ಬೆಂಗಳೂರು: ಸಿನಿಮಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ (Dadasaheb Phalke Award 2024) ಆಯ್ಕೆಯಾಗಿರುವ ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ (Anant Nag) ಅವರಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi), ಸಿಎಂ ಡಿ.ಕೆ.ಶಿವಕುಮಾರ್ (CM DK Shivakumar) ಹಾಗೂ ವಿವಿಧ ರಾಜಕೀಯ ನಾಯಕರು, ಚಿತ್ರರಂಗದ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ಒಬ್ಬ ಶ್ರೇಷ್ಠ ಕಲಾವಿದನಿಗೆ ಸಲ್ಲಬೇಕಾದ ಅರ್ಹ ಗೌರವ: ಪ್ರಧಾನಿ ಮೋದಿ
ಪ್ರಧಾನಿ ಮೋದಿ ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯಿಂದ ಪುರಸ್ಕೃತರಾದ ಪ್ರಸಿದ್ಧ ನಟ ಅನಂತ್ ನಾಗ್ ಅವರಿಗೆ ಅಭಿನಂದನೆಗಳು. ಕಳೆದ ಹಲವು ದಶಕಗಳಿಂದ, ಅವರ ಸಹಜ ಅಭಿನಯ, ಗಮನಾರ್ಹ ವೈವಿಧ್ಯತೆ ಹಾಗೂ ಶ್ರೇಷ್ಠ ಕಲಾಪ್ರತಿಭೆಯು ಭಾರತೀಯ ಚಲನಚಿತ್ರರಂಗದಲ್ಲಿ, ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ, ಅವಿಸ್ಮರಣೀಯ ಛಾಪನ್ನು ಮೂಡಿಸಿವೆ. ಅವರು ಅಭಿನಯಿಸಿದ ಪ್ರತಿಯೊಂದು ಪಾತ್ರದಲ್ಲೂ ಅಭೂತಪೂರ್ವ ಅಭಿನಯ ಮತ್ತು ಜೀವಂತಿಕೆಯನ್ನು ತುಂಬಿದ್ದಾರೆ. ನಿಜಕ್ಕೂ ಇದು ಒಬ್ಬ ಶ್ರೇಷ್ಠ ಕಲಾವಿದನಿಗೆ ಸಲ್ಲಬೇಕಾದ ಅರ್ಹ ಗೌರವವಾಗಿದೆ ಎಂದು ತಿಳಿಸಿದ್ದಾರೆ.
ಸಮಸ್ತ ಕನ್ನಡಿಗರಿಗೆ ಅತ್ಯಂತ ಹೆಮ್ಮೆಯ ಕ್ಷಣ: ಸಿಎಂ ಡಿಕೆಶಿ
ಕನ್ನಡ ಚಿತ್ರರಂಗದ ಗರಿಮೆ, ಮೇರು ನಟ ಶ್ರೀ ಅನಂತ್ ನಾಗ್ ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ -2024' ಲಭಿಸಿರುವುದು ಸಮಸ್ತ ಕನ್ನಡಿಗರಿಗೆ ಅತ್ಯಂತ ಹೆಮ್ಮೆಯ ಮತ್ತು ಸಂತಸದ ಕ್ಷಣ.
ತಮ್ಮ ನೈಜ ನಟನೆ, ಸಂಯಮ ಹಾಗೂ ವಿಶಿಷ್ಟ ಪಾತ್ರಗಳ ಮೂಲಕ ದಶಕಗಳ ಕಾಲ ಭಾರತೀಯ ಕಲಾರಂಗವನ್ನು ಶ್ರೀಮಂತಗೊಳಿಸಿದ ಅನಂತ್ ನಾಗ್ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಈ ಗೌರವ ಕನ್ನಡ ಕಲಾಜಗತ್ತಿಗೆ ಸಂದ ಮಹಾನ್ ಮನ್ನಣೆ.
ಸಹಜ ಅಭಿನಯಕ್ಕಾಗಿ ನಟರಿಗೆ ಸ್ಫೂರ್ತಿ: ನಟ ರಮೇಶ್ ಅರವಿಂದ್
ನಟ ರಮೇಶ್ ಅರವಿಂದ್ ಪ್ರತಿಕ್ರಿಯಿಸಿ, ಸಂತೋಷದ ಸುದ್ದಿ!, ಶ್ರೀ ಅನಂತ್ ನಾಗ್ ಅವರು ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ಅಭಿನಂದನೆಗಳು ಸರ್. ‘ಹಂಸಗೀತೆ’ಯಿಂದ ಹಿಡಿದು ‘ಗೋಧಿ ಬಣ್ಣ’ದವರೆಗಿನ ಅವರ ಪಯಣವು, ಕಳೆದ ನಾಲ್ಕು ದಶಕಗಳಿಂದ longest running MasterClass in Acting ಆಗಿದೆ. ಅತ್ಯಂತ ಘನತೆ ಮತ್ತು ಸಹಜ ನೈಜತೆಯಿಂದ ಅಭಿನಯಿಸಲು ನಟರಿಗೆ ಸ್ಫೂರ್ತಿ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್ ಎಂದು ತಿಳಿಸಲಾಗಿದೆ.