ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Priyanka Chopra Jonas: ಸಾವಿರಾರು ಮಂದಿಯ ರೋಲ್‌ ಮಾಡೆಲ್‌ ಪ್ರಿಯಾಂಕಾ ಚೋಪ್ರಾ ಮನಸೋತಿದ್ದು ಸೀಬೆ ಮಾರುವ ಮಹಿಳೆಗೆ; ಪಿಂಕಿ ಹೇಳಿದ ಸ್ಫೂರ್ತಿದಾಯಕ ಕಥೆ ಇದು

Priyanka Chopra: ಗ್ಲೋಬಲ್‌ ಐಕಾನ್‌ ಪ್ರಿಯಾಂಕಾ ಚೋಪ್ರಾ ಇದೀಗ ಬಹಳ ವರ್ಷಗಳ ಬಳಿಕ ಭಾರತೀಯ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಟಾಲಿವುಡ್‌ನ ಎಸ್‌.ಎಸ್‌.ರಾಜಮೌಳಿ ಮತ್ತು ಮಹೇಶ್‌ ಬಾಬು ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ 'ಎಸ್‌ಎಸ್‌ಎಂಬಿ 29' ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಅವರು ವಿಶಾಖಪಟ್ಟಣಂನಲ್ಲಿ ನಡೆದ ಸ್ಫೂರ್ತಿದಾಯಕ ಘಟನೆಯನ್ನು ಹಂಚಿಕೊಂಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ಸೀಬೆ ಮಾರುವ ಮಹಿಳೆಗೆ ಮನಸೋತಿದ್ದು ಏಕೆ?

ಪ್ರಿಯಾಂಕಾ ಚೋಪ್ರಾ.

Profile Ramesh B Mar 19, 2025 8:02 PM

ಮುಂಬೈ: ಬಾಲಿವುಡ್‌ನಿಂದ ಹಾಲಿವುಡ್‌ಗೆ ಹಾರಿ ಗ್ಲೋಬಲ್‌ ಐಕಾನ್‌ ಆಗಿರುವ ಪ್ರಿಯಾಂಕಾ ಚೋಪ್ರಾ ಜೋನಸ್‌ (Priyanka Chopra Jonas) ಇದೀಗ ಬಹು ದಿನಗಳ ಬಳಿಕ ಭಾರತೀಯ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಟಾಲಿವುಡ್‌ನ ಎಸ್‌.ಎಸ್‌.ರಾಜಮೌಳಿ (SS Rajamouli) ಮತ್ತು ಮಹೇಶ್‌ ಬಾಬು (Mahesh Babu) ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ 'ಎಸ್‌ಎಸ್‌ಎಂಬಿ 29' (SSMB 29) ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಳ್ಳುತ್ತಿದ್ದಾರೆ. ಒಡಿಶಾದಲ್ಲಿ ನಡೆದ ಚಿತ್ರೀಕರಣದಲ್ಲಿ ಅವರು ಭಾಗಿಯಾಗಿದ್ದ ಫೋಟೊ ಸೋಶಿಯಲ್‌ ಮೀಡಿಯಾದಲ್ಲಿ ಇತ್ತೀಚೆಗೆ ವೈರಲ್‌ ಆಗಿತ್ತು. ಇದೀಗ ಅವರು ತಮ್ಮ ಗಮನ ಸೆಳೆದ ಸೀಬೆ ಮಾರಾಟ ಮಾಡುವ ಮಹಿಳೆಯೊಬ್ಬರ ಸ್ಫೂರ್ತಿದಾಯಕ ಕಥೆಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಬಡತನವಿದ್ದರೂ ಸ್ವಾಭಿಮಾನ ಮರೆಯದ ಮಹಿಳೆಯ ಮಾತು ಹೃದಯಕ್ಕೆ ನಾಟಿದ್ದಾಗಿ ತಿಳಿಸಿದ್ದಾರೆ.

ಪರಿಶ್ರಮದ ಮೂಲಕ ಗಮನ ಸೆಳೆದ ಮಹಿಳೆಯ ಹೃದಯ ಸ್ಪರ್ಶಿ ಘಟನೆಯನ್ನು ಹಂಚಿಕೊಂಡ ಪ್ರಿಯಾಂಕಾ ತಮ್ಮ ಧನ ಸಹಾಯವನ್ನು ನಿರಾಕರಿಸುವ ಮೂಲಕ ಅವರು ನಿಜವಾಗಿಯೂ ಪ್ರೇರೇಪಣೆ ನೀಡಿದರು ಎಂದು ಹೇಳಿದ್ದಾರೆ.

ಪ್ರಿಯಾಂಕಾ ಚೋಪ್ರಾ ಅವರ ವಿಡಿಯೊ ಇಲ್ಲಿದೆ:

ಈ ಸುದ್ದಿಯನ್ನೂ ಓದಿ: SSMB 29: ಮಹೇಶ್‌ ಬಾಬು-ರಾಜಮೌಳಿ ಕಾಂಬಿನೇಷನ್‌ ಚಿತ್ರಕ್ಕೆ ಮಾಲಿವುಡ್‌ ಸೂಪರ್‌ ಸ್ಟಾರ್‌ ಎಂಟ್ರಿ

ಪ್ರಿಯಾಂಕಾ ಚೋಪ್ರಾ ಹೇಳಿದ್ದೇನು?

ʼʼಇವತ್ತು ನಾನು ಸ್ಫೂರ್ತಿದಾಯಕ ಘಟನೆಗೆ ಸಾಕ್ಷಿಯಾದೆ. ಮುಂಬೈಗೆ ತೆರಳಿ ಅಲ್ಲಿಂದ ನ್ಯೂಯಾರ್ಕ್‌ಗೆ ಹಿಂತಿರುಗಲು ವಿಶಾಖಪಟ್ಟಣಂಗೆ ಪ್ರಯಾಣ ಬೆಳೆಸುತ್ತಿದ್ದೆ. ಈ ವೇಳೆ ರಸ್ತೆ ಬದಿ ಸೀಬೆ ಮಾರುತ್ತಿದ್ದ ಮಹಿಳೆಯೊಬ್ಬರು ಕಂಡು ಬಂದರು. ನನಗೆ ಕಾಯಿ ಸೀಬೆ ಎಂದರೆ ಬಹಳ ಇಷ್ಟ. ಹೀಗಾಗಿ ಕಾರು ನಿಲ್ಲಿಸಿ ಎಷ್ಟೆಂದು ಕೇಳಿದೆ. ಅವರು 150 ರೂ. ಎಂದರು. ನಾನು 200 ರೂ ನೀಡಿದೆ. ಸೀಬೆ ನೀಡಿದ ಅವರು ಚಿಲ್ಲರೆಗಾಗಿ ತಡಕಾಡತೊಡಗಿದರು. ಚಿಲ್ಲರೆ ಬೇಡ. ಅದನ್ನು ನೀವೇ ಇಟ್ಟುಕೊಳ್ಳಿ ಎಂದೆʼʼ ಎಂಬುದಾಗಿ ಪ್ರಿಯಾಂಕಾ ಘಟನೆಯನ್ನು ವಿವರಿಸಿದ್ದಾರೆ.

ಬಳಿಕ ಆ ಮಹಿಳೆ ಹೇಗೆ ತಮ್ಮ ಹೃದಯ ಗೆದ್ದರು ಎನ್ನುವುದನ್ನು ತಿಳಿಸಿದ್ದಾರೆ. ʼʼಸ್ಪಲ್ಪ ದೂರ ಹೋದ ಮಹಿಳೆ ಟ್ರಾಫಿಕ್‌ ಸಿಗ್ನಲ್‌ ಕ್ಲಿಯರ್‌ ಆಗುವ ಮುನ್ನವೇ ಹಿಂದಿರುಗಿ ಹೆಚ್ಚುವರಿ 2 ಸೀಬೆ ನೀಡಿದರು. ಆ ಮೂಲಕ ಧನ ಸಹಾಯವನ್ನು ನಯವಾಗಿ ನಿರಾಕರಿಸಿದರು. ಹೆಚ್ಚುವರಿ ಹಣಕ್ಕೆ ಹೆಚ್ಚುವರಿ ಸೀಬೆ ನೀಡಿ ತಮ್ಮ ಸ್ವಾಭಿಮಾನವನ್ನು ಮೆರೆದರು. ಅವರ ಈ ಸ್ವಾಭಿಮಾನದ ನಡೆ ನನ್ನ ಹೃದಯಕ್ಕೆ ನಾಟಿದೆʼʼ ಎಂದು ಹೇಳಿದ್ದಾರೆ. ಜತೆಗೆ ತಾವು ಖರೀದಿಸಿದ ಸೀಬೆಯ ಫೋಟೊವನ್ನೂ ಶೇರ್‌ ಮಾಡಿಕೊಂಡಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ

ಸದ್ಯ ಪ್ರಿಯಾಂಕಾ ಚೋಪ್ರಾ ಅವರ ಈ ಪೋಸ್ಟ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಹಲವರು ಹಾರ್ಟ್‌ ಎಮೋಜಿ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಹಿಳೆಯ ಸ್ವಾಭಿಮಾನದ ನಡೆಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

ಸಾವಿರ ಕೋಟಿ ರೂ. ಬಜೆಟ್‌?

ಮೊದಲ ಬಾರಿ ಒಂದಾಗುತ್ತಿರುವ ಮಹೇಶ್‌ ಬಾಬು-ಪ್ರಿಯಾಂಕಾ ಚೋಪ್ರಾ-ರಾಜಮೌಳಿ ಕಾಂಬಿನೇಷನ್‌ನ 'ಎಸ್‌ಎಸ್‌ಎಂಬಿ 29' ಚಿತ್ರ ಬರೋಬ್ಬರಿ 900-1,000 ಕೋಟಿ ರೂ. ವೆಚ್ಚದಲ್ಲಿ ತಯಾರಾಗಲಿದೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ಇದು 2 ಭಾಗಗಳಲ್ಲಿ ತೆರೆಗೆ ಬರಲಿದ್ದು, ಮುಂದಿನ ವರ್ಷದ ತನಕ ಶೂಟಿಂಗ್‌ ನಡೆಯಲಿದೆ. ಮೊದಲ ಭಾಗ 2027ರಲ್ಲಿ ಮತ್ತು 2ನೇ ಭಾಗ 2029ರಲ್ಲಿ ಬಿಡುಗಡೆಯಾಗಲಿದೆ.