ಉಡುಪಿ, ಅ.13: ಧಾರವಾಡ ರಂಗಾಯಣ ನಿರ್ದೇಶಕ, ಖ್ಯಾತ ಹಿರಿಯ ರಂಗಭೂಮಿ ಕಲಾವಿದ, ಹಾಸ್ಯನಟ ರಾಜು ತಾಳಿಕೋಟಿ (Actor Raju Talikote) ಅವರು ಹೃದಯಾಘಾತದಿಂದ ಸೋಮವಾರ ನಿಧನರಾಗಿದ್ದಾರೆ. ಭಾನುವಾರ ಹೃದಯಾಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಮಣಿಪಾಲದ ಆಸ್ಪತ್ರೆಗೆ ರಾಜು ತಾಳಿಕೋಟಿ ಅವರನ್ನು ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಇಂದು ಸಂಜೆ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ರಾಜು ತಾಳಿಕೋಟಿಯವರ ನಿಧನಕ್ಕೆ ಕನ್ನಡ ಚಿತ್ರರಂಗ, ರಂಗಭೂಮಿ ಪ್ರಮುಖರು ಸಂತಾಪ ಸೂಚಿಸಿದ್ದಾರೆ.
ಶೈನ್ ಶೆಟ್ಟಿ ನಟನೆಯ ಹೊಸ ಸಿನಿಮಾದ ಶೂಟಿಂಗ್ ಸಲುವಾಗಿ ರಾಜು ತಾಳಿಕೋಟಿ ಅವರು ಉಡುಪಿಗೆ ಬಂದಿದ್ದರು. ಚಿತ್ರೀಕರಣ ಮುಗಿಸಿ ರಾತ್ರಿ ವಿಶ್ರಾಂತಿ ಪಡೆಯುತ್ತಿರುವಾಗ ಭಾನುವಾರ ರಾತ್ರಿ ಹೃದಯಾಘಾತ ಆಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೂ ಅವರು ಬದುಕುಳಿಯಲಿಲ್ಲ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.
ಈ ಮೊದಲು ಕೂಡ ರಾಜು ತಾಳಿಕೋಟೆ ಅವರಿಗೆ ಹೃದಯಾಘಾತ ಆಗಿತ್ತು. ಆಗ ಚಿಕಿತ್ಸೆ ನೀಡಿ ಸ್ಟಂಟ್ ಹಾಕಲಾಗಿತ್ತು. ಈಗ ಒತ್ತಡ ಜಾಸ್ತಿ ಆಗಿದ್ದರಿಂದ ಮತ್ತೆ ಹಾರ್ಟ್ ಅಟ್ಯಾಕ್ ಆಗಿರಬಹುದು. ವಿಜಯಪುರದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುವುದು ಎಂದು ಅವರ ಪುತ್ರ ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಿಕ್ಕಸಿಂದಗಿ ಗ್ರಾಮದ ಮೂಲದವರಾಗಿದ್ದ ಅವರು, ಚಲನಚಿತ್ರದಲ್ಲಿ ಪ್ರಸಿದ್ಧರಾದ ನಂತರ ತಾಳಿಕೋಟಿ ನಗರದಲ್ಲಿ ವಾಸವಾಗಿದ್ದರು. ರಾಜು ತಾಳಿಕೋಟಿಯವರು ಮೂಲ ಹೆಸರು ರಾಜೇಸಾಬ ಮಕ್ತುಮಸಾಬ್ ತಾಳಿಕೋಟಿ. ಅವರು ಕೇವಲ ನಟನಾಗಿರದೇ ತಾಳಿಕೋಟೆಯ ಪ್ರಸಿದ್ಧ ಖಾಸ್ಗತೇಶ್ವರ ನಾಟಕ ಮಂಡಳಿಯ ಮಾಲೀಕರಾಗಿದ್ದರು.
ಇವರು ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಮುಖ್ಯವಾಗಿ ಕುಡುಕರ ಜೀವನದ ಆಟೋಟೋಪಗಳನ್ನು ಹಾಸ್ಯವಾಗಿ ಚಿತ್ರಸಿದ `ಕಲಿಯುಗದ ಕುಡುಕ' ನಾಟಕ ಮುಖಾಂತರ ತುಂಬಾ ಪ್ರಸಿದ್ಧಿ ಪಡೆದರು.
ಈ ಸುದ್ದಿಯನ್ನೂ ಓದಿ | Actor Umesh: ಮನೆಯಲ್ಲಿ ಜಾರಿಬಿದ್ದ ಸ್ಯಾಂಡಲ್‌ವುಡ್ ನಟ ಉಮೇಶ್ ಆರೋಗ್ಯ ಹೇಗಿದೆ? ಟೆಸ್ಟ್ ವೇಳೆ ಆಘಾತಕಾರಿ ವಿಚಾರ ರಿವೀಲ್
ಇನ್ನು ನಿರ್ದೇಶಕ ಆನಂದ್ ಪಿ ರಾಜು ರವರ `ಹೆಂಡ್ತಿ ಅಂದ್ರೆ ಹೆಂಡ್ತಿ' ಚಿತ್ರದಲ್ಲಿ ಅಭಿನಯಿಸುವ ಮೂಲಕ ಸಿನಿರಂಗಕ್ಕೂ ಬಂದರು. ನಿರ್ದೇಶಕ ಯೋಗರಾಜ್ ಭಟ್ ಅವರ ‘ಮನಸಾರೆ’ (2009) ಚಿತ್ರದ ಮೂಲಕ ಇವರು ಜನಪ್ರಿಯತೆ ಗಳಿಸಿದರು. ನಂತರ ‘ಪಂಚರಂಗಿ’, ‘ಮತ್ತೊಂದ್ ಮದುವೇನಾ..!’ ಮತ್ತು ‘ಮೈನಾ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟ ಹಾಸ್ಯ ಶೈಲಿಯ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು.