ಬೆಂಗಳೂರು, ಸೆ. 3: 'ದುನಿಯಾ' ವಿಜಯ್ (Duniya Vijay) ಪಾಲಿಗೆ ಗುರುವಾರ (ಸೆಪ್ಟೆಂಬರ್ 3) ಬಿಗ್ ಡೇ. ಅತ್ತ ವಿಜಯ್ ಹಾಗೂ ಅವರ ಪತ್ನಿ ನಾಗರತ್ನಾ ನಡುವಿನ ದಾಂಪತ್ಯ ಬದುಕು ಕೊನೆಗೂ ಅಂತ್ಯ ಕಂಡಿದೆ. ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿದ್ದ ಇವರ ವಿಚ್ಛೇದನ ಪ್ರಕರಣವನ್ನು ಇತ್ಯರ್ಥಪಡಿಸಿರುವ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ, ದಂಪತಿಗೆ ಅಧಿಕೃತವಾಗಿ ಡಿವೋರ್ಸ್ ಮಂಜೂರು ಮಾಡಿದೆ. ಇತ್ತ ಸಹ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ, ವಿಜಯ್ ಪುತ್ರ ಸಾಮ್ರಾಟ್‌ಗೆ (Samrat Vijay) ರಿಲೀಫ್ ಸಿಕ್ಕಿದೆ. ಸಾಮ್ರಾಟ್‌ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಎಸಿಜೆಎಂ 6ನೇ ನ್ಯಾಯಾಲಯದ ಆದೇಶ ಹೊರಡಿಸಿದೆ.
ಹಲ್ಲೆ ಘಟನೆ ಸಂಬಂಧ ಸಹ ವಿದ್ಯಾರ್ಥಿ ಮನೀಶ್ ಗೌಡ ನೀಡಿದ ದೂರಿನ ಆಧಾರದ ಮೇಲೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಸಾಮ್ರಾಟ್ ಸೇರಿ ಆತನ ಸ್ನೇಹಿತರ ಎಫ್‌ಐಆರ್ ದಾಖಲಾಗಿತ್ತು. ಇದೀಗ ಈ ಪ್ರಕರಣದಲ್ಲಿ ಸಾಮ್ರಾಟ್ ಸೇರಿ ಐವರು ಆರೋಪಿಗಳಿಗೂ ಜಾಮೀನು ಸಿಕ್ಕಿದೆ.
‘ದುನಿಯಾ’ ವಿಜಯ್ ಪುತ್ರನಿಂದ ವಿದ್ಯಾರ್ಥಿ ಅಪಹರಿಸಿ ಹಲ್ಲೆ ಆರೋಪ, ದೂರು ದಾಖಲು!
ಏನಿದು ಪ್ರಕರಣ?
ಸೋಮವಾರ (ಆಗಸ್ಟ್ 31) ಕಾರ್ ಓವರ್‌ಟೇಕ್ ಮಾಡಿದ ವಿಚಾರಕ್ಕೆ ಸಂಬಂಧಿಸಿದ ಗಲಾಟೆ ತೀವ್ರಗೊಂಡು ಮನೀಶ್‌ನನ್ನು ಕಾರಿನಲ್ಲಿ ಕರೆದೊಯ್ದು ಹಲ್ಲೆ ನಡೆಸಿದ ಆರೋಪದ ಅಡಿ ಸಾಮ್ರಾಟ್ ವಿಜಯ್ ಸೇರಿ ಐವರ ವಿರುದ್ಧ ಕೆಂಗೇರಿ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.
ಆರ್.ವಿ. ವಿಶ್ವವಿದ್ಯಾಲಯದ ವಿದ್ಯಾರ್ಥಿ ಮನೀಶ್ ಗೌಡ ನೀಡಿದ ದೂರಿನ ಮೇರೆಗೆ, ಸಾಮ್ರಾಟ್ ವಿಜಯ್, ಸಮೃದ್ದ ಸಿಂಹ, ವಿಶ್ವಾಸ್, ಸ್ಕಂದ ವೆಂಕಟೇಶ್ ಹಾಗೂ ಸಮೀದ್ ಎ.ಕೆ. ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ದೂರಿನ ಪ್ರಕಾರ, ಕಾಲೇಜಿನಿಂದ ಮನೆಗೆ ತೆರಳುವ ವೇಳೆ ಸಾಮ್ರಾಟ್ ಹಾಗೂ ವಿಜಯ್ ಸ್ನೇಹಿತರು ಪ್ರಯಾಣಿಸುತ್ತಿದ್ದ ಕಾರನ್ನು ಮನೀಶ್ ಗೌಡ ಓವರ್‌ಟೇಕ್ ಮಾಡಿದ್ದರು. ಈ ವಿಚಾರವಾಗಿ ಸೋಮವಾರ ಗಲಾಟೆ ನಡೆದಿತ್ತು. ಮಂಗಳವಾರ ಕಾಲೇಜಿನ ಪಾರ್ಕಿಂಗ್ ಪ್ರದೇಶದಲ್ಲಿ ಮನೀಶ್ ಒಬ್ಬರೇ ನಿಂತಿದ್ದಾಗ ಕೆಲವರು ಅವರನ್ನು ಬಲವಂತವಾಗಿ ಕಾರಿನೊಳಗೆ ಕರೆದೊಯ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ರಾಮೋಹಳ್ಳಿ ಪಬ್ ರಸ್ತೆಯತ್ತ ಕರೆದೊಯ್ದು, ಕಾರಿನಲ್ಲಿದೆ ಐದಾರು ಮಂದಿ ಸೇರಿ ಮುಖ, ಎದೆ ಹಾಗೂ ತಲೆಗೆ ಹಲ್ಲೆ ನಡೆಸಿದ್ದಾರೆ ಎಂದು ಮನೀಶ್ ದೂರಿನಲ್ಲಿ ತಿಳಿಸಿದ್ದರು.
ಆರ್.ವಿ. ಕಾಲೇಜಿನಿಂದ ಮಾರ್ಟ್ ಬಳಿಯ ರಾಕ್ ಬಾರ್ ಹಿಂಬದಿಯ ಪಟ್ಟಣಗೆರೆ ಮುಖ್ಯರಸ್ತೆಗೆ ಕರೆದೊಯ್ದು ಚಲಿಸುವ ಕಾರಿನಲ್ಲೇ ಮನೀಶ್ ಮೇಲೆ ಸಾಮ್ರಾಟ್ ಮತ್ತು ಆತನ ಸ್ನೇಹಿತರು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಆರೋಪಿಗಳು ಕೈಯಲ್ಲಿದ್ದ ಉಂಗುರಗಳಿಂದ ಮನೀಶ್ ಮುಖ, ಕೆನ್ನೆ, ತಲೆ ಹಾಗೂ ಎದೆಯ ಭಾಗಕ್ಕೆ ಮನಬಂದಂತೆ ಥಳಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ನಟ 'ದುನಿಯಾ' ವಿಜಯ್ ಪುತ್ರ ಸಾಮ್ರಾಟ್ ವಿರುದ್ಧ FIR!
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಾಲೇಜಿನ ಸಿಸಿಟಿವಿ ದೃಶ್ಯಗಳು, ಮೊಬೈಲ್ ಕರೆ ಹಾಗೂ ಇತರೆ ಲಭ್ಯ ಸಾಕ್ಷ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮನರಂಜನೆ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.