ಬೆಂಗಳೂರು: ಸದ್ಯ ಸ್ಯಾಂಡಲ್‌ವುಡ್ ಮಾತ್ರವಲ್ಲ, ದಕ್ಷಿಣ ಭಾರತೀಯ ಚಿತ್ರರಂಗವಷ್ಟೇ ಅಲ್ಲ ಇಡೀ ಭಾರತೀಯರು ತುದಿಗಾಲಿನಲ್ಲಿ ನಿಂತು ಕುತೂಹಲದಿಂದ ನಿರೀಕ್ಷಿರುತ್ತಿರುವ ಚಿತ್ರ ʼಕಾಂತಾರ ಚಾಪ್ಟರ್ 1ʼ (Kantara Chapter 1). 2022ರಲ್ಲಿ ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿ, ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡು, ಇಡೀ ಭಾರತೀಯರೇ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದ ʼಕಾಂತಾರʼ (Kantara) ಚಿತ್ರದ ಪ್ರೀಕ್ವೆಲ್ ಇದು. ರಿಷಬ್ ಶೆಟ್ಟಿ (Rishabh Shetty) ನಿರ್ದೇಶಿಸಿ, ನಾಯಕನಾಗಿ ನಟಿಸಿರುವ 'ಕಾಂತಾರ' ಪ್ರೇಕ್ಷಕರ ಜತೆಗೆ ವಿಮರ್ಶಕರ ಗಮನವನ್ನೂ ಸೆಳೆದಿತ್ತು. ಹೀಗಾಗಿ ಇದರ ಪ್ರೀಕ್ವೆಲ್ ಘೋಷಿಸಿದಾಗ ಸಿನಿಪ್ರಿಯರ ನಿರೀಕ್ಷೆ ಸಹಜವಾಗಿಯೇ ಗರಿಗೆದರಿತ್ತು. ಚಿತ್ರ ನೋಡಬೇಕೆಂಬ ಕಾತುರ ಆಗಲೇ ಚಿಗುರೊಡೆದಿತ್ತು. ಇದೀಗ ಪ್ರೀಕ್ವೆಲ್ ಜತೆಗೆ ಸೀಕ್ವೆಲ್ ಬರುತ್ತಿದೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ.
ʼಕಾಂತಾರʼ ಚಿತ್ರ ನೋಡಿ ರೋಮಾಂಚನಗೊಂಡಿದ್ದ ಪ್ರೇಕ್ಷಕರ ಪಾಲಿಗೆ ಇದು ಢಬಲ್ ಧಮಾಕ. ಹೌದು, ʼಕಾಂತಾರ ಚಾಪ್ಟರ್ 1ʼ (ಪ್ರೀಕ್ವೆಲ್) ಜತೆಗೆ ʼಕಾಂತಾರ ಚಾಪ್ಟರ್ 2ʼ (ಸೀಕ್ವೆಲ್) ಕೂಡ ತಯಾರಾಗುತ್ತಿದೆ ಎನ್ನಲಾಗಿದೆ. ಈಗಾಗಲೇ ʼಕಾಂತಾರ ಚಾಪ್ಟರ್ 1ʼ ಶೂಟಿಂಗ್ ಆರಂಭವಾಗಿದೆ. ಈ ವರ್ಷ ರಿಲೀಸ್ ಮಾಡುವುದಾಗಿಯೂ ಚಿತ್ರತಂಡ ಘೋಷಿಸಿದೆ. ಅ. 2ರಂದು ಬಿಡುಗಡೆ ದಿನಾಂಕವನ್ನು ನಿಗದಿಪಡಿಸಲಾಗಿದೆ. ಇದರ ಮಧ್ಯೆ ಸೀಕ್ವೆಲ್ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಪ್ರಕಟಣೆ ಹೊರಡಿಸದಿದ್ದರೂ ಈ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.
ʼಕಾಂತಾರ ಚಾಪ್ಟರ್ 1' ಸಿನಿಮಾದ ರಿಲೀಸ್ ಬಗ್ಗೆ ರಿಷಬ್ ಶೆಟ್ಟಿ ಹಂಚಿಕೊಂಡ ಪೋಸ್ಟ್:
ಈ ಸುದ್ದಿಯನ್ನೂ ಓದಿ: Kantara Chapter 1: ರಿಷಬ್ ಶೆಟ್ಟಿಯ 'ಕಾಂತಾರ: ಚಾಪ್ಟರ್ 1' ರಿಲೀಸ್ ಡೇಟ್ ಮುಂದೂಡಿಕೆ ಆಯ್ತಾ? ಇಲ್ಲಿದೆ ಚಿತ್ರತಂಡದ ಸ್ಪಷ್ಟನೆ
ʼಕಾಂತಾರʼ ಸಿನಿಮಾದ ಕಥೆ ನಡೆಯುವ ಮುನ್ನ ಏನಾಗಿತ್ತು ಎನ್ನುವುದನ್ನು ರಿಷಬ್ ಶೆಟ್ಟಿ ಪ್ರೀಕ್ವೆಲ್ ಅಂದರೆ ಚಾಪ್ಟರ್ 1ರಲ್ಲಿ ಹೇಳಲಿದ್ದಾರಂತೆ. ಇದು ಕದಂಬರ ಕಾಲಘಟ್ಟದಲ್ಲಿ ನಡೆಯಲಿದ್ದು, ಇದಕ್ಕಾಗಿ ರಿಷಬ್ ಶೆಟ್ಟಿ ಕುದುರೆ ಸವಾರಿ, ಪ್ರಾಚೀನ ಯುದ್ದಕಲೆ ಕಳರಿಪಯಟ್ಟು ಕಲಿತಿದ್ದಾರೆ. ಇನ್ನು ಚಾಪ್ಟರ್ 2ರಲ್ಲಿ ಅಂದರೆ ಸೀಕ್ವೆಲ್‌ನಲ್ಲಿ ʼಕಾಂತಾರʼ ಚಿತ್ರದ ಕಥೆಯ ನಂತರ ಏನಾಗಲಿದೆ ಎನ್ನುವುದನ್ನು ವಿವರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣ
ವಿಜಯ್ ಕಿರಗಂದೂರು ಒಡೆತನದ ಹೊಂಬಾಳೆ ಫಿಲ್ಮ್ಸ್ ʼಕಾಂತಾರʼ ಮತ್ತು ʼಕಾಂತಾರ ಚಾಪ್ಟರ್ 1ʼ ಚಿತ್ರವನ್ನು ನಿರ್ಮಿಸಿದೆ. ಜತೆಗೆ ಚಾಪ್ಟರ್ 2ಕ್ಕೂ ಬಂಡವಾಳ ಹೂಡಲಿದೆ ಎನ್ನಲಾಗಿದೆ. ಸುಮಾರು 16 ಕೋಟಿ ರೂ. ವೆಚ್ಚದಲ್ಲಿ ತಯಾರಾದ ʼಕಾಂತಾರʼ ಬಾಕ್ಸ್ ಆಫೀಸ್‌ನಲ್ಲಿ ಗಳಿಸಿದ್ದು ಬರೋಬ್ಬರಿ 400 ಕೋಟಿ ರೂ. ಇನ್ನು ʼಕಾಂತಾರ ಚಾಪ್ಟರ್ 1ʼ ಅನ್ನು ಸುಮಾರು 125 ಕೋಟಿ ರೂ.ಯಲ್ಲಿ ನಿರ್ಮಿಸಲಾಗುತ್ತಿದೆ. ಅದ್ಧೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಮತ್ತೊಂದು ಮ್ಯಾಜಿಕ್ ಮಾಡಲು ಸಜ್ಜಾಗಿದೆ.
ಕುಂದಾಪುರದಲ್ಲಿ ಬೃಹತ್ ಸೆಟ್ ಹಾಕಿ ʼಕಾಂತಾರ ಚಾಪ್ಟರ್ 1ʼ ಚಿತ್ರದ ಶೂಟಿಂಗ್ ಆರಂಭಿಸಲಾಗಿತ್ತು. ಅದಾದ ಬಳಿಕ ಹಾಸನದಲ್ಲಿಯೂ ಚಿತ್ರೀಕರಣ ನಡೆಸಲಾಗಿದೆ. ಅದಾಗ್ಯೂ ರಿಷಬ್ ಶೆಟ್ಟಿ ಹೊರತು ಪಡಿಸಿ ಈ ಸಿನಿಮಾದಲ್ಲಿ ಯಾರೆಲ್ಲ ನಟಿಸುತ್ತಿದ್ದಾರೆ ಎನ್ನುವ ಗುಟ್ಟು ರಟ್ಟಾಗಿಲ್ಲ. ಈ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಇದೆ. ʼಕಾಂತಾರʼ ಚಿತ್ರದಲ್ಲಿ ಬಿ.ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದ ಹಾಡುಗಳು ಗಮನ ಸೆಳೆದಿದ್ದವು. ಹೀಗಾಗಿ ಈ ಸಿನಿಮಾದ ಮ್ಯೂಸಿಕ್ ಬಗ್ಗೆಯೂ ಕುತೂಹಲ ಮನೆ ಮಾಡಿದೆ.