ಬೆಂಗಳೂರು: ಈ ವರ್ಷದ ಪ್ರಥಮಾರ್ಧದಲ್ಲಿ ಸೋತು ಸೊರಗಿದ್ದ ಸ್ಯಾಂಡಲ್‌ವುಡ್ ಇದೀಗ ಚಿಗಿತುಕೊಂಡಿದೆ. ʼಸು ಫ್ರಮ್ ಸೋʼ, ʼಏಳುಮಲೆʼ, ಮತ್ತು 'ಎಕ್ಕʼ ಚಿತ್ರಗಳ ಯಶಸ್ಸಿನ ಬಳಿಕ ಇದೀಗ ʼಕಾಂತಾರ: ಚಾಪ್ಟರ್ 1' (Kantara: Chapter 1) ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಅಕ್ಟೋಬರ್ 2ರಂದು ಭಾರತ ಸೇರಿದಂತೆ ಒಟ್ಟು 30 ದೇಶಗಳಲ್ಲಿ ತೆರೆಕಂಡಿದ್ದು, ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಹಲವು ದಿಗ್ಗಜ ಕಲಾವಿದರ ಸಿನಿಮಾ ಗಳಿಕೆಯನ್ನು ಮೀರಿಸಿದೆ (Kantara Chapter 1 Collection). ಅದರಲ್ಲಿಯೂ ಮೊದಲ ದಿನ ಮಾರಾಟವಾದ ಟಿಕೆಟ್‌ಗಳ ಸಂಖ್ಯೆ ಹೊಸದೊಂದು ಇತಿಹಾಸ ಸೃಷ್ಟಿಸಿದೆ. ಈ ಬಗ್ಗೆ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ (Hombale Films) ಅಧಿಕೃತವಾಗಿ ಪ್ರಕಟಿಸಿದೆ.
ʼಕಾಂತಾರ: ಚಾಪ್ಟರ್ 1ʼ ರಿಲೀಸ್ ಆದ ದಿನ ದೇಶಾದ್ಯಂತ ಬುಕ್ ಮೈ ಶೋ ವೆಬ್‌ಸೈಟ್ ಒಂದರಲ್ಲೇ 1.28 ಮಿಲಿಯನ್ (12,80,000) ಟಿಕೆಟ್ ಬಿಕರಿಯಾಗಿದೆ. ಆ ಮೂಲಕ 2025ರಲ್ಲಿ ಮೊದಲ ದಿನ ಅತೀ ಹೆಚ್ಚು ಸೇಲ್ ಆದ ಚಿತ್ರದ ಟಿಕೆಟ್ ಇದು ಎನಿಸಿಕೊಂಡಿದೆ. ಕನ್ನಡ ಜತೆಗೆ ಹಿಂದಿ, ತಮಿಳು, ತೆಲುಗು, ಮಯಲಾಳಂ, ಬೆಂಗಾಳಿ ಮತ್ತು ಇಂಗ್ಲಿಷ್‌ನಲ್ಲಿ ಚಿತ್ರ ತೆರೆಕಂಡಿದೆ. ದೇಶದಲ್ಲಿ ಮೊದಲ ದಿನದ ಕಲೆಕ್ಷನ್ ಒಟ್ಟು 60 ಕೋಟಿ ರೂ. ದಾಟಿದೆ.
ಈ ಸುದ್ದಿಯನ್ನೂ ಓದಿ: Kantara Chapter 1 Review: ಕಾಂತಾರ ಚಾಪ್ಟರ್ 1 ಎಂಬ ಮೂರು ಗಂಟೆಗಳ ರೋಮಾಂಚನ!
ಮೊದಲ ಯಾವ ಭಾಷೆಯಲ್ಲಿ ಎಷ್ಟು ಕಲೆಕ್ಷನ್?
ಕನ್ನಡದಲ್ಲಿ 18 ಕೋಟಿ ರೂ., ಹಿಂದಿಯಲ್ಲಿ 19.5 ಕೋಟಿ ರೂ., ತೆಲುಗಿನಲ್ಲಿ 12.5 ಕೋಟಿ ರೂ., ತಮಿಳಿನಲ್ಲಿ 5.25 ಕೋಟಿ ರೂ. ಮತ್ತು ಮಲಯಾಳಂನಲ್ಲಿ 4.75 ಕೋಟಿ ರೂ. ಮೊದಲ ದಿನ ದೋಚಿಕೊಂಡಿದೆ. ಸದ್ಯ ಚಿತ್ರ ನೋಡಿದವರೆಲ್ಲ ಪಾಸಿಟಿವ್ ಪ್ರತಿಕ್ರಿಯೆ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಕಲೆಕ್ಷನ್ ಹೆಚ್ಚಾಗುವ ನಿರೀಕ್ಷೆ ಇದೆ. ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನಕ್ಕೆ ಪ್ರೇಕ್ಷಕರು ಪೂರ್ಣಾಂಕ ನೀಡಿದ್ದು, ಸಿನಿಮಾಟೋಗ್ರಫಿ ಮತ್ತು ಸಂಗೀತ, ಹಿನ್ನೆಲೆ ಸಂಗೀತವನ್ನೂ ಮೆಚ್ಚಿಕೊಂಡಿದ್ದಾರೆ. ಆ ಮೂಲಕ ವರ್ಷ ಅತೀ ಹೆಚ್ಚು ಗಳಿಸಿದ ಚಿತ್ರದ ಸಾಲಿನಲ್ಲಿ ಸ್ಥಾನ ಪಡೆದುಕೊಳ್ಳುವುದು ಖಚಿತವಾದಂತಾಗಿದೆ.
2022ರಲ್ಲಿ ತೆರೆಕಂಡ ʼಕಾಂತಾರʼ ಚಿತ್ರದ ಪ್ರೀಕ್ವೆಲ್ ಇದಾಗಿದ್ದು, ಈ ಕಾರಣಕ್ಕೆ ಘೋಷಣೆಯಾದಾಗಿನಿಂದಲೇ ಕುತೂಹಲ ಕೆರಳಿಸಿತ್ತು. ಹೊಂಬಾಳೆ ಫಿಲ್ಮ್ಸ್ ಅದ್ಧೂರಿಯಾಗಿ ಚಿತ್ರ ನಿರ್ಮಿಸಿದ್ದು, ರುಕ್ಮಿಣಿ ವಸಂತ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮಲಯಾಳಂ ನಟ ಜಯರಾಮ್, ರಾಕೇಶ್ ಪೂಜಾರಿ, ಗುಲ್ಶನ್ ದೇವಯ್ಯ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಮೊದಲ ದಿನ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಚಿತ್ರಗಳಪಟ್ಟಿ
ʼಆರ್‌ಆರ್‌ಆರ್ʼ-223.5 ಕೋಟಿ ರೂ.
ʼಬಾಹುಬಲಿ 2ʼ-214.5 ಕೋಟಿ ರೂ.
ʼಕಲ್ಕಿ 2898 ಎಡಿʼ-191.5 ಕೋಟಿ ರೂ.
ʼಪುಷ್ಪ 2ʼ-180 ಕೋಟಿ ರೂ.
ʼಕೆಜಿಎಫ್ 2ʼ- 164.5 ಕೋಟಿ ರೂ.
ʼಆದಿಪುರುಷ್ʼ-136.8 ಕೋಟಿ ರೂ.
ʼಸಾಹೋʼ-125.6 ಕೋಟಿ ರೂ.
ʼ2.0ʼ-105.6 ಕೋಟಿ ರೂ.
ʼಪಠಾಣ್ʼ-104.8 ಕೋಟಿ ರೂ.
ʼಜೈಲರ್ʼ-91.2 ಕೋಟಿ ರೂ.