಬಾಂಗ್ಲಾಕ್ಕೆ ನೀಡಿದರಂತೆ.

ಇದನ್ನು ಆಕ್ಷೇಪಿಸಲು ಚಿತ್ತಗಾಂಗ್ ಗುಡ್ಡಗಾಡು ಪ್ರದೇಶದ ಯಾವ ಸದಸ್ಯರೂ ಗಡಿರೇಖೆ ಗುರುತಿ ಸುವ ಸಮಿತಿಯಲ್ಲಿ ಇರಲಿಲ್ಲ. ಚಕ್ಮಾ ಪಂಗಡದ ನಾಯಕರು ಪುನಃ ದೆಹಲಿಗೆ ಭೇಟಿ ನೀಡಿದಾಗ ಅವರಿಗೆ ಭಾರತ ಸರಕಾರದಿಂದ ಅಗತ್ಯ ಸ್ಪಂದನೆ ಸಿಗಲಿಲ್ಲ. ಕೊನೆಗೂ ಚಿತ್ತಗಾಂಗ್ ಪಾಕಿಸ್ತಾನಕ್ಕೆ ಸೇರುವಂತಾದದ್ದು ದೊಡ್ಡ ಐತಿಹಾಸಿಕ ಪ್ರಮಾದ. ಚಿತ್ತಗಾಂಗ್ ಗುಡ್ಡಗಾಡು ಪ್ರದೇಶ ಅಸ್ಸಾಮಿನ ದಕ್ಷಿಣಕ್ಕಿದ್ದು ಬಂಗಾಲಕೊಲ್ಲಿಯವರೆಗೂ ಭಾರತದ ಭೂಭಾಗಕ್ಕೆ ಅಂಟಿಕೊಂಡಿದೆ.

ಪ್ರಮುಖ ಚಿತ್ತಗಾಂಗ್ ಬಂದರು ಸೇರಿದಂತೆ ಈ ಪ್ರಾಂತ್ಯ ಆಸ್ಸಾಂಗೆ ಸೇರಿದ್ದರೆ ಹೊರ ಜಗತ್ತಿನ ಸಂಪರ್ಕಕ್ಕಾಗಿ ಬಾಂಗ್ಲಾದ ಮೇಲೆ ಅವಲಂಬನೆ ಇರುತ್ತಿರಲಿಲ್ಲ. ದೇಶ ವಿಭಜನೆಯ ಹಂತದಲ್ಲಿ ಆದ ಈ ಪ್ರಮಾದವನ್ನು ಸರಿಮಾಡಲು 1971ರ ಬಾಂಗ್ಲಾ ವಿಮೋಚನೆಯ ನಂತರವಾದರೂ ಯತ್ನಿಸ ಬಹುದಿತ್ತು. ಯುದ್ಧ ಜಯಿಸಿದ ಸಂಭ್ರಮದಲ್ಲಿ ಬಹುಶಃ ಭಾರತ ಈ ಮಹತ್ವದ ಸಂಗತಿಯನ್ನು ಕಡೆಗಣಿಸಿತು. ಪರಿಣಾಮ, ನಾವೇ ಸಾಕಿದ ಗಿಣಿ ಹದ್ದಾಗಿ ಈಗ ನಮ್ಮನ್ನೇ ಕುಕ್ಕುವ ಯತ್ನದಲ್ಲಿದೆ!

ದಿವಾಳಿಯ ಹಂತ ತಲುಪಿರುವ ಬಾಂಗ್ಲಾ, ಆರ್ಥಿಕ ನೆರವು ಪಡೆಯಲೆಂದು ಚೀನಾದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಧಾರ್ಮಿಕ ಸಿದ್ಧಾಂತದ ಕಾರಣಕ್ಕೆ, ಮೂಲಭೂತವಾದಿ ಪಾಕಿಸ್ತಾನದ ಜತೆಗಿನ ಹಿಂದಿನ ವೈರ ಮರೆತು ಭಾರತ-ವಿರೋಧಿ ಕಾರ್ಯತಂತ್ರದಲ್ಲಿ ಕೈಜೋಡಿಸಲು ಮುಂದಾ ಗಿದೆ.

ಭೌಗೋಳಿಕವಾಗಿ ಬಂಗಾಲ ಕೊಲ್ಲಿಯ ಆಯಕಟ್ಟಿನ ಜಾಗದಲ್ಲಿ ಬಂದರುಗಳನ್ನು ಹೊಂದಿರುವ ಬಾಂಗ್ಲಾ, ಚೀನಾದ ಜತೆ ಸೇರಿದರೆ ಭಾರತದ ಭದ್ರತೆಗೆ ಗಂಭೀರ ಬೆದರಿಕೆ ಒಡ್ಡಬಹುದು. ಈಗಾಗಲೇ ಸಿಲಿಗುರಿ ಕಾರಿಡಾರ್‌ನ ಸಮೀಪ ಉತ್ತರದಲ್ಲಿ ಚೀನಾ ತನ್ನ ವಾಯುನೆಲೆಯನ್ನು ಸ್ಥಾಪಿಸಿದೆ. ಚೀನಾದ ಆರ್ಥಿಕ-ತಾಂತ್ರಿಕ ಸಹಾಯದಿಂದ ಬಾಂಗ್ಲಾದ ಮಾತರ್ಬಾರಿ ಮತ್ತು ಮೋಂಗ್ಲಾ ಬಂದರು ಗಳನ್ನು ನೌಕಾಬಲದ ಕಾರ್ಯಾಚರಣೆಗೂ ಸೂಕ್ತವಾಗುವಂತೆ ಅಭಿವೃದ್ಧಿಪಡಿಸಲಾಗುತ್ತಿದೆ ಮತ್ತು ಇವನ್ನು ಉಪಯೋಗಿಸಲು ಚೀನಾಕ್ಕೆ ಮುಕ್ತ ಅವಕಾಶ ನೀಡಲಾಗುತ್ತಿದೆ.

ಭಾರತದ ಪೂರ್ವ ಕರಾವಳಿ ಮತ್ತು ಸಿಲಿಗುರಿ ಕಾರಿಡಾರಿಗೆ ಅತಿ ಸಮೀಪವಿರುವ ಈ ಬಂದರುಗಳಲ್ಲಿ ಚೀನಾದ ನೌಕಾಬಲ ನೆಲೆ ನಿಲ್ಲಲಿದೆ. ಅಲ್ಲದೆ ಸಿಲಿಗುರಿ ಕಾರಿಡಾರಿಗೆ ಸಮೀಪವಿರುವ ಬಾಂಗ್ಲಾದ ಲಾಲ್ ಮೊನಿರ್ಹಾತ್ ಎಂಬಲ್ಲಿ ಚೀನಾದ ನೆರವಿನಿಂದ ವಾಯುನೆಲೆ ಸ್ಥಾಪಿಸಲಾಗುತ್ತಿದೆ. ಸಾಲ ದೆಂಬಂತೆ ತೀಸ್ತಾ ನದಿಗೆ ಚಿಕನ್ -ನೆಕ್ ಪ್ರದೇಶದಿಂದ ಕೇವಲ 100 ಕಿ.ಮೀ.ಗಿಂತ ಕಡಿಮೆ ಅಂತರ ದಲ್ಲಿ ಆಣೆಕಟ್ಟು ನಿರ್ಮಿಸುವ ಕಾಮಗಾರಿಯನ್ನು ಚೀನಾಕ್ಕೆ ವಹಿಸಲಾಗುತ್ತಿದೆ. ಈ ಎಲ್ಲ ಬೆಳವಣಿಗೆ ಗಳಿಂದ ಆ ಪ್ರದೇಶದ ಭದ್ರತೆಗೆ ಅಪಾಯವೆಂಬ ಆತಂಕ ಎದುರಾಗಿದೆ.

ಬಾಂಗ್ಲಾದಲ್ಲಿ ಚೀನಾ ಹೂಡಿರುವ 2.1 ಬಿಲಿಯನ್ ಡಾಲರ್ ದಾನವಲ್ಲ. ಬದಲಾಗಿ ಆ ದೇಶವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿ ತನ್ನ ಕಾರ್ಯತಂತ್ರಕ್ಕೆ ಬೇಕಾದಂತೆ ಉಪಯೋಗಿಸುವ ಹುನ್ನಾರ. ಪಾಕಿಸ್ತಾನ ಮತ್ತು ಶ್ರೀಲಂಕಾ ಈಗಾಗಲೇ ಸಾಲದ ಸುಳಿಯೊಳಗೆ ಸಿಲುಕಿವೆ. ಬಾಂಗ್ಲಾದ ಆರ್ಥಿಕತೆ ಯಲ್ಲಿ ಚೀನಾದ ಆಟವು ಯುನುಸ್‌ರ ಭೇಟಿಯ ನಂತರ ಇನ್ನೂ ಹೆಚ್ಚಲಿದೆ.

ಸದ್ಯದಲ್ಲೇ, 100ಕ್ಕೂ ಹೆಚ್ಚು ಉದ್ಯಮಿಗಳ ನಿಯೋಗದೊಂದಿಗೆ ಚೀನಾದ ವಿದೇಶಾಂಗ ಸಚಿವರು ಬಾಂಗ್ಲಾಕ್ಕೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಇತ್ತ ಪಾಕಿಸ್ತಾನದ ಉನ್ನತ ಮಟ್ಟದ ಸೈನಿಕ, ಔದ್ಯಮಿಕ ಹಾಗೂ ರಾಜಕೀಯ ನಾಯಕರುಗಳು ಬಾಂಗ್ಲಾಕ್ಕೆ ಭೇಟಿ ನೀಡುತ್ತಿದ್ದಾರೆ. ಪಾಕ್‌ನ ಸೇನೆಯ ಮೇಜರ್ ಜನರಲ್ ಒಬ್ಬರು ಐಎಸ್‌ಐ ತಂಡದೊಂದಿಗೆ ಇತ್ತೀಚೆಗೆ ಢಾಕಾಕ್ಕೆ ನೀಡಿದ ಭೇಟಿ, ಬೇಹುಗಾರಿಕೆ ಮತ್ತು ಜಂಟಿ ಸೈನಿಕ ಕಾರ್ಯತಂತ್ರದ ಭಾಗವಾಗಿದೆ ಎಂಬುದು ಸ್ಪಷ್ಟ.

ಬಾಂಗ್ಲಾದ ಸೈನ್ಯಕ್ಕೆ ಆಧುನಿಕ ಶಸ್ತ್ರಾಸ್ತ್ರಗಳ ತರಬೇತಿ ನೀಡಲು ಪಾಕ್ ಸೇನೆ ಸಿದ್ಧವಾಗಿದೆ. ರೊಹಿಂಗ್ಯಾ ಸಮಸ್ಯೆ, ಮಣಿಪುರದ ಕುಕಿ-ನಾಗಾ ಸಮಸ್ಯೆ, ಚಕ್ಮಾ ನಿರ್ವಸಿತರ ಸಮಸ್ಯೆ ಇವೆಲ್ಲದರ ಜತೆ ಬಾಂಗ್ಲಾದಿಂದ ಅಕ್ರಮ ನುಸುಳುವಿಕೆಯ ಸಮಸ್ಯೆಗಳೆಲ್ಲವುಗಳ ಹಿಂದೆ ಬಾಂಗ್ಲಾ-ಚೀನಾಗಳ ಸಕ್ರಿಯ ಪಾತ್ರವಿರುವ ಶಂಕೆಗೆ ಕಾರಣಗಳಿವೆ. ಯುನುಸ್‌ರ ಹೇಳಿಕೆ ಈಶಾನ್ಯ ರಾಜ್ಯಗಳಲ್ಲಿ ಸಂಚಲನವನ್ನು ಸೃಷ್ಟಿಸಿದೆ.

ತ್ರಿಪುರಾದ ರಾಜವಂಶದ ಪ್ರದ್ಯೋತ ಕಿಶೊರ್ ದೆಬ್ಬರ್ಮಾ, ಬಾಂಗ್ಲಾವನ್ನು ಒಡೆದು ಹಿಂದೂಗಳಿಗೆ ಪ್ರತ್ಯೇಕ ರಾಷ್ಟ್ರ ನಿರ್ಮಿಸುವ ತಾಕತ್ತು ಭಾರತಕ್ಕಿದೆ ಎಂದಿದ್ದಾರೆ. ಆಸ್ಸಾಮಿನ ಮುಖ್ಯಮಂತ್ರಿ ಹಿಮಂತ ಬಿಶ್ವಾಸ್ ಶರ್ಮ, ಯುನುಸ್‌ರ ಹೇಳಿಕೆಯನ್ನು ಆಕ್ರಮಣಕಾರಿ ಎಂದು ಖಂಡಿಸಿದ್ದಾರೆ.

ಥಾಯ್ಲೆಂಡ್‌ನಲ್ಲಿ BIMSTEC ಸಭೆಯ ವೇಳೆ ನಡೆದ ಭೇಟಿಯಲ್ಲಿ ಮೋದಿಯವರು ಬಾಂಗ್ಲಾದಲ್ಲಿ ನಡೆದ ಹಿಂಸಾಚಾರ ಮತ್ತು ಯುನೂಸ್‌ರ ಪ್ರಚೋದನಾತ್ಮಕ ಹೇಳಿಕೆಗಳ ಕುರಿತಾದ ಭಾರತದ ಕಳವಳವನ್ನು ಸ್ಪಷ್ಟವಾಗಿ ಹೇಳಿದರು. ಆದರೆ ಬಾಂಗ್ಲಾದ ಪ್ರತಿಕ್ರಿಯೆಯು ಭಾರತದ ಜತೆಗಿನ ಸಂಬಂಧ ಸುಧಾರಣೆಗೆ ಪೂರಕವಾಗಿರಲಿಲ್ಲವೆನ್ನಲಾಗಿದೆ.

ಹಿಂದೂ ಮಹಾಸಾಗರದ 6500 ಕಿ.ಮೀ.ನಷ್ಟು ಉದ್ದದ ಕರಾವಳಿ ಮತ್ತು ಅನೇಕ ಬಂದರುಗಳನ್ನು ಹೊಂದಿರುವ ಭಾರತ ತನ್ನ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈಶಾನ್ಯ ರಾಜ್ಯಗಳನ್ನು ಮ್ಯಾನ್ಮಾರ್ ಮೂಲಕ ಥಾಯ್ಲೆಂಡ್ ಗೆ ಸಂಪರ್ಕಿಸುವ 1360 ಕಿ.ಮೀ. ಉದ್ದದ ಹೆದ್ದಾರಿಯ ನಿರ್ಮಾಣ ಪ್ರಗತಿಯಲ್ಲಿದೆ. ಅದು ಪೂರ್ತಿಯಾದಾಗ ಈಶಾನ್ಯ ರಾಜ್ಯಗಳು ಏಷ್ಯಾದ ಪ್ರಮುಖ ಕೈಗಾರಿಕಾ ಕೇಂದ್ರಗಳಾಗುತ್ತವೆ. ಅಲ್ಲದೆ ಮ್ಯಾನ್ಮಾರಿನ ಸಿತ್ತ್ವೆ ಬಂದರನ್ನು ಭಾರತ ಅಭಿವೃದ್ಧಿ ಪಡಿಸುತ್ತಿದ್ದು ಅದು ಈಶಾನ್ಯ ಭಾರತದ ಮುಖ್ಯ ಸಂಪರ್ಕ ಕೇಂದ್ರವಾಗಲಿದೆ.

ಬಾಂಗ್ಲಾದ ಸರಕುಗಳನ್ನು ಭಾರತದ ಭೂಭಾಗದ ಮೂಲಕ ಸಾಗಿಸಿ ರಫ್ತು ಮಾಡಲು ನೀಡಿದ್ದ ಸೌಲಭ್ಯವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದು ಮಾಡಲಾಗಿದೆ ಮತ್ತು ಆ ಮೂಲಕ ಬಾಂಗ್ಲಾದ ಸುತ್ತಲೂ ಭಾರತದ ಭೂಭಾಗವಿದೆ ಎಂಬುದನ್ನು ಆ ದೇಶಕ್ಕೆ ನೆನಪಿಸಲಾಗುತ್ತಿದೆ. ಸಿಲಿಗುರಿ ಕಾರಿಡಾರಿನ ಭದ್ರತೆ ಹೆಚ್ಚಿಸಲು, ಆ ಮೂಲಕ ಈಶಾನ್ಯ ರಾಜ್ಯಗಳಿಗೆ ಸಂಪರ್ಕ ವ್ಯವಸ್ಥೆ ಸುಗಮಗೊಳಿಸಲು ಭೂಗತ ಬಹುಪದರ ಸಾಗಾಟ ಮಾರ್ಗದಂಥ ನೂತನ ತಾಂತ್ರಿಕತೆಯನ್ನು ಅಳವಡಿಸಲಾಗುತ್ತಿದೆ.

ಹಿಂದೂ ಮಹಾಸಾಗರದಲ್ಲಿ ಚೀನಾದ ಪ್ರಾಬಲ್ಯ ಹೆಚ್ಚುವ ಸಾಧ್ಯತೆಯ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದ ರಾಮ್‌ಬಿಲ್ಲಿಯ ವರ್ಷಾ ನೌಕಾನೆಲೆಯಲ್ಲಿ ಅಣುಶಕ್ತಿ ಆಧಾರಿತ ಬ್ಯಾಲಿಸ್ಟಿಕ್ ಕ್ಷಿಪಣಿ ಸಾಮರ್ಥ್ಯಹೊಂದಿದ ಜಲಾಂತರ್ಗಾಮಿಗಳನ್ನು ಸ್ಥಾಪಿಸಲಾಗುತ್ತಿದೆ. ಅರಿಮರ್ದನ್ ಎಂಬ ಆಧುನಿಕ ಜಲಾಂತರ್ಗಾಮಿ ನೌಕೆ ಭಾರತದ ನೌಕಾಬಲಕ್ಕೆ ಸೇರ್ಪಡೆಯಾಗಿದೆ. ಕಾರವಾರದ ಸೀಬರ್ಡ್ ನೌಕಾನೆಲೆಯ ಅಭಿವೃದ್ಧಿ ಕೂಡಾ ವೇಗ ಪಡೆದುಕೊಳ್ಳುತ್ತಿದೆ.

ರಾಜತಾಂತ್ರಿಕ ಕ್ರಮಗಳ ಅಂಗವಾಗಿ ಶ್ರೀಲಂಕಾ, ಥಾಯ್ಲೆಂಡ್, ಮ್ಯಾನ್ಮಾರ್, ನೇಪಾಳ, ಭೂತಾನ್ ಮುಂತಾದ ದೇಶಗಳೊಂದಿಗೆ ಬಾಂಧವ್ಯ ವೃದ್ಧಿಗೆ ಅಗತ್ಯ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಇಷ್ಟೆಲ್ಲ ಕ್ರಮಗಳ ಹೊರತಾಗಿಯೂ ಈವರೆಗೆ ಮಿತ್ರರಾಷ್ಟ್ರ ವಾಗಿದ್ದ ಬಾಂಗ್ಲಾ ಏಕಾಏಕಿ ಶತ್ರುಗಳ ಕಡೆಗೆ ವಾಲಿರುವುದು ಆತಂಕದ ವಿಷಯ. ಬಲಾಢ್ಯ ಚೀನಾದ ಬೆಂಬಲದ ಧೈರ್ಯದಲ್ಲಿರುವ ಬಾಂಗ್ಲಾ, ಪಾಕಿಸ್ತಾನ ಮತ್ತು ಶ್ರೀಲಂಕಾಗಳ ಅನುಭವದಿಂದ ಪಾಠ ಕಲಿಯದಿದ್ದರೆ ಇಡೀ ದಕ್ಷಿಣ ಏಷ್ಯಾದ ಸುರಕ್ಷತೆಗೆ ಚೀನಾದಿಂದ ಅಪಾಯ ತಪ್ಪಿದ್ದಲ್ಲ.

(ಲೇಖಕರು ಕಾನೂನು ತಜ್ಞರು ಮತ್ತು ಕೆವಿಜಿ ಬ್ಯಾಂಕ್‌ನ

ನಿವೃತ್ತ ಎಜಿಎಂ)