Chikkaballapur News: ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯತೆ ಉಳಿಸಿ : ಕೆ.ಎಚ್.ಪದ್ಮರಾಜ್ ಜೈನ್
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿಯಲ್ಲಿ ರಾಜ್ಯದ ಪ್ರತೀ ಹಳ್ಳಿಯಲ್ಲಿನ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ನೆಮ್ಮದಿಯ ಬದುಕಿಗೆ ಸಹಕಾರಿಯಾಗಿದೆ. ಶೈಕ್ಷಣಿಕ, ವೈದ್ಯಕೀಯ, ಧಾರ್ಮಿಕ, ಸಾಮಾಜಿಕ, ಸಹಕಾರ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಮಿನಿ ಸರ್ಕಾರದ ರೀತಿಯಲ್ಲಿ ಜನಪರ ವಾದ ಕಾರ್ಯವನ್ನು ಮಾಡುವ ಮುಂಚೂಣಿಯಲ್ಲಿದೆ. ಈ ಎಲ್ಲ ಕಾರ್ಯಗಳು ಜನರ ನೆಮ್ಮದಿಯ ಬದುಕಿಗೆ ಕಾರಣೀಭೂತವಾಗಿದೆ.


ಗೌರಿಬಿದನೂರು : ನಗರದ ಪಚ್ಚೆ ಜೈನ್ ಸಮುದಾಯ ಭವನದಲ್ಲಿ ಶನಿವಾರ ಜೈನ್ ಸಮುದಾಯ ದ ವತಿಯಿಂದ ಪತ್ರಿಕಾಗೋಷ್ಠಿಯನ್ನು ಆಯೋಜಿಸಿದ್ದರು.
ಈ ವೇಳೆ, ಜೈನ್ ಸಮುದಾಯದ ಯುವ ಮುಖಂಡರು, ರಾಜ್ಯ ಜೈನ್ ಜಾಗೃತಿ ಪಡೆಯ ಸದಸ್ಯರಾದ ಕೆ.ಎಚ್.ಪದ್ಮರಾಜ್ ಜೈನ್ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆರು ಶತಮಾನಗಳ ಧಾರ್ಮಿಕ ಇತಿಹಾಸವಿದೆ. ಇಲ್ಲಿನ ಪಾವಿತ್ರ್ಯತೆಯು ಇಡೀ ರಾಜ್ಯದ ಮನೆಮಾತಾಗಿದೆ. ಆದರೆ ಇತ್ತೀಚಿನ ಕೆಲವು ದಿನಗಳಿಂದ ಅನಾಮಿಕ ವ್ಯಕ್ತಿಗಳ ಆರೋಪದ ಮೇರೆಗೆ ಎಸ್ ಐ ಟಿ ತಂಡವು ಕ್ಷೇತ್ರದಲ್ಲಿ ಶವಗಳ ಶೋಧ ಕಾರ್ಯ ಮಾಡುತ್ತಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ. ಕೆಲವು ಕಾಣದ ಕೈಗಳು ಪಿತೂರಿ ಮಾಡುವ ಮೂಲಕ ಕ್ಷೇತ್ರಕ್ಕೆ ಅಪಮಾನ ಮಾಡುವ ಪ್ರಯತ್ನ ನಡೆಯುತ್ತಿರುವುದು ತೀವ್ರ ಖಂಡನೀಯವಾಗಿದೆ.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿಯಲ್ಲಿ ರಾಜ್ಯದ ಪ್ರತೀ ಹಳ್ಳಿಯಲ್ಲಿನ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ನೆಮ್ಮದಿಯ ಬದುಕಿಗೆ ಸಹಕಾರಿಯಾಗಿದೆ. ಶೈಕ್ಷಣಿಕ, ವೈದ್ಯಕೀಯ, ಧಾರ್ಮಿಕ, ಸಾಮಾಜಿಕ, ಸಹಕಾರ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಮಿನಿ ಸರ್ಕಾರದ ರೀತಿಯಲ್ಲಿ ಜನಪರವಾದ ಕಾರ್ಯವನ್ನು ಮಾಡುವ ಮುಂಚೂಣಿಯಲ್ಲಿದೆ. ಈ ಎಲ್ಲ ಕಾರ್ಯಗಳು ಜನರ ನೆಮ್ಮದಿಯ ಬದುಕಿಗೆ ಕಾರಣೀಭೂತವಾಗಿದೆ. ಕೂಡಲೇ ಎಸ್ ಐ ಟಿ ಅಧಿಕಾರಿಗಳು ಶೋಧ ಕಾರ್ಯವನ್ನು ಈ ಕೂಡಲೇ ನಿಲ್ಲಿಸಿ ಕ್ಷೇತ್ರದ ಪಾವಿತ್ರ್ಯತೆಯನ್ನು ಉಳಿಸಬೇಕಾಗಿದೆ ಎಂಬುದು ರಾಜ್ಯದ ಹಿಂದೂ ಕಾರ್ಯಕರ್ತರ ಧ್ವನಿಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Chikkanayakanahalli Crime: ವಿದ್ಯುತ್ ಕಂಬದಿಂದ ಬಿದ್ದು ಲೈನ್‌ಮನ್ ಸಾವು
ಜೈನ್ ಸಮುದಾಯದ ತಾಲ್ಲೂಕು ಅಧ್ಯಕ್ಷರಾದ ದೇವಕುಮಾರ್ ಮಾತನಾಡಿ, ಇತ್ತೀಚಿನ ಕೆಲವು ದಿನಗಳಿಂದ ಶ್ರೀಕ್ಷೇತ್ರ ಧರ್ಮಸ್ಥಳ ಬಗ್ಗೆ ಅನಾಮಿಕ ವ್ಯಕ್ತಿಯೋರ್ವನ ದೂರಿನ ಮೇರೆಗೆ ಎಸ್ ಐ ಟಿ ಯು ಶೋಧ ಕಾರ್ಯ ಮಾಡುವ ಮೂಲಕ ಅಲ್ಲಿನ ಪಾವಿತ್ರ್ಯತೆಯನ್ನು ಹಾಳು ಮಾಡುವ ಪ್ರಯತ್ನ ಅವೈಜ್ಞಾನಿಕವಾಗಿದೆ. ಇದು ಕೇವಲ ಒಂದು ಕ್ಷೇತ್ರ ಅಥವಾ ಒಂದು ಸಮುದಾಯಕ್ಕೆ ಮಾಡುವ ಅಪಮಾನವಲ್ಲ, ಇಡೀ ಸಮಾಜಕ್ಕೆ ಮತ್ತು ಹಿಂದೂ ಧರ್ಮಕ್ಕೆ ಕಳಂಕ ತರುವ ಹುನ್ನಾರವಾಗಿದೆ. ಈ ಕೂಡಲೇ ರಾಜ್ಯ ಸರ್ಕಾರವು ಮುಂದಾಗಿ ಧರ್ಮಸ್ಥಳ ಕ್ಷೇತ್ರದಲ್ಲಿನ ಶೋಧ ಕಾರ್ಯವನ್ನು ಕೂಡಲೇ ನಿಲ್ಲಿಸಬೇಕಾಗಿದೆ. ಇಲ್ಲವಾದಲ್ಲಿ ಇಡೀ ರಾಜ್ಯದಲ್ಲಿನ ಹಿಂದೂ ಧರ್ಮದ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಬೇಕಾಗಿದೆ ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ ಜೈನ್ ಅಸೋಸಿಯೇಷನ್ ಸದಸ್ಯರಾದ ಎಂ.ಎಸ್.ದೇವರಾಜ್ ಮಾತನಾಡಿ, ಧರ್ಮಸ್ಥಳ ಕ್ಷೇತ್ರವು ಶಿಕ್ಷಣ, ವಸತಿ, ಧಾರ್ಮಿಕ ಶಕ್ತಿಯನ್ನು ನೀಡುವ ಪವಿತ್ರವಾದ ನೆಲೆಯಾಗಿದೆ. ಇಂತಹ ಪವಿತ್ರವಾದ ಸ್ಥಳದಲ್ಲಿ ಸರ್ಕಾರವು ಅನಾವಶ್ಯಕವಾಗಿ ಅನಾಮಿಕರ ಹೇಳಿಕೆಯ ಮೇರೆಗೆ ಶೋಧ ನಡೆಸುವುದು ಸರಿಯಲ್ಲ, ಕ್ಷೇತ್ರದ ಧರ್ಮಾಧಿಕಾರಿಯಾದ ಡಾ.ವೀರೇಂದ್ರ ಹೆಗ್ಗಡೆಯವರು ರಾಜ್ಯಾ ದ್ಯಂತ ಮಾಡುತ್ತಿರುವ ಸಾಮಾಜಿಕ ಕಾರ್ಯಗಳನ್ನು ಸಹಿಸದ ಕೆಲವರು ಕ್ಷೇತ್ರದ ಪಾವಿತ್ರ್ಯತೆ ಬಗ್ಗೆ ಮಸಿ ಬಳಿಯುವ ಸಂಚು ರೂಪಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಈ ವೇಳೆ, ಜೈನ್ ಸಮುದಾಯದ ಮುಖಂಡರಾದ ಎಂ.ಎನ್.ಸುರೇಶ್, ಮಹಾವೀರ್, ಪ್ರಭು, ನಂದಿನಿ ಬಾಬು, ಪಾರ್ಶ್ವನಾಥ್, ಸುರೇಶ್ ಬಾಬು, ಉಜ್ವಲ್ ಸೇರಿದಂತೆ ಇತರರು ಭಾಗವಹಿಸಿದ್ದರು.