ಬೆಂಗಳೂರು: ಕನ್ನಡದ ಖ್ಯಾತ ಹಾಸ್ಯ ನಟ, ರಂಗಭೂಮಿ ಕಲಾವಿದ ರಾಜು ತಾಳಿಕೋಟಿ (Actor Raju Talikote) ಅವರು ಹೃದಯಾಘಾತದಿಂದ ಸೋಮವಾರ ನಿಧನರಾದರು. ಬಿಗ್ ಬಾಸ್ ಕನ್ನಡ 7ನೇ ಆವೃತ್ತಿಯ ಬಿಗ್‌ಬಾಸ್‌ನಲ್ಲೂ ಸ್ಪರ್ಧಿಸಿದ್ದ ರಾಜು ತಾಳಿಕೋಟಿ ಅವರು, 'ಕಲಿಯುಗದ ಕುಡುಕ' ನಾಟಕದಿಂದ ಜನಪ್ರಿಯರಾಗಿದ್ದರು. ರಂಗಭೂಮಿಗೆ ಬರುವುದಕ್ಕೆ ಮೊದಲು ಹೊಟ್ಟೆಪಾಡಿಗೆ ಹಲವು ಕೆಲಸಗಳನ್ನು ಇವರು ಮಾಡಿದ್ದರು.
ಜಟ್ಟೆಪ್ಪ ಯಂಕಂಚಿ ಮತ್ತು ಮಹಬೂಬಿ ತಾಳಿಕೋಟಿ ದಂಪತಿಯ ನಾಲ್ವರು ಮಕ್ಕಳಲ್ಲಿ ರಾಜು ತಾಳಿಕೋಟಿ ಕೊನೆಯವರು. ತಂದೆ- ತಾಯಿ 'ಖಾಸ್ಗತೇಶ್ವರ ನಾಟ್ಯ ಸಂಘ' ಸ್ಥಾಪಿಸಿದ್ದರು. ತಾಳಿಕೋಟೆ ಖಾಸ್ಗತೇಶ್ವರಮಠದ ಪ್ರಸಾದ ನಿಲಯಕ್ಕೆ ವರ್ಷಕ್ಕೆ ಅರ್ಧ ಚೀಲ ಜೋಳ ₹75 ನೀಡಿ ತಾಯಿ ಶಾಲೆಗೆ ಸೇರಿಸಿದ್ದರು. ಆಗಲೇ ಸಂಗೀತಾಭ್ಯಾಸ ಮಾಡಿದರು. ಆದರೆ ನಾಲ್ಕನೆಯ ತರಗತಿ ಓದುವಾಗ 11ನೇ ವಯಸ್ಸಿನಲ್ಲಿ ತಂದೆ -ತಾಯಿಗಳಿಬ್ಬರೂ ತೀರಿ ಹೋಗಿದ್ದರಿಂದ ರಾಜು ಅವರ ಓದು ಮೊಟಕಾಯಿತು. ಹೊಟ್ಟೆಪಾಡಿಗೆ ಹಲವು ಕೆಲಸಗಳನ್ನು ಮಾಡಬೇಕಾಯಿತು.
ಹೋಟೆಲ್‌ನಲ್ಲಿ ಸಪ್ಲೆಯರ್ ಆಗಿ, ಲಾರಿ ಕ್ಲೀನರ್, ಗೇಟ್ ಕೀಪರ್ ಆಗಿ ಹೀಗೆ ಹೊಟ್ಟೆಪಾಡಿಗಾಗಿ ಹಲವಾರು ಕೆಲಸ ಮಾಡುತ್ತ ಬಂದ ಅವರು, ಚಿತ್ತರಗಿ ನಾಟಕ ಕಂಪನಿಯಲ್ಲಿ ಗೇಟ್ ಕೀಪರ್ ಆಗಿ, ಪ್ರಚಾರ ಕಲಾವಿದನಾಗಿ, ಪರದೆ ಎಳೆಯುತ್ತ ಗ್ರೀನ್ ರೂಂ ಕಲಾವಿದರಾದರು. ಪಾತ್ರಧಾರಿಯೊಬ್ಬ ಕೈ ಕೊಟ್ಟ ವೇಳೆ ಬಣ್ಣ ಹಚ್ಚಿದ ರಾಜು ಅವರು ಮತ್ತೆ ಹಿಂತಿರುಗಿ ನೋಡಲಿಲ್ಲ. ಅವರೊಳಗಿನ ಕಲಾವಿದ ಬೆಳಕಿಗೆ ಬಂದಿದ್ದೇ ತಡ, ತಂದೆ -ತಾಯಿ ಕಟ್ಟಿ ಬೆಳೆಸಿದ್ದ ಖಾಸ್ಗತೇಶ್ವರ ನಾಟ್ಯ ಸಂಘಕ್ಕೆ ಅಣ್ಣನ ಜತೆ ಸೇರಿ 1983ರಲ್ಲಿ ಮರುಜೀವ ತುಂಬಿದರು.
40 ಸಾವಿರಕ್ಕೂ ಅಧಿಕ ಕಲಾಪ್ರದರ್ಶನ ನೀಡಿರುವ ಅವರು ಕುಡುಕರ ಜೀವನವನ್ನು ಹಾಸ್ಯವಾಗಿ ಚಿತ್ರಿಸಿದ 'ಕಲಿಯುಗದ ಕುಡುಕ' ನಾಟಕದಲ್ಲಿ ಕುಡುಕ ವಿನ್ಯಾ ಆಗಿ ಸಂಭಾಷಣೆ, ನಟನೆಯಿಂದ ನಾಡಿನ ಜನಪ್ರಿಯರಾದರು. ಈ ಪ್ರಸಿದ್ಧಿ ಅವರನ್ನು ಚಿತ್ರರಂಗಕ್ಕೂ ಎಳೆದೊಯ್ಯಿತು. ನಿರ್ದೇಶಕ ಆನಂದ್ ಪಿ.ರಾಜು ಅವರ 'ಹೆಂಡ್ತಿ ಅಂದ್ರೆ ಹೆಂಡ್ತಿ' ಚಿತ್ರದಲ್ಲಿ ಅಭಿನಯಿಸುವ ಮೂಲಕ ಸಿನಿರಂಗಕ್ಕೆ ಕಾಲಿಟ್ಟರು. ಯೋಗರಾಜ್ ಭಟ್ಟರ 'ಮನಸಾರೆ' ಚಿತ್ರದಿಂದ ಮತ್ತಷ್ಟು ಪ್ರಸಿದ್ದಿ ಪಡೆದರು. ಮನಸಾರೆ ನಂತರ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.
ರಾಜೇಸಾಬ್ ಮಕ್ತುಮ್‌ಸಾಬ್ ಯೆಂಕಂಚಿ 'ರಾಜು ತಾಳಿಕೋಟೆ' ಆಗಿದ್ದು ಹೇಗೆ?
ರಾಜು ತಾಳಿಕೋಟಿ ಎಂದೇ ಪ್ರಸಿದ್ಧರಾಗಿರುವ ಇವರ ಮೂಲ ಹೆಸರು ರಾಜೇಸಾಬ್ ಮಕ್ತುಮ್‌ಸಾಬ್ ಯೆಂಕಂಚಿ. ಆದರೆ, ಜನ ತಮ್ಮನ್ನು ರಾಜು ರಾಜು ಎಂದೆ ಶಾರ್ಟ್‌ಕಟ್‌ನಲ್ಲಿ ಕರೆಯಲು ಆರಂಭಿಸಿದರು. ಸರ್ ನೇಮ್ ಆದ ಯೆಂಕಂಚಿಯನ್ನು ಬದಿಗಿಟ್ಟು ನನ್ನ ಊರ ಹೆಸರಾದ ತಾಳಿಕೋಟೆಯನ್ನು ಸೇರಿಸಿಕೊಂಡೆ. ಊರಿನ ಹೆಸರಿನೊಂದಿಗೆ ನನ್ನ ಹೆಸರು ಸೇರಿದ್ದರಿಂದ ಪ್ರಸಿದ್ಧಿಯಾದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಈ ಸುದ್ದಿಯನ್ನೂ ಓದಿ | Actor Raju Talikote: ಖ್ಯಾತ ಹಾಸ್ಯ ನಟ ರಾಜು ತಾಳಿಕೋಟಿ ಹೃದಯಾಘಾತದಿಂದ ನಿಧನ
ರಾಜು ತಾಳಿಕೋಟೆ ಅವರ ತಂದೆ ತಾಯಿ ಕೂಡ ರಂಗಭೂಮಿ ಕಲಾವಿದರು. ಅವರದ್ದೇ ಒಂದು ನಾಟಕ ಸಂಘ ಕೂಡ ಇತ್ತು ಎಂದು ರಾಜು ತಾಳಿಕೋಟೆ ಹೇಳಿದ್ದರು. ಬಾಲ್ಯದ ವಿದ್ಯಾಭ್ಯಾಸ ಎಲ್ಲವೂ ಆಗಿದ್ದು ಮಠದಲ್ಲಿ. ಮುಸ್ಲಿಂ ಆಗಿದ್ದರೂ, ಮಠದಲ್ಲಿ ಓದುತ್ತಿದ್ದ ಕಾರಣ ಅಲ್ಲಿಯ ರೀತಿ ನೀತಿಯಂತೇ ಇರಬೇಕಿತ್ತು. ವಿಭೂತಿ ಹಾಕಿಕೊಂಡು ಊಟ ಮಾಡಬೇಕಿತ್ತು. ವಚನಗಳ ಅಭ್ಯಾಸ ಮಾಡಬೇಕಿತ್ತು. ನಾನು ಈಗಲೂ ಕೂಡ ನನ್ನ ಹಿಂದೂ ಸ್ನೇಹಿತರ ಮನೆಗೆ ಹೋದರೆ ವಿಭೂತಿ ಧಾರಣೆ ಮಾಡಿಯೇ ಊಟ ಮಾಡುತ್ತೇನೆ ಎಂದಿದ್ದರು.