ಬೆಂಗಳೂರು: ವಿಭಿನ್ನ ಕಥಾಹಂದರದ ಧಾರಾವಾಹಿಗಳು ಹಾಗೂ ಕಾರ್ಯಕ್ರಮಗಳ ಮೂಲಕ ಸದಾಕಾಲ ವೀಕ್ಷಕರನ್ನು ರಂಜಿಸುತ್ತಿರುವ ಕನ್ನಡಿಗರ ಹೆಮ್ಮೆಯ 'ಸ್ಟಾರ್ ಸುವರ್ಣ' ವಾಹಿನಿಯಲ್ಲಿ ಶುರುವಾಗಲಿದೆ ಅಪ್ಪನಿಲ್ಲದ ಒಂದು ಕುಟುಂಬದ ಕಥೆ 'ವಸುದೇವ ಕುಟುಂಬ' (Vasudeva Kutumba) ವಸುದೇವನ ಕುಟುಂಬವು ಸಮಾಜದಲ್ಲಿ ಅಪಾರ ಪ್ರೀತಿ, ಗೌರವವನ್ನು ಪಡೆದಿರುತ್ತೆ. ಹಳ್ಳಿಯಲ್ಲಿ ಊರ ಹಬ್ಬದ ಸಡಗರ ಜೊತೆಗೆ ಹಿರಿಮಗಳ ಮದುವೆ ಸಿದ್ಧತೆಯು ವಿಜೃಂಭಣೆಯಿಂದ ಸಾಗುತ್ತಿರುತ್ತದೆ. ಆದರೆ ಸಂತೋಷದಿಂದ ತುಂಬಿದ್ದ ಈ ಕುಟುಂಬದಲ್ಲಿ ಆಕಸ್ಮಿಕವಾಗಿ ಸಂಭವಿಸುವಂತಹ ಆ ಒಂದು ದುರ್ಘಟನೆಯು ಎಲ್ಲರ ಜೀವನವನ್ನು ತಲೆಕೆಳಗಾಗಿಸುವಂತೆ ಮಾಡುತ್ತದೆ. ಇದರಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತದೆ ಈ ವಸುದೇವ ಕುಟುಂಬ.
ಇಂತಹ ಸಂಕಷ್ಟದ ಸಮಯದಲ್ಲಿ ಕಥಾನಾಯಕಿ ಸ್ವಾತಿ, ತನ್ನ ತಾಳ್ಮೆ ಮತ್ತು ಧೈರ್ಯದಿಂದ ತಾಯಿ ಹಾಗೂ ಅಕ್ಕ-ತಂಗಿಯರಿಗೆ ಹೇಗೆ ಆಧಾರವಾಗಿ ನಿಲ್ತಾಳೆ? ತನ್ನ ದುಃಖವನ್ನು ಮರೆತು ಕುಟುಂಬದ ಬದುಕನ್ನು ಮರು ಕಟ್ಟುವಲ್ಲಿ ಸ್ವಾತಿ ಯಶಸ್ವಿಯಾಗ್ತಾಳಾ? ಹಾಗು ಮನೆತನದ ಮಾನ-ಗೌರವವನ್ನು ಹೇಗೆ ಕಾಪಾಡ್ತಾಳೆ ಎಂಬುದೇ ಈ ಕಥೆಯ ಮುಖ್ಯ ಆಶಯ.
ಇನ್ನು ಈ ಸೀರಿಯಲ್ ನ ಮುಖ್ಯ ಆಕರ್ಷಣೆ ಅಂದ್ರೆ ಸ್ಯಾಂಡಲ್ವುಡ್ ನ ಖ್ಯಾತ ನಟ ಅವಿನಾಶ್ ಇದೇ ಮೊದಲ ಬಾರಿಗೆ ಸ್ಟಾರ್ ಸುವರ್ಣ ವಾಹಿನಿಯ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಡಲಿ ದ್ದಾರೆ. ಬಹುಭಾಷಾ ನಟರಾಗಿರುವ ಅವಿನಾಶ್ 'ವಸುದೇವ ಕುಟುಂಬ' ಧಾರಾವಾಹಿಯಲ್ಲಿ ವಸುದೇವ ಎಂಬ ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಇದನ್ನು ಓದಿ:Bhagya Lakshmi Serial: ಆಫೀಸ್ನಲ್ಲಿ ಭಾಗ್ಯಾಗೆ ಸನ್ಮಾನ ಮಾಡಲು ಮುಂದಾದ ಆದೀ: ತಾಂಡವ್ಗೆ ಶಾಕ್
ಅಪಾರ ತಾರಾಬಳಗವನ್ನು ಹೊಂದಿರೋ ಈ ಧಾರಾವಾಹಿಯಲ್ಲಿ ಜನಪ್ರಿಯ ನಟಿ ಅಂಜಲಿ, ನಾಲ್ಕು ಹೆಣ್ಣು ಮಕ್ಕಳ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಭಾವನಾ ಪಾಟೀಲ್, ಚೈತ್ರಾ ತೋಟದ್, ಬೃಂದಾ ಕಶ್ಯಪ್, ಆರಾಧ್ಯ, ಹಂಸ, ಭಗತ್ ಹಾಗು ಆರ್.ಜೆ ಅನೂಪ ಸೇರಿದಂತೆ ಇನ್ನು ಅನೇಕ ಅನುಭವಿ ಕಲಾವಿದರು ಅಭಿನಯಿಸುತ್ತಿದ್ದಾರೆ. 'ಕೋರಮಂಗಲ ಟಾಕೀಸ್' ಎಂಬ ಸಂಸ್ಥೆಯಡಿ ನಿರ್ದೇಶಕ ಅನಿಲ್ ಕೋರಮಂಗಲ ಈ ಧಾರಾವಾಹಿಯನ್ನು ನಿರ್ಮಿಸಿ, ನಿರ್ದೇಶಿ ಸುತ್ತಿದ್ದಾರೆ.
ಒಂದೇ ಬೇರು, ಕವಲು ನೂರು ಎಂಬ ಅಡಿಬರಹದೊಂದಿಗೆ ಶುರುವಾಗ್ತಿದೆ ಹೊಸ ಕಥೆ "ವಸುದೇವ ಕುಟುಂಬ" ಇದೇ ಸೋಮವಾರದಿಂದ (ಸೆಪ್ಟೆಂಬರ್ 15) ಪ್ರತಿದಿನ ರಾತ್ರಿ 8.30 ಕ್ಕೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.