Actor Bank Janardhan: ಕನ್ನಡ ಜತೆಗೆ ತುಳು, ತಮಿಳು, ತೆಲುಗು ಚಿತ್ರಗಳಲ್ಲೂ ನಟನೆ; ಬ್ಯಾಂಕ್ ಜನಾರ್ದನ್ ಸಿನಿ ಜರ್ನಿ ಹೇಗಿತ್ತು?
Bank Janardhan Passes Away: ಸ್ಯಾಂಡಲ್‌ವುಡ್‌ಗೆ ಮತ್ತೊಂದು ಸಿಡಿಲಾಘಾತ ಎದುರಾಗಿದ್ದು, ಹಿರಿಯ ನಟ ಬ್ಯಾಂಕ್ ಜನಾರ್ದನ್ ನಿಧನ ಹೊಂದಿದ್ದಾರೆ. ಹಾಸ್ಯನಟರೆಂದೇ ಖ್ಯಾತರಾದ ಅವರು ಕಿರುತೆರೆ, ರಂಗಭೂಮಿಯಲ್ಲಿಯೂ ಸಕ್ರಿಯರಾಗಿದ್ದರು. ಬಹುಭಾಷಾ ನಟರಾಗಿದ್ದ ಅವರ ಸಿನಿಜರ್ನಿ ಹೇಗಿತ್ತು ಎನ್ನುವ ವಿವರ ಇಲ್ಲಿದೆ.

ಬ್ಯಾಂಕ್ ಜನಾರ್ದನ್.

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಮತ್ತೊಂದು ಸಿಡಿಲಾಘಾತ ಎದುರಾಗಿದ್ದು, ಹಿರಿಯ ನಟ ಬ್ಯಾಂಕ್ ಜನಾರ್ದನ್ (Actor Bank Janardhan) ನಿಧನ ಹೊಂದಿದ್ದಾರೆ. ಹಾಸ್ಯನಟರೆಂದೇ ಖ್ಯಾತರಾದ ಅವರು ಹಲವು ಪೋಷಕ ಪಾತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಭಾನುವಾರ ಮಧ್ಯರಾತ್ರಿ 2.30ರ ಸುಮಾರಿಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಟ ಬ್ಯಾಂಕ್ ಜನಾರ್ದನ್ ಕೊನೆಯುಸಿರೆಳೆದಿದ್ದಾರೆ. ಅನುಭವಿ ಕಲಾವಿದರೊಬ್ಬರನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ಬಡವಾಗಿದ್ದು, ಹಲವರು ಕಂಬನಿ ಮಿಡಿದಿದ್ದಾರೆ. ಸುಮಾರು 40 ವರ್ಷಗಳ ಸಿನಿ ಪಯಣದಲ್ಲಿ ಬ್ಯಾಂಕ್ ಜನಾರ್ದನ್ 800ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರದುರ್ಗ ಮೂಲದ ಇವರು 1949ರಲ್ಲಿ ಜನಿಸಿದರು. 1985ರಲ್ಲಿ ತೆರೆಕಂಡ ಕನ್ನಡದ ʼಪಿತಾಮಹʼ ಸಿನಿಮಾದಲ್ಲಿ ಬಣ್ಣ ಹಚ್ಚುವ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಕೆ.ಎಸ್.ಎಲ್.ಸ್ವಾಮಿ ನಿರ್ದೇಶನದ ಈ ಸಿನಿಮಾದಲ್ಲಿ ನಟಿಸಿದ ಬಳಿಕ ಬ್ಯಾಂಕ್ ಜನಾರ್ದನ್ ಬಳಿಕ ಹಿಂದಿರುಗಿ ನೋಡಲೇ ಇಲ್ಲ. ಈ 4 ದಶಕಗಳಲ್ಲಿ ಅವರು ಬರೋಬ್ಬರಿ 850ಕ್ಕೂ ಹೆಚ್ಚು ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ.
ಈ ಸುದ್ದಿಯನ್ನೂ ಓದಿ: Bank Janardhan Passes Away: ಹಾಸ್ಯನಟ ಜನಾರ್ದನ್ ಹೆಸರಿನ ಹಿಂದೆ ಬ್ಯಾಂಕ್ ಸೇರಿಕೊಂಡದ್ದು ಹೇಗೆ?
ರಂಗಭೂಮಿಯಲ್ಲೂ ಸಕ್ರಿಯ
ಬ್ಯಾಂಕ್ ಜನಾರ್ದನ್ ರಂಗಭೂಮಿಯಲ್ಲೂ ಸಕ್ರಿಯರಾಗಿದ್ದರು. ಕನ್ನಡ ಜತೆಗೆ ವಿವಿಧ ಭಾಷೆಗಳಲ್ಲಿಯೂ ಕಾಣಿಸಿಕೊಂಡಿದ್ದರು. 850ಕ್ಕೂ ಹೆಚ್ಚು ಸಿನಿಮಾಗಳಲ್ಲಿ 3 ತೆಲುಗು, 3 ತಮಿಳು, 4 ತುಳು ಚಿತ್ರಗಳೂ ಸೇರಿವೆ. ಉಪೇಂದ್ರ ನಿರ್ದೇಶನದ ʼಶ್ʼ, ʼತರ್ಲೆ ನನ್ ಮಗʼ, ʼಬೆಳ್ಳಿಯಪ್ಪ ಬಂಗಾರಪ್ಪʼ, ʼಗಣೇಶ ಸುಬ್ರಹ್ಮಣ್ಯʼ, ʼಕೌರವʼ ಮುಂತಾದ ಸಿನಿಮಾಗಳಲ್ಲಿನ ಬ್ಯಾಂಕ್ ಜನಾರ್ದನ ಅವರ ಪಾತ್ರ ಗಮನ ಸೆಳೆದಿತ್ತು.
ಕಿರುತೆರೆಯಲ್ಲಿಯೂ ಛಾಪು
ಬ್ಯಾಂಕ್ ಜನಾರ್ದನ್ ಕಿರುತೆರೆಯಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ. ʼಪಾಪ ಪಾಂಡುʼ, ʼಮಾಂಗಲ್ಯʼ, ʼಜೋಕಾಲಿʼ, ʼರೋಬೋ ಫ್ಯಾಮಿಲಿʼ ಮೊದಲಾದ ಧಾರಾವಾಹಿಗಳಲ್ಲಿ ನಟಿಸಿದ್ದರು. ಅದರಲ್ಲಿಯೂ ಹಾಸ್ಯ ಧಾರಾವಾಹಿ ʼಪಾಪ ಪಾಂಡುʼವಿನ ಪಾತ್ರ ಬಹಳಷ್ಟು ಜನಪ್ರಿಯವಾಗಿತ್ತು. ಇಂದಿಗೂ ಕಿರುತೆರೆ ವೀಕ್ಷಕರು ಈ ಪಾತ್ರವನ್ನು ನೆನಪಿಸಿಕೊಳ್ಳುತ್ತಾರೆ.
ಬಸವರಾಜ ಬೊಮ್ಮಾಯಿ ಅವರ ಪೋಸ್ಟ್ ಇಲ್ಲಿದೆ:
ಕನ್ನಡ ಚಿತ್ರರಂಗದ ಹಾಸ್ಯ ಕಲಾವಿದ ಬ್ಯಾಂಕ್ ಜನಾರ್ದನ ಅವರು ನಿಧನ ಹೊಂದಿರುವ ಸುದ್ದಿ ತಿಳಿದು ಮನಸ್ಸಿಗೆ ಅತ್ಯಂತ ದುಃಖವಾಗಿದೆ.
— Basavaraj S Bommai (@BSBommai) April 14, 2025
ಹಾಸ್ಯ ನಟರಾಗಿ ಸುಮಾರು 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಮನೆಮಾತಾಗಿದ್ದರು. ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗ ಒಬ್ಬ ಹಿರಿಯ ಕಲಾವಿದನನ್ನು ಕಳೆದುಕೊಂಡಂತಾಗಿದೆ.
ಅವರ ಅಗಲಿಕೆಯ ದುಃಖವನ್ನು ಅವರ… pic.twitter.com/4cmwhWhKQv
ಗಣ್ಯರ ಕಂಬನಿ
ಬ್ಯಾಂಕ್ ಜನಾರ್ದನ್ ಅವರ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಹಿರಿಯ ನಟಿ ಸುಧಾರಾಣಿ ಬ್ಯಾಂಕ್ ಜನಾರ್ದನ್ ಸಾವಿಗೆ ಸಂತಾಪ ಸೂಚಿಸಿದ್ದಾರೆ. ʼʼಇತ್ತೀಚೆಗೆ ನನಗೆ ಜನಾರ್ದನ್ ಅವರನ್ನು ಭೇಟಿ ಮಾಡುವ ಅವಕಾಶ ಸಿಗಲೇ ಇಲ್ಲʼʼ ಎಂದು ನೋವು ತೋಡಿಕೊಂಡಿದ್ದಾರೆ. ಬ್ಯಾಂಕ್ ಜನಾರ್ಧನ್ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರೂ ನೋವು ವ್ಯಕ್ತಪಡಿಸಿದ್ದಾರೆ. ''ಕನ್ನಡ ಚಿತ್ರರಂಗದ ಹಾಸ್ಯ ಕಲಾವಿದ ಬ್ಯಾಂಕ್ ಜನಾರ್ದನ ಅವರು ನಿಧನ ಹೊಂದಿರುವ ಸುದ್ದಿ ಮನಸ್ಸಿಗೆ ಅತ್ಯಂತ ದುಃಖವಾಯಿತು. ಹಾಸ್ಯ ನಟರಾಗಿ ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಮನೆಮಾತಾಗಿದ್ದರು. ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗ ಒಬ್ಬ ಹಿರಿಯ ಕಲಾವಿದನನ್ನು ಕಳೆದುಕೊಂಡಂತಾಗಿದೆʼʼ ಎಂದಿದ್ದಾರೆ.
ʼʼಕನ್ನಡ ಚಿತ್ರರಂಗದ ಹಿರಿಯ ನಟರು, ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅನೇಕ ವೈವಿದ್ಯಮಯ ಪಾತ್ರಗಳಲ್ಲಿ ನಟಿಸಿದ್ಧ ಬ್ಯಾಂಕ್ ಜನಾರ್ದನ್ ಅವರ ನಿಧನದ ವಾರ್ತೆ ಕೇಳಿ ಬಹಳ ದುಃಖವಾಯಿತುʼʼ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ಸಂತಾಪ ಸೂಚಿಸಿದ್ದಾರೆ. ಇನ್ನು ಸಚಿವ ಶಿವರಾಜ ತಂಗಡಗಿ ಕೂಡ ಆಘಾತ ವ್ಯಕ್ತಪಡಿಸಿದ್ದಾರೆ.