ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

S Janaki: ಸರ್ಕಾರ ಎಸ್. ಜಾನಕಿ ನೆನಪಿಗಾಗಿ ಸ್ಮಾರಕ ನಿರ್ಮಾಣ ಮಾಡಲಿ: ಬಸವರಾಜ ಬೊಮ್ಮಾಯಿ

ಎಸ್. ಜಾನಕಿ ಅವರಿಗೆ ಮೈಸೂರಿನ ಬಗ್ಗೆ ಅಪಾರವಾದ ಒಲವಿತ್ತು. ತಮ್ಮ ಕೊನೆಯ ದಿನಗಳನ್ನು ಮೈಸೂರಿನಲ್ಲೇ ಕಳೆಯಬೇಕೆಂಬ ಇಚ್ಛೆ ಹೊಂದಿದ್ದರು. ಕರ್ನಾಟಕದ ಜನತೆಯ ಹೃದಯದಲ್ಲಿ ಅವರು ಚಿರಸ್ಥಾಯಿಯಾಗಿ ಉಳಿಯಲಿದ್ದಾರೆ. ರಾಜ್ಯ ಸರ್ಕಾರ ಮೈಸೂರಿನಲ್ಲಿ ಎಸ್.‌ ಜಾನಕಿ ಅವರ ನೆನಪಿಗಾಗಿ ಒಂದು ಸುಸಜ್ಜಿತ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

​ಹಾವೇರಿ: ಖ್ಯಾತ ಬಹುಭಾಷಾ ಗಾಯಕಿ ಎಸ್. ಜಾನಕಿ (S Janaki) ಅವರು ಭೌತಿಕವಾಗಿ ಇಂದು ನಮ್ಮನ್ನು ಅಗಲಿದ್ದರೂ, ಅವರು ಹಾಡಿರುವ ಹಾಡುಗಳು ಮತ್ತು ಸಂಗೀತದ ಮೂಲಕ ಕರ್ನಾಟಕದ ಜನತೆಯ ಹೃದಯದಲ್ಲಿ ಅವರು ಚಿರಸ್ಥಾಯಿಯಾಗಿ ಉಳಿಯಲಿದ್ದಾರೆ. ರಾಜ್ಯ ಸರ್ಕಾರ ಮೈಸೂರಿನಲ್ಲಿ ಎಸ್.‌ ಜಾನಕಿ ಅವರ ನೆನಪಿಗಾಗಿ ಒಂದು ಸುಸಜ್ಜಿತ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸಲಹೆ ನೀಡಿದ್ದಾರೆ.

ಹಾವೇರಿಯಲ್ಲಿ ​ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್. ಜಾನಕಿ ಅವರು ಸಂಗೀತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸತತವಾಗಿ ಐದು ದಶಕಗಳಿಗೂ ಹೆಚ್ಚು ಕಾಲ ಅವರು ಸಂಗೀತ ಸೇವೆ ಮಾಡಿದ್ದಾರೆ. ಕನ್ನಡ, ತಮಿಳು, ತೆಲುಗು ಸೇರಿದಂತೆ ಬರೋಬ್ಬರಿ 17 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವ ಅವರು, ಪ್ರತಿಯೊಂದು ಹಾಡಿನಲ್ಲೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಅವರು ಹಾಡಿದ ಎಲ್ಲಾ ಹಾಡುಗಳು ಜನಪ್ರಿಯವಾಗಿವೆ" ಎಂದು ಅವರ ಸಾಧನೆಯನ್ನು ಸ್ಮರಿಸಿದರು.

​ಧ್ವನಿಯ ಏರಿಳಿತ ಅವರ ವಿಶಿಷ್ಟ ಶಕ್ತಿ:

"ಎಸ್. ಜಾನಕಿ ಅವರ ಧ್ವನಿಯ ಬದಲಾವಣೆ ಅಥವಾ ಮಾಡ್ಯುಲೇಶನ್ ಅತ್ಯಂತ ವಿಶಿಷ್ಟವಾಗಿತ್ತು. ಸಣ್ಣ ಮಗುವಿನ ಧ್ವನಿಯಿಂದ ಹಿಡಿದು ವಯೋವೃದ್ಧರ ಧ್ವನಿಯವರೆಗೂ ಎಲ್ಲ ತರಹದ ಹಾಡುಗಳನ್ನು ಹಾಡುವ ಅದ್ಭುತ ಶಕ್ತಿ ಅವರಿಗೆ ಒಲಿದಿತ್ತು. ಅವರು ಸಾಕ್ಷಾತ್ ಸರಸ್ವತಿಯ ಪ್ರತಿರೂಪದಂತಿದ್ದರು. ದೈಹಿಕವಾಗಿ ಅವರು ಇಂದು ನಮ್ಮನ್ನು ಅಗಲಿದ್ದರೂ, ಅವರು ಹಾಡಿರುವ ಹಾಡುಗಳು ಮತ್ತು ಸಂಗೀತದ ಮೂಲಕ ಕರ್ನಾಟಕದ ಜನತೆಯ ಹೃದಯದಲ್ಲಿ ಅವರು ಚಿರಸ್ಥಾಯಿಯಾಗಿ ಉಳಿಯಲಿದ್ದಾರೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ" ಎಂದು ಪ್ರಾರ್ಥಿಸಿದರು.

​ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಿ

ಎಸ್. ಜಾನಕಿ ಅವರಿಗೆ ಮೈಸೂರಿನ ಬಗ್ಗೆ ಅಪಾರವಾದ ಒಲವಿತ್ತು. ತಮ್ಮ ಕೊನೆಯ ದಿನಗಳನ್ನು ಮೈಸೂರಿನಲ್ಲೇ ಕಳೆಯಬೇಕೆಂಬ ಇಚ್ಛೆ ಹೊಂದಿದ್ದ ಅವರು, ತಮ್ಮ ಅಂತಿಮ ಸಂಸ್ಕಾರವೂ ಮೈಸೂರಿನಲ್ಲೇ ನಡೆಯಬೇಕೆಂದು ಬಯಸಿದ್ದರು. ಇದು ಅವರಿಗೆ ಕನ್ನಡಿಗರು ಮತ್ತು ಕರ್ನಾಟಕದ ಮೇಲಿದ್ದ ಪ್ರೀತಿಯನ್ನು ತೋರಿಸುತ್ತದೆ ಎಂದು ಬೊಮ್ಮಾಯಿ ತಿಳಿಸಿದರು.

​ಅವರ ನೆನಪನ್ನು ಜೀವಂತವಾಗಿರಿಸಲು ರಾಜ್ಯ ಸರ್ಕಾರ ಏನು ಮಾಡಬೇಕು ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, "ಮೈಸೂರಿನಲ್ಲಿ ಎಸ್.‌ ಜಾನಕಿ ಅವರ ನೆನಪಿನಲ್ಲಿ ಒಂದು ಸುಸಜ್ಜಿತ ಸ್ಮಾರಕ ನಿರ್ಮಾಣ ಮಾಡಬೇಕು. ಅವರು ಹಾಡಿರುವ ವಿವಿಧ ಪ್ರಕಾರದ ಹಾಡುಗಳ ಸಂಗ್ರಹ, ಅವರು ಹಾಡಿದ ರೀತಿಗಳ ಬಗ್ಗೆ ಸಂಶೋಧನೆ ನಡೆಸಲು ಮತ್ತು ಸಂಗೀತ ಕಲಿಯುವ ಆಸಕ್ತಿಯುಳ್ಳ ಯುವ ಪ್ರತಿಭೆಗಳಿಗೆ ತರಬೇತಿ ಹಾಗೂ ಸ್ಫೂರ್ತಿ ನೀಡುವಂತಹ ವ್ಯವಸ್ಥೆಯನ್ನು ಆ ಸ್ಮಾರಕದಲ್ಲಿ ಕಲ್ಪಿಸಬೇಕು" ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

​ದಸರಾದಲ್ಲಿ ಕಂಬಳ ಸಮಿತಿ ತೀರ್ಮಾನ

ಇದೇ ವೇಳೆ ಮೈಸೂರು ದಸರಾದಲ್ಲಿ ಕಂಬಳ ಕ್ರೀಡೆಯನ್ನು ಆಯೋಜಿಸುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು"ದಸರಾದಲ್ಲಿ ಕಂಬಳ ಆಯೋಜನೆ ಮಾಡುವ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿರುವುದು ಸಹಜ. ಆದರೆ, ಈ ಬಗ್ಗೆ ಅಂತಿಮ ನಿರ್ಧಾರವನ್ನು ಮೈಸೂರು ದಸರಾ ಸಮಿತಿಯೇ ತೆಗೆದುಕೊಳ್ಳಬೇಕಾಗುತ್ತದೆ" ಎಂದು ಸ್ಪಷ್ಟಪಡಿಸಿದರು.