ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Su From So: ತಮಿಳಿಗೆ ರಿಮೇಕ್‌ ಆಗಲಿದೆ 'ಸು ಫ್ರಮ್‌ ಸೋ'; ಹಕ್ಕು ಖರೀದಿಸಿದ ಖ್ಯಾತ ನಿರ್ಮಾಪಕ ಎನ್‌.ಎಸ್‌. ರಾಜ್‌ಕುಮಾರ್‌

NS Rajkumar: ಯಾವುದೇ ಸ್ಟಾರ್‌ ನಟರಿಲ್ಲದೆ ತೆರೆಕಂಡು ಯಸಸ್ವಿ ಪ್ರದರ್ಶಗೊಳ್ಳುತ್ತಿರುವ ಕನ್ನಡ ಸು ಫ್ರಮ್‌ ಸೋ ಸದ್ಯ ತೆಲುಗು ಮತ್ತು ಮಲಯಾಳಂನಲ್ಲಿಯೂ ರಿಲೀಸ್‌ ಆಗಿ ಮೋಡಿ ಮಾಡುತ್ತಿದೆ. ಇದೀಗ ಈ ಚಿತ್ರ ತಮಿಳಿಗೆ ರಿಮೇಕ್‌ ಆಗುತ್ತಿದೆ. ತಮಿಳು ರಿಮೇಕ್‌ ಹಕ್ಕನ್ನು ಖ್ಯಾತ ನಿರ್ಮಾಪಕ ಎನ್‌.ಎಸ್‌. ರಾಜ್‌ಕುಮಾರ್‌ ಖರೀದಿಸಿದ್ದಾರೆ.

ಬೆಂಗಳೂರು: ಕಳೆದ ತಿಂಗಳು ತೆರೆಕಂಡು ಬಾಕ್ಸ್‌ ಆಫೀಸ್‌ನಲ್ಲಿ ಸಂಚಲನ ಮೂಡಿಸಿದ ಸ್ಯಾಡಲ್‌ವುಡ್‌ ಚಿತ್ರ ʼಸು ಫ್ರಮ್‌ ಸೋʼ (Su From So) ಪರಭಾಷಿಕರ ಗಮನವನ್ನೂ ಸೆಳೆದಿದೆ. ಕರಾವಳಿ ಮೂಲದ ಕಥೆಯಾದರೂ ದೇಶ-ವಿದೇಶಗಳ ಪ್ರೇಕ್ಷಕರರು ಮೆಚ್ಚಿಕೊಂಡು ಜೈ ಎಂದಿದ್ದಾರೆ. ಬಹುತೇಕ ಹೊಸಬರೇ ಸೇರಿ ತೆರೆಗೆ ತಂದಿರುವ ಈ ಚಿತ್ರ ಈಗಾಗಲೇ 100 ಕೋಟಿ ರೂ. ಕ್ಲಬ್‌ ಸೇರಿದೆ. ಬಿಡುಗಡೆಯಾಗಿ 25 ದಿನ ಕಳೆದರೂ, ರಜನಿಕಾಂತ್‌, ಹೃತಿಕ್‌ ರೋಷನ್‌-ಜೂ. ಎನ್‌ಟಿಆರ್‌ ಅವರಂತಹ ಸ್ಟಾರ್‌ ನಟರ ಬಿಗ್‌ ಬಜೆಟ್‌ ಸಿನಿಮಾ ತೆರೆಕಂಡರೂ ಸುಲೋಚನಾ ಹವಾ ತಗ್ಗಿಲ್ಲ. ಜೆ.ಪಿ. ತುಮಿನಾಡ್‌ (J. P. Thuminad) ಮೊದಲ ಬಾರಿಗೆ ಆ್ಯಕ್ಷನ್‌ ಕಟ್‌ ಹೇಳಿರುವ ಈ ಚಿತ್ರ ಇದೀಗ ಕನ್ನಡ ಜತೆಗೆ ಮಲಯಾಳಂ ಮತ್ತು ತೆಲುಗಿನಲ್ಲೂ ಬಿಡುಗಡೆಯಾಗಿ ಗಮನ ಸೆಳೆಯುತ್ತಿದ್ದು, ಇದೀಗ ತಮಿಳಿಗೆ ರಿಮೇಕ್‌ ಆಗುತ್ತಿದೆ.

ರಾಜ್‌ ಬಿ. ಶೆಟ್ಟಿ, ಶಶಿಧರ್‌ ಶೆಟ್ಟಿ ಮತ್ತು ರವಿ ರೈ ಕಳಸ ಸೇರಿ ನಿರ್ಮಿಸಿರುವ ʼಸು ಫ್ರಮ್‌ ಸೋʼ ಚಿತ್ರದ ತಮಿಳು ರಿಮೇಕ್‌ ಹಕ್ಕನ್ನು ಖ್ಯಾತ ನಿರ್ಮಾಪಕ ಎನ್‌.ಎಸ್‌. ರಾಜ್‌ಕುಮಾರ್‌ (NS Rajkumar) ಖರೀದಿಸಿದ್ದಾರೆ. ಈಗಾಗಲೇ 17ಕ್ಕೂ ಹೆಚ್ಚು ಕನ್ನಡ ಚಿತ್ರಗಳನ್ನು ನಿರ್ಮಿಸಿ, 60ಕ್ಕೂ ಹೆಚ್ಚು ದಕ್ಷಿಣ ಭಾರತ ಸಿನಿಮಾಗಳನ್ನು ಡಿಸ್ಟ್ರಿಬ್ಯೂಟ್‌ ಮಾಡಿರುವ ರಾಜ್‌ ಕುಮಾರ್‌ ದಾಖಲೆಯ ಮೊತ್ತಕ್ಕೆ ರಿಮೇಕ್‌ ಹಕ್ಕು ಖರೀದಿಸಿದ್ದಾರೆ ಎನ್ನಲಾಗಿದೆ.



ಈ ಸುದ್ದಿಯನ್ನೂ ಓದಿ: Su From So Collection: ತಗ್ಗಿಲ್ಲ ಸುಲೋಚನಾ ಹವಾ; ʼಕೂಲಿʼ, ʼವಾರ್‌ 2ʼ ಚಿತ್ರಗಳಿಗೆ ʼಸು ಫ್ರಮ್‌ ಸೋʼ ಸೆಡ್ಡು ಹೊಡೆದಿದ್ದು ಹೇಗೆ?

ನಿರ್ದೇಶಕ ಯಾರು?

ಸದ್ಯ ಅವರು ಪಾತ್ರ ವರ್ಗ ಮತ್ತು ತಂತ್ರಜ್ಞರ ಆಯ್ಕೆಯನ್ನು ಅಂತಿಮಗೊಳಿಸುತ್ತಿದ್ದಾರೆ. ತಮಿಳುನಾಡಿನ ನೇಟಿವಿಟಿಗೆ ತಕ್ಕಂತೆ ಚಿತ್ರ ಮರುನಿರ್ಮಾಣವಾಗಲಿದ್ದು, ಜೆ.ಪಿ. ತುಮಿನಾಡ್‌ ನಿರ್ದೇಶಿಸುತ್ತಾರಾ ಅಥವಾ ಅಲ್ಲಿನ ಪ್ರತಿಭೆಗೆ ಮಣೆ ಹಾಕಲಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ. ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರ ಬರುವ ನಿರೀಕ್ಷೆ ಇದೆ.

ಹಾರರ್‌ ಕಾಮಿಡಿ ಜಾನರ್‌ನ ʼಸು ಫ್ರಮ್‌ ಸೋʼ ಕರಾವಳಿಯ ಮರ್ಲೂರು ಎನ್ನುವ ಗ್ರಾಮದಲ್ಲಿ ನಡೆಯುವ ಕಥೆಯನ್ನು ಹೊಂದಿದೆ. ಅಲ್ಲಿನ ಸಾಮಾನ್ಯ ಜನರ ಜೀವನವನ್ನು ತೆರೆ ಮೇಲೆ ತರಲಾಗಿದ್ದು, ನೈಜವಾಗಿ ಚಿತ್ರೀಕರಿಸಲಾಗಿದೆ. ಕರಾವಳಿ ಭಾಗದ ಭಾಷೆಯನ್ನು ಯಾವುದೇ ಕೃತಕತೆ ಇಲ್ಲದೆ ಬಳಸಿದ್ದು ಚಿತ್ರತಂಡದ ಪ್ಲಸ್‌ ಪಾಯಿಂಟ್‌. ಕಾಮಿಡಿ ಜತೆ ಜತೆಗೆ ಭಾವನಾತ್ಮಕವಾಗಿ ಕಾಡುವ ಕಥೆಯ ಎಳೆಯೂ ಇರುವುದು ಸಿನಿಮಾದ ಯಶಸ್ಸಿನಲ್ಲಿ ಮುಖ್ಯ ಪಾತ್ರವಹಿಸಿದೆ.

ಸುಮಾರು 5.5 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾದ ಸು ಫ್ರಮ್‌ ಸೋ ದೇಶ-ವಿದೇಶಗಳಲ್ಲಿ ಒಟ್ಟು 102 ಕೋಟಿ ರೂ. ಕಲೆಕ್ಷನ್‌ ಮಾಡಿದೆ ಎಂದು ವರದಿಯೊಂದು ತಿಳಿಸಿದೆ. ನಿರ್ದೇಶನದ ಜತೆಗೆ ಜೆ.ಪಿ. ತುಮಿನಾಡ್‌ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ರಾಜ್‌ ಬಿ. ಶೆಟ್ಟಿ, ಪ್ರಕಾಶ್ ತುಮಿನಾಡ್, ಶನೀಲ್ ಗೌತಮ್‌, ದೀಪಕ್ ರೈ ಪಾಣಾಜೆ, ಮೈಮ್ ರಾಮದಾಸ್, ಸಂಧ್ಯಾ ಅರೆಕರೆ ಸೇರಿದಂತೆ ಬಹುತೇಕ ಕರಾವಳಿ ಕಲಾವಿದರೇ ಬಣ್ಣ ಹಚ್ಚಿದ್ದಾರೆ.