ತಿರುವನಂತಪುರಂ: ಬಹುಭಾಷಾ ನಟ, ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ಲಾಲ್ (Mohanlal) ಅವರಿಗೆ 2023ನೇ ಸಾಲಿನ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ (Dadasaheb Phalke Award 2023) ಘೋಷಿಸಲಾಗಿದೆ. ಈ ಬಗ್ಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಅಧಿಕೃತವಾಗಿ ಪ್ರಕಟಿಸಿದೆ. ಭಾರತೀಯ ಚಲನಚಿತ್ರೋದ್ಯಮಕ್ಕೆ ನೀಡಿದ ಅನನ್ಯ ಸೇವೆಗಾಗಿ ಮೋಹನ್‌ಲಾಲ್ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಸೆಪ್ಟೆಂಬರ್ 23ರಂದು ನಡೆಯುವ 71ನೇ ರಾಷ್ಟ್ರ ಚಲಚನಚಿತ್ರ ಪ್ರಸಸ್ತಿ ಪ್ರದಾನ ಸಭಾರಂಭದಲ್ಲಿ ಮೋಹಲ್‌ಲಾಲ್ ಅವರಿಗೆ ಈ ಅವಾರ್ಡ್ ಪ್ರದಾನ ಮಾಡಲಾಗುತ್ತದೆ. ಈಗಾಗಲೇ 5 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡಿರುವ ಅವರ ಮಲಯಾಳಂ ಜತೆಗೆ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.
1960ರ ಮೇ 21ರಂದು ಕೇರಳದ ಎಳಂತೂರಿನಲ್ಲಿ ಜನಿಸಿದ ಮೋಹನ್‌ಲಾಲ್ ಕಳೆದ ಆರೂವರೆ ದಶಕಗಳಿಂದ ಚಲನಚಿತ್ರ ರಂಗದಲ್ಲಿ ಸಕ್ರಿಯರಾಗಿದ್ದಾರೆ. ನಟ ಮಾತ್ರವಲ್ಲದೆ ಅವರು ಗಾಯಕ, ನಿರ್ಮಾಪಕ, ನಿರ್ದೇಶಕರೂ ಹೌದು.
1978ರ ʼತಿರನೋಟ್ಟಂʼ ಮಲಯಾಳಂ ಚಿತ್ರದ ಸಣ್ಣ ಪಾತ್ರದ ಮೂಲಕ ಮೋಹನ್‌ಲಾಲ್ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆದರೆ ಇದು 25 ವರ್ಷಗಳ ಬಳಿಕ ರಿಲೀಸ್ ಆಯ್ತು. ಅದಾದ ಬಳಿಕ 1980ರಲ್ಲಿ ತೆರೆಕಂಡ ʼಮಂಜಿಲ್ ವಿರಿಂಜ ಪೂಕಲ್ʼ ಸಿನಿಮಾ ಮೂಲಕ ಅವರು ನಾಯಕನಾಗಿ ಮಾಲಿವುಡ್‌ಗೆ ಪರಿಚಿತರಾದರು. ಅದಾದ ಬಳಿಕ ಅವರು ಹಿಂದುರಿಗಿ ನೋಡಲೇ ಇಲ್ಲ. ಮಲಯಾಳಂ ಜತೆಗೆ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿಯಲ್ಲೂ ನಟಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: L2: Empuraan: ಪ್ರೇಕ್ಷಕರ ಆಕ್ರೋಶಕ್ಕೆ ಮಂಡಿಯೂರಿದ ʼಎಂಪುರಾನ್ʼ ಚಿತ್ರತಂಡ; ನಟ ಮೋಹನ್‌ಲಾಲ್ ಕ್ಷಮೆ ಕೋರಿದ್ಯಾಕೆ?
ಕನ್ನಡದ 2 ಚಿತ್ರಗಳಲ್ಲಿ ನಟನೆ
2004ರಲ್ಲಿ ರಿಲೀಸ್ ಆದ ʼಲವ್ʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಮೋಹನ್‌ಲಾಲ್ 2015ರಲ್ಲಿ ಬಿಡುಗಡೆಯಾದ ʼಮೈತ್ರಿʼ ಕನ್ನಡ ಸಿನಿಮಾದಲ್ಲಿಯೂ ನಟಿಸಿದರು. ಬಿಗ್ ಬಾಸ್ ಮಲಯಾಳಂ ಆವೃತ್ತಿಯ ನಿರೂಪಕರಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.
ಪ್ರಶಸ್ತಿ, ಪುರಸ್ಕಾರ
ಅತ್ಯುತ್ತಮ ನಟನೆಗೆ 4 ಬಾರಿ ಮತ್ತು ನಿರ್ಮಾಪಕರಾಗಿ 1 ಬಾರಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಜತೆಗೆ 6 ಬಾರಿ ಕೇರಳದ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಅವರಿಗೆ 2001ರಲ್ಲಿ ಪದ್ಮ ಶ್ರೀ, 2019ರಲ್ಲಿ ಪದ್ಮ ಭೂಷನ್ ಪ್ರಶಸ್ತಿ ಪ್ರದಾನ ಮಾಡಿದೆ. ವಿಶೇಷ ಎಂದರೆ 2009ರಲ್ಲಿ ಭಾರತೀಯ ಸೇನೆ ಲೆಫ್ಟಿನೆಂಟ್ ಕರ್ನಲ್ ಪದವಿ ನೀಡಿದೆ.
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವಕ್ಕೆ ಭಾಜನರಾದ ಮಲಯಾಳಂ ಚಿತ್ರರಂಗದ ಎರಡನೇ ಪ್ರತಿಭೆ ಮೋಹನ್‌ಲಾಲ್. ಈ ಹಿಂದೆ 2004ರ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಮಲಯಾಳಂ ಚಿತ್ರರಂಗದ ಜನಪ್ರಿಯ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ ಅವರಿಗೆ ನೀಡಲಾಗಿತ್ತು. 2022ರ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಮಿಥುನ್ ಚಕ್ರವರ್ತಿ ಅವರಿಗೆ ನೀಡಲಾಗಿತ್ತು. ಈವರೆಗೆ ಮೋಹನ್ ಲಾಲ್ ಸುಮಾರು 400 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ತೆರೆಕಂಡ ಮೋಹನ್‌ಲಾಲ್ ಅಬಿನಯದ ʼಎಂಪುರಾನ್ 2ʼ, ʼಹೃದಯಪೂರ್ವಂʼ, ʼತುಡರುಂʼ ಚಿತ್ರಗಳು ಹಿಟ್ ಲಿಸ್ಟ್ ಸೇರಿವೆ.