Ramon Magsaysay Award: ಎಜುಕೇಟ್ ಗರ್ಲ್ಸ್ ಸಂಸ್ಥೆಗೆ ಪ್ರತಿಷ್ಠಿತ ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿ
Safeena Husain: ಶಾಲೆಗಳಿಂದ ಹೊರಗುಳಿದ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹಲವು ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿರುವ ಭಾರತದ ಸರ್ಕಾರೇತರ ಸಂಸ್ಥೆ ಎಜುಕೇಟ್ ಗರ್ಲ್ಸ್‌ಗೆ 2025ರ ಪ್ರತಿಷ್ಠಿತ ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ. ಎಜುಕೇಟ್ ಗರ್ಲ್ಸ್ ಸಂಸ್ಥೆಯನ್ನು 2007ರಲ್ಲಿ ಸಫೀನಾ ಹುಸೇನ್ ಸ್ಥಾಪಿಸಿದರು.

-

ದೆಹಲಿ: ಶಾಲೆಗಳಿಂದ ಹೊರಗುಳಿದ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹಲವು ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿರುವ ಭಾರತದ ಸರ್ಕಾರೇತರ ಸಂಸ್ಥೆ ಎಜುಕೇಟ್ ಗರ್ಲ್ಸ್‌ಗೆ (Educate Girls) 2025ರ ಪ್ರತಿಷ್ಠಿತ ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿ (Ramon Magsaysay Award) ಬಂದಿದೆ. ಏಷ್ಯಾದ ನೋಬೆಲ್ ಎಂದು ಕರೆಯಲ್ಪಡುವ ಈ ಪ್ರಶಸ್ತಿ ವಿಜೇತರನ್ನು ಆಗಸ್ಟ್ 31ರಂದು ಘೋಷಿಸಲಾಯಿತು. ಎಜುಕೇಟ್ ಗರ್ಲ್ಸ್ ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿ ಪಡೆದ ಮೊದಲ ಭಾರತೀಯ ಎನ್‌ಜಿಒ ಎನಿಸಿಕೊಂಡಿದೆ.
ರಾಜಸ್ಥಾನದಲ್ಲಿ ಆರಂಭವಾದ ಎಜುಕೇಟ್ ಗರ್ಲ್ಸ್ ಸಂಸ್ಥೆಯನ್ನು 2007ರಲ್ಲಿ ಸಫೀನಾ ಹುಸೇನ್ (Safeena Husain) ಸ್ಥಾಪಿಸಿದರು. ಇವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಪದವೀಧರೆ. ಮಹಿಳಾ ಅನಕ್ಷರತೆಯ ಸವಾಲುಗಳನ್ನು ಪರಿಹರಿಸಲೆಂದೇ ಅವರು ಭಾರತಕ್ಕೆ ಮರಳಿದ್ದರು. ಏಷ್ಯಾದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವ ವ್ಯಕ್ತಿ/ಸಂಸ್ಥೆಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ 67ನೇ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ 7ರಂದು ಫಿಲಿಪ್ಪೈನ್ಸ್ ರಾಜಧಾನಿ ಮನಿಲಾದ ಮೆಟ್ರೋಪಾಲಿಟನ್ ಥಿಯೇಟರ್‌ನಲ್ಲಿ ನಡೆಯಲಿದೆ.
We are proud to present the 2025 Ramon Magsaysay Awardees. Discover their inspiring stories and impactful work at https://t.co/13iyCwwUpq.#RamonMagsaysayAward #67thRamonMagsaysayAwards #GreatnessOfSpirit #TransformativeLeadership pic.twitter.com/rsDssP39F2
— Ramon Magsaysay Award (@MagsaysayAward) August 31, 2025
ಈ ಸುದ್ದಿಯನ್ನೂ ಓದಿ: Ramon Magsaysay Award 2025: ಮ್ಯಾಗ್ಸೆಸೆ ಪ್ರಶಸ್ತಿ; 'Educate Girls' ಸಂಸ್ಥೆ ಸ್ಥಾಪಕಿ ಸಫೀನಾ ಹುಸೇನ್‌ಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ
ಎಜುಕೇಟ್ ಗರ್ಲ್ಸ್ ಸಂಸ್ಥೆಯ ಹಿನ್ನೆಲೆ
ಮೊದಲು ರಾಜಸ್ಥಾನದಲ್ಲಿ ಆರಂಭವಾದ ಎಜುಕೇಟ್ ಗರ್ಲ್ಸ್ ಬಾಲಕಿಯರ ಶಿಕ್ಷಣಕ್ಕೆ ಹಗಲಿರುಳು ಶ್ರಮಿಸುತ್ತಿದೆ. ಹಲವು ಹೆಣ್ಣು ಮಕ್ಕಳನ್ನು ಶಾಲೆಗೆ ಮರಳಿ ಕರೆತರುವಲ್ಲಿ ಯಶಸ್ವಿಯೂ ಆಗಿದೆ. ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಹೊಂದಲು ಮತ್ತು ಉದ್ಯೋಗ ಪಡೆಯಲು ಅವರಿಗೆ ನೆರವಾಗುವವರೆಗೆ ಈ ಸಂಸ್ಥೆ ಪ್ರೋತ್ಸಾಹ ನೀಡುತ್ತಿದೆ.
ಪ್ರಶಸ್ತಿ ಬಂದಿರುವುದಕ್ಕೆ ಸಂಸ್ಥಾಪಕಿ ಸಫೀನಾ ಹುಸೇನ್ ಸಂತಸ ವ್ಯಕ್ತಪಡಿಸಿ, ʼʼಎಜುಕೇಟ್ ಗರ್ಲ್ಸ್ ಮತ್ತು ದೇಶಕ್ಕೆ ಇದು ಐತಿಹಾಸಿಕ ಕ್ಷಣ. ಈ ಗೌರವವು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ನಡೆದ ಜನಪ್ರೇರಿತ ಚಳುವಳಿಯನ್ನು ಜಗತ್ತಿಗೆ ತೋರಿಸುತ್ತದೆʼʼ ಎಂದು ಹೇಳಿದ್ದಾರೆ.
ಏಷ್ಯಾದವರಿಗೆ ಮಾತ್ರ ನೀಡಲಾಗುವ ಈ ಪ್ರಶಸ್ತಿಯನ್ನು 1958ರಿಂದ ವಿವಿಧ ಕ್ಷೇತ್ರಗಲಳಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುತ್ತದೆ. Ramon Magsaysay Award Foundation ಇದನ್ನು ನೀಡುತ್ತದೆ. ಸರ್ಕಾರಿ, ಸಮುದಾಯ, ವಿದೇಶಿ ಬಾಂಧವ್ಯ, ಆರೋಗ್ಯ, ಸಾಹಿತ್ಯ, ಕಲೆ, ಪತ್ರಿಕೋದ್ಯಮ ರಂಗಗಳಿಗೆ ಈ ಪ್ರಶಸ್ತಿಯನ್ನು ಘೋಷಿಸಲಾಗುತ್ತದೆ. ಫಿಲಿಪ್ಪೈನ್ಸ್ ಮಾಜಿ ಅಧ್ಯಕ್ಷ ರೋಮನ್ ಮ್ಯಾಗಸ್ಸೆ ಸ್ಮರಣಾರ್ಥ ಸ್ಥಾಪಿಸಲಾದ ಈ ಪ್ರಸಸ್ತಿಯು ಸುಮಾರು 41 ಲಕ್ಷ ರೂ. (50,000 ಡಾಲರ್) ನಗದು, ಪದಕ ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿದೆ.
ಸಿಎಂ ಸಿದ್ದರಾಮಯ್ಯ ಅಭಿನಂದನೆ
ಪ್ರಶಸ್ತಿ ಪುರಸ್ಕೃತೆ ಸಫೀನಾ ಹುಸೇನ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಅವರು, ʼʼರಾಜಸ್ಥಾನದ ಕುಗ್ರಾಮವೊಂದರಲ್ಲಿ ಬಾಲಕಿಯೊಬ್ಬಳ ಶಿಕ್ಷಣಕ್ಕಾಗಿ ಆರಂಭಗೊಂಡಿದ್ದ "Educate Girls" ಸಂಸ್ಥೆಯು, ಕಾಲ ಕಳೆದಂತೆ ಹೆಮ್ಮರವಾಗಿ ಬೆಳೆದು ಇಂದು ಸಾವಿರಾರು ಶಿಕ್ಷಣ ವಂಚಿತ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ, ಅವರನ್ನು ಸ್ವಾವಲಂಬಿಗಳನ್ನಾಗಿಸಲು ನಿಸ್ವಾರ್ಥ ಶ್ರಮಿಸುತ್ತಿದೆ. ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ 'Educate Girls' ಸಂಸ್ಥೆಯ ಹಿಂದಿರುವ ನಿಸ್ವಾರ್ಥ ಜೀವಗಳಿಗೆ ಈ ಪ್ರಶಸ್ತಿ ಹೊಸ ಸ್ಪೂರ್ತಿ ತುಂಬಲಿದೆ ಎಂದು ಭಾವಿಸಿದ್ದೇನೆʼʼ ಎಂದು ಹೇಳಿದ್ದಾರೆ.