ತಿರುವನಂತಪುರಂ: ಮಲಯಾಳಂ ಚಲನಚಿತ್ರ ನಟ ಮತ್ತು ಮಿಮಿಕ್ರಿ ಕಲಾವಿದ ಕಲಾಭವನ್ ನವಾಸ್ (Kalabhavan Navas) ಅವರು ಶುಕ್ರವಾರ ಸಂಜೆ ಚೊಟ್ಟನಿಕ್ಕಾರಾದಲ್ಲಿನ ಹೋಟೆಲ್‌ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರು 'ಪ್ರಕಂಬನಂ' ಚಿತ್ರದ ಚಿತ್ರೀಕರಣಕ್ಕಾಗಿ ಹೋಟೆಲ್‌ನಲ್ಲಿ ತಂಗಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಷ್ಟರಲ್ಲಾಗಲೇ ನವಾಸ್ ಮೃತಪಟ್ಟಿದ್ದರು. ಪೊಲೀಸರು ಹೃದಯಾಘಾತವೇ ಸಾವಿನ ಕಾರಣ ಎಂದು ಶಂಕಿಸಿದ್ದಾರೆ.
ಶುಕ್ರವಾರ ಸಂಜೆ, ನಟ ತಮ್ಮ ಕೊಠಡಿಯಿಂದ ಹೊರಗೆ ಹೋಗಬೇಕಿತ್ತು. ಆದರೆ, ಅವರು ಚೆಕ್-ಔಟ್‌ಗಾಗಿ ಹೊರ ಬಂದಿರಲಿಲ್ಲ. ಇದನ್ನು ಗಮನಿಸಿದ ಸಿಬ್ಬಂದಿ ಕೊಠಡಿಯಲ್ಲಿ ಪರಿಶೀಲಿಸಿದಾಗ ಇವರು ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದರು. ಆಸ್ಪತ್ರೆಗೆ ಸೇರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಲಾಭವನ್ ಅವರ ಮೃತದೇಹವನ್ನು ಎಸ್‌ಡಿ ಟಾಟಾ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಶನಿವಾರ ಕಲಾಮಸ್ಸೇರಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ. ನಂತರ ಅವರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದು.
ಬಹುಮುಖ ಮನರಂಜನಾ ಕಲಾವಿದರಾಗಿದ್ದ ನವಾಸ್, ಮಲಯಾಳಂ ಚಿತ್ರರಂಗದಲ್ಲಿ ಮಿಮಿಕ್ರಿ ಕಲಾವಿದ, ಹಿನ್ನೆಲೆ ಗಾಯಕ ಮತ್ತು ನಟನಾಗಿ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದ್ದರು. 1995ರಲ್ಲಿ 'ಚೈತನ್ಯಂ' ಚಿತ್ರದ ಮೂಲಕ ನಟನಾಗಿ ಚಿತ್ರರಂಗಕ್ಕೆ ಬಂದಿದ್ದರು. 'ಮಿಮಿಕ್ಸ್ ಆಕ್ಷನ್ 500', 'ಹಿಟ್ಲರ್ ಬ್ರದರ್ಸ್', 'ಜೂನಿಯರ್ ಮಾಂಡ್ರೇಕ್', 'ಅಮ್ಮ ಅಮ್ಮಯ್ಯಮ್ಮ', 'ಚಂದಮಾಮ' ಮತ್ತು 'ತಿಲ್ಲಾನ ತಿಲ್ಲಾನ' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನವಾಸ್ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕಲಾಭವನ್ ನವಾಸ್ ಅವರ ಅಕಾಲಿಕ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Model Ansiya: ಹುಡುಗಿಯನ್ನೇ ಮದುವೆಯಾದ ಮಲಯಾಳಂ ನಟಿ! ಭಾರೀ ಸದ್ದು ಮಾಡ್ತಿವೆ ಈ ಫೋಟೋಗಳು
ಮೇ ತಿಂಗಳಿನಲ್ಲಿ ಮಲಯಾಳಂನ ಖ್ಯಾತ ಕಿರುತೆರೆ ಹಾಗೂ ಚಿತ್ರ ಕಲಾವಿದ ವಿಷ್ಣು ಪ್ರಸಾದ್ ನಿಧನರಾಗಿದ್ದರು. ಅವರಿಗೆ 49 ವರ್ಷ ವಯಸ್ಸಾಗಿತ್ತು. ಲಿವರ್ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುವಾಗಲೇ ಮೃತಪಟ್ಟಿದ್ದರು. ಅವರು ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದರು.