ಬೆಂಗಳೂರು: ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಕನ್ನಡ ಹಾಡು ಹಾಡುವಂತೆ ಕೇಳಿದ ಅಭಿಮಾನಿಗೆ, ಗಾಯಕ ಸೋನು ನಿಗಮ್ ಅವರು ನೀಡಿದ ಪ್ರತಿಕ್ರಿಯೆ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಬಳಿಕ ರಾಜ್ಯದಲ್ಲಿ ಅವರ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದು ಎಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿದ್ದವು. ಆದರೆ, ಇದೀಗ ತಮ್ಮ ಹಿಂದಿನ ಹೇಳಿಕೆಗೆ ಖ್ಯಾತ ಗಾಯಕ ಕ್ಷಮೆ ಕೋರಿದ್ದಾರೆ. ತಾವು ಹಿಂದೆ ನೀಡಿದ್ದ ಹೇಳಿಕೆಯಿಂದ ಕನ್ನಡಿಗರ ಮನ ನೋಯಿಸಿದ್ದರೆ ಅದಕ್ಕೆ ಬೇಷರತ್ತಾಗಿ ಕ್ಷಮೆ ಯಾಚಿಸುವುದಾಗಿ ಅವರು ತಿಳಿಸಿದ್ದಾರೆ.
ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಗಾಯಕ ಸೋನು ನಿಗಮ್ ಇಂದು ನನ್ನೊಂದಿಗೆ ಮಾತಾಡಿದರು. ತಾವು ಹಿಂದೆ ಮಾಡಿದ ಒಂದು ಮಾತು ಕನ್ನಡಿಗರನ್ನು ಹೇಗೆ ನೋಯಿಸಿದೆ ಎಂಬುವುದು ಅವರಿಗೆ ಅರ್ಥವಾಗಿದೆ. ಬೇಷರತ್ತಾಗಿ ಕ್ಷಮೆ ಯಾಚಿಸುವುದಾಗಿ ಅವರು ಹೇಳಿದ್ದಾರೆ.
ನಾನು ಹಿಂದೆಯೂ ಹೇಳಿದ್ದೇನೆ. ನಾವೆಲ್ಲರೂ ಸೋನು ನಿಗಮ್ ಅವರ ಹಾಡುಗಳನ್ನು ಇಷ್ಟಪಟ್ಟವರು. ಅವರ ಕುರಿತು ವೈಯಕ್ತಿಕವಾಗಿ ಯಾವ ದ್ವೇಷ, ಮುನಿಸು ನಮಗೆ ಇರಲಿಲ್ಲ. ಆ ಒಂದು ಮಾತನ್ನು ಅರಗಿಸಿಕೊಳ್ಳಲು ನಮ್ಮಿಂದ ಆಗಿರಲಿಲ್ಲ. ಅದಕ್ಕಾಗಿ ನಮ್ಮ ಪ್ರತಿಭಟನೆ, ಆಕ್ರೋಶ ಸಹಜವಾಗೆ ಇತ್ತು. ಇದೀಗ ಅವರು ಕ್ಷಮೆ ಯಾಚಿಸಿದ್ದಾರೆ. ಇಲ್ಲಿಗೆ ಇದನ್ನು ಮುಗಿಸುವುದು ಒಳ್ಳೆಯದು. ಕ್ಷಮೆ ಕೇಳಿದವರನ್ನು ಕ್ಷಮಿಸುವುದು ಕನ್ನಡಿಗರ ಔದಾರ್ಯ, ಸಂಸ್ಕಾರ ಎಂದು ನಾರಾಯಣಗೌಡ ತಿಳಿಸಿದ್ದಾರೆ.
ಘಂಟಸಾಲ, ಪಿ ಬಿ. ಶ್ರೀನಿವಾಸ್, ಯೇಸುದಾಸ್, ಎಸ್. ಜಾನಕಿ, ವಾಣಿ ಜಯರಾಮ್, ಚಿತ್ರಾ ಹೀಗೆ ಅದ್ಭುತ ಗಾಯಕರು ಕನ್ನಡಿಗರಲ್ಲದೆ ಇದ್ದರೂ ನಾವು ಅವರನ್ನು ಅಪಾರವಾಗಿ ಪ್ರೀತಿಸಿದ್ದೇವೆ. ಅವರು ನಮ್ಮ ಕನ್ನಡ ಚಿತ್ರಸಂಗೀತವನ್ನು ಶ್ರೀಮಂತಗೊಳಿಸಿದ ಮಹಾನುಭಾವರು. ಆ ಕೃತಜ್ಞತೆ ಸದಾ ಇರುತ್ತದೆ. ಸೋನು ನಿಗಮ್ ಕೂಡ ಇದೇ ಸಾಲಿನಲ್ಲಿ ಬರುವ ಮಹಾ ಗಾಯಕರಲ್ಲಿ ಒಬ್ಬರು. ಈ ಕಹಿ ಘಟನೆಯನ್ನು ಮರೆತುಬಿಡೋಣ. ಕರ್ನಾಟಕ ರಕ್ಷಣಾ ವೇದಿಕೆ ಈ ಹೋರಾಟವನ್ನು ಇಲ್ಲಿಗೆ ನಿಲ್ಲಿಸುತ್ತದೆ. ಇದು ಎಲ್ಲರಿಗೂ ಒಂದು ಪಾಠ.
ನಾನು ವೈಯಕ್ತಿಕವಾಗಿ ಸಂಗೀತ ಪ್ರೇಮಿ. ಸಂಗೀತ ಮನುಷ್ಯನ ಎಲ್ಲಾ ಸಂಕಟಗಳನ್ನು ಮರೆಸುವ ಸಂಜೀವಿನಿ. ಸೋನು ಅವರು ಇನ್ನಷ್ಟು ಕನ್ನಡ ಗೀತೆಗಳನ್ನು ಹಾಡಲಿ, ಕರ್ನಾಟಕದ ನೆಲದಲ್ಲಿ ಅವರ ಕಾರ್ಯಕ್ರಮಗಳು ನಡೆಯಲಿ. ಸಂಗೀತ ನಮ್ಮ ಬದುಕನ್ನು ಇನ್ನಷ್ಟು ಸಹನೀಯ ಗೊಳಿಸಲಿ, ಪ್ರೀತಿ ಗೆಲ್ಲಲಿ ಎಂದು ಟಿ.ಎ.ನಾರಾಯಣಗೌಡರು ಹೇಳಿದ್ದಾರೆ.
ಸೋನು ನಿಗಮ್ ವಿವಾದಿತ ಹೇಳಿಕೆ ಏನು?
2025ರ ಮೇನಲ್ಲಿ ಬೆಂಗಳೂರಿನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಅಭಿಮಾನಿಯೊಬ್ಬರು ಸೋನು ನಿಗಮ್ ಅವರನ್ನು ಕನ್ನಡ ಹಾಡು ಹಾಡುವಂತೆ ಕೋರಿದ್ದರು. ಆಗ ಈ ರೀತಿಯ ವರ್ತನೆಯಿಂದಲೇ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಂತಹ ಘಟನೆಗಳಿಗೆ ಕಾರಣವಾಗಿದ್ದು ಎಂದು ಗಾಯಕ ಹೇಳಿದ್ದರು. ಅವರ ಹೇಳಿಕೆಗೆ ರಾಜ್ಯದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಅವರ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಆಯೋಜಿಸಲು ಅನುಮತಿ ನೀಡಬಾರದು ಎಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿದ್ದವು.
ಕಾರ್ಯಕ್ರಮಕ್ಕೆ ಸಿಗುತ್ತಾ ಅನುಮತಿ?
ಇದೇ ಅಕ್ಟೋಬರ್ 24 ರಂದು ಸೋನು ನಿಗಮ್ ಅವರ 'ದಿ ರೆವಲ್ಯೂಷನ್ ಇಂಡಿಯಾ ಟೂರ್' ಸಂಗೀತ ಕಾರ್ಯಕ್ರಮ ಬೆಂಗಳೂರಿನ ಬಾಗಲೂರು ರಸ್ತೆಯ ಥಣಿಸಂದ್ರ ಮುಖ್ಯರಸ್ತೆಯಲ್ಲಿರುವ ಭಾರತೀಯ ಮಾಲ್ ಆಫ್ ಬೆಂಗಳೂರು ಆವರಣದಲ್ಲಿ ಸಂಜೆ 7 ಗಂಟೆಗೆ ಆಯೋಜನೆಯಾಗಿದೆ. ಇದಕ್ಕೆ ಇತ್ತೀಚೆಗೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿಎ ನಾರಾಯಣ ಗೌಡ ಅವರು ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಸೋನು ನಿಗಮ್ ಅವರು ಕ್ಷಮೆ ಕೋರಿರುವ ಹಿನ್ನೆಲೆ ಕರ್ನಾಟಕದಲ್ಲಿ ಅವರ ಕಾರ್ಯಕ್ರಮಗಳಿಗೆ ಅನುಮತಿ ಸಿಗುವ ಸಾಧ್ಯತೆ ಇದೆ.