ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Actor Rakshit shetty: ಕಾಪಿ ರೈಟ್‌ ಉಲ್ಲಂಘನೆ; ನಟ ರಕ್ಷಿತ್ ಶೆಟ್ಟಿಗೆ 25 ಲಕ್ಷ ರೂ. ದಂಡ ವಿಧಿಸಿದ ದೆಹಲಿ ಹೈಕೋರ್ಟ್!

'ನ್ಯಾಯ ಎಲ್ಲಿದೆ' ಚಿತ್ರದ 'ನ್ಯಾಯ ಎಲ್ಲಿದೆ...' ಹಾಡು ಮತ್ತು 'ಗಾಳಿ ಮಾತು' ಚಿತ್ರದ 'ಒಮ್ಮೆ ನಿನ್ನನ್ನು' ಹಾಡನ್ನು ʼಬ್ಯಾಚುಲರ್ ಪಾರ್ಟಿʼ ಸಿನಿಮಾದಲ್ಲಿ ಅನಧಿಕೃತವಾಗಿ ಬಳಕೆ ಮಾಡಲಾಗಿದೆ. ಹಕ್ಕುಸ್ವಾಮ್ಯ ಹಾಗೂ ಪ್ರಸಾರದ ಹಕ್ಕು ಅನ್ನು ಖರೀದಿ ಮಾಡದೇ ಹಾಡುಗಳ ಬಳಕೆಯಾಗಿದೆ ಎಂದು ಎಂಆರ್‌ಟಿ ಮ್ಯೂಸಿಕ್ ಪಾಲುದಾರರಾಗಿರುವ ನವೀನ್ ಕುಮಾ‌ರ್ ದೂರು ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್‌, ರಕ್ಷಿತ್ ಶೆಟ್ಟಿ ಅವರ ನಿರ್ಮಾಣ ಸಂಸ್ಥೆಗೆ ಭಾರಿ ದಂಡ ವಿಧಿಸಿದೆ.

ನಟ ರಕ್ಷಿತ್‌ ಶೆಟ್ಟಿ

ನವದೆಹಲಿ: ಬ್ಯಾಚುಲರ್ ಪಾರ್ಟಿ (Bachelor Party) ಚಿತ್ರದಲ್ಲಿ ಅನುಮತಿಯಿಲ್ಲದೆ ಎರಡು ಹಾಡುಗಳನ್ನು ಬಳಸಿದ ಪ್ರಕರಣಕ್ಕೆ ಸಂಬಂಧಿಸಿ ಕನ್ನಡದ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್ ಶೆಟ್ಟಿ (Actor Rakshit shetty) ಅವರ ನಿರ್ಮಾಣ ಸಂಸ್ಥೆಯಾದ ‘ಪರಂವಾ ಸ್ಟುಡಿಯೋಸ್‌’ಗೆ 25 ಲಕ್ಷ ರೂಪಾಯಿ ದಂಡ ವಿಧಿಸಿ ದೆಹಲಿ ಹೈಕೋರ್ಟ್‌ ಆದೇಶಿಸಿದೆ.

ಕಾಪಿರೈಟ್‌ ಉಲ್ಲಂಘನೆ ಆರೋಪಿಸಿ ರಕ್ಷಿತ್ ಶೆಟ್ಟಿ ಅವರ ನಿರ್ಮಾಣ ಸಂಸ್ಥೆ ವಿರುದ್ಧ ಖ್ಯಾತ ಮ್ಯೂಸಿಕ್ ಕಂಪನಿ ‘ಎಮ್‌ಆರ್‌ಟಿ ಮ್ಯೂಸಿಕ್’ ದೂರು ದಾಖಲಿಸಿತ್ತು. 2020ರ ಹಕ್ಕುಸ್ವಾಮ್ಯ ಒಪ್ಪಂದದ ಪ್ರಕಾರ ‘ನ್ಯಾಯ ಎಲ್ಲಿದೆ’ ಮತ್ತು ‘ಒಮ್ಮೆ ನಿನ್ನನ್ನು’ ಎರಡು ಹಾಡುಗಳ ಮಾಲೀಕತ್ವ ತಮ್ಮದಾಗಿದೆ ಎಂದು ಸಂಸ್ಥೆ ವಾದಿಸಿತ್ತು. ಆದರೆ ‘ಬ್ಯಾಚುಲರ್ ಪಾರ್ಟಿ’ ಚಿತ್ರದಲ್ಲಿ ಈ ಹಾಡುಗಳನ್ನು ಅನುಮತಿ ಪಡೆಯದೇ ಬಳಸಿಕೊಳ್ಳಲಾಗಿತ್ತು ಎಂದು ಎಮ್‌ಆರ್‌ಟಿ ಮ್ಯೂಸಿಕ್ ಆರೋಪಿಸಿತ್ತು.

ವಿಚಾರಣೆ ವೇಳೆ ರಕ್ಷಿತ್ ಶೆಟ್ಟಿ ಮತ್ತು ತಂಡವು ತಮ್ಮ ಸಮರ್ಥನೆಯಾಗಿ ಕೆಲವು ವಾದಗಳನ್ನು ಮಂಡಿಸಿತ್ತು. ‘ನ್ಯಾಯ ಎಲ್ಲಿದೆ’ ಹಾಡನ್ನು ಕೇವಲ 7 ಸೆಕೆಂಡ್ ಮತ್ತು ‘ಒಮ್ಮೆ ನಿನ್ನನ್ನು’ ಹಾಡನ್ನು 31 ಸೆಕೆಂಡ್ ಮಾತ್ರ ಬಳಸಲಾಗಿದೆ. ಇದು ಅತೀ ಕಡಿಮೆ ಅವಧಿ ಆಗಿರುವುದರಿಂದ ಹಕ್ಕುಸ್ವಾಮ್ಯ ಉಲ್ಲಂಘನೆಯಾಗುವುದಿಲ್ಲ ಎಂದು ವಾದಿಸಲಾಗಿತ್ತು.

ಈ ವಾದವನ್ನು ತಿರಸ್ಕರಿಸಿರುವ ಕೋರ್ಟ್, ‘ಹಾಡುಗಳ ಬಳಕೆಯು ಕೇವಲ ಕಾಕತಾಳೀಯವಲ್ಲ. ಬದಲಾಗಿ ಸಿನಿಮಾದ ಕಥೆಯ ನಿರೂಪಣೆಗೆ ಪೂರಕವಾಗಿ ಮತ್ತು ವಾಣಿಜ್ಯ ಲಾಭಕ್ಕಾಗಿ ಉದ್ದೇಶಪೂರ್ವಕವಾಗಿ ಬಳಸಲಾಗಿದೆ ಎಂದು ಅಭಿಪ್ರಾಯಪಟ್ಟಿದೆ. ನಾಯಕ ಸಂಕಷ್ಟದಲ್ಲಿರುವಾಗ ‘ನ್ಯಾಯ ಎಲ್ಲಿದೆ’ ಹಾಡನ್ನು ಹಿನ್ನೆಲೆಯಲ್ಲಿ ಹಾಕಿರುವುದು ಒಂದು ಸೃಜನಾತ್ಮಕ ನಿರ್ಧಾರವಾಗಿದ್ದು, ಇದು ಹಕ್ಕುಸ್ವಾಮ್ಯದ ಅಡಿ ಬರುತ್ತದೆ ಎಂದು ಕೋರ್ಟ್ ಹೇಳಿದೆ.

Chandan Shetty: ಡಿವೋರ್ಸ್‌ ಆಯ್ತು ಬೇಜಾರ್‌ ಇಲ್ಲ ಸಾಧನೆ ಮಾಡ್ಬೇಕು; ಚಂದನ್‌ ಶೆಟ್ಟಿ

ಜೈಲು ಶಿಕ್ಷೆಯಿಂದ ನಟ ಪಾರು

ನ್ಯಾಯಾಲಯವು ರಕ್ಷಿತ್ ಶೆಟ್ಟಿ ಅವರಿಗೆ ಜೈಲು ಶಿಕ್ಷೆ ವಿಧಿಸುವುದರಿಂದ ವಿನಾಯಿತಿ ನೀಡಿದೆಯಾದರೂ, ಹಣಕಾಸಿನ ವಿಚಾರದಲ್ಲಿ ಕಟ್ಟುನಿಟ್ಟಿನ ಆದೇಶ ನೀಡಿದೆ. ಹಕ್ಕುಸ್ವಾಮ್ಯ ಉಲ್ಲಂಘನೆಗಾಗಿ ಈಗಾಗಲೇ ಠೇವಣಿ ಇರಿಸಲಾಗಿರುವ 20 ಲಕ್ಷ ರೂಪಾಯಿಗಳನ್ನು ಎಮ್‌ಆರ್‌ಟಿ ಮ್ಯೂಸಿಕ್‌ಗೆ ನೀಡಲು ಸೂಚಿಸಿದೆ. ನ್ಯಾಯಾಲಯದ ಆದೇಶವನ್ನು ಸಮಯಕ್ಕೆ ಸರಿಯಾಗಿ ಪಾಲಿಸದ ಕಾರಣಕ್ಕೆ ಹೆಚ್ಚುವರಿಯಾಗಿ 5 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.