ಬೆಂಗಳೂರು: ರಶ್ಮಿಕಾ ಮಂದಣ್ಣ (Rashmika Mandanna), ಶ್ರೀಲೀಲಾ (Sreeleela) ಬಳಿಕ ಇದೀಗ ಸ್ಯಾಂಡಲ್‌ವುಡ್‌ನ ಮತ್ತೊಬ್ಬ ಚೆಲುವೆ ರುಕ್ಮಿಣಿ ವಸಂತ್ (Rukmini Vasanth) ಪರಭಾಷೆಯಲ್ಲೂ ಬೇಡಿಕೆ ಕುದುರಿಸಿಕೊಂಡಿದ್ದಾರೆ. 2023ರಲ್ಲಿ ತೆರೆಕಂಡ ʼಸಪ್ತ ಸಾರದಾಚೆ ಎಲ್ಲೋʼ ಕನ್ನಡ ಚಿತ್ರದಲ್ಲಿನ ಪ್ರಿಯಾ ಪಾತ್ರದ ಮೂಲಕ ವಿಮರ್ಶಕರ ಗಮನ ಸೆಳೆದ ರುಕ್ಮಿಣಿ ವಸಂತ್ (Rukmini Vasanth) ಆ ಮೂಲಕ ಪರಭಾಷಿಕರ ಕಣ್ಣಿಗೆ ಬಿದ್ದು, ಅಲ್ಲೂ ಛಾಪು ಮೂಡಿಸುತ್ತಿದ್ದಾರೆ. ಸದ್ಯ ಅವರು ಕನ್ನಡ, ತಮಿಳು ಮತ್ತು ತೆಲುಗಿನ ಹಲವು ಚಿತ್ರಗಳಲ್ಲಿ ನಿರತರಾಗಿದ್ದಾರೆ. ಇವೆಲ್ಲ ಸ್ಟಾರ್ ನಟರ ಚಿತ್ರಗಳು. ಅಲ್ಲದೆ ಇವು ಈಗಾಗಲೇ ಕೂತೂಹಲ ಮೂಡಿಸಿರುವ ಪ್ಯಾನ್ ಇಂಡಿಯಾ ಸಿನಿಮಾಗಳು ಎನ್ನುವುದು ವಿಶೇಷ. ಇತ್ತೀಚೆಗಷ್ಟೇ ರುಕ್ಮಿಣಿ ʼಕಾಂತಾರ: ಚಾಪ್ಟರ್ 1ʼ ಚಿತ್ರದಲ್ಲಿ ನಟಿಸುತ್ತಿರುವ ವಿಚಾರ ಬಹಿರಂಗವಾಗಿತ್ತು. ಇದೀಗ ಮತ್ತೊಂಡು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಇವರ ಹೆಸರು ಕೇಳಿ ಬಂದಿದೆ. ಅದರಲ್ಲೂ ಯಶ್ (Yash) ನಟನೆಯ ಚಿತ್ರದಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ.
ಗೀತು ಮೋಹನ್‌ದಾಸ್ ನಿರ್ದೇಶನದ, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ನಿರ್ಮಾಣವಾಗುತ್ತಿರುವ, ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿರುವ 'ಟಾಕ್ಸಿಕ್' ಸಿನಿಮಾದಲ್ಲಿ ರುಕ್ಮಿಣಿ ವಸಂತ್ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಈ ಸುದ್ದಿಯನ್ನೂ ಓದಿ: Rukmini Vasanth: ʼಕಾಂತಾರʼ ಜಗತ್ತಿಗೆ ಕಾಲಿಟ್ಟಿದ್ದೇ ಥ್ರಿಲ್ಲಿಂಗ್ ಅನುಭವ: ಕನಕವತಿ ಪಾತ್ರದ ಬಗ್ಗೆ ರುಕ್ಮಿಣಿ ವಸಂತ್ ಹೇಳಿದ್ದೇನು?
ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿದ 'ಕೆಜಿಎಫ್' ಸರಣಿ ಚಿತ್ರಗಳ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬದಲಾದ ಯಶ್ ನಟಿಸುತ್ತಿರುವ ʼಟಾಕ್ಸಿಕ್ʼ ಸಿನಿಮಾ ಈಗಾಗಲೇ ನಿರೀಕ್ಷೆ ಮೂಡಿಸಿದೆ. ರೆಟ್ರೋ ಶೈಲಿಯಲ್ಲಿ ಮೂಡಿ ಬರುತ್ತಿರುವ ಇದು ಹಾಲಿವುಡ್ ಚಿತ್ರದ ರೇಂಜ್‌ನಲ್ಲಿ ನಿರ್ಮಾಣವಾಗುತ್ತಿದೆ. ಈ ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಇದೀಗ ಮತ್ತೊಂದು ಪಾತ್ರಕ್ಕೆ ರುಕ್ಮಿಣಿ ವಸಂತ್ ಆಯ್ಕೆಯಾಗಿದ್ದಾರೆ ಎನ್ನಲಾಗಿದ್ದು, ಈಗಾಗಲೇ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರಂತೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರ ಬರಬೇಕಿದೆ.
ʼಕಾಂತಾರ: ಚಾಪ್ಟರ್ 1ʼ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ನಟಿಸುತ್ತಿರುವ ವಿಚಾರ ಗುಟ್ಟಾಗಿ ಇಡಲಾಗಿತ್ತು. ಚಿತ್ರೀಕರಣ ಪೂರ್ಣಗೊಂಡರೂ ನಾಯಕಿ ಯಾರು ಎನ್ನುವ ರಹಸ್ಯ ಹೊರ ಬಿದ್ದಿರಲಿಲ್ಲ. ಕೆಲವು ದಿನಗಳ ಹಿಂದೆ ಚಿತ್ರತಂಡ ಅಧಿಕೃತವಾಗಿ ಇವರ ಫಸ್ಟ್ ಲುಕ್ ರಿಲೀಸ್ ಆಗಿತ್ತು. ಕನಕವತಿ ಪಾತ್ರದಲ್ಲಿ ಅವರು ಕಾಣಿಸಿಕೊಂಡಿರುವ ಬಗ್ಗೆ ತಿಳಿಸಿತ್ತು. ಇತ್ತ ʼಟಾಕ್ಸಿಕ್ʼ ಸಿನಿಮಾದಲ್ಲಿ ಅವರು ನಟಿಸುತ್ತಿರುವ ವಿಚಾರವನ್ನೂ ಗುಟ್ಟಾಗಿ ಇಡಲಾಗಿದ್ದು, ಸದ್ಯದಲ್ಲೇ ಅವರ ಪಾತ್ರವನ್ನು ರಿವೀಲ್ ಮಾಡುವ ಸಾಧ್ಯತೆ ಇದೆ.
ಯಶ್ ಅವರ ಹುಟ್ಟಹಬ್ಬದ ಹಿನ್ನೆಲೆಯಲ್ಲಿ ಜ. 8ರಂದು ರಿಲೀಸ್ ಆಗಿರುವ ʼಟಾಕ್ಸಿಕ್ʼ ಚಿತ್ರದ ಟೀಸರ್ ಈಗಾಗಲೇ ಗಮನ ಸೆಳೆದಿದ್ದು, ದಾಖಲೆಯ ವೀಕ್ಷಣೆ ಕಂಡಿದೆ. ರೆಟ್ರೋ ಶೈಲಿಯಲ್ಲಿ ಚಿತ್ರ ಮೂಡಿ ಬರುತ್ತಿರುವ ಸೂಚನೆಯನ್ನು ಈ ಟೀಸರ್ ಬಹಿರಂಗಪಡಿಸಿದ್ದು, ಯಶ್ ಅವರ ಸ್ಟೈಲಿಶ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. 2026ರ ಮಾರ್ಚ್ 19ರಂದು ಚಿತ್ರ ತೆರೆ ಕಾಣಲಿದೆ. ಇದರೊಂದಿಗೆ ರುಕ್ಮಿಣಿ ವಸಂತ್ ಪ್ರಶಾಂತ್ ನೀಲ್-ಜೂ. ಎನ್‌ಟಿಆರ್ ಕಾಂಬಿನೇಷನ್‌ನ ಮುಂದಿನ ತೆಲುಗು ಚಿತ್ರದಲ್ಲಿಯೂ, ತಮಿಳಿನ ʼಮದರಾಸಿʼ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.