ಹೈದರಾಬಾದ್: ಬಹುನಿರೀಕ್ಷಿತ ʼಕಾಂತಾರ: ಚಾಪ್ಟರ್ 1ʼ (Kantara: Chapter 1) ರಿಲೀಸ್‌ಗೆ ಸಜ್ಜಾಗಿದೆ. ಅಕ್ಟೋಬರ್ 2ರಂದು ಸುಮಾರು 30 ದೇಶಗಳಲ್ಲಿ ವಿವಿಧ ಭಾಷೆಗಳಲ್ಲಿ ತೆರೆಗೆ ಬರಲಿದೆ. ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್, ಹಾಡು ಗಮನ ಸೆಳೆದಿದ್ದು, ಚಿತ್ರದ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ. ಸೆಪ್ಟೆಂಬರ್ 28ರಂದು ಹೈದರಾಬಾದ್‌ನಲ್ಲಿ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಚಿತ್ರತಂಡದ ಜತೆಗೆ ಜೂ. ಎನ್‌ಟಿಆರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು. ಈ ಕಾರ್ಯಕ್ರಮದ ವೇಳೆ ರಿಷಬ್ ಶೆಟ್ಟಿ (Rishab Shetty) ಕನ್ನಡದಲ್ಲೇ ಮಾತನಾಡಿ ಗಮನ ಸೆಳೆದಿದ್ದಾರೆ. ಅವರ ಈ ನಡೆಗೆ ಕನ್ನಡಿಗರು ಮೆಚ್ಚುಗೆ ಸೂಚಿಸಿದ್ದು, ತೆಲುಗು ಮಂದಿ ಕಿಡಿಕಾರಿದ್ದಾರೆ.
2022ರಲ್ಲಿ ತೆರೆಕಂಡ ʼಕಾಂತಾರʼದ ತೆಲುಗು ವರ್ಷನ್ ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಎನಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ʼಕಾಂತಾರ: ಚಾಪ್ಟರ್ 1ʼ ಬಗ್ಗೆ ತೆಲುಗು ರಾಜ್ಯದಲ್ಲಿ ಭಾರಿ ಕುತೂಹಲ ಕೆರಳಿಸಿದೆ. ಇದೇ ಕಾರಣಕ್ಕೆ ಹೈದರಾಬಾದ್‌ನಲ್ಲಿ ಪ್ರೀ-ರಿಲೀಸ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಾವಿರಾರು ಮಂದಿ ಹಾಜರಿದ್ದರು. ಈ ವೇಳೆ ರಿಷಬ್ ಶೆಟ್ಟಿ ಕನ್ನಡದಲ್ಲೇ ಮಾತನಾಡಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಟೀಕೆ ವ್ಯಕ್ತವಾಗುತ್ತಿದೆ. ಹೈದರಾಬಾದ್ ಬಂದು ತೆಲುಗು ಮಾತನಾಡದಿದ್ದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Kantara: Chapter 1: 'ಕಾಂತಾರ: ಚಾಪ್ಟರ್ 1' ಹೊಸ ಪೋಸ್ಟರ್ ಔಟ್; ಐಮ್ಯಾಕ್ಸ್‌ನಲ್ಲಿ ರಿಲೀಸ್ ಆಗಲಿದೆ ರಿಷಬ್ ಶೆಟ್ಟಿ ಚಿತ್ರ
ತೆಲುಗು ಸಿನಿಮಾದ ಕಾರ್ಯಕ್ರಮದಲ್ಲಿ ಕನ್ನಡ ಮಾತನಾಡಿದ್ದಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ. ಕೆಲವರಂತೂ ʼಕಾಂತಾರ: ಚಾಪ್ಟರ್ 1ʼ ಸಿನಿಮಾವನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ. ʼʼಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಕನ್ನಡದಲ್ಲಿ ಮಾತನಾಡಿದ್ದಕ್ಕೆ ತೆಲುಗು ಪ್ರೇಕ್ಷಕರು ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಚಿತ್ರವನ್ನು ಬಹಿಷ್ಕರಿಸಬೇಕುʼʼ ಎಂದು ಕೆಲವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ʼʼತೆಲುಗು ಚಿತ್ರವನ್ನು ಪ್ರಚಾರ ಮಾಡುವಾಗ ತೆಲುಗಿನಲ್ಲೇ ಮಾತನಾಡಲು ಪ್ರಯತ್ನಿಸಿʼʼ ಎಂದು ನೆಟ್ಟಿಗರೊಬ್ಬರು ಸಲಹೆ ನೀಡಿದ್ದಾರೆ.
ಮತ್ತೊಬ್ಬರು ಕಮೆಂಟ್ ಮಾಡಿ, ʼʼಹೌದು, ರಿಷಬ್ ಶೆಟ್ಟಿ ಹೈದರಾಬಾದ್ ಕಾರ್ಯಕ್ರಮದಲ್ಲಿ ಮಾಡಿದ್ದು ತಪ್ಪು. ಆದರೆ ಚಿತ್ರವನ್ನು ಬಹಿಷ್ಕರಿಸುವುದು ಸರಿಯಲ್ಲ. ರಿಷಬ್ ಶೆಟ್ಟಿ ಪ್ರಾಚೀನ ಸಂಸ್ಕೃತಿ, ಪರಂಪರೆ, ಆಚಾರ-ವಿಚಾರವನ್ನು ತೆರೆಮೇಲೆ ತಂದಿದ್ದಾರೆ. ಅವರಿಗೆ ಬೆಂಬಲ ನೀಡುವುದು ಅಗತ್ಯ. ನಾನಂತೂ ಮೊದಲ ದಿನವೇ ಚಿತ್ರ ವೀಕ್ಷಿಸುತ್ತೇನೆʼʼ ಎಂದು ಹೇಳಿದ್ದಾರೆ. ಹಲವರು ತೆಲುಗು ಗೊತ್ತಿಲ್ಲದಿದ್ದರೆ ಇಂಗ್ಲಿಷ್‌ನಲ್ಲಾದರೂ ಮಾತನಾಡಬೇಕಿತ್ತು ಎಂದು ಅಬಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ತೆಲುಗು ಮಂದಿ ರಿಷಬ್ ಶೆಟ್ಟಿ ವಿರುದ್ಧ ತಿರುಗಿ ಬಿದ್ದಿದ್ದು, ಪರ-ವಿರೋಧ ಚರ್ಚೆ ಆರಂಭವಾಗಿದೆ.
ರಿಷಬ್ ಶೆಟ್ಟಿ ಹೇಳಿದ್ದೇನು?
ಎಲ್ಲರಿಗೂ ನಮಸ್ಕಾರ ಎಂದು ತೆಲುಗಿನಲ್ಲೇ ಹೇಳಿ ರಿಷಬ್ ಶೆಟ್ಟಿ ಮಾತು ಆರಂಭಿಸಿದರು. ಬಳಿಕ ಕನ್ನಡದಲ್ಲಿ ಮುಂದುವರಿಸಿದರು. ʼʼಮನಸ್ಸಿನಿಂದ ಮಾತನಾಡಬೇಕು. ಹೀಗಾಗಿ ನಾನು ಕನ್ನಡದಲ್ಲೇ ಮಾತನಾಡುತ್ತೇನೆ. ನಿಮಗೇನಾದರೂ ಗೊತ್ತಾಗಿಲ್ಲ ಎಂದರೆ ನನ್ನ ಸಹೋದರ ಜೂ. ಎನ್‌ಟಿಆರ್ ಅನುವಾದ ಮಾಡುತ್ತಾರೆ. ಇದು ನಮ್ಮಿಬ್ಬರ ಬಾಂಡಿಂಗ್. ಜೂ. ಎನ್‌ಟಿಆರ್ ಅವರನ್ನು ಸ್ನೇಹಿತ ಎನ್ನಬೇಕಾ, ಸಹೋದರ ಎನ್ನಬೇಕಾ ತಿಳಿಯುತ್ತಿಲ್ಲ. ಯಾವತ್ತೂ ಅವರೊಬ್ಬ ಸಿನಿಮಾ ಹೀರೋ ಎನಿಸಿಲ್ಲ. ಇವರು ನನ್ನೂರಿನವರು. ಅವರು ಮನೆಯ ಸಹೋದರನಂತೆ ಎನಿಸುತ್ತಾರೆ. ನಮ್ಮ ಬೆನ್ನು ತಟ್ಟಿ ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆʼʼ ಎಂದು ತಿಳಿಸಿದ್ದರು.