ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼಕಾಂತಾರ 3' ಬಗ್ಗೆ ಬಿಗ್‌ ಅಪ್‌ಡೇಟ್‌ ಕೊಟ್ಟ ರಿಷಬ್‌ ಶೆಟ್ಟಿ; ಚಿತ್ರ ಯಾವಾಗ ಆರಂಭ?

Rishab Shetty: ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಪರಿಚಯಿಸಿದ ʼಕಾಂತಾರʼ ಚಿತ್ರದ ಸೀಕ್ವೆಲ್‌ಗಾಗಿ ಕಾಯುತ್ತಿರುವವರಿಗಾಗಿ ರಿಷಬ್‌ ಶೆಟ್ಟಿ ಗುಡ್‌ನ್ಯೂಸ್‌ ನೀಡಿದ್ದಾರೆ. ಕೇರಳಂನ ತಿರುವನಂತಪುರಂಗೆ ಆಗಮಿಸಿದ ರಿಷಬ್‌ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ʼಕಾಂತಾರ 3ʼ ಸದ್ಯದಲ್ಲೇ ಆರಂಭವಾಗಲಿದೆ ಎಂದಿದ್ದಾರೆ.

ತಿರುವನಂತಪುರಂನಲ್ಲಿ ರಿಷಬ್‌ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ

ತಿರುವನಂತಪುರಂ, ಸೆ. 15: ರಿಷಬ್‌ ಶೆಟ್ಟಿ (Rishab Shetty) ಸದ್ಯ ಪ್ಯಾನ್‌ ಇಂಡಿಯಾ ಸ್ಟಾರ್‌, ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಸಹನಟನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಅವರು ಇದೀಗ ದೇಶದ ಬಹು ಬೇಡಿಕೆಯ ಸ್ಟಾರ್‌ ಎನಿಸಿಕೊಂಡಿದ್ದಾರೆ. ʼಕಾಂತಾರʼ (Kantara) ಚಿತ್ರದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡ ಅವರು ಕಳೆದ ವರ್ಷ ತೆರೆಕಂಡ ʼಕಾಂತಾರʼ ಚಿತ್ರದ ಪ್ರೀಕ್ವೆಲ್‌ ʼಕಾಂತಾರ ಚಾಪ್ಟರ್‌ 1' ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಈ ಚಿತ್ರದ ಕೊನೆಯಲ್ಲಿ ʼಕಾಂತಾರ 3'ಯ (Kantara 3) ಸೂಚನೆ ನೀಡಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದ್ದ ಅವರು ಇದೀಗ ಈ ಚಿತ್ರದ ಬಗ್ಗೆ ಮಹತ್ವದ ಅಪ್‌ಡೇಟ್‌ ಕೊಟ್ಟಿದ್ದಾರೆ. ಆ ಮೂಲಕ ʼಕಾಂತಾರʼ ಸೀಕ್ವೆಲ್‌ ನಿರೀಕ್ಷೆಯಲ್ಲಿದ್ದವರಿಗೆ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ.

ಮಲಯಾಳಂ ನಟಿ ಅಹಾನ ಕೃಷ್ಣ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಕೇರಳಂನ ತಿರುವನಂತಪುರಂಗೆ ಆಗಮಿಸಿದ ರಿಷಬ್‌ ಶೆಟ್ಟಿ-ಪ್ರಗತಿ ಶೆಟ್ಟಿ ದಂಪತಿ ಶ್ರೀ ಪದ್ಮನಾಭಸ್ವಾಮಿ ಮತ್ತು ಅಟ್ಟುಕಲ್‌ ಭಗವತಿ ದೇಗುಲಕ್ಕೆ ಭೇಟಿ ನೀಡಿದರು. ಈ ವೇಳೆ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ರಿಷಬ್‌ ಶೆಟ್ಟಿ ʼಕಾಂತಾರ 3', ಮುಂದಿನ ಪ್ರಾಜೆಕ್ಟ್‌ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡರು.

ʼಕಾಂತಾರ 3' ಯಾವಾಗ?

ʼʼಖಂಡಿತವಾಗಿಯೂ ʼಕಾಂತಾರ 3' ಬರಲಿದೆ. ʼಕಾಂತಾರ ಚಾಪ್ಟರ್‌ 1' ಸಿನಿಮಾದಲ್ಲಿ ಘೋಷಿಸಿದಂತೆ ಸೀಕ್ವೆಲ್‌ ಮಾಡ್ತೇವೆ. ಯಾವಾಗ ಬರಲಿದೆ, ಹೇಗೆ ಬರಲಿದೆ ಎನ್ನುವುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಸಮಯ ಬಂದಾಗ ಎಲ್ಲವೂ ಗೊತ್ತಾಗಲಿದೆʼʼ ಎಂದು ಹೇಳುವ ಮೂಲಕ ಅಡ್ಡ ಗೋಡೆಯ ಮೇಲೆ ದೀಪವಿಟ್ಟು ಕುತೂಹಲ ಹೆಚ್ಚಿಸಿದ್ದಾರೆ.

ಕಾಂತಾರ ಚಾಪ್ಟರ್ 1 ಯಶಸ್ಸಿನ ಬೆನ್ನಲ್ಲೆ ಮುಂಬೈ ಸಿದ್ಧಿ ವಿನಾಯಕ ದೇಗುಲಕ್ಕೆ ಭೇಟಿ ನೀಡಿದ ನಟ ರಿಷಬ್‌ ಶೆಟ್ಟಿ!

ಮುಂದಿನ ಪ್ರಾಜೆಕ್ಟ್‌

ಇನ್ನು ಮುಂದಿನ ಪ್ರಾಜೆಕ್ಟ್‌ ಬಗ್ಗೆಯೂ ರಿಷಬ್‌ ಶೆಟ್ಟಿ ಗುಟ್ಟು ಬಿಟ್ಟು ಕೊಟ್ಟಿದ್ದಾರೆ. ʼʼಸದ್ಯ ʼಜೈ ಹನುಮಾನ್‌ʼ ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದೇನೆ. ಈಗಾಗಲೇ ಸಿನಿಮಾದ 2 ಹಂತದ ಚಿತ್ರೀಕರಣ ಮುಗಿದಿದೆ. ಚೆನ್ನಾಗಿ ನಡೆಯುತ್ತಿದೆʼʼ ಎಂದು ತಿಳಿಸಿದ್ದಾರೆ.

ಕೇರಳಂ ಪ್ರೇಕ್ಷಕರ ಬಗ್ಗೆ ಮೆಚ್ಚುಗೆ

ಕನ್ನಡ ಮತ್ತು ಮಲಯಾಳಂ ಚಿತ್ರರಂಗಗಳು ಪರಸ್ಪರ ಸಹಕಾರದಿಂದ ಕಾರ್ಯ ನಿರ್ವಹಿಸುತ್ತಿರುವುದಾಗಿಯೂ ರಿಷಬ್‌ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜತೆಗೆ ತಮ್ಮ ಚಿತ್ರಕ್ಕೆ ಕೇರಳಂ ಪ್ರೇಕ್ಷಕರು ಬೆಂಬಲ ನೀಡುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ʼʼನಮ್ಮ ಮೇಲೆ ಪ್ರೀತಿ ತೋರಿಸುತ್ತಿರುವುದಕ್ಕೆ ಮಲಯಾಳಂ ಪ್ರೇಕ್ಷಕರಿಗೆ ಧನ್ಯವಾದಗಳು. ನಮ್ಮ ಕೆಲಸ ಮೆಚ್ಚಿದಾಗ ಖುಷಿಯಾಗುತ್ತೆ. ಕನ್ನಡ ಮತ್ತು ಮಲಯಾಳಂ ಇಂಡಸ್ಟ್ರಿ ನಡುವೆ ಉತ್ತಮ ಬಾಂಧವ್ಯವಿದೆ. ನಮ್ಮ ಟೆಕ್ನಿಕಲ್‌ ಟೀಂನಲ್ಲಿ ಕೇರಳಂ ತಂತ್ರಜ್ಞರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆʼʼ ಎಂದು ವಿವರಿಸಿದ್ದಾರೆ.

ಕಾಂತಾರ ಚಾಪ್ಟರ್‌ 1 ಎಂಬ ಮೂರು ಗಂಟೆಗಳ ರೋಮಾಂಚನ!

ಮಲಯಾಳಂ ಪ್ರೇಕ್ಷಕರು ಮೆಚ್ಚಿದ ʼಕಾಂತಾರʼ ಸರಣಿ

2022ರಲ್ಲಿ ತೆರೆಕಂಡ ʼಕಾಂತಾರʼ ಹಾಗೂ 2025ರಲ್ಲಿ ರಿಲೀಸ್‌ ಆದ ʼಕಾಂತಾರ ಚಾಪ್ಟರ್‌ 1' ಚಿತ್ರಗಳಿಗೆ ಕೇರಳಂನಲ್ಲಿ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಕನ್ನಡ ಚಿತ್ರವಾದರೂ ತಮ್ಮದೇ ಚಿತ್ರ ಎನ್ನುವಂತೆ ಅಲ್ಲಿನ ಪ್ರೇಕ್ಷಕರು ಎರಡೂ ಕೈಚಾಚಿ ಸ್ವಾಗತಿಸಿದ್ದಾರೆ. ಅದರಲ್ಲೂ ʼಕಾಂತಾರ ಚಾಪ್ಟರ್‌ 1' ಸಿನಿಮಾದಲ್ಲಿ ಕೇರಳಂನ ಕಳರಿಪಯಟ್ಟು ಬಳಕೆಯಾಗಿದ್ದು, ಅಲ್ಲಿನ ಟೀಂ ರಿಷಬ್‌ ಶೆಟ್ಟಿ ಸೇರಿ ಇತರ ಕಲಾವಿದರಿಗೆ ತರಬೇತಿ ನೀಡಿದ್ದರು. ಜತೆಗೆ ಮಲಯಾಳಂನ ಹಿರಿಯ ನಟ ಜಯರಾಂ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಮನರಂಜನೆ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author