ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

'ಸು ಫ್ರಮ್‌ ಸೋ'‌ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಜೆ.ಪಿ‌. ತುಮಿನಾಡ್ ನಟನೆಯ ಮತ್ತೊಂದು ಚಿತ್ರ ರಿಲೀಸ್‌ಗೆ ರೆಡಿ; ʼಕಟ್ಟೆಮಾರ್ʼ ಕನ್ನಡ ಜತೆಗೆ ತುಳುವಿನಲ್ಲೂ ಬಿಡುಗಡೆ

Kattemar Movie: 'ಸು ಫ್ರಮ್‌ ಸೋʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಸಂಚಲನ ಮೂಡಿಸಿದ ಜೆ.ಪಿ. ತುಮಿನಾಡ್‌ ನಟನೆಯ ಮುಂದಿನ ಚಿತ್ರ ʼಕಟ್ಟೆಮಾರ್‌ʼ. ತುಳು ಮತ್ತು ಕನ್ನಡದಲ್ಲಿ ಇದು ಜನವರಿ 23ರಂದು ತೆರೆಗೆ ಬರಲಿದೆ. ವಿಶೇಷ ಎಂದರೆ ಈ ಚಿತ್ರದಲ್ಲಿ ನಟಿಸಿರುವ ಕಿರಣ್ ಅಡ್ಯಾರ್ ಪದವು ಯಶಸ್ಸಿಗಾಗಿ ಪೋಸ್ಟರ್‌ ಹಿಡಿದು ಮಂಗಳೂರಿನಿಂದ ಶಬರಿಮಲೆಗೆ ಪಾದಯಾತ್ರೆ ಹೊರಟಿದ್ದಾರೆ.

ಕಿರಣ್ ಅಡ್ಯಾರ್ ಪದವು

ಬೆಂಳೂರು, ಡಿ. 26: ಸ್ಯಾಂಡಲ್‌ವುಡ್‌ಗೆ ಸಿಹಿ-ಕಹಿ ಫಲಿತಾಂಶ ನೀಡಿದ ವರ್ಷ 2025. ಅದರಲ್ಲಿಯೂ ಯಾವುದೇ ಸದ್ದು ಗದ್ದಲವಿಲ್ಲದೆ ತೆರೆಗೆ ಬಂದು ಭರ್ಜರಿ ಯಶಸ್ಸು ಗಳಿಸಿ ʼಸು ಫ್ರಮ್‌ ಸೋʼ (Su From So) ಇಂಡಸ್ಟ್ರಿಯನ್ನೇ ಅಚ್ಚರಿಗೆ ದೂಡಿದ ವರ್ಷವೂ ಹೌದು. ಇದು ಅದ್ಧೂರಿ ಬಜೆಟ್‌, ಸ್ಟಾರ್‌ ಕಲಾವಿದರು, ಅಬ್ಬರದ ಪ್ರಚಾರವಿಲ್ಲದೆಯೂ ಉತ್ತಮ ಕಥೆ, ಚಿತ್ರಕಥೆಯ ಸಹಾಯದಿಂದ ಸಿನಿಮಾ ಗೆಲ್ಲಬಹುದು ಎಂಬ ಬಹುದೊಡ್ಡ ಪಾಠ ಕಲಿಸಿದೆ. ಆ ಮೂಲಕ ಇಡೀ ದೇಶವೇ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದೆ. ಬಹುತೇಕ ಕರಾವಳಿ ಪ್ರತಿಭೆಗಳೇ ನಟಿಸಿದ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ ಜೆ.ಪಿ. ತುಮಿನಾಡ್‌ (JP Thuminad) ಇದೀಗ ಮತ್ತೊಂದು ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರಲು ಸಜ್ಜಾಗಿದ್ದಾರೆ. ತುಳು ಮತ್ತು ಕನ್ನಡದಲ್ಲಿ ಸಿದ್ಧವಾಗಿರುವ ʼಕಟ್ಟೆಮಾರ್‌ʼ (Kattemar) ಚಿತ್ರದಲ್ಲಿ ಜೆ.ಪಿ. ತುಮಿನಾಡ್‌, ʼಕಾಂತಾರʼ ಖ್ಯಾತಿಯ ಸ್ವರಾಜ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಲೂಪ್ ಮಾದರಿಯ ಕತೆಯನ್ನು ಒಳಗೊಂಡಿರುವ ಈ ಚಿತ್ರ ಜನವರಿ 23ರಂದು ರಿಲೀಸ್‌ ಆಗಲಿದೆ. ಈಗಾಗಲೇ ಕನ್ನಡ ಡಬ್ಬಿಂಗ್ ಕೂಡ ಮುಗಿದಿದ್ದು, ಇತ್ತೀಚೆಗೆ ರಿಲೀಸ್‌ ಆದ ಹಾಡು ಸದ್ದು ಮಾಡುತ್ತಿದೆ.

ಪೋಸ್ಟರ್ ಹಿಡಿದುಕೊಂಡು ಶಬರಿಮಲೆಗೆ ಪಾದಯಾತ್ರೆ

ವಿಶೇಷ ಎಂದರೆ ʼಕಟ್ಟೆಮಾರ್ʼ ಚಿತ್ರದಲ್ಲಿ ನಟಿಸಿರುವ ಕಿರಣ್ ಅಡ್ಯಾರ್ ಪದವು ಯಶಸ್ಸಿಗಾಗಿ ಪೋಸ್ಟರ್ ಹಿಡಿದುಕೊಂಡು ಶಬರಿಮಲೆಗೆ ಪಾದಯಾತ್ರೆ ಹೊರಟಿದ್ದಾರೆ. ತಾವು ನಟಿಸಿರುವ ಸಿನಿಮಾ ಯಶಸ್ಸು‌ ಕಾಣಲೆಂದು ಅವರು ಮಂಗಳೂರಿನ ಅಡ್ಯಾರ್ ಪದವಿನಿಂದ ಪೋಸ್ಟರ್ ಹಿಡಿದುಕೊಂಡು ಶಬರಿಮಲೆಗೆ ಪಾದಯಾತ್ರೆ ಮೂಲಕ ತೆರಳುತ್ತಿದ್ದಾರೆ. ಇವರು ಜನವರಿ 13ರಂದು ಶಬರಿಮಲೆಗೆ ತಲುಪಲಿದ್ದಾರೆ ಎನ್ನಲಾಗಿದೆ.

ʼಕಟ್ಟೆಮಾರ್‌ʼ ಚಿತ್ರದ ಹಾಡು:



ವಿಶಿಷ್ಟ ಕಥೆ

ದೈವಿಕ ಭಾವವನ್ನು ಹೊಂದಿರುವ ಈ ಸಿನಿಮಾವನ್ನು ರಕ್ಷಿತ್ ಗಾಣಿಗ ಮತ್ತು ಸಚಿನ್ ಕಟ್ಲ ಜಂಟಿಯಾಗಿ ನಿರ್ದೇಶಿಸಿದ್ದಾರೆ. ಛಾಯಾಗ್ರಹಣವನ್ನು ಸಂತೋಷ್ ಗುಂಪಲಾಜೆ ನಿರ್ವಹಿಸಿದ್ದು, ಕಾರ್ತಿಕ್ ಮೂಲ್ಕಿ ಸಂಗೀತ ನೀಡಿದ್ದಾರೆ. ಕಲೆ ರಿತೇಶ್ ಅವರದ್ದು. ʼಸು ಪ್ರಮ್ ಸೋʼ ಬಳಿಕ ತೆರೆಗೆ ಬರುತ್ತಿರುವ ಜೆ.ಪಿ‌. ತುಮಿನಾಡ್ ನಟನೆಯ ಚಿತ್ರ ಇದಾಗಿದ್ದು, ಈ ಕಾರಣಕ್ಕೆ ನಿರೀಕ್ಷೆ ಮೂಡಿಸಿದೆ. ʼಕಾಂತಾರʼದ ಮೈಮ್ ರಾಮ್ ದಾಸ್, ʼಭಾವ ಬಂದರುʼ ಖ್ಯಾತಿಯ ಪುಷ್ಪರಾಜ್ ಬೋಳಾರ್, ಲಂಚುಲಾಲ್‌, ನಮಿತಾ ಕಿರಣ್‌ ಕೂಡ ಈ ಚಿತ್ರದಲ್ಲಿ ಇದ್ದಾರೆ.‌

ತಮಿಳಿಗೆ ರಿಮೇಕ್‌ ಆಗಲಿದೆ 'ಸು ಫ್ರಮ್‌ ಸೋ'

ಮೊದಲ ಬಾರಿಗೆ ತುಳು ಹಾಡಿಗೆ ಧ್ವನಿ ನೀಡಿದ ಸಿದ್ಧಾರ್ಥ್‌, ಪೃಥ್ವಿ ಭಟ್‌

ಸುಮಧುರ ಗಾಯನದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಗಾಯಕಿ ಪೃಥ್ವಿ ಭಟ್‌ ʼಕಟ್ಟೆಮಾರ್‌ʼ ಚಿತ್ರಕ್ಕಾಗಿ ಹಾಡಿದ್ದಾರೆ. ಸಿದ್ಧಾರ್ಥ್‌ ಬೆಳ್ಮಣ್‌ ಜತೆಗೆ ಅವರು ಹಾಡಿರುವ ʼಕಣ್ಣ ರಂಗ್‌ʼ ಮೆಲೋಡಿ ಸಾಂಗ್‌ ಇತ್ತೀಚೆಗೆ ಹೊರ ಬಂದಿದ್ದು ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಇದು ಸಿದ್ಧಾರ್ಥ್‌ ಬೆಳ್ಮಣ್‌ ಅವರ ಮೊದಲ ತುಳು ಹಾಡು ಕೂಡ ಹೌದು. ಆರ್‌.ಕೆ. ಮೂಲ್ಕಿ ಮತ್ತು ಕಾರ್ತಿಕ್‌ ಮೂಲಕಿ ಸಾಹಿತ್ಯ ಬರೆದಿದ್ದಾರೆ.