Ott Releases This Week: ʼರಾಕ್ಷಸʼ, ʼವಿಷ್ಣು ಪ್ರಿಯʼ; ಈ ವಾರ ಒಟಿಟಿಯಲ್ಲಿ ರಿಲೀಸ್ ಆದ ಕನ್ನಡ ಚಿತ್ರಗಳಿವು
New Ott Releases This Week In Kannada: ಈ ವಾರ ಒಟಿಟಿಯಲ್ಲಿ ಕನ್ನಡದ ಹಲವು ಚಿತ್ರಗಳು ತೆರೆಕಂಡಿವೆ. ಥಿಯೇಟರ್ನಲ್ಲಿ ನೋಡಲು ಮಿಸ್ ಆದವರು ಮನೆಯಲ್ಲೇ ಕುಳಿತು ಕಣ್ತುಂಬಿಕೊಳ್ಳಬಹುದು. ಯಾವೆಲ್ಲ ಕನ್ನಡ ಚಿತ್ರಗಳು ಒಟಿಟಿಯಲ್ಲಿವೆ ಎನ್ನುವ ವಿವರ ಇಲ್ಲಿದೆ.



ʼವಿಷ್ಣು ಪ್ರಿಯʼ
ಭಾರಿ ನಿರೀಕ್ಷೆಯೊಂದಿಗೆ ಇತ್ತೀಚೆಗೆ ತೆರೆಕಂಡ ಚಿತ್ರ ʼವಿಷ್ಣು ಪ್ರಿಯʼ. ಬಾಕ್ಸ್ ಆಫೀಸ್ನಲ್ಲಿ ಮ್ಯಾಜಿಕ್ ಮಾಡುವಲ್ಲಿ ವಿಫಲವಾದರೂ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಸಫಲವಾಗಿದೆ. ಶ್ರೇಯಸ್ ಮಂಜು ಮತ್ತು ಕಣ್ಸನ್ನೆಯಿಂದಲೇ ಗಮನ ಸೆಳೆದ ಮಲಯಾಳಂ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ನಟನೆಯ ಈ ರೊಮ್ಯಾಂಟಿಕ್ ಎಂಟರ್ಟೈನರ್ 90ರ ದಶಕದ ಪ್ರೇಮಕಥೆಯನ್ನು ಹೊಂದಿದೆ. ವಿ.ಕೆ.ಪ್ರಕಾಶ್ ನಿರ್ದೇಶನದ ಈ ಚಿತ್ರ ಏ. 11ರಿಂದ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಪ್ರಸಾರವಾಗುತ್ತಿದೆ.

ʼರಾಕ್ಷಸʼ
ಪ್ರಜ್ವಲ್ ದೇವರಾಜ್ (Prajwal Devaraj) ನಟನೆಯ ಹಾರರ್ ಥ್ರಿಲ್ಲರ್ ಚಿತ್ರ ʼರಾಕ್ಷಸʼ. ಮಾ. 7ರಂದು ಥಿಯೇಟರ್ನಲ್ಲಿ ರಿಲೀಸ್ ಆದ ಈ ಸಿನಿಮಾವನ್ನು ಈಗ ಒಟಿಟಿಯಲ್ಲಿ ವೀಕ್ಷಿಸಬಹುದು. ಇದು ಏ. 11ರಂದು ಸನ್ ನೆಕ್ಟ್ನಲ್ಲಿ ಬಿಡುಗಡೆಯಾಗಿದೆ. ಹಾರರ್ ಚಿತ್ರಪ್ರೇಮಿಗಳಿಗೆ ಹೇಳಿ ಮಾಡಿಸಿದಂತಿರುವ ಈ ಸಿನಿಮಾದಲ್ಲಿ ಪ್ರಜ್ವಲ್ ಜತೆಗೆ ಸೋನಾಲ್ ಮೊಂಥೆರೋ, ಎ.ಎಸ್.ಶ್ರೀಧರ್, ಶೋಭರಾಜ್ ಮತ್ತಿತರರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ʼ#ಪಾರು ಪಾರ್ವತಿʼ
ಬಿಗ್ ಬಾಸ್ ಕನ್ನಡ ಸೀಸನ್ 9ರ ಮೂಲಕ ಕನ್ನಡಿಗರ ಮನೆಮಾತಾದ ದೀಪಿಕಾ ದಾಸ್ (Deepika Das) ನಟನೆಯ #ಪಾರು ಪಾರ್ವತಿ ಏ. 4ರಿಂದ ಅಮೆಜಾನ್ ಪ್ರೈಂ ವಿಡಿಯೋ ಸ್ಟ್ರೀಮಿಂಗ್ ಆಗುತ್ತಿದೆ. ಇದೊಂದು ಪ್ರಯಾಣ ಆಧರಿತ ಚಿತ್ರವಾಗಿದ್ದು, ಬೆಂಗಳೂರು, ಗೋವಾ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಉತ್ತರಾಖಂಡದಾದ್ಯಂತ ಚಿತ್ರಿಸಲಾಗಿದೆ. ವೈವಿಧ್ಯಮಯ ಭೂದೃಶ್ಯಗಳು ಮತ್ತು ಆಂತರಿಕ ರೂಪಾಂತರಗಳನ್ನು ಸೆರೆಹಿಡಿಯಲಾಗಿದೆ. ರೋಹಿತ್ ಕೀರ್ತಿ ನಿರ್ದೇಶನದ ಈ ಸಿನಿಮಾದ ಕೇಂದ್ರಬಿಂದುವಾಗಿ ದೀಪಿಕಾ ದಾಸ್ ಕಾಣಿಸಿಕೊಂಡಿದ್ದಾರೆ.

ʼಛೂ ಮಂತರ್ʼ
ಹಾಸ್ಯನಟರಾಗಿ ಸ್ಯಾಂಡಲ್ವುಡ್ಗೆ ಕಾಲಿಟ್ಟು ಸದ್ಯ ನಾಯಕನಾಗಿ ಮಿಂಚುತ್ತಿರುವ ಶರಣ್ (Sharan) ಅಭಿನಯದ ಹಾರರ್ ಕಾಮಿಡಿ ಚಿತ್ರ 'ಛೂ ಮಂತರ್'. ಕೆಲವು ದಿನಗಳ ಹಿಂದೆ ಥಿಯೇಟರ್ನಲ್ಲಿ ತೆರೆಕಂಡ ಈ ಚಿತ್ರ ಮಾ. 28ರಿಂದ ಅಮೆಜಾನ್ ಪ್ರೈಂ ವಿಡಿಯೊದಲ್ಲಿ ಪ್ರಸಾರವಾಗುತ್ತಿದೆ. ನವನೀತ್ ನಿರ್ದೇಶನದ ಈ ಚಿತ್ರದಲ್ಲಿ ಮೇಘನಾ ಗಾಂವ್ಕರ್, ಅದಿತಿ ಪ್ರಭುದೇವ, ಪ್ರಭು ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ʼನೋಡಿದವರು ಏನಂತಾರೆʼ
ಸ್ಯಾಂಡಲ್ವುಡ್ನ ಪ್ರತಿಭಾವಂತ ನಟರಲ್ಲಿ ಒಬ್ಬರಾದ ನವೀನ್ ಶಂಕರ್ (Naveen Shankar) ನಟನೆಯ ಈ ಚಿತ್ರ ಮಾ. 21ರಿಂದ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ವೀಕ್ಷಣೆಗೆ ಲಭ್ಯ. ಕುಲದೀಪ್ ಕಾರಿಯಪ್ಪ ಸಾರಥ್ಯದ ʼನೋಡಿದವರು ಏನಂತಾರೆʼ ಕ್ರಿಯೇಟಿವ್ ಜಾನರ್ ಸಿನಿಮಾ. ಪ್ರೀತಿ, ಸ್ನೇಹ, ತ್ಯಾಗ, ಸೆಂಟಿಮೆಂಟ್, ಎಮೋಷನ್ ಒಳಗೊಂಡಿರುವ ಈ ಚಿತ್ರದಲ್ಲಿ ಅಪೂರ್ವಾ ಭಾರದ್ವಾಜ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.