ಮುಂಬೈ, ಜ. 27: 2013ರಲ್ಲಿ ರಿಲೀಸ್ ಆದ ಹಿಂದಿಯ 'ಆಶಿಕಿ 2' ಚಿತ್ರದ ʼತುಮ್ ಹಿ ಹೋʼ ಹಾಡಿನ ಮೂಲಕ ಯುವ ಜನತೆಯ ಮನ ಗೆದ್ದ ಬಾಲಿವುಡ್ ಗಾಯಕ, ಸಂಗೀತ ನಿರ್ದೇಶಕ ಅರಿಜಿತ್ ಸಿಂಗ್ (Arijit Singh) ಧಿಡೀರ್ ನಿವೃತ್ತಿ ಘೋಷಿಸುವ ಮೂಲಕ ಅಭಿಮಾನಿಗೆ ಆಘಾತ ನೀಡಿದ್ದಾರೆ. ಭಾವಪೂರ್ಣ ಧ್ವನಿಯ ಮೂಲಕವೇ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಅರಿಜಿತ್ ಇನ್ನುಮುಂದೆ ಹಿನ್ನೆಲೆ ಗಾಯಕನಾಗಿ ಮುಂದುವರಿಯುವುದಿಲ್ಲ ಎಂದು ಘೋಷಿಸಿದ್ದಾರೆ. 2 ಬಾರಿ ಅತ್ಯುತ್ತಮ ಗಾಯಕ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದ ಅವರು ಕನ್ನಡ ಹಾಡಿಗೂ ಧ್ವನಿ ನೀಡಿದ್ದಾರೆ. ಜತೆಗೆ ಅನೇಕ ಹಿಟ್ ಹಾಡುಗಳ ಸರದಾರ ಎನಿಸಿಕೊಂಡ ಅವರು ಇದೀಗ ದಿಢೀರ್ ನಿವೃತ್ತಿ ಘೋಷಿಸಿದ್ದು, ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ಸೋಶಿಯಲ್ ಮೀಡಿಯಾ ಮೂಲಕ ನಿವೃತ್ತಿ ಸುದ್ದಿ ಪ್ರಕಟಿಸಿದ ಅವರು ಸೂಕ್ತ ಕಾರಣ ನೀಡಿಲ್ಲ. ʼʼಇನ್ನು ಮುಂದೆ ನಾನು ಹಿನ್ನೆಲೆ ಗಾಯಕನಾಗಿ ಯಾವುದೇ ಹೊಸ ಪ್ರಾಜೆಕ್ಟ್ ತೆಗೆದುಕೊಳ್ಳುವುದಿಲ್ಲʼʼ ಎಂದಿದ್ದಾರೆ. ಒಪ್ಪಿಕೊಂಡ ಪ್ರಾಜೆಕ್ಟ್‌ಗಳನ್ನು ಅವರು ಪೂರ್ಣಗೊಳಿಸಲಿದ್ದಾರೆ. ಅದಾಗ್ಯೂ ಸ್ವತಂತ್ರವಾಗಿ ಸಂಗೀತ ಲೋಕದಲ್ಲಿ ಮುಂದುವರಿಯಲಿದ್ದಾರೆ ಎನ್ನಲಾಗಿದೆ. ಬಹುಷಃ ಸಂಗೀತ ನಿರ್ದೇಶನದಂತಹ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದು ಎನ್ನಲಾಗಿದೆ.
ಅರಿಜಿತ್ ಸಿಂಗ್ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್:
ಸಲ್ಮಾನ್ ಖಾನ್ ಜತೆಗೆ ದಶಕಗಳ ಮುನಿಸು
ಅರಿಜಿತ್ ಸಿಂಗ್ ನಿವೃತ್ತಿ ಘೋಷಿಸುತ್ತಿದ್ದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ಜತೆಗಿನ ಅವರ ದಶಕದ ಕಾಲ ಮುಂದುವರಿದ ಮುನಿಸು ಮತ್ತೆ ಮುನ್ನೆಲೆಗೆ ಬಂದಿದೆ. 2014ರಲ್ಲಿ ನಡೆದ ಚಿಕ್ಕ ಘಟನೆ ಇವರಿಬ್ಬರ ಮಧ್ಯೆ ಮುನಿಸಿಗೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಸಲ್ಮಾನ್ ತಮ್ಮ ಚಿತ್ರಗಳಿಂದ ಅರಿಜಿತ್ ಹಾಡನ್ನು ಕಿತ್ತು ಹಾಕಿ ಬೇರೆ ಗಾಯಕರಿಂದ ಹಾಡಿಸಿದ್ದರು. ಕೊನೆಗೆ ಇವರ ಮುನಿಸು 2023ರಲ್ಲಿ ಕರಗಿ ಈ ಬಾಲಿವುಡ್ ದಿಗ್ಗಜರು ಒಂದಾಗಿದ್ದರು.
ಹಿನ್ನೆಲೆ ಗಾಯನದಿಂದ ನಿವೃತ್ತಿ ಘೋಷಿಸಿದ ಅರಿಜಿತ್ ಸಿಂಗ್
ಅಂದು ಏನಾಗಿತ್ತು?
ಅದು 2014ರ ಲ್ಲಿ ನಡೆದ ಖಾಸಗಿ ಪ್ರಶಸ್ತಿ ಪ್ರದಾನ ಸಮಾರಂಭ. ಆ ಕಾರ್ಯಕ್ರಮಕ್ಕೆ ಸಲ್ಮಾನ್ ಖಾನ್ ನಿರೂಪಕ. ಪ್ರಶಸ್ತಿ ಸ್ವೀಕರಿಸಲು ಅರಿಜಿತ್ ವೇದಿಕೆ ಬಂದಿದ್ದರು. ಆಗ ಸಲ್ಮಾನ್ ಖಾನ್ ಅರಿಜಿತ್ ಸಿಂಗ್ ಕಾಲೆಳೆದಿದ್ದರು. ನಿರಂತರ ಕಾರ್ಯಕ್ರಮ ನೀಡಿ ಬಳಲಿದ್ದ ಅರಿಜಿತ್ ಸಾಧಾರಣ ಬಟ್ಟೆ ತೊಟ್ಟು ವೇದಿಕೆ ಮೇಲೆ ಬಂದಿದ್ದರು. ಇದನ್ನು ಕಂಡು ಸಲ್ಮಾನ್, ʼʼಏನು ನಿದ್ದೆ ಮಾಡಿದ್ದೀರಾ?ʼʼ ಎಂದು ಕೇಳಿದ್ದರು. ಅದಕ್ಕೆ ಸ್ವಲ್ಪ ಖಾರವಾಗಿಯೇ ಪ್ರತಿಕ್ರಿಯಿಸಿದ್ದ ಅರಿಜಿತ್, ʼʼನೀವೆಲ್ಲ ನಿದ್ದೆ ಹೋಗುವಂತೆ ಮಾಡಿದ್ದೀರಲ್ಲʼʼ ಎಂದು ಹೇಳಿದ್ದರು.
ಈ ಘಟನೆ ಬಳಿಕ ಇಬ್ಬರ ಮಧ್ಯೆ ಅಂತರ ಮೂಡಿತ್ತು, ಬಿರುಕು ಬಿಟ್ಟಿತ್ತು. ಸಲ್ಮಾನ್ ಖಾನ್ ತಮ್ಮ ʼಕಿಕ್ʼ, ʼಭಜರಂಗಿ ಭಾಯಿಜಾನ್ʼ ಮತ್ತು ʼಸುಲ್ತಾನ್ʼ ಚಿತ್ರಕ್ಕೆ ಅರಿಜಿತ್ ಸಿಂಗ್ ಧ್ವನಿ ನೀಡಿದ್ದ ಹಾಡನ್ನು ಕಿತ್ತು ಹಾಕಿ ಬೇರೆ ಗಾಯಕರಿಂದ ಹಾಡಿಸಿದ್ದರು.
ಅರಿಜಿತ್ ಸಿಂಗ್ 2016ರಲ್ಲಿ ಸಲ್ಮಾನ್ ಖಾನ್ ಜತೆಗೆ ಸಣ್ಣ ಮನಸ್ತಾಪ ಉಂಟಾಗಿತ್ತು ಎಂದಿದ್ದರು. ಅದಾದ ಬಳಿಕ 2023ರಲ್ಲಿ ಇಬ್ಬರು ಸ್ಟಾರ್‌ಗಳು ಮುನಿಸು ಮರೆತು ಒಂದಾಗಿದ್ದರು. ಸಲ್ಮಾನ್-ಕತ್ರಿನಾ ಕೈಫ್ ನಟನೆಯ ʼಟೈಗರ್ 3' ಚಿತ್ರದ ಹಾಡಿಗೆ ಅರಿಜಿತ್ ಧ್ವನಿ ನೀಡಿದ್ದರು. ಸಲ್ಮಾನ್ ಅವರ ಮುಂದಿನ ಚಿತ್ರ ʼಬ್ಯಾಟಲ್ ಆಫ್ ಗಲ್ವಾನ್ʼಗಾಗಿಯೂ ಅರಿಜಿತ್ ಹಾಡಿದ್ದಾರೆ.
ಬಿಗ್ ಬಾಸ್ ವೇದಿಕೆಯಲ್ಲಿ ಪ್ರಸ್ತಾವಿಸಿದ್ದ ಸಲ್ಮಾನ್
ಸಲ್ಮಾನ್ ಖಾನ್ ಇತ್ತೀಚೆಗೆ ಬಿಗ್ ಬಾಸ್ 19ರ ವೇದಿಕೆಯಲ್ಲಿಅರಿಜಿತ್ ಜತೆಗಿನ ಮುನಿಸನ್ನು ಪ್ರಸ್ತಾವಿಸಿದ್ದರು. ತನ್ನದೇ ತಪ್ಪಿನಿಂದ ಅರಿಜಿತ್ ಜತೆಗೆ ಮುನಿಸು ಉಂಟಾಯಿತು ಎಂದಿದ್ದರು. ʼʼತಪ್ಪು ತಿಳುವಳಿಕೆ ಸಂಪೂರ್ಣವಾಗಿ ತನ್ನ ಕಡೆಯಿಂದಲೇ ಆಗಿದೆ. ಅರಿಜಿತ್ ಅವರದ್ದು ತಪ್ಪೇನಿಲ್ಲʼʼ ಎಂದು ಅವರು ಒಪ್ಪಿಕೊಂಡಿದ್ದರು.
ಕನ್ನಡದಲ್ಲಿಯೂ ಹಾಡಿದ್ದ ಅರಿಜಿತ್
38 ವರ್ಷದ ಅರಿಜಿತ್ ಹಿಂದಿ, ಕನ್ನಡ ಸೇರಿದಂತೆ ತೆಲುಗು, ತಮಿಳು, ಬೆಂಗಾಳಿ, ಗುಜರಾತಿ, ಮರಾಠಿ ಮುಂತಾದ ಭಾಷೆಗಳಲ್ಲಿ ಹಾಡಿದ್ದಾರೆ. 2025ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಅವರು ಕನ್ನಡದ 2 ಹಾಡುಗಳಿಗೆ ಧ್ವನಿ ನೀಡಿದ್ದಾರೆ. 2014ರಲ್ಲಿ ತೆರೆಗೆ ಬಂದ ಪುನೀತ್ ರಾಜ್‌ಕುಮಾರ್ ನಟನೆಯ ʼನಿನ್ನಿಂದಲೇʼ ಸಿನಿಮಾದ ʼಮೌನ ತಾಳಿತೆʼ ಮತ್ತು 2022ರ ಬ್ರಹ್ಮಾಸ್ತ್ರ ಚಿತ್ರದ ʼದೇವ ದೇವʼ ಹಾಡನ್ನು ಹಾಡಿದ್ದಾರೆ.