Ajay Rao Divorce: ''ನನಗೆ ಈ ಬಗ್ಗೆ ಗೊತ್ತಿಲ್ಲ, ಪತ್ನಿ ಜತೆ ಮಾತನಾಡಿ ಹೇಳ್ತೀನಿʼʼ: ಡಿವೋರ್ಸ್ ಬಗ್ಗೆ ಅಜಯ್ ರಾವ್ ಪ್ರತಿಕ್ರಿಯೆ
Actor Ajay Rao: ಸ್ಯಾಂಡಲ್‌ವುಡ್ ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು ಬಿಟ್ಟಿದ್ದು, ಅವರ ಪತ್ನಿ ಸ್ವಪ್ನಾ ಕೋರ್ಟ್ ಮೆಟ್ಟಿಲೇರಿದ್ದಾರೆ. ಆ ಮೂಲಕ 11 ವರ್ಷಗಳ ವೈವಾಹಿಕ ಜೀವನ ಕೊನೆಗೊಳಿಸಲು ಮುಂದಾಗಿದ್ದಾರೆ. ಆದರೆ ಅಜಯ್ ರಾವ್ ಈ ಬಗ್ಗೆ ತಮಗೇ ಗೊತ್ತೇಇಲ್ಲ ಎಂದಿರುವುದು ಅಚ್ಚರಿಗೆ ಕಾರಣವಾಗಿದೆ.


ಬೆಂಗಳೂರು: ಸ್ಯಾಂಡಲ್‌ವುಡ್‌ನ ಕೃಷ್ಣ ನಟ ಅಜಯ್ ರಾವ್ (Ajay Rao) ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ ಎನ್ನುವ ಸುದ್ದಿ ಸದ್ಯ ಸಂಚಲನ ಸೃಷ್ಟಿಸಿದೆ (Ajay Rao Divorce). ಅವರ ಪತ್ನಿ ಸ್ವಪ್ನಾ ಕೋರ್ಟ್ ಮೆಟ್ಟಿಲೇರಿದ್ದು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಜತೆಗೆ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ಸಹ ದಾಖಲಿಸಿದ್ದಾರೆ ಎನ್ನಲಾಗಿದೆ. ಆ ಮೂಲಕ 11 ವರ್ಷಗಳ ತಮ್ಮ ದಾಂಪತ್ಯ ಜೀವನ ಕೊನೆಗೊಳಿಸಲು ಮುಂದಾಗಿದ್ದಾರೆ. ಆದರೆ ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿದ ಅಜಯ್ ರಾವ್, ತಮಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಪ್ರತಿಕ್ರಿಯಿಸಿ ಅಚ್ಚರಿ ಮೂಡಿಸಿದ್ದಾರೆ.
ಡಿವೋರ್ಸ್ ವಿಚಾರವಾಗಿ ಮಾತನಾಡಿದ ಅವರು, “ನನಗೆ ಈ ಬಗ್ಗೆ ಗೊತ್ತಿಲ್ಲ. ಪತ್ನಿ ಜತೆ ಮಾತನಾಡಿ ಹೇಳ್ತೀನಿ” ಎಂದಿದ್ದಾರೆ. ಇತ್ತ ಸ್ವಪ್ನಾ ಮೊಬೈಲ್ ಸ್ವಿಚ್ ಆಫ್ ಮಾಡಿದ್ದು, ಯಾವುದೇ ಪ್ರತಿಕ್ರಿಯೆಗೆ ಸಿಕ್ಕಿಲ್ಲ. ಜತೆಗೆ ಸ್ವಪ್ನಾ ತಮ್ಮ ಹೆಸರಿನ ಮುಂದಿದ್ದ ಅಜಯ್ ರಾವ್ ಹೆಸರನ್ನು ಕಿತ್ತು ಹಾಕಿರುವುದು ಸಂದೇಹ ಮೂಡಿಸಿದೆ. ಅದಾಗ್ಯೂ ಡಿವೋರ್ಸ್‌ಗೆ ಖಚಿತ ಕಾರಣವೇನು ಎನ್ನುವುದು ತಿಳಿದು ಬಂದಿಲ್ಲ.
ಅಜಯ್ ರಾವ್ ಮತ್ತು ಸ್ವಪ್ನಾ ಪರಸ್ಪರ ಪ್ರೀತಿಸಿ 2014ರಲ್ಲಿ ಮದುವೆಯಾಗಿದ್ದರು. ಈ ದಂಪತಿಗೆ 2019ರಲ್ಲಿ ಹೆಣ್ಣು ಮಗು ಜನಿಸಿದ್ದು, ಇದಕ್ಕೆ . ಕಳೆದ ವರ್ಷವಷ್ಟೆ ಇವರು ನೂತನ ಮನೆಯ ಗೃಹ ಪ್ರವೇಶ ಸಮಾರಂಭವನ್ನು ಅದ್ಧೂರಿಯಾಗಿಯೇ ನಡೆಸಿದ್ದರು. ಅಜಯ್-ಸ್ವಪ್ನಾ ದಂಪತಿ ಅನ್ಯೋನ್ಯವಾಗಿಯೇ ಇದ್ದರು. ಆದರೆ ಇದ್ದಕ್ಕಿದ್ದಂತೆ ದೂರವಾಗಲು ನಿರ್ಧರಿಸಿದ್ದೇಕೆ ಎನ್ನುವ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.
ಈ ಸುದ್ದಿಯನ್ನೂ ಓದಿ: Krishna Ajay Rao: ಯುದ್ಧಕಾಂಡ ಸಿನಿಮಾಕ್ಕಾಗಿ ನಟ ಅಜಯ್ ರಾವ್ ಮಾಡಿ ಸಾಲ ಎಷ್ಟು ಗೊತ್ತಾ?
ಕಾರು ಮಾರಿದ್ದ ಅಜಯ್ ರಾವ್
ನಟನಾಗಿ ಮಾತ್ರವಲ್ಲ ಅಜಯ್ ರಾವ್ ನಿರ್ಮಾಪಕನಾಗಿಯೂ ಸ್ಯಾಂಡಲ್‌ವುಡ್‌ನಲ್ಲಿ ಗುರುತಿಸಿಕೊಂಡಿದ್ದರು. ಇತ್ತೀಚೆಗೆ ಅವರು ʼಯುದ್ಧಕಾಂಡ ಚಾಪ್ಟರ್-2ʼ ಸಿನಿಮಾ ನಿರ್ಮಿಸಿದ್ದರು. ಈ ಸಿನಿಮಾ ನಿರ್ಮಾಣಕ್ಕಾಗಿ ಅಜಯ್ ರಾವ್ ತಮ್ಮ ಬಿಎಂಡಬ್ಲ್ಯು ಕಾರನ್ನು ಮಾರಾಟ ಮಾಡಿದ್ದು, ಈ ವೇಳೆ ಮಗಳು ಚೆರಿಷ್ಮಾ ಅಳುತ್ತಿದ್ದ ವಿಡಿಯೊ ವೈರಲ್ ಆಗಿತ್ತು. ಕಾರು ಮಾರಾಟ ಮಾಡಲು ಆಕೆ ನಿರಾಕರಿಸಿ ರಚ್ಚೆ ಹಿಡಿದಿದ್ದಳು.
ಕಾರು ಮಾರಾಟ ಆಗಿದ್ದಕ್ಕೆ ಅಜಯ್ ರಾವ್ ಮಗಳು ಚೆರಿಷ್ಮಾ ಕಾರು ಮುಂದೆ ನಿಂತು, ʻʼಕಾರು ಮಾರಾಟ ಮಾಡುವುದು ಬೇಡʼʼ ಎಂದು ಹೇಳುತ್ತ ಬಿಕ್ಕಿ ಬಿಕ್ಕಿ ಅತ್ತು ಹಠ ಹಿಡಿದಿದ್ದಳು. ʼʼಇದು ನಿನ್ನ ಫೇವರಿಟ್ ಕಾರಾ?ʼʼ ಎಂಬ ಅಜಯ್ ರಾವ್ ಪ್ರಶ್ನೆಗೆ, ʻʼಹೌದುʼʼ ಎಂದಿದ್ದಳು. ಇದಕ್ಕೆ ಅಜಯ್ ರಾವ್, “ಸಾರಿ ಪುಟ್ಟ ಇನ್ನೊಂದು ಹೊಸ ಕಾರು ತರೋಣ ಬಿಡು” ಅಂತ ಹೇಳಿದ್ದರು. ʼʼನನಗೆ ಇದೇ ಕಾರು ಬೇಕುʼʼ ಎಂದು ಅವಳು ಬಿಕ್ಕಿ ಬಿಕ್ಕಿ ಅತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿತ್ತು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಭಾವುಕರಾಗಿದ್ದರು. ಅಜಯ್ ರಾವ್ ಹಾಗೂ ಪುತ್ರಿ ಚರಿಷ್ಮಾಗೆ ಅಭಿಮಾನಿಗಳು ಬೆಂಬಲ ನೀಡಿದ್ದರು.