PM Modi China Visit: ಭಾರತ-ಚೀನಾ ಪ್ರತಿಸ್ಪರ್ಧಿಗಳಲ್ಲ, ಪಾಲುದಾರರು: ಮೋದಿ ಮಹತ್ವದ ಘೋಷಣೆ
ಸುಮಾರು 7 ವರ್ಷಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಚೀನಾಕ್ಕೆ ಭೇಟಿ ನೀಡಿದ್ದಾರೆ (PM Modi China Visit:). ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರೊಂದಿಗೆ ಸಮಾಲೋಚನೆ ನಡೆಸಿದ ಮೋದಿ 2 ದೇಶಗಳ ನಡುವಿನ ಸಂಬಂಧ ವೃದ್ಧಿಗೆ ಮುಂದಾಗಿದ್ದಾರೆ. ಚೀನಾ ಮತ್ತು ಭಾರತ ಅಭಿವೃದ್ಧಿ ಪಾಲುದಾರರು ಮತ್ತು ಪ್ರತಿಸ್ಪರ್ಧಿಗಳಲ್ಲ ಎಂದು ಇಬ್ಬರೂ ನಾಯಕರು ಪುನರುಚ್ಚರಿಸಿದರು. ದ್ವಿಪಕ್ಷೀಯ ಸಂಬಂಧಗಳ ನಿರಂತರ ಅಭಿವೃದ್ಧಿಗೆ ಗಡಿ ಪ್ರದೇಶಗಳಲ್ಲಿ ಶಾಂತಿಯನ್ನು ಸ್ಥಾಪಿಸುವ ಮಹತ್ವವನ್ನು ಪ್ರಧಾನಿ ಮೋದಿ ಒತ್ತಿ ಹೇಳಿದರು.

-


2020ರ ಜೂನ್ನ ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಸಂಘರ್ಷದ ನಂತರ ಭಾರತ ಮತ್ತು ಚೀನಾ ನಡುವಿನ ಸಂಬಂಧಗಳು ಹದಗೆಟ್ಟಿದ್ದವು. ಇದೀಗ ಮತ್ತೆ ನೆರೆಯ 2 ರಾಷ್ಟ್ರಗಳ ನಡುವಿನ ಸ್ನೇಹ ಸಂಬಂಧ ಚಿಗುರೊಡೆಯುವ ಸಾಧ್ಯತೆ ದಟ್ಟವಾಗಿದೆ. ಇತ್ತೀಚೆಗೆ ಅಮೆರಿಕ ಹೇರಿರುವ ಹೆಚ್ಚುವರಿ ಸುಂಕದ ವಿರುದ್ಧ ಹೋರಾಡಲು ಭಾರತ-ಚೀನಾ ಕೈಜೋಡಿಸುವ ಸಾಧ್ಯತೆ ಇದೆ.

ಶಾಂಘೈ ಸಹಕಾರ ಸಂಘಟನೆಯ (SCO) ಶೃಂಗಸಭೆಯಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ "ಕೈಲಾಸ ಮಾನಸ ಸರೋವರ ಯಾತ್ರೆ ಪುನರಾರಂಭಗೊಂಡಿದೆ. ಜತೆಗೆ ಎರಡೂ ದೇಶಗಳ ನಡುವೆ ನೇರ ವಿಮಾನಯಾನವೂ ಆರಂಭವಾಗುತ್ತಿದೆ. ನಮ್ಮ ರಾಷ್ಟ್ರಗಳ ನಡುವಿನ ಸಹಕಾರ 2.8 ಶತಕೋಟಿ ಜನರ ಹಿತಾಸಕ್ತಿಯನ್ನು ಒಳಗೊಂಡಿದೆʼʼ ಎಂದು ಹೇಳಿದರು.

ಇದೇ ವೇಳೆ ಭಯೋತ್ಪಾದನೆಯ ವಿಷಯವನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಅದನ್ನು ಜಾಗತಿಕ ಪಿಡುಗು ಎಂದು ಬಣ್ಣಿಸಿದರು. ಜತೆಗೆ ಈ ಬೆದರಿಕೆಯನ್ನು ಎದುರಿಸುವಲ್ಲಿ ಭಾರತದೊಂದಿಗೆ ಚೀನಾ ಕೈಜೋಡಿಸುವಂತೆ ಕರೆ ನೀಡಿದರು.

2 ದಿನಗಳ ಪ್ರವಾಸಕ್ಕೆ ಆಗಮಿಸಿದ ಮೋದಿ ಅವರನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಸ್ವಾಗತಿಸಿದರು. ಜತೆಗೆ ಚೀನಾವು ಭಾರತದ ಪ್ರಮುಖ ಸ್ನೇಹಿತ ಎಂದು ಕರೆದಿದ್ದಾರೆ. ʼʼಸ್ನೇಹಿತರಾಗಿರುವುದು, ಉತ್ತಮ ನೆರೆಹೊರೆಯವರು ಮತ್ತು ಡ್ರ್ಯಾಗನ್ ಮತ್ತು ಆನೆ ಒಟ್ಟಿಗೆ ಬರುವುದು ಅತ್ಯಗತ್ಯʼʼ ಎಂದು ಕ್ಸಿ ಹೇಳಿದರು.

ಇತ್ತ ಕಾಂಗ್ರೆಸ್ ಮೋದಿ ಅವರ ಕ್ಸಿ ಜಿನ್ಪಿಂಗ್ ಜತೆಗಿನ ದ್ವಿಪಕ್ಷೀಯ ಸಭೆಯನ್ನು ಖಂಡಿಸಿದೆ. ಭಾರತದ ವಿರುದ್ಧ ಪ್ರತಿಕೂಲ ಕ್ರಮ ಕೈಗೊಂಡರೂ ಚೀನಾವನ್ನು ಎದುರಿಸುತ್ತಿಲ್ಲ ಎಂದಿದೆ. ಚೀನಾ ಪದೇ ಪದೆ ಪ್ರಚೋದನೆ ನೀಡುತ್ತಿದ್ದರೂ ಪ್ರಧಾನಿ ಮೋದಿ ಆತ್ಮೀಯವಾಗಿ ಹಸ್ತಲಾಘವ ಮಾಡಿ ಸ್ವಾಗತಿಸಿದ್ದಕ್ಕೆ ಕಾಂಗ್ರೆಸ್ ಅಣಕಿದೆ.