Dhruva Sarja: ದುನಿಯಾ ಸೂರಿ ನಿರ್ದೇಶನದ ಮುಂದಿನ ಚಿತ್ರಕ್ಕೆ ಧ್ರುವ ಸರ್ಜಾ ನಾಯಕ?
Director Suri: ಬಹುತಾರಾಗಣ, ಟೀಸರ್ ಮೂಲಕವೇ ಗಮನ ಸೆಳೆದ ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ ʼಕೆಡಿʼ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈ ಮಧ್ಯೆ ಧ್ರುವ ಸರ್ಜಾ ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಚರ್ಚೆ ಆರಂಭವಾಗಿದೆ.


ಬೆಂಗಳೂರು: ಪ್ರೇಮ್ (Prem) ನಿರ್ದೇಶನದ ʼಕೆಡಿʼ ಕನ್ನಡ ಚಿತ್ರ (KD Movie) ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಮತ್ತು ಪ್ರೇಮ್ ಕಾಂಬಿನೇಷನ್‌ನ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ (KVN Productions) ಅದ್ಧೂರಿಯಾಗಿ ನಿರ್ಮಿಸಿದ್ದು, ಬಿಡುಗಡೆಗೆ ಸಜ್ಜಾಗಿದೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್, ರೀಷ್ಮಾ ನಾಣಯ್ಯ ಮುಂತಾದ ಘಟಾನುಘಟಿಗಳು ನಟಿಸಿರುವ ಈ ಚಿತ್ರ ಸೆಟ್ಟೇರಿದಾಗಿನಿಂದಲೇ ಗಮನ ಸೆಳೆದಿತ್ತು. ಇತ್ತೀಚೆಗೆ ರಿಲೀಸ್ ಆಗಿರುವ ಟೀಸರ್ ಈ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದ್ದು, ಕನ್ನಡದ ಜತೆಗೆ ವಿವಿಧ ಭಾಷೆಗಳಲ್ಲಿ ತೆರೆಗೆ ಬರಲಿದೆ. ಈ ಮಧ್ಯೆ ಧ್ರುವ ಸರ್ಜಾ ಕನ್ನಡದ ಮತ್ತೊಬ್ಬ ಪ್ರತಿಭಾವಂತ ನಿರ್ದೇಶಕರ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ʼಕೆಡಿʼ ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿದ್ದು, ಅದಾಗಲೇ ಧ್ರುವ ಸರ್ಜಾ ಅವರ ಮುಂದಿನ ಚಿತ್ರ ಯಾವುದು ಎನ್ನುವ ಬಗ್ಗೆ ಚರ್ಚೆ ಆರಂಭವಾಗಿದೆ. ಸದ್ಯ ಅವರು ವಿವಿಧ ನಿರ್ದೇಶಕರ ಬಳಿ ಕಥೆ ಕೇಳುತ್ತಿದ್ದು, ʼಕೆಡಿʼ ಚಿತ್ರದ ರಿಲೀಸ್ ಬಳಿಕ ಶೂಟಿಂಗ್ ಆರಂಭಿಸಲಿದ್ದಾರೆ.
ಈ ಸುದ್ದಿಯನ್ನೂ ಓದಿ: Actor Dhruva Sarja: ಒಬ್ಬ ಸಾಧಕನಿಗೆ ಈ ಅಪಮಾನ ಸರಿಯಲ್ಲ: ನಟ ಧ್ರುವ ಸರ್ಜಾ ಕಿಡಿ
ದುನಿಯಾ ಸೂರಿ ಚಿತ್ರದಲ್ಲಿ ಧ್ರುವ ಸರ್ಜಾ?
ʼದುನಿಯಾʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೊಸದೊಂದು ಟ್ರೆಂಡ್ ಹುಟ್ಟು ಹಾಕಿ ವಿಭಿನ್ನ ಸಿನಿಮಾ ಮೂಲಕ ಗಮನ ಸೆಳೆದಿರುವ ನಿರ್ದೇಶಕ ಸೂರಿ ಅವರ ಮುಂದಿನ ಚಿತ್ರದಲ್ಲಿ ಧ್ರುವ ಸರ್ಜಾ ನಟಿಸಲಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿದೆ. ಸೂರಿ ಈ ಹಿಂದೆ ಯುವರಾಜ್‌ಕುಮಾರ್ ಅವರೊಂದಿಗಿನ ಸಿನಿಮಾ ಆರಂಭಿಸಲು ಸಿದ್ದತೆ ನಡೆಸಿದ್ದರು. ಆದರೆ ಸದ್ಯ ಇದು ಕಾರಣಾಂತರಗಳಿಂದ ಸ್ಥಗಿತಗೊಂಡಿದೆ. ಹೀಗಾಗಿ ಅವರು ಬೇರೆಯದೇ ಕಥೆ ರೆಡಿ ಮಾಡಿಟ್ಟುಕೊಂಡಿದ್ದು, ಅದನ್ನು ಧ್ರುವ ಸರ್ಜಾ ಬಳಿ ಚರ್ಚಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಈ ಚಿತ್ರದ ಮಾತುಕತೆ ಇನ್ನೂ ಆರಂಭಿಕ ಹಂತದಲ್ಲಿದೆ ಎನ್ನಲಾಗಿದೆ. ʼʼಅವರು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಆದರೆ ಇನ್ನು ಯಾವುದನ್ನೂ ನಿರ್ಧರಿಸಿಲ್ಲ. ಧ್ರವ ಸರ್ಜಾ ಅವರ ಸ್ಟಾರ್‌ಗಿರಿಗೆ ತಕ್ಕಂತೆ, ಸೂರಿ ಅವರ ವಿಶಿಷ್ಟ ಶೈಲಿಯಲ್ಲಿ ಇದು ಮೂಡಿ ಬರಲಿದೆ. ಸದ್ಯದಲ್ಲೇ ಎಲ್ಲವೂ ತೀರ್ಮಾನವಾಗಲಿದೆʼʼ ಎಂದು ಮೂಲಗಳು ತಿಳಿಸಿವೆ. ಚಿತ್ರವನ್ನು ಯಾರು ನಿರ್ಮಿಸಲಿದ್ದಾರೆ, ಯಾರೆಲ್ಲ ನಟಿಸಲಿದ್ದಾರೆ ಎನ್ನುವ ಬಗ್ಗೆ ಶೀಘ್ರದಲ್ಲೇ ಮಾಹಿತಿ ಹೊರ ಬೀಳುವ ನಿರೀಕ್ಷೆ ಇದೆ.
ಕಳೆದ ವರ್ಷ ತೆರೆಕಂಡ ಧ್ರುವ ಸರ್ಜಾ ನಟನೆಯ ʼಮಾರ್ಟಿನ್ʼ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹೀನಾಯವಾಗಿ ಸೋತ ಹಿನ್ನೆಲೆಯಲ್ಲಿ ಅವರಿಗೆ ತುರ್ತಾಗಿ ಗೆಲುವೊಂದು ಬೇಕಾಗಿದೆ. ಹೀಗಾಗಿ ಸದ್ಯ ಅವರ ನಿರೀಕ್ಷೆಗಳೆಲ್ಲ ʼಕೆಡಿʼ ಮೇಲಿದೆ. ಇದು ಬೆಂಗಳೂರಿನ ಅಂಡರ್ ವರ್ಲ್ಡ್ ಕತೆಯನ್ನು ಹೊಂದಿದ್ದು, ರೆಟ್ರೋ ಶೈಲಿ ಮೂಡಿ ಬಂದಿದೆ. ಕನ್ನಡದ ಜತೆಗೆ ವಿವಿಧ ಭಾಷೆಗಳಲ್ಲಿ ಇದು ಸದ್ಯದಲ್ಲೇ ತೆರೆಗೆ ಅಪ್ಪಳಿಸಲಿದೆ. ಈಗಾಗಲೇ ಚಿತ್ರದ ಪ್ರಮೋಷನ್ ಕಾರ್ಯ ಆರಂಭವಾಗಿದೆ.