ಬೆಂಗಳೂರು: ತಿಥಿ ಸಿನಿಮಾ ಮೂಲಕ ಮನೆ ಮಾತಾಗಿದ್ದ ನಟ ಗಡ್ಡಪ್ಪ(Gaddappa passes away) ಇಂದು ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಮಂಡ್ಯ ತಾಲೂಕಿನ ನೊದೆಕೊಪ್ಪಲು ಮೂಲದ ಚನ್ನೇಗೌಡ ಅವರು, ತಮ್ಮ ಮೂಲ ಹೆಸರಿಗಿಂತ 'ಗಡ್ಡಪ್ಪ' ಎಂದೇ ನಾಡಿನಾದ್ಯಂತ ಜನಜನಿತರದವರು.
ಕಳೆದ ಒಂದು ತಿಂಗಳ ಹಿಂದೆ ಜಾರಿ ಬಿದ್ದು ಅವರ ಸೊಂಟಕ್ಕೆ ಪೆಟ್ಟಾಗಿತ್ತು. ಇದಾದ ಬಳಿಕ ಅವರು ಶಸ್ತ್ರಚಿಕಿತ್ಸೆಗೂ ಒಳಪಟ್ಟಿದ್ದರು. ಇದರ ಜೊತೆಗೆ ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ತಮ್ಮ ಸ್ವಗ್ರಾಮ ನೊದೆಕೊಪ್ಪಲಿನಲ್ಲಿ ನಿಧನರಾಗಿದ್ದಾರೆ. ಮೃತರ ಪುತ್ರಿ ಶೋಭಾ ಅವರು ಈ ವಿಷಯವನ್ನು ದೃಢಪಡಿಸಿದ್ದು, ಇಂದು ಸಂಜೆ ಸ್ವಗ್ರಾಮ ನೊದೆಕೊಪ್ಪಲಿನಲ್ಲಿ ಗಡ್ಡಪ್ಪ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: OTT Entry Movie: ಕಾಂತಾರ ಸಿನಿಮಾದ ಜೊತೆಗೆ ಸಾಲು ಸಾಲು ಹಿಟ್ ಸಿನಿಮಾ ಒಟಿಟಿಗೆ ಎಂಟ್ರಿ: ಯಾವುದೆಲ್ಲ ಗೊತ್ತಾ?
8 ಸಿನಿಮಾಗಳಲ್ಲಿ ಅಭಿನಯಿಸಿದ್ದ ಗಡ್ಡಪ್ಪ
ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ಪಡೆದ ನಿರ್ದೇಶಕ ರಾಮ್ ರೆಡ್ಡಿ ಅವರ 'ತಿಥಿ' ಚಿತ್ರದ ಮೂಲಕ ಗಡ್ಡಪ್ಪ ಅವರು ಜನಪ್ರಿಯತೆ ಪಡೆದರು. ಈ ಸಿನಿಮಾದಲ್ಲಿನ ಅವರ ಸಹಜ ಅಭಿನಯಕ್ಕೆ ವಿಮರ್ಶಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. 'ತಿಥಿ' ಚಿತ್ರದ ನಂತರ ಅವರು 'ತರ್ಲೆ ವಿಲೇಜ್', 'ಜಾನಿ ಮೇರಾ ನಾಮ್', 'ಹಳ್ಳಿ ಪಂಚಾಯಿತಿ' ಸೇರಿದಂತೆ ಸುಮಾರು 8 ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಗಡ್ಡಪ್ಪ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.