Pushpa 3: ಅಲ್ಲು ಅರ್ಜುನ್ ಫ್ಯಾನ್ಸ್‌ಗೆ ಭರ್ಜರಿ ಗುಡ್‌ನ್ಯೂಸ್; ʼಪುಷ್ಪ 3ʼ ಬಂದೇಬರುತ್ತೆ ಎಂದ ನಿರ್ದೇಶಕ ಸುಕುಮಾರ್
Sukumar: ಭಾರತೀಯ ಚಿತ್ರರಂಗದಲ್ಲಿ ಹೊಸದೊಂದು ದಾಖಲೆ ಬರೆದ ಟಾಲಿವುಡ್‌ನ ಪುಷ್ಪ ಸರಣಿಯ ಮುಂದಿನ ಭಾಗವನ್ನು ತೆರೆಗೆ ತರುವುದಾಗಿ ನಿರ್ದೇಶಕ ಸುಕುಮಾರ್ ಘೋಷಿಸಿದ್ದಾರೆ. ಐಫಾ ಪ್ರಶಸ್ತಿ ಪ್ರದಾನ ವೇದಿಕೆಯಲ್ಲಿ ʼಪುಷ್ಪ 3ʼ ಚಿತ್ರವನ್ನು ತೆರೆಗೆ ತರುವುದಾಗಿ ತಿಳಿಸಿದ್ದಾರೆ.

-

ಹೈದರಾಬಾದ್: ಟಾಲಿವುಡ್ ಸ್ಟೈಲ್ ಐಕಾನ್ ಅಲ್ಲು ಅರ್ಜುನ್ (Allu Arjun) ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಅಭಿಮಾನಿಗಳಿಗೆ ನಿರ್ದೇಶಕ ಸುಕುಮಾರ್ (Sukumar) ಭರ್ಜರಿ ಗುಡ್‌ನ್ಯೂಸ್ ನೀಡಿದ್ದಾರೆ. ʼಪುಷ್ಪʼ (Pushpa) ಸರಣಿ ಚಿತ್ರಗಳಲ್ಲಿ ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಜೋಡಿಯನ್ನು ಮೆಚ್ಚಿಕೊಂಡಿದ್ದ ಫ್ಯಾನ್ಸ್ ಮತ್ತೊಮ್ಮೆ ಇವರನ್ನು ಕಣ್ತುಂಬಿಕೊಳ್ಳಲು ವೇದಿಕೆ ಸಜ್ಜಾಗಿದೆ. ಹೌದು, ನಿರ್ದೇಶಕ ಸುಕುಮಾರ್ ʼಪುಷ್ಪ 3ʼ (Pushpa 3) ಚಿತ್ರವನ್ನು ತೆರೆಮೇಲೆ ತರುವುದಾಗಿ ಘೋಷಿಸಿದ್ದಾರೆ. ಆ ಮೂಲಕ ಅಭಿಮಾನಿಗಳ ಬಹುದಿನಗಳ ಕನಸು ನನಸಾಗಿಸುವ ಭರವಸೆ ನೀಡಿದ್ದಾರೆ.
ಕಳೆದ ವರ್ಷ ತೆರೆಕಂಡ ʼಪುಷ್ಪ 2ʼ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಯಶಸ್ಸು ಗಳಿಸಿತ್ತು. 2021ರಲ್ಲಿ ರಿಲೀಸ್ ಆಗಿದ್ದ ʼಪುಷ್ಪʼ ಚಿತ್ರದ ಸೀಕ್ವೆಲ್ ಆಗಿದ್ದ ಇದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕಮಾಲ್ ಮಾಡಿತ್ತು. ಮುಂದಿನ ಭಾಗಕ್ಕೆ ಹಿಂಟ್ ಕೊಟ್ಟೇ ನಿರ್ದೇಶಕ ಸುಕುಮಾರ್ 2ನೇ ಭಾಗವನ್ನು ಕೊನೆಗೊಳಿಸಿದ್ದರು. ಇದರಲ್ಲಿನ ಭರ್ಜರಿ ಆ್ಯಕ್ಷನ್ ದೃಶ್ಯಗಳಿಗೆ ಮನಸೋತಿದ್ದ ಪ್ರೇಕ್ಷಕರು ಮುಂದಿನ ಭಾಗಕ್ಕಾಗಿ ಕಾದು ಕುಳಿತಿದ್ದಾರೆ. ಇದೀಗ ನಿರ್ದೇಶಕರೇ ತ್ರೀಕ್ವೆಲ್ ಘೋಷಿಸಿದ್ದು, ಯಾವಾಗ ಸೆಟ್ಟೇರಲಿದೆ ಎನ್ನುವ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ.
Pushpa 3 Rampage will Be There For Sure ✨️🔥@alluarjun @iamRashmika pic.twitter.com/N5OoQyr4eD
— North Icons (@NorthAlluFans) September 6, 2025
ಈ ಸುದ್ದಿಯನ್ನೂ ಓದಿ: Pushpa 2: 'ಪುಷ್ಪ 2' ಚಿತ್ರದ ಗಂಗಮ್ಮ ಥಲ್ಲಿ ಲುಕ್‍ನಲ್ಲಿ ಸಖತ್ ಆಗಿ ಹೆಜ್ಜೆ ಹಾಕಿದ ಅಲ್ಲು ಅರ್ಜುನ್ ಅಭಿಮಾನಿ; ವಿಡಿಯೊ ವೈರಲ್
ಸುಕುಮಾರ್ ಹೇಳಿದ್ದೇನು?
ಇತ್ತೀಚೆಗೆ ದುಬೈಯಲ್ಲಿ ನಡೆದ ಐಫಾ ಪ್ರಶಸ್ತಿ ವಿರತಣಾ ಸಮಾರಂಭದ ವೇದಿಕೆಯಲ್ಲಿ ಸುಕುಮಾರ್ ʼಪುಷ್ಪ 3ʼ ಚಿತ್ರದ ಬಗ್ಗೆ ಮಾಹಿತಿ ನೀಡಿದರು. ʼಪುಷ್ಪ 2ʼ ಚಿತ್ರ ಈ ವೇಳೆ 5 ಪ್ರತಿಷ್ಠಿತ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ವೇದಿಕೆಗೆ ಬಂದ ಸುಕುಮಾರ್ ಬಳಿ ನಿರೂಪಕರು, ʼʼಪುಷ್ಪ 3ʼ ನಿಜಕ್ಕೂ ಬರುತ್ತಾ?ʼʼ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಸುಕುಮಾರ್, ʼʼಖಂಡಿತವಾಗಿಯೂ ʼಪುಷ್ಪ 3ʼ ಬಂದೇ ಬರುತ್ತೆʼʼ ಎಂದು ಘೋಷಿಸಿದರು. ಸುಕುಮಾರ್ ಇದನ್ನು ಹೇಳುತ್ತಿದ್ದಂತೆ ಅಲ್ಲು ಅರ್ಜುನ್ ಫ್ಯಾನ್ಸ್ ಹುಚ್ಚೆದ್ದು ಕುಣಿದಿದ್ದಾರೆ.
ಯಾವೆಲ್ಲ ಪ್ರಶಸ್ತಿ ಮುಡಿಗೇರಿಸಿಕೊಂಡ ʼಪುಷ್ಪ 2'?
'ಪುಷ್ಪ 2' ಐಫಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 5 ಪ್ರತಿಷ್ಠಿತ ಅವಾರ್ಡ್ ಪಡೆದುಕೊಂಡಿದೆ. ಅಲ್ಲು ಅರ್ಜುನ್ (ಉತ್ತಮ ನಟ), ರಶ್ಮಿಕಾ ಮಂದಣ್ಣ (ಉತ್ತಮ ನಟಿ), ಸುಕುಮಾರ್ (ಉತ್ತಮ ನಿರ್ದೇಶಕ), ದೇವಿಶ್ರೀ ಪ್ರಸಾದ್ (ಉತ್ತಮ ಸಂಗೀತ ನಿರ್ದೇಶಕ) ಮತ್ತು ಶಂಕರ್ ಬಾಬು ಕಂಡುಕುರಿ (ಉತ್ತಮ ಗಾಯಕ-ʼಪೀಲಿಂಗ್ಸ್ʼ ಹಾಡು).
ಯಾವಾಗ ಸೆಟ್ಟೇರಲಿದೆ?
ಅದಾಗ್ಯೂ ʼಪುಷ್ಪ 3ʼ ಚಿತ್ರದ ಸದ್ಯದಲ್ಲೇ ಸೆಟ್ಟೇರುವುದು ಅನುಮಾನ. ಯಾಕೆಂದರೆ ಅಲ್ಲು ಅರ್ಜುನ್, ಸುಕುಮಾರ್ ಮತ್ತು ರಶ್ಮಿಕಾ ಇದೀಗ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲು ಅರ್ಜುನ್ ನಿರ್ದೇಶಕ ಅಟ್ಲಿ ಅವರ ಸೈನ್ಸ್ ಫಿಕ್ಷನ್ ಚಿತ್ರವನ್ನು ಒಪ್ಪಿಕೊಂಡಿದ್ದು ಇದು ನವೆಂಬರ್‌ನಲ್ಲಿ ಆರಂಭವಾಗಲಿದೆ. ಇದರಲ್ಲಿ ಅವರು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜತೆ ತೆರೆ ಹಂಚಿಕೊಳ್ಳಲಿದ್ದಾರೆ. ಇನ್ನು ಸುಕುಮಾರ್ ರಾಮ್ ಚರಣ್ ಅವರ ಮುಂದಿನ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಇತ್ತ ರಶ್ಮಿಕಾ ತೆಲುಗಿನ ʼದಿ ಗರ್ಲ್‌ಫ್ರೆಂಡ್ʼ ಮತ್ತು ಹಿಂದಿಯ ʼಥಮಾʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರೊಂದಿಗೆ ಬೇರೆ ಬೇರೆ ಪ್ರಾಜೆಕ್ಟ್‌ನಲ್ಲಿ ಅವರ ಹೆಸರು ಕೇಳಿ ಬಂದಿದೆ. ಇದೆಲ್ಲ ಮುಗಿಸಿ ಇವರು ʼಪುಷ್ಪ 3ʼ ಚಿತ್ರಕ್ಕಾಗಿ ಕೆಲಸ ಮಾಡಲಿದ್ದಾರೆ.