ಯಾರೂ ಊಹಿಸಿರದ ರೀತಿಯಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada season 12) ದಿಢೀರ್ ಸ್ಥಗಿತಗೊಂಡಿದೆ. ಬಿಡದಿಯ ಜಾಲಿವುಡ್ ಸ್ಟುಡಿಯೋದಲ್ಲಿ ಸೆಪ್ಟೆಂಬರ್ 28 ರಂದು ಬಿಬಿಕೆ 12 ಗ್ರ್ಯಾಂಡ್ ಓಪನಿಂಗ್ ನಡೆದಿತ್ತು. ಇದೀಗ ಶೋ ಶುರುವಾಗಿ ಸರಿಯಾಗಿ 9 ದಿನಕ್ಕೆ ತಾತ್ಕಾಲಿಕ ಸ್ಥಗಿತಗೊಂಡಿದೆ. ಪರಿಸರ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಬಿಡದಿಯ ಜಾಲಿವುಡ್ ಸ್ಟುಡಿಯೋಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸೂಕ್ತ ಅನುಮತಿ ಪಡೆಯದ ಕಾರಣ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಗಳು ಈಗ ತಮ್ಮ ತಮ್ಮ ಮನೆಗೆ ಹೋಗುತ್ತಾರಾ?
ಬಿಗ್ ಬಾಸ್ ಮನೆಗೆ ಒಟ್ಟು 19 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಈ ಪೈಕಿ ಇಬ್ಬರು ಸ್ಪರ್ಧಿಗಳಾದ ಆರ್ಜೆ ಅಮಿತ್ ಹಾಗೂ ಕರಿಬಸಪ್ಪ ಕಳೆದ ವಾರಾಂತ್ಯದಲ್ಲಿ ಎಲಿಮಿನೇಟ್ ಆಗಿ ಆಚೆ ಬಂದರು. ಹೀಗಾಗಿ ಸದ್ಯ 17 ಸ್ಪರ್ಧಿಗಳಿದ್ದಾರೆ. ಕಾಕ್ರೋಜ್ ಸುಧಿ, ಮಲ್ಲಮ್ಮ, ಅಶ್ವಿನಿ ಗೌಡ, ಮಾಳು ನಿಪನಾಳ, ಗಿಲ್ಲಿ ನಟ, ಕಾವ್ಯ ಶೈವ, ಅಶ್ವಿನಿ ಎಸ್ಎನ್, ಮಂಜು ಭಾಷಿಣಿ, ಅಭಿಷೇಕ್, ಸತೀಶ್, ಚಂದ್ರಪ್ರಭ, ರಕ್ಷಿತಾ ಶೆಟ್ಟಿ, ರಾಶಿಕಾ, ಧ್ರುವಂತ್, ಜಾನ್ವಿ, ಸ್ಪಂದನಾ, ಧನುಷ್ ಗೌಡ ಕಂಟೆಸ್ಟೆಂಟ್ಗಳಾಗಿದ್ದರು.
ನಿನ್ನೆ (ಅ. 07) ಸಂಜೆ ವೇಳೆಗೆ ಸ್ವತಃ ತಹಶೀಲ್ದಾರ್ ತೇಜಸ್ವಿನಿಯವರು ಮುಂದೆ ನಿಂತು ಸ್ಪರ್ಧಿಗಳನ್ನು ಹೊರಗೆ ಕರೆತಂದರು. ಆರಂಭದಲ್ಲಿ ಇವರನ್ನು ಅಲ್ಲೇ ಪಕ್ಕದಲ್ಲಿದ್ದ ಥಿಯೇಟರ್ಗೆ ಶಿಫ್ಟ್ ಮಾಡಲಾಯಿತು. ಬಳಿಕ ಎಲ್ಲ ಮಾಹಿತಿಯನ್ನ ವಿವರಿಸಿದ ನಂತರ ಎಲ್ಲ ಸ್ಪರ್ಧಿಗಳನ್ನ ಇನ್ನೋವಾ ಕಾರಿನ ಮೂಲಕ ರಾಮನಗರ ತಾಲೂಕಿನ ಬಿಡದಿ ಪಕ್ಕದಲ್ಲಿರುವ ಈಗಲ್ ಟನ್ ರೆಸಾರ್ಟ್ಗೆ ಶಿಫ್ಟ್ ಮಾಡಲಾಯಿತು. ಈ ರೆಸಾರ್ಟ್ನಲ್ಲಿ 12 ರೂಮ್ ಬುಕ್ ಮಾಡಲಾಗಿದೆ ಎಂಬ ಮಾಹಿತಿ ಇದೆ.
ಸದ್ಯ ಇಂದೇ ಬಿಗ್ ಬಾಸ್ ಆಯೋಜಕರು ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ. ನ್ಯಾಯಾಲಯ ನೀಡುವ ಆದೇಶದ ಮೇಲೆ ಬಿಗ್ ಬಾಸ್ ಮುಂದಿನ ಭವಿಷ್ಯ ನಿರ್ಧಾರ ಆಗಲಿದೆ. ಸದ್ಯಕ್ಕೆ ಬಿಗ್ ಬಾಸ್ ಮನೆ ಖಾಲಿ ಖಾಲಿ ಆಗಿದೆ. ಸದ್ಯ ಸ್ಪರ್ಧಿಗಳನ್ನು ಈಗಲ್ ಟನ್ ರೆಸಾರ್ಟ್ನಲ್ಲಿ ಇರಿಸಲಾಗಿದೆ. ಬಿಗ್ ಬಾಸ್ ಮೂರು-ನಾಲ್ಕು ದಿನಗಳಲ್ಲಿ ಪುನಃ ಆರಂಭವಾಗುವ ಸೂಚನೆ ಸಿಕ್ಕರೆ ಸ್ಪರ್ಧಿಗಳು ಇಲ್ಲೇ ಇರುತ್ತಾರೆ. ಎಲ್ಲಾದರು ಈ ಕೇಸ್ ತಿಂಗಳುಗಳ ಕಾಲ ನಡೆಯುವ ಸಾಧ್ಯತೆ ಇದ್ದರೆ ಸ್ಪರ್ಧಿಗಳನ್ನು ತಮ್ಮ ತಮ್ಮ ಮನೆಗೆ ಕಳುಹಿಸಬಹುದು.
BBK 12: ನಿಮ್ಗೆ ಬ್ಯಾಕ್ ಸ್ಟೋರಿ ಗೊತ್ತುಂಟಾ?: ಜಾನ್ವಿಯ ಮೈಚಳಿ ಬಿಡಿಸಿದ ರಕ್ಷಿತಾ ಶೆಟ್ಟಿ
ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಈ ಸ್ಟುಡಿಯೋ, ಕೊಳಚೆ ನೀರನ್ನು ಸಂಸ್ಕರಿಸದೆ ನೇರವಾಗಿ ಮೋರಿಗೆ ಹರಿಬಿಡುತ್ತಿದೆ. ಇದು ಜಲ ಮಾಲಿನ್ಯ ನಿಯಂತ್ರಣ ಮತ್ತು ಸಂರಕ್ಷಣೆ ಕಾಯ್ದೆ 1974ರ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಸ್ಟುಡಿಯೋವನ್ನು ಮುಚ್ಚಲು ಮತ್ತು ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿತ್ತು. ನೋಟಿಸ್ ನೀಡಿದ ಒಂದು ವಾರದ ನಂತರ, ಮಂಗಳವಾರ ಸಂಜೆ ರಾಮನಗರ ಜಿಲ್ಲಾಡಳಿತವು ಪೊಲೀಸ್ ಸಿಬ್ಬಂದಿ ಜತೆ ಜಾಲಿವುಡ್ ಸ್ಟೂಡಿಯೋಗೆ ತೆರಳಿ ಹೊರ ಭಾಗದಿಂದ ಬೀಗ ಹಾಕಲಾಯಿತು.