ಬೆಂಗಳೂರು: ಕೋವಿಡ್-19 (Covid-19) ಮಹಾಮಾರಿಯ ಸಂಕಷ್ಟದ ಸಮಯದಲ್ಲಿ ಕನ್ನಡ ಚಿತ್ರರಂಗದ ಕಾರ್ಮಿಕರಿಗೆ (Film Industry Workers) ಜನಪ್ರಿಯ ನಾಯಕರು ತಮ್ಮದೇ ರೀತಿಯಲ್ಲಿ ನೆರವಾದರು. ಕಾರ್ಮಿಕರಿಗೆ ದುಡಿಮೆ ಇಲ್ಲದೆ ಬ್ಯಾಂಕ್ ಬ್ಯಾಲೆನ್ಸ್ (Bank Balance) ಸೊನ್ನೆಯಾಗಿತ್ತು. ರೇಷನ್‌ಗೂ ಹಣವಿಲ್ಲದೆ ದಿಕ್ಕು ಕಾಣದಿದ್ದಾಗ ನಟರಾದ ಯಶ್ (Yash), ಸುದೀಪ್ (Sudeep) ಮತ್ತು ಪುನೀತ್ ರಾಜ್‌ಕುಮಾರ್ (Puneeth Rajkumar) ಸಹಾಯ ಹಸ್ತ ಚಾಚಿದ್ದರು ಎಂದು ಕಿರುತೆರೆ ನಟಿ ಮೀನಾಕ್ಷಿ ಯುಟ್ಯೂಬ್ ಚಾನಲ್‌ನ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.
ಕೋವಿಡ್ ಲಾಕ್‌ಡೌನ್‌ನಿಂದ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ, ಚಿತ್ರೀಕರಣ ಸೇರಿದಂತೆ ಎಲ್ಲವೂ ಬಂದ್ ಆಗಿದ್ದರಿಂದ ಸಿನಿಕಾರ್ಮಿಕರು ಜೀವನೋಪಾಯಕ್ಕಾಗಿ ಹೋರಾಡುವ ಸ್ಥಿತಿಗೆ ತಲುಪಿದ್ದರು. ಈ ಸಂಕಷ್ಟದ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ತಾರೆಯರು ಕಾರ್ಮಿಕರಿಗೆ ಆರ್ಥಿಕ ಮತ್ತು ಆಹಾರ ಸಹಾಯವನ್ನು ಒದಗಿಸಿದ್ದರು.
ʼʼನಟ ಯಶ್ 2 ಕೋಟಿ 85 ಲಕ್ಷ ರೂ. ಕಲಾವಿದರ ಸಂಘಕ್ಕೆ ನೀಡಿ, ಪ್ರತಿ ಕಾರ್ಮಿಕರ ಬ್ಯಾಂಕ್ ಖಾತೆಗೆ 5 ಸಾವಿರ ರೂ. ಜಮೆ ಮಾಡಿದ್ದರು. ತಟ್ಟೆ ತೊಳೆಯುವವರಿಂದ ಹಿಡಿದು ತಂತ್ರಜ್ಞರವರೆಗೆ ಎಲ್ಲರಿಗೂ ಈ ನೆರವು ತಲುಪಿದೆ. ಲಾಕ್‌ಡೌನ್‌ನಲ್ಲಿ 5 ಸಾವಿರ ರೂ. ದೊಡ್ಡ ಮೊತ್ತವೇ. ಈ ಸಹಾಯದಿಂದ ಕಾರ್ಮಿಕರು ಒಂದು ತಿಂಗಳು ಜೀವನ ನಿರ್ವಹಿಸಿದ್ದಾರೆ" ಎಂದು ಮೀನಾಕ್ಷಿ ಹೆಮ್ಮೆಯಿಂದ ಹೇಳಿದ್ದಾರೆ. ಯಶ್ ಅವರ ಈ ಸಹಾಯಗುಣಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಆಗಲೂ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು ಎಂದು ಈ ವೇಳೆ ನೆನಪಿಸಿಕೊಂಡರು.
ʼʼಇನ್ನು ಸುದೀಪ್ ಆಹಾರ ಸಾಮಗ್ರಿಯ ದೊಡ್ಡ ಕಿಟ್‌ಗಳನ್ನು ಕಾರ್ಮಿಕರಿಗೆ ತಲುಪಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ಕೂಡ ತಮ್ಮದೇ ಆದ ರೀತಿಯಲ್ಲಿ ಸಹಾಯ ಮಾಡಿದ್ದರು. ತುಂಬಿದ ಡಬ್ಬಿ ಸದ್ದು ಮಾಡದಂತೆ, ಯಶ್, ಸುದೀಪ್, ಪುನೀತ್ ಸದ್ದಿಲ್ಲದೆ ಸಹಾಯ ಮಾಡಿದ್ದಾರೆ. ಇನ್ನು ಕೆಲವರು ಏನೂ ಮಾಡದೇ ಬಡಾಯಿ ಕೊಚ್ಚಿಕೊಳ್ಳುತ್ತಾರೆ" ಎಂದು ಅವರು ಕೆಲವರನ್ನು ಟೀಕಿಸಿದ್ದಾರೆ.
ಈ ಸುದ್ದಿಯನ್ನು ಓದಿ: Yash Mother v/s Deepika Das: ಪೋಸ್ಟ್ ಮೂಲಕ ಯಶ್ ತಾಯಿ ಪುಷ್ಪಾಗೆ ಟಾಂಗ್ ನೀಡಿದ ನಟಿ ದೀಪಿಕಾ ದಾಸ್!
ಯಶ್ 3,000ಕ್ಕೂ ಅಧಿಕ ಕಾರ್ಮಿಕರಿಗೆ ಸಹಾಯ ಮಾಡಿದ್ದನ್ನು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದರು. ಕೋವಿಡ್ ಸಂಕಷ್ಟದಿಂದ ಯಶ್ ಅವರ ʼಕೆಜಿಎಫ್ 2’ ಚಿತ್ರೀಕರಣ ಮತ್ತು ಬಿಡುಗಡೆ ತಡವಾಗಿತ್ತು. ಆದರೆ ಬಿಡುಗಡೆಯಾದ ನಂತರ ಚಿತ್ರ ಜಾಗತಿಕವಾಗಿ ಯಶಸ್ಸು ಕಂಡಿತು. ಸದ್ಯ ಯಶ್ ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಸಿನಿಮಾಗಳನ್ನು ನಿರ್ಮಿಸಿ ನಟಿಸುತ್ತಿದ್ದಾರೆ. ಇವು ಜಾಗತಿಕ ಮಟ್ಟದಲ್ಲಿ ತೆರೆಗೆ ಬರಲಿವೆ.
ನಟಿ ಮೀನಾಕ್ಷಿ ‘ಪುಟ್ಟಗೌರಿ ಮದುವೆ’, ‘ಜೋಡಿ ಹಕ್ಕಿ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಯಶ್ ಅವರ ಸಾಮಾಜಿಕ ಕಳಕಳಿಯನ್ನು ಒಳಗೊಂಡ ಈ ವಿಡಿಯೊ ಈಗ ಅಭಿಮಾನಿಗಳಿಂದ ವೈರಲ್ ಆಗುತ್ತಿದೆ.