ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kantara: Chapter 1: 'ಕಾಂತಾರ: ಚಾಪ್ಟರ್‌ 1' ಹೊಸ ಪೋಸ್ಟರ್‌ ಔಟ್‌; ಐಮ್ಯಾಕ್ಸ್‌ನಲ್ಲಿ ರಿಲೀಸ್‌ ಆಗಲಿದೆ ರಿಷಬ್‌ ಶೆಟ್ಟಿ ಚಿತ್ರ

Rishab Shetty: ಬಿಡುಗಡೆಗೆ ದಿನಗಣನೆ ಆರಂಭವಾಗಿರುವ ರಿಷಬ್‌ ಶೆಟ್ಟಿ-ಹೊಂಬಾಳೆ ಫಿಲ್ಮ್ಸ್‌ ಕಾಂಬಿನೇಷನ್‌ನ ʼಕಾಂತಾರ: ಚಾಪ್ಟರ್‌ 1' ಚಿತ್ರ ಸರ್‌ಪ್ರೈಸ್‌ ಗಿಫ್ಟ್‌ ನೀಡಿದೆ. ಹೊಸ ಪೋಸ್ಟರ್‌ ರಿಲೀಸ್‌ ಮಾಡಿ ಪ್ರೇಕ್ಷಕರ ಕುತೂಹಲವನ್ನು ಸಿನಿಮಾತಂಡ ಮತ್ತಷ್ಟು ಹೆಚ್ಚಿಸಿದೆ. ಜತೆಗೆ ಚಿತ್ರ ಐಮ್ಯಾಕ್ಸ್‌ ಸ್ಕ್ರೀನ್‌ನಲ್ಲಿ ತೆರೆಗೆ ಬರುವುದಾಗಿ ತಿಳಿಸಿದೆ.

ಬೆಂಗಳೂರು: ಸಿನಿಪ್ರೇಕ್ಷಕರನ್ನು ಹೊಸದೊಂದ ಪ್ರಪಂಚಕ್ಕೆ ಕರೆದೊಯ್ಯಲು ಸ್ಯಾಂಡಲ್‌ವುಡ್‌ ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ (Rishab Shetty) ಸಜ್ಜಾಗಿದ್ದಾರೆ. ಸರಿಯಾಗಿ 3 ವರ್ಷಗಳ ಹಿಂದೆ ʼಕಾಂತಾರʼ (Kantara) ಚಿತ್ರದಲ್ಲಿ ತುಳುನಾಡಿನ ವಿಶಿಷ್ಟ ಭೂತಾರಾಧನೆ, ಕರಾವಳಿಯ ಅನನ್ಯ ಸಂಸ್ಕೃತಿಯನ್ನು ಪರಿಚಯಿಸಿದ್ದ ಅವರು ಈ ಬಾರಿ ʼಕಾಂತಾರ: ಚಾಪ್ಟರ್‌ 1' (Kantara: Chapter 1) ಮೂಲಕ ಮತ್ತೊಂದು ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಘೋಷಣೆಯಾದಾಗಿನಿಂದಲೇ ಗಮನ ಸೆಳೆದ ಈ ಚಿತ್ರ ಅಕ್ಟೋಬರ್‌ 2ರಂದು ಸುಮಾರು 30 ದೇಶಗಳಲ್ಲಿ, 7 ಭಾಷೆಗಳಲ್ಲಿ ರಿಲೀಸ್‌ ಆಗಲಿದೆ. ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಇದೀಗ ಚಿತ್ರತಂಡ ಹೊಸ ಪೋಸ್ಟರ್‌ ಹೊರತಂದಿದೆ.

ʼಕಾಂತಾರʼ ಚಿತ್ರದ ಪ್ರೀಕ್ವೆಲ್‌ ಆಗಿರುವ ಇದರಲ್ಲಿ ರಿಷಬ್‌ ಶೆಟ್ಟಿ ತುಳುನಾಡ ಜಾನಪದ, ಅಲ್ಲಿನ ಆಚಾರ-ವಿಚಾರ, ನಂಬಿಕೆಗೆ ದೃಶ್ಯ ರೂಪ ನೀಡಿದ್ದಾರೆ. ಇದೀಗ ರಿಲೀಸ್‌ ಆಗಿರುವ ಪೋಸ್ಟರ್‌ನಲ್ಲಿ ಅದರ ಸೂಚನೆ ಸಿಕ್ಕಿದೆ. ಅವರು ತನ್ಮಯವಾಗಿ ಕಣ್ಣು ಮುಚ್ಚಿಕೊಂಡು ಡೋಲು ಬಡಿಯುತ್ತಿರುವುದು ಪೋಸ್ಟರ್‌ನಲ್ಲಿ ಕಂಡು ಬಂದಿದೆ. ಅವರ ಹಿನ್ನೆಲೆಯಲ್ಲಿ ಪಂಜು ಹಿಡಿದುಕೊಂಡಿರುವ ಜನಸಮೂಹ ನಿಂತಿದೆ. ಹಣೆಗೆ ಭಸ್ಮ ಬಳಿದು, ಕೇಸರಿ ವಸ್ತ್ರ ತೊಟ್ಟು ಅವರು ಭೈರಾಗಿಯ ಅವತಾರ ತಾಳಿದ್ದಾರೆ.

ರಿಷಬ್‌ ಶೆಟ್ಟಿ ಅವರ ಪೋಸ್ಟ್:‌



ಈ ಸುದ್ದಿಯನ್ನೂ ಓದಿ: Kantara Chapter 1: ʼಕಾಂತಾರʼಕ್ಕಿಂತ ಹಿರಿದಾಗಿರಲಿದೆ ಚಾಪ್ಟರ್‌ 1; ರನ್‌ ಟೈಮ್‌ ರಿವೀಲ್‌: ಪ್ರೀಮಿಯರ್‌ ಶೋ ಡೇಟ್‌ ಫಿಕ್ಸ್‌?

ಐಮ್ಯಾಕ್ಸ್‌ನಲ್ಲಿ ತೆರೆಗೆ

ವಿಶಿಷ್ಟವಾಗಿ ಮೂಡಿಬಂದಿರುವ ಈ ಚಿತ್ರವನ್ನು ಇನ್ನಷ್ಟು ವಿಶೇಷವಾಗಿ ತೆರೆಗೆ ತರಲು ಚಿತ್ರತಂಡ ಸಜ್ಜಾಗಿದೆ. ಹೊಂಬಾಳೆ ಫಿಲ್ಮ್ಸ್‌ ಅದ್ಧೂರಿ ಬಜೆಟ್‌ನಲ್ಲಿ ನಿರ್ಮಿಸಿರುವ ಈ ಸಿನಿಮಾವನ್ನು ಐಮ್ಯಾಕ್ಸ್‌ ಸ್ಕ್ರೀನ್‌ನಲ್ಲಿ ತೆರೆಗೆ ತರಲಾಗುತ್ತದೆ. ಐಮ್ಯಾಕ್ಸ್‌ ಎಂದರೆ ಮೋಷನ್‌ ಪಿಕ್ಚರ್‌ ಪ್ರೊಜೆಕ್ಷನ್‌ ಸಿಸ್ಟಮ್‌ ಆಗಿದ್ದು, ಅದ್ಭುತ ದೃಶ್ಯಗಳು ಇದರಲ್ಲಿ ಮೂಡಿ ಬರುತ್ತವೆ. ವಿಶೇಷವಾದ ಧ್ವನಿಯ ಎಫೆಕ್ಟ್‌ ಕೂಡ ಇದರಲ್ಲಿರುತ್ತದೆ. ಆ ಮೂಲಕ ಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತದೆ. ಹಾಲಿವುಡ್‌ನ ಬಿಗ್‌ ಬಜೆಟ್‌ ಚಿತ್ರಗಳು ಈ ತ್ರಂತ್ರಜ್ಞಾನದ ಮೂಲಕವೇ ತೆರೆಗೆ ಬರುತ್ತವೆ.

ʼಕಾಂತಾರ: ಚಾಪ್ಟರ್‌ 1' ಸಿನಿಮಾ 3ನೇ ಶತಮಾನದ ಕಥೆಯನ್ನು ಒಳಗೊಂಡಿದೆ. ಕದಂಬ ರಾಜರ ಕಾಲದಲ್ಲಿ ಮುಖ್ಯವಾಗಿ ಬನವಾಸಿ ಕಾಡಿನಲ್ಲಿ ನಡೆಯುವ ಮುಖ್ಯ ಘಟನೆಯ ಸುತ್ತ ಕಥೆ ಸಾಗಲಿದೆ. ರಿಷಬ್‌ ಶೆಟ್ಟಿ ನಾಗಸಾಧುವಾಗಿ ಕಾಣಿಸಿಕೊಳ್ಳಲಿದ್ದು, ಇದಕ್ಕಾಗಿ ಕುದುರೆ ಸವಾರಿ, ಕಳರಿಪಯಟ್ಟು ಕಲಿತಿದ್ದಾರೆ. ಡ್ಯೂಪ್‌ ಬಳಸದೆ ಸ್ವತಃ ಅವರೇ ಸಾಹಸ ದೃಶ್ಯಗಳಲ್ಲಿ ನಟಿಸಿದ್ದಾರೆ. ಇದರ ಜತೆಗೆ ಪಂಜುರ್ಲಿ ದೈವದ ಹುಟ್ಟು ಹೇಗಾಯಿತು ಎನ್ನುವ ಜಾನಪದ ನಂಬಿಕೆಯನ್ನು ಕಣ್ಣಿಗೆ ಕಟ್ಟುವಂತೆ ರಿಷಬ್‌ ಶೆಟ್ಟಿ ತೆರೆಮೇಲೆ ತಂದಿದ್ದಾರೆ ಎನ್ನಲಾಗಿದೆ. ಅದರಲ್ಲಿಯೂ ಕ್ಲೈಮ್ಯಾಕ್ಸ್‌ನಲ್ಲಿ ಬರು ಯುದ್ಧದ ದೃಶ್ಯ ಹೈಲೈಟ್‌ ಆಗಿರಲಿದೆಯಂತೆ. ಭಾರತೀಯ ಚಿತ್ರರಂಗದಲ್ಲೇ ಅಪರೂಪದ ದೃಶ್ಯಗಳಲ್ಲಿ ಇದೂ ಒಂದು ಎನಿಸಿಕೊಳ್ಳಲಿದೆ ಎನ್ನಲಾಗುತ್ತಿದೆ. ನಟನೆಯ ಜತೆಗೆ ನಿರ್ದೇಶನದ ಜವಾಬ್ದಾರಿ ರಿಷಬ್‌ ಶೆಟ್ಟಿ ಅವರದ್ದೇ ಎನ್ನುವುದು ವಿಶೇಷ.

ಮೂಲಗಲ ಪ್ರಕಾರ ʼಕಾಂತಾರ ಚಾಪ್ಟರ್‌ 1ʼ ಚಿತ್ರವನ್ನು ಬರೋಬ್ಬರಿ 125 ಕೋಟಿ ರೂ. ವೆಚ್ಚದಲ್ಲಿ ತಯಾರಿಸಲಾಗಿದೆ. ಇದೀಗ ಅಷ್ಟೂ ಹಣ ಬಿಡುಗಡೆ ಮುನ್ನವೇ ನಿರ್ಮಾಪಕರ ಕೈ ಸೇರಿದೆ. ಒಟಿಟಿ ಹಕ್ಕನ್ನು ಅಮೆಜಾನ್‌ ಪ್ರೈಮ್‌ ವಿಡಿಯೊ 125 ಕೋಟಿ ರೂ.ಗೆ ಖರೀದಿಸಿದೆ ಎಂದು ವರದಿಯೊಂದು ತಿಳಿಸಿದೆ. ಇನ್ನು ಚಿತ್ರದಲ್ಲಿ ನಾಯಕಿಯಾಗಿ ರುಕ್ಮಿಣಿ ವಸಂತ್‌ ನಟಿಸಿದ್ದು, ರಾಣಿ ಕನಕವತಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರಕ್ಕೂ ಸಾಕಷ್ಟು ಪ್ರಾಮುಖ್ಯತೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಈಗಾಗಲೇ ಚಿತ್ರ ಸಾಕಷ್ಟು ಕ್ರೇಝ್‌ ಹುಟ್ಟು ಹಾಕಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ಮತ್ತೊಮ್ಮೆ ಸ್ಯಾಂಡಲ್‌ವುಡ್‌ ಮಿಂಚುವ ಎಲ್ಲ ಲಕ್ಷಣಗಳಿವೆ.