ಭಾಗ್ಯಲಕ್ಷ್ಮೀ (BhagyaLakshmi Kannada Serial) ಕಲರ್ಸ್ ಕನ್ನಡದ ಹೆಮ್ಮೆಯ ಧಾರಾವಾಹಿ. 800 ಕ್ಕೂ ಅಧಿಕ ಎಪಿಸೋಡ್ ಪ್ರಸಾರ ಕಂಡಿರುವ ಕೆಲವೇ ಕೆಲವು ಧಾರಾವಾಹಿಗಳ ಪೈಕಿ ಇದು ಕೂಡ ಒಂದು. 2022ರ ಅಕ್ಟೋಬರ್ 10 ರಂದು ಭಾಗ್ಯಲಕ್ಷ್ಮಿ ಧಾರಾವಾಹಿ ಭಾಗ್ಯ ಮತ್ತು ಲಕ್ಷ್ಮೀ ಎನ್ನುವ ಅಕ್ಕ ತಂಗಿಯರ ಕಥೆಯಾಗಿ ಆರಂಭವಾಯಿತು. ಬಳಿಕ ತಂಗಿಯ ಕಥೆಯನ್ನು ಲಕ್ಷ್ಮೀ ಬಾರಮ್ಮ ಎಂದು ಮಾಡಿ ಇತ್ತೀಚೆಗಷ್ಟೆ ಈ ಧಾರಾವಾಹಿ ಕೊನೆಗೊಂಡಿತು. ಆದರೆ ಭಾಗ್ಯಲಕ್ಷ್ಮೀ ಸದ್ಯ 935 ಸಂಚಿಕೆಗಳನ್ನು ಪೂರ್ಣಗೊಳಿಸಿ 1000 ಸಂಚಿಕೆಯತ್ತ ದಾಪುಗಾಲಿಡುತ್ತಿದೆ. ಹೀಗಿರುವಾಗ ಈ ಧಾರಾವಾಹಿಯಿಂದ ಪ್ರಮುಖ ಪಾತ್ರಧಾರಿ ಹೊರಬಂದಿದ್ದಾರೆ.
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯಾಳ ತಂಗಿ ಪಾತ್ರ ಮಾಡುತ್ತಿರುವ ಪೂಜಾ ಸದ್ಯ ಕಿಶನ್ ಅನ್ನು ಮದುವೆ ಆಗಿ ರಾಮ್ದಾಸ್ ಮನೆಯ ಸೊಸೆ ಆಗಿದ್ದಾಳೆ. ಈ ಮೂಲಕ ಭಾಗ್ಯ ತನ್ನ ಮೇಲಿದ್ದ ಬಹುದೊಡ್ಡ ಜವಾಭ್ದಾರಿಯನ್ನು ಮುಗಿಸಿದ್ದಾಳೆ. ಅತ್ತ ಪೂಜಾ ರಾಮ್ದಾಸ್ ಮನೆಯಲ್ಲಿ ಆರಂಭದಲ್ಲಿ ಕನ್ನಿಕಾಳ ತೊಂದರೆಯನ್ನು ಸಹಿಸಿಕೊಂಡು ಈಗ ಆಕೆಯ ವಿರುದ್ಧವೇ ತಿರುಗಿಬಿದ್ದು ಸವಾಲು ಹಾಕಿದ್ದಾಳೆ. ಪೂಜಾಳ ಕಥೆ ರೋಚಕವಾಗಿ ಸಾಗುತ್ತಿದೆ ಎಂಬೊತ್ತಿಗೆ ಈ ಪಾತ್ರವನ್ನು ನಿರ್ವಹಿಸುತ್ತಿರುವ ಆಶಾ ಅಯ್ಯನಾರ್ ಈ ಧಾರಾವಾಹಿಯಿಂದ ಹೊರಬಂದಿದ್ದಾರೆ.
ಈ ಕುರಿತು ಆಶಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ‘‘ಎಲ್ಲರಿಗೂ ನಮಸ್ಕಾರ ನಾನು ನಿಮ್ಮ ಭಾಗ್ಯಲಕ್ಷ್ಮಿ ಪೂಜಾ. ಆದರೆ ಇನ್ಮುಂದೆ ಭಾಗ್ಯಲಕ್ಷ್ಮಿಯಲ್ಲಿ ಪೂಜಾ ಆಗಿ ಬರೋಲ್ಲ ಅಂತ ಹೇಳೋಕೆ ತುಂಬಾ ಬೇಸರ ಇದೆ. ಈ ಟೀಂ ನ ಬಿಡೋದು ಸುಲಬದ ಮಾತಾಗಿರಲಿಲ್ಲ ಅನಿವಾರ್ಯ ಕಾರಣಗಳಿಂದಾಗಿ ನಾನು ಭಾಗ್ಯಲಕ್ಷ್ಮಿನ ಬಿಡ್ತಾ ಇದೀನಿ. ಮೂರು ವರ್ಷ ಭಾಗ್ಯಲಕ್ಷ್ಮಿ ಟೀಂ ನನಗೆ ತುಂಬಾನೇ ಸಪೋರ್ಟ್ ಮಾಡಿದೆ ತುಂಬಾನೇ ಮೆಮೊರಿಸ್ ಕೊಟ್ಟಿದೆ ತುಂಬಾನೇ ಕಲಿಸಿದೆ ಅದನ್ನು ನಾನು ನನ್ನ ಜೀವನದಲ್ಲಿ ಯಾವಾಗಲೂ ಅಳವಡಿಸಿಕೊಳ್ಳುತೀನಿ. ನನಗೆ ಭಾಗ್ಯಲಕ್ಷ್ಮಿ ಟೀಂ ನ ಟೆಕ್ನಿಷಿಯನ್ಸ್ ಕಲರ್ಸ್ ಕನ್ನಡ ಟೀಂ, ಜೈ ಮಾತಾ ಕಂಬೈನ್ಸ್ ಪ್ರೊಡಕ್ಷನ್ಸ್ಹೌಸ್ ಹಾಗೂ ಎಲ್ಲಾ ಕಲಾವಿದರು (co-artist ) ತುಂಬಾನೇ ಸಪೋರ್ಟ್ ಮಾಡಿ ತುಂಬಾನೇ ಪ್ರೀತಿ ಕೊಟ್ಟಿದೀರ. ಎಲ್ಲಾ ವಿಷಯದಲ್ಲೂ ನಾನು ಈ ಪಾತ್ರನ ಇಲ್ಲಿ ತನಕ ತರಲು ಕಾರಣ ನೀವೆಲ್ಲರೂ, ನಿಮೆಲರಿಗೂ ನಾನು ಎಷ್ಟು ಥ್ಯಾಂಕ್ಸ್ ಹೇಳಿದರು ಸಾಲೊದಿಲ್ಲ. ಹಾಗೆ ಇಷ್ಟು ವರ್ಷ ಭಾಗ್ಯಲಕ್ಷ್ಮಿನ ಪೂಜಾನ ತುಂಬ ಪ್ರೀತಿ ಇಂದ ಬೆಳಿಸಿಕೊಂಡು ಬಂದಿದೀರಾ ಹಾಗೇನೇ ಇನ್ಮುಂದೆ ಬರುವಂತ ಪೂಜಾನ ಕೂಡ ಅಷ್ಟೇ ಪ್ರೀತಿ ಮಾಡಿ ಅಷ್ಟೇ ಬೆಂಬಲಿಸಿ. ಹಾಗೂ ಭಾಗ್ಯಲಕ್ಷ್ಮಿನ ಇನ್ನೂ ಎತ್ತರಕ್ಕೆ ಬೆಳೆಸಿ ಎಂದು ನನ್ನ ಅಭಿಮಾನಿಗಳಿಗೆ ಹಾಗೂ ನನ್ನ ಪ್ರೀತಿಯ ವೀಕ್ಷಕರಿಗೆ ವಿನಂತಿಸುತ್ತೇನೆ. ಥ್ಯಾಂಕ್ಸ್ ಯು ಸೋ ಮಚ್ ತುಂಬ ಪ್ರೀತಿ ಕೊಟ್ಟು ಇಲ್ಲಿ ತನಕ ಕರೆದುಕೊಂಡು ಬಂದಿದೀರಾ. ಇನ್ನು ಮುಂದೆ ನಾನು ಏನೇ ಮಾಡಿದರೂ ಕೂಡ ಸಪೋರ್ಟ್ ಹಾಗೂ ಪ್ರೀತಿ ಮಾಡಿ ಇದಕೆ ನಾನು ಯಾವಾಗಲೂ ಆಭಾರಿಯಾಗಿರುತ್ತೇನೆ. ಈ ಟೀಂ ಜೊತೆ ಮತ್ತೆ ಭವಿಷ್ಯದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕರೆ ಯಾವದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳದೇ ಕೆಲಸ ಮಾಡ್ತೀನಿ ಯಾಕಂದರೆ ನನಗೆ ಅಷ್ಟು ಪ್ರೀತಿ ಕೊಟ್ಟಿದೆ ಅಷ್ಟು ಸಪೋರ್ಟ್ ಮಾಡಿದೆ ಈ ಚಾನೆಲ್ @colorskannadaofficial ಹಾಗೂ ಜೈ ಮಾತಾ ಕಂಬೈನ್ಸ್ ಹೌಸ್, ನಮ್ಮ ಡೈರೆಕ್ಟರ್, ಕ್ಯಾಮರಾಮ್ಯಾನ್ ಎಲ್ಲರೂ. ಮತ್ತೆ ನಿಮ್ಮೊಂದಿಗೆ ಕೆಲಸ ಮಾಡುವ ಅವಕಾಶ ನನಗೆ ಸಿಗಲಿ ಅಂತ ಹೇಳುತ್ತಾ ಈ entire ಟೀಂ ಜೊತೆ ತುಂಬ ಒಳ್ಳೆ relationship ಇದೆ, ಅದುನ ಉಳಿಸಿಕೊಂಡು ಹೋಗ್ತೀನಿ. ಹಾಗೆ ನನ್ನಿಂದ ಏನಾದರೂ ತೊಂದರೆ ಆಗಿದ್ದರೆರೆ ಅಥವಾ ಬೇಜಾರಾಗಿದರೆ ದಯವಿಟ್ಟು ಕ್ಷಮೆ ಇರಲಿ.’’ ಎಂದು ಬರೆದುಕೊಂಡಿದ್ದಾರೆ.
ಸದ್ಯ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಪೂಜಾಗೆ ಭೀಕರ ಆ್ಯಕ್ಸಿಡೆಂಟ್ ಆಗಿದೆ. ಕಿಶನ್ ಜೊತೆ ಹನಿಮೂನ್ ಹೋಗುವ ಮುನ್ನ ಪೂಜಾ ಒಬ್ಬಳೇ ಶಾಪಿಂಗ್ಗೆಂದು ತೆರಳಿದ್ದಳು. ಶಾಪಿಂಗ್ ಮುಗಿಸಿ ಬರುವಾಗ ಕಾರೊಂದು ಪೂಜಾಗೆ ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ ಸಾಕಷ್ಟು ರಕ್ತಸ್ರಾವ ಆಗಿದೆ. ಹಾಸ್ಪಿಟಲ್ನಲ್ಲಿ ಡಾಕ್ಟರ್ ಈಗಲೇ ಏನು ಹೇಳಲು ಸಾಧ್ಯವಿಲ್ಲ.. 24 ಗಂಟೆ ಅಬ್ಸರ್ವೇಷನ್ನಲ್ಲಿ ಇಡಬೇಕು ಎಂದು ಹೇಳಿದ್ದಾರೆ. ಸದ್ಯ ಪೂಜಾ ಪಾತ್ರವನ್ನು ಇಲ್ಲಿಗೆ ಕೊನೆಗೊಳಿಸುತ್ತಾರ ಅಥವಾ ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವ ಪೂಜಾ ಪಾತ್ರದಲ್ಲಿ ಹೊಸ ನಟಿ ಎಂಟ್ರಿ ಕೊಡುತ್ತಾರ ನೋಡಬೇಕಿದೆ.
Karna Serial: ಮಂಟಪದಿಂದ ತೇಜಸ್ ಕಾಣೆ: ನಿತ್ಯಾಗೆ ತಾಳಿ ಕಟ್ಟಲು ತಯಾರಾದ ಕರ್ಣ
ಮತ್ತೊಂದೆಡೆ ಪೂಜಾ ಪಾತ್ರದಾರಿ ಆಶಾ ಅಯ್ಯನಾರ್ ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ವೈಲ್ಡ್ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಡಲಿದ್ದಾರೆ ಎಂಬ ಮಾತು ಕೇಳಿಬಂದಿದೆ. ಇದೇ ಕಾರಣಕ್ಕೆ ಅವರು ಧಾರಾವಾಹಿಯಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಬಿಗ್ ಬಾಸ್ನಲ್ಲಿ ಈ ವಾರಾಂತ್ಯ ಮಿಡ್ ಸೀಸನ್ ಮೊದಲ ಫಿನಾಲೆ ನಡೆಯಲಿದೆ. ಇದರಲ್ಲಿ ಸದ್ಯ ಮನೆಯೊಳಗಿರುವ ಅರ್ಧಕರ್ಧ ಮಂದಿ ಎಲಿಮಿನೇಟ್ ಆಗಲಿದ್ದಾರೆ. ಅಷ್ಟೇ ಮಂದಿ ವೈಲ್ಡ್ ಕಾರ್ಡ್ ಮೂಲಕ ಮನೆಯೊಳಗೆ ತೆರಳಲಿದ್ದಾರೆ. ಇದರಲ್ಲಿ ಆಶಾ ಕೂಡ ಒಬ್ಬರು ಎಂಬ ಹೇಳಲಾಗುತ್ತಿದೆ.