ಬೆಂಗಳೂರು: ಇವತ್ತಿನ ಟ್ರೆಂಡಿಗೆ ತಕ್ಕಂತೆ ಲವ್ ಓಟಿಪಿ (Love OTP) ಎನ್ನುವ ಟೈಟಲ್ ಅನೌನ್ಸ್ ಮಾಡಿ ಹುಬ್ಬೇರಿಸಿದ್ದ ನಟ, ನಿರ್ದೇಶಕ ಅನೀಶ್ ತೇಜೇಶ್ವರ್ (Aniissh Tejeshwar) ಇದೀಗ ಸಿನಿಮಾವನ್ನು ಪ್ರೇಕ್ಷಕರಿಗೆ ತಲುಪಿಸುವ ಹೊಸ್ತಿಲಲ್ಲಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿಸಿಕೊಂಡಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳ ತಯಾರಿಯಲ್ಲಿದೆ.ಈ ನಡುವೆ ಚಿತ್ರದ ಮುಹೂರ್ತ ವಿಡಿಯೊ ಹಂಚಿಕೊಂಡು ಸದ್ಯದಲ್ಲೇ ಬಿಡುಗಡೆಯಾಗುವ ಸೂಚನೆ ಕೊಟ್ಟಿದೆ. ವಿಶೇಷ ಎಂದರೆ ಅನೀಶ್ ನಾಯಕನಾಗಿ ನಟಿಸುವ ಜತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ.
ಚಿತ್ರದ ಶೀರ್ಷಿಕೆಯಲ್ಲಿರುವಂತೆ ‘ಓಟಿಪಿ’ ಎಂದರೆ ಓವರ್ ಟಾರ್ಚರ್ ಪ್ರೆಶರ್ ಎಂದರ್ಥ. ಈ ತಲೆಮಾರಿನ ಯುವ ಪ್ರೇಮಿಗಳ ಕತೆಯನ್ನು ಹೇಳುವ ಚಿತ್ರವಿದು. ಈ ತಲೆಮಾರಿನ ಯುವ ಮನಸುಗಳನ್ನು ತೆರೆದಿಡುವಂತಹ ಕಥಾಹಂದರ ಹೊಂದಿರುವ ಸಿನಿಮಾ ಲವ್ OTP ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಚಿತ್ರವನ್ನು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ.
ಇದನ್ನು ಓದಿ:Just Married Movie: ‘ಜಸ್ಟ್ ಮ್ಯಾರೀಡ್’ ಚಿತ್ರದ ‘ಕರುಣಾಕರ’ ಪಾತ್ರದಲ್ಲಿ ಖ್ಯಾತ ನಟ ಅಚ್ಯುತ್ ಕುಮಾರ್
ಅನೀಶ್ ತೇಜೇಶ್ವರ್ ನಟಿಸಿ ನಿರ್ದೇಶಿಸುತ್ತಿರುವ 2ನೇ ಚಿತ್ರ 'ಲವ್ OTP'. ಇದನ್ನು ಭಾವಪ್ರೀತ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಬ್ಯಾನರ್‌ನಡಿ ವಿಜಯ್ ಎಂ.ರೆಡ್ಡಿ ನಿರ್ಮಿಸುತ್ತಿದ್ದಾರೆ. ಸಿನಿಮಾದ ವಿಶೇಷತೆಗಳನ್ನು ಒಂದೊಂದಾಗಿ ವಿವರಿಸುತ್ತಾ ಪ್ರಚಾರ ಮಾಡುವ ಯೋಚನೆಯಲ್ಲಿದೆ ಚಿತ್ರತಂಡ.
2010ರಲ್ಲಿ ತೆರೆಕಂಡ ʼಪೊಲೀಸ್ ಕ್ವಾಟರ್ಸ್ʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಅನೀಶ್ ಇದೀಗ ನಟನೆಯ ಜತೆಗೆ ನಿರ್ಮಾಪಕರಾಗಿ, ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. 2021ರಲ್ಲಿ ರಿಲೀಸ್ ಆದ ʼರಾಮಾರ್ಜುನʼ ಸಿನಿಮಾ ಮೂಲಕ ಮೊದಲ ಬಾರಿಗೆ ಡೈರಕ್ಟರ್ ಕ್ಯಾಪ್ ತೊಟ್ಟ ಅವರು ʼಲವ್ OTPʼ ಮೂಲಕ 2ನೇ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.