ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರೂರ್‌ ದುರಂತಕ್ಕೆ ಮಿಡಿದ ಹೊಂಬಾಳೆ ಫಿಲ್ಮ್ಸ್‌; ಚೆನ್ನೈಯಲ್ಲಿ ನಾಳೆ ಆಯೋಜಿಸಿದ್ದ ʼಕಾಂತಾರ: ಚಾಪ್ಟರ್‌ 1' ಚಿತ್ರದ ಪ್ರಮೋಷನಲ್‌ ಇವೆಂಟ್‌ ಕ್ಯಾನ್ಸಲ್‌

Kantara: Chapter 1: ತಮಿಳುನಾಡಿನ ಕರೂರ್‌ ನಗರದಲ್ಲಿ ನಡೆದ ನಟ-ರಾಜಕಾರಣಿ ವಿಜಯ್‌ ಅವರ ರಾಜಕೀಯ ರ‍್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಸಿಲುಕಿ ಸುಮಾರು 40 ಮಂದಿ ಮೃತಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಚೆನ್ನೈಯಲ್ಲಿ ಸೆಪ್ಟೆಂಬರ್‌ 30ರಂದು ಆಯೋಜಿಸಿದ್ದ ʼಕಾಂತಾರ: ಚಾಪ್ಟರ್‌ 1' ಪ್ರಮೋಷನ್‌ ಕಾರ್ಯಕ್ರಮ ರದ್ದುಗೊಳಿಸಲಾಗಿದೆ.

ಚೆನ್ನೈಯಲ್ಲಿ ಆಯೋಜಿಸಿದ್ದ ʼಕಾಂತಾರ' ಚಿತ್ರದ ಪ್ರಮೋಷನಲ್‌ ಕ್ಯಾನ್ಸಲ್‌

-

Ramesh B Ramesh B Sep 29, 2025 9:15 PM

ಚೆನ್ನೈ: ತಮಿಳುನಾಡಿನ ಕರೂರ್‌ ನಗರದಲ್ಲಿ (Karur Stampede) ನಡೆದ ನಟ-ರಾಜಕಾರಣಿ ವಿಜಯ್‌ (Vijay) ಅವರ ರಾಜಕೀಯ ರ‍್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಸಿಲುಕಿ ಸುಮಾರು 40 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ದೇಶಾದ್ಯಂತ ಈ ಘಟನೆ ಸಂಚಲನ ಸೃಷ್ಟಿಸಿದ್ದು, ಹಲವರು ಕಂಬನಿ ಮಿಡಿದಿದ್ದಾರೆ. ಈ ಮಧ್ಯೆ ಕನ್ನಡದ ಹೊಂಬಾಳೆ ಫಿಲ್ಮ್ಸ್‌ (Hombale Films) ಮುಖ್ಯ ನಿರ್ಧಾರ ತೆಗೆದುಕೊಂಡಿದ್ದು, ಸೆಪ್ಟೆಂಬರ್‌ 30ರಂದು ಚೆನ್ನೈಯಲ್ಲಿ ಆಯೋಜಿಸಿರುವ ʼಕಾಂತಾರ: ಚಾಪ್ಟರ್‌ 1' (Kantara: Chapter 1) ಚಿತ್ರದ ಪ್ರಮೋಷನ್‌ ಕಾರ್ಯಕ್ರಮವನ್ನು ರದ್ದುಗೊಳಿಸಿದೆ. ಜತೆಗೆ ಕರೂರು ದುರಂತದಲ್ಲಿ ಮೃತಪಟ್ಟವರ ದುಃಖಕ್ಕೆ ಸ್ಪಂದಿಸಿದೆ.

ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್‌ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದೆ. ʼʼಇತ್ತೀಚೆಗೆ ನಡೆದ ಆಘಾತಕಾರಿ ಘಟನೆಯಿಂದ ತೀವ್ರ ದುಃಖವಾಗಿದ್ದು, ಚೆನ್ನೈಯಲ್ಲಿ ನಾಳೆ ನಿಗದಿಯಾಗಿದ್ದ ʼಕಾಂತಾರ: ಚಾಪ್ಟರ್‌ 1ʼ ಪ್ರಮೋಷನ್‌ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಸಂತ್ರಸ್ತರ ನೋವಿನಲ್ಲೂ ನಾವು ಭಾಗಿಯಾಗುತ್ತೇವೆ. ಅವರಿಗಾಗಿ ಪ್ರಾರ್ಥಿಸುತ್ತೇವೆ. ತಮಿಳುನಾಡಿನ ಪ್ರೇಕ್ಷಕರನ್ನು ಸರಿಯಾದ ಸಮಯದಲ್ಲಿ ಭೇಟಿಯಾಗುತ್ತೇವೆʼʼ ಎಂದು ಹೇಳಿದೆ.

ಹೊಂಬಾಳೆ ಫಿಲ್ಮ್ಸ್‌ನ ಎಕ್ಸ್‌ ಪೋಸ್ಟ್‌:



ಈ ಸುದ್ದಿಯನ್ನೂ ಓದಿ: Rishab Shetty: ಹೈದರಾಬಾದ್‌ನಲ್ಲಿ ಕನ್ನಡದಲ್ಲೇ ಮಾತನಾಡಿದ ರಿಷಬ್‌ ಶೆಟ್ಟಿ; ತೆಲುಗು ಪ್ರೇಕ್ಷಕರು ಗರಂ

ಹೊಂಬಾಳೆ ಫಿಲ್ಮ್ಸ್‌ನ ಈ ನಿರ್ಧಾರಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಉತ್ತಮ ತೀರ್ಮಾನ, ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು ಎಂದು ಬಹುತೇಕರು ಕಮೆಂಟ್‌ ಮಾಡಿದ್ದಾರೆ. ಸೆಪ್ಟೆಂಬರ್‌ 28ರಂದು ಹೈದರಾಬಾದ್‌ನಲ್ಲಿ ನಡೆದ ಕಾಯಕ್ರಮ ಭಾರಿ ಯಶಸ್ವಿಯಗಿತ್ತು. ಸಾವಿರಾರು ಮಂದಿ ಇದರಲ್ಲಿ ಪಾಲ್ಗೊಂಡಿದ್ದರು.

ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ʼಕಾಂತಾರ: ಚಾಪ್ಟರ್‌ 1' ಚಿತ್ರ ಅಕ್ಟೋಬರ್‌ 2ರಂದು ವಿಶ್ವಾದ್ಯಂತ ತೆರೆಗೆ ಬರಲಿದ್ದು, ಪ್ರಚಾರ ಕಾರ್ಯ ಆರಂಭವಾಗಿದೆ. 2022ರಲ್ಲಿ ರಿಲೀಸ್‌ ಆದ ʼಕಾಂತಾರʼ ಚಿತ್ರದ ಪ್ರೀಕ್ವೆಲ್‌ ಇದಾಗಿದ್ದು, ನಾಯಕಿಯಾಗಿ ರುಕ್ಮಿಣಿ ವಸಂತ್‌ ನಟಿಸಿದ್ದಾರೆ. ಮುಖ್ಯ ಪಾತ್ರಗಳಲ್ಲಿ ಗುಲ್ಶನ್‌ ದೇವಯ್ಯ, ರಾಕೇಶ್‌ ಪೂಜಾರಿ ಮತ್ತಿತರರು ಕಾಣಿಸಿಕೊಂಡಿದ್ದಾರೆ. ಬಿ. ಅಜನೀಶ್‌ ಲೋಕನಾಥ್‌ ಸಂಗೀತ ನೀಡಿದ್ದು, ಈಗಾಗಲೇ ಟ್ರೈಲರ್‌ ಮತ್ತು ಮೊದಲ ಹಾಡು ಹೊರ ಬಿದ್ದಿದೆ.

ಏನಿದು ಕರೂರು ದುರಂತ?

ತಮಿಳುನಾಡಿನ ಕರೂರಿನಲ್ಲಿ ಶನಿವಾರ (ಸೆಪೆಂಬರ್‌ 27) ಜನಪ್ರಿಯ ನಟ ಮತ್ತು ಟಿವಿಕೆ ಪಕ್ಷದ ಸಂಸ್ಥಾಪಕ ದಳಪತಿ ವಿಜಯ್‌ ಹಮಿಕೊಂಡಿದ್ದ ರ‍್ಯಾಲಿಯಲ್ಲಿ ನಡೆದ ಕಾಲ್ತುಳಿತದಿಂದ ಸುಮಾರು 40 ಮಂದಿ ಮಂದಿ ಮೃತಪಟ್ಟಿದ್ದಾರೆ. ಗಾಯಗೊಂಡ ಹಲವರ ಪರಿಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಎದುರಾಗಿದೆ. ದುರಂತಕ್ಕೆ ಸಂಬಂಧಿಸಿ ನಟ ವಿಜಯ್‌ ಮತ್ತು ಪಕ್ಷದ ಸ್ಥಳೀಯ ಪದಾಧಿಕಾರಿಗಳ ವಿರುದ್ದ ದೂರು ದಾಖಲಾಗಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಭಾನುವಾರ ಗಾಯಾಳುಗಳನ್ನು ಮತ್ತು ಮೃತರ ಸಂಬಂಧಿಕರನ್ನು ಭೇಟಿಯಾಗಿ ಸಾಂತ್ವಾನ ಹೇಳಿದ್ದಾರೆ. ಇನ್ನು ನಟ ವಿಜಯ್‌ ಮಡಿದ 40 ಮಂದಿಯ ಕುಟುಂಬಕ್ಕೆ ತಲಾ 20 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಜತೆಗೆ ಗಾಯಗೊಂಡವರಿಗೆ ತಲಾ 2 ಲಕ್ಷ ರೂ. ಪರಿಹಾರ ಧನ ನೀಡುವುದಾಗಿಯೂ ತಿಳಿಸಿದ್ದಾರೆ. ಮೃತಪಟ್ಟವರ ಕುಟುಂಬಕ್ಕೆ ರಾಜ್ಯ ಸರ್ಕಾರ 10 ಲಕ್ಷ ರೂ. ಮತ್ತು ಕೇಂದ್ರ ಸರ್ಕಾರ 2 ಲಕ್ಷ ರೂ. ಘೋಷಿಸಿದೆ.