ಬೆಂಗಳೂರು: ಭಾರತೀಯ ಸಿನಿಮಾ ಇತಿಹಾಸದಲ್ಲಿ ಶ್ರೇಷ್ಠ ನಟಿಯರಲ್ಲಿ ಮಹಾನಟಿ ಸಾವಿತ್ರಿ (Mahanati savitri) ಅವರೂ ಒಬ್ಬರೆಂದು ಪರಿಗಣಿಸಲಾಗುತ್ತದೆ. ಅಂತಹ ಖ್ಯಾತ ನಟಿ ಸಿನಿಮಾಗೆ ತಾವು ಹಾಡಲ್ಲ ಎಂದು ಗಾಯಕಿ ಎಸ್. ಜಾನಕಿ (Singer S Janaki) ಅವರು ಖಡಾಖಂಡಿತವಾಗಿ ಹೇಳಿಬಿಟ್ಟಿದ್ದರು. ಅಷ್ಟೇ ಅಲ್ಲದೇ ಅವರು ಕೊನೆಯವರೆಗೂ ಅದೇ ಮಾತಿನ ಮೇಲೆ ನಿಂತಿದ್ದರು. ಆದರೆ, ಸಾವಿತ್ರಿ ವಿಷಯದಲ್ಲಿ ಜಾನಕಿ ಅವರಿಗೆ ಅಷ್ಟೊಂದು ಬೇಸರವಾಗಲು ಕಾರಣವೇನು? ಎಂಬ ಕುರಿತ ಮಾಹಿತಿ ಇಲ್ಲಿದೆ.
ಸ್ಟಾರ್ ಹೀರೋಗಳಿಗಿಂತ ದೊಡ್ಡ ಇಮೇಜ್‌ನಿಂದ ಗಮನ ಸೆಳೆದಿದ್ದ ಮಹಾನಟಿ ಸಾವಿತ್ರಿ ಅವರು ಒಂದು ಕಾಲದಲ್ಲಿ ಬಹಳಷ್ಟು ಬೇಡಿಕೆಯ ನಟಿಯಾಗಿದ್ದರು. ಅದೇ ರೀತಿ ಆ ಕಾಲದ ಸ್ಟಾರ್ ಗಾಯಕಿಯರಲ್ಲಿ ಎಸ್. ಜಾನಕಿ ಕೂಡ ಒಬ್ಬರು. ಅವರು ಮೂರು ತಲೆಮಾರುಗಳ ನಟಿಯರಿಗೆ ಹಾಡಿದ್ದಾರೆ. ಜಾನಕಿ ಅವರು ತೆಲುಗು, ತಮಿಳು, ಮಲಯಾಳಂ, ಕನ್ನಡ, ಹಿಂದಿ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ.
ಜಾನಕಿ ಅವರು ಯಾವುದೇ ಭಾಷೆಯಲ್ಲಿ ಹಾಡಿದರೂ, ಆ ಭಾಷೆಯವರು 'ಜಾನಕಿ ನಮ್ಮವರು' ಎನ್ನುವಷ್ಟು ಪ್ರೀತಿ ಗಳಿಸಿದ್ದರು. ಸುಮಾರು 20 ಭಾಷೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಜಾನಕ ಅವರು ಹಾಡಿದ್ದಾರೆ. ಆದರೆ, ಹೀರೋಯಿನ್‌ಗಳ ವಿಷಯಕ್ಕೆ ಬಂದರೆ, 'ನಾನು ಎಲ್ಲರಿಗೂ ಹಾಡುತ್ತೇನೆ, ಆದರೆ ಸಾವಿತ್ರಿಗೆ ಹಾಡುವುದಿಲ್ಲ' ಎಂದು ಹೇಳಿಬಿಟ್ಟಿದ್ದರು.
ಸಾವಿತ್ರಿ ಸಿನಿಮಾಗೆ ಹಾಡಲ್ಲ ಎಂದಿದ್ದು ಯಾಕೆ?
ಜಾನಕಿ ಅವರು ಸಂದರ್ಶನವೊಂದರಲ್ಲಿ ಸಾವಿತ್ರಿ ವಿಷಯದ ಬಗ್ಗೆ ಸ್ಪಷ್ಟನೆ ನೀಡಿದ್ದರು. ಸಾವಿತ್ರಿ ಅವರ ವೃತ್ತಿಜೀವನದ ಆರಂಭದಿಂದಲೂ ಅವರಿಗೆ ಹೆಚ್ಚಾಗಿ ಹಾಡಿದ್ದು ಪಿ. ಲೀಲಾ. 'ಮಾಯಾ ಬಜಾರ್', 'ಮಿಸ್ಸಮ್ಮ'ನಂತಹ ಸಿನಿಮಾಗಳಲ್ಲಿ ಲೀಲಾ ಸೂಪರ್ ಹಿಟ್ ಹಾಡುಗಳನ್ನು ಹಾಡಿದ್ದರು. ಅವರ ನಂತರ, ಸಾವಿತ್ರಿ ಅವರು ಪಿ. ಸುಶೀಲಾ ಅವರಿಗೆ ಹೆಚ್ಚು ಅವಕಾಶಗಳನ್ನು ನೀಡುತ್ತಿದ್ದರು. 'ನನ್ನ ಹಾಡುಗಳನ್ನು ಸುಶೀಲಾ ಅವರೇ ಹಾಡಬೇಕು' ಎಂದು ಸಾವಿತ್ರಿ ಒಂದು ನಿಯಮವನ್ನೇ ಇಟ್ಟುಕೊಂಡಿದ್ದರು.
ಒಮ್ಮೆ ತಮಿಳು ಸಿನಿಮಾವೊಂದರಲ್ಲಿ ಸಾವಿತ್ರಿ ಅವರ ಪಾತ್ರಕ್ಕೆ ಜಾನಕಿ ಒಂದು ಹಾಡನ್ನು ಹಾಡಿದ್ದರು. ಆ ಹಾಡು ಅದ್ಭುತವಾಗಿ ಮೂಡಿಬಂದಿದ್ದರೂ, ಅದನ್ನು ಬೇಡವೆಂದು ಮತ್ತೆ ಸುಶೀಲಮ್ಮ ಅವರಿಂದ ರೀ-ಟೇಕ್ ಮಾಡಿಸಲಾಯಿತು. ಆ ಘಟನೆಯಿಂದ ಬೇಸರಗೊಂಡ ಜಾನಕಿ, ಅಂದಿನಿಂದ ಸಾವಿತ್ರಿ ಅವರ ಹಾಡುಗಳನ್ನು ಹಾಡಬಾರದೆಂದು ನಿರ್ಧರಿಸಿದ್ದರು. ಈ ವಿಷಯವನ್ನು ಸ್ವತಃ ಜಾನಕಿ ಅವರೇ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
Singer S Janaki: ಗಾನ ಕೋಗಿಲೆ ಎಸ್.ಜಾನಕಿ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳಿವು!
'ಸಾವಿತ್ರಿಗೆ ಸುಶೀಲಾ ಅವರ ಧ್ವನಿ ಎಂದರೆ ಇಷ್ಟ. ಅವರ ನಟನೆಗೆ ಸುಶೀಲಾ ಧ್ವನಿಯೇ ಸರಿಹೊಂದುತ್ತದೆ ಎಂಬುದು ಅವರ ಅಭಿಪ್ರಾಯವಾಗಿರಬಹುದು. ಅದಕ್ಕೇ ನಾನು ಹಾಡುತ್ತೇನೆ ಎಂದರೂ ಅವರು ಒಪ್ಪುತ್ತಿರಲಿಲ್ಲ. 'ನೀಲಿಲ ಪಾಡೇದ ದೇವ' ಹಾಡನ್ನು ಕೂಡ ನಾನು ಹಾಡುವುದಿಲ್ಲ ಎಂದು ಹೇಳಿದ್ದೆ. ಆ ಹಾಡಿನಲ್ಲಿ ಸಾವಿತ್ರಿ ನಟಿಸುತ್ತಿದ್ದ ಕಾರಣ, ಅದನ್ನು ಹಾಡಲು ಒಪ್ಪದೆ 3 ತಿಂಗಳು ಪೆಂಡಿಂಗ್ ಇಟ್ಟಿದ್ದೆ. ಕೊನೆಗೆ, ನಿರ್ಮಾಪಕರು ಮತ್ತು ನಿರ್ದೇಶಕರು 'ಆ ಹಾಡಿನಲ್ಲಿ ಸಾವಿತ್ರಿ ನಟಿಸುತ್ತಿಲ್ಲ' ಎಂದು ಹೇಳಿದ ಮೇಲೆ ಹಾಡಲು ಒಪ್ಪಿಕೊಂಡೆ. ಆದರೆ ಕೊನೆಗೆ ಆ ಹಾಡಿನಲ್ಲಿ ಸಾವಿತ್ರಿ ಅವರೇ ನಟಿಸಿದ್ದರು' ಎಂದು ಜಾನಕಿ ಹೇಳಿದ್ದರು.