ಬೆಂಗಳೂರು: ಹೊಂಬಾಳೆ ಫಿಲ್ಸ್ಮ್ ನಿರ್ಮಾಣದ, ರಿಷಬ್ ಶೆಟ್ಟಿ ನಟನೆ, ನಿರ್ದೇಶನ ‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ (Kantara Chapter 1) ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಟಾಲಿವುಡ್, ಬಾಲಿವುಡ್ ಸೇರಿ ವಿವಿಧ ಚಿತ್ರರಂಗಗಳ ಪ್ರಮುಖರು ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಇದೀಗ ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ಅವರು (Actor Yash,) ಚಿತ್ರವನ್ನು ವೀಕ್ಷಿಸಿ, ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ ಎಂದು ಹೊಗಳಿದ್ದಾರೆ.
ರಿಷಬ್ ಶೆಟ್ಟಿಯವರೇ, ನಿಮ್ಮ ದೃಢಸಂಕಲ್ಪ, ಸಾಮರ್ಥ್ಯ ಮತ್ತು ಸಮರ್ಪಣೆ ಸಿನಿಮಾದ ಪ್ರತಿ ಚೌಕಟ್ಟಿನಲ್ಲೂ ಸ್ಪಷ್ಟವಾಗಿ ಗೋಚರಿಸುತ್ತದೆ. ಬರಹಗಾರ, ನಿರ್ದೇಶಕ ಮತ್ತು ನಟನಾಗಿ, ನಿಮ್ಮ ದೃಷ್ಟಿಕೋನವು ಪರದೆಯ ಮೇಲೆ ನಿಜವಾಗಿಯೂ ತಲ್ಲೀನಗೊಳಿಸುವ ಅನುಭವವಾಗಿ ರೂಪಾಂತರಗೊಂಡಿದೆ’ ಎಂದು ಯಶ್ ಹೇಳಿದ್ದಾರೆ.
ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೂ ಶುಭಾಶಯ ತಿಳಿಸಿರುವ ಯಶ್, ‘ನಿಮ್ಮ ದೂರದೃಷ್ಟಿ, ರಿಷಬ್ ಅವರ ಯೋಜನೆಗೆ ಬೆಂಬಲಿಸಿದ ರೀತಿ, ಕನ್ನಡ ಚಿತ್ರರಂಗದ ಮಟ್ಟವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದೆ’ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ | Kantara Chapter 1: ಭಾರತೀಯ ಚಿತ್ರರಂಗದಲ್ಲೇ ಹೊಸದೊಂದು ಇತಿಹಾಸ ಬರೆದ ʼಕಾಂತಾರ: ಚಾಪ್ಟರ್ 1'; ಮೊದಲ ದಿನ ಸೇಲ್ ಆದ ಟಿಕೆಟ್ ಎಷ್ಟು?
ಇನ್ನು ರುಕ್ಮಿಣಿ ವಸಂತ್ ಮತ್ತು ಗುಲ್ಶನ್ ದೇವಯ್ಯ ಅವರು ಅದ್ಭುತವಾಗಿ ಅಭಿನಯಿಸಿದ್ದಾರೆ. ಅದೇ ರೀತಿ ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಕಶ್ಯಪ್ ಕ್ಯಾಮೆರಾ, ಜಯರಾಂ, ಪ್ರಕಾಶ್ ತುಮ್ಮಿನಾಡ್, ಪ್ರಮೋದ್ ಶೆಟ್ಟಿ ಅವರ ನಟನೆಯನ್ನು ಹೊಗಳಿರುವ ಯಶ್, ಅಗಲಿದ ನಟ ರಾಕೇಶ್ ಪೂಜಾರಿಯ ನಟನೆಯನ್ನೂ ಸಹ ಮೆಚ್ಚಿಕೊಂಡಿದ್ದಾರೆ. ಅಂತಿಮವಾಗಿ ‘ನೀವೆಲ್ಲರೂ ಸೇರಿ ಒಂದು ಅದ್ಭುತವಾದ ಸಿನಿಮಾ ಕಟ್ಟಿಕೊಟ್ಟಿದ್ದೀರಿ’ ಎಂದಿದ್ದಾರೆ.