ಮುಂಬೈ: ʼಕೆಜಿಎಫ್ʼ (KGF) ಸರಣಿ ಚಿತ್ರಗಳು ರಿಲೀಸ್ ಆದ ಬಳಿಕ ರಾಕಿಂಗ್ ಸ್ಟಾರ್ ಯಶ್ (Yash) ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಹಿಂದೆ ಸ್ಯಾಂಡಲ್‌ವುಡ್‌ನಲ್ಲಿ ವರ್ಷಕ್ಕೆ ಒಂದೆರೆಡು ಸಿನಿಮಾ ಮಾಡುತ್ತಿದ್ದ ಯಶ್ ಈಗ ಸಿನಿಮಾ ಆಯ್ಕೆಯ ವಿಚಾರದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ 2022ರ ಬಳಿಕ ಅವರು ಅಭಿನಯಿಸಿದ ಯಾವ ಸಿನಿಮಾ ಕೂಡ ತೆರೆ ಮೇಲೆ ಬಂದಿಲ್ಲ. ಸದ್ಯ ಅವರು ಕನ್ನಡದ ʼಟಾಕ್ಸಿಕ್ʼ ಹಾಗೂ ಹಿಂದಿಯ ʼರಾಮಾಯಣʼ ಸಿನಿಮಾದ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. 2026ರಲ್ಲಿ ಈ ಸಿನಿಮಾಗಳು ತೆರೆ ಮೇಲೆ ಬರಲಿವೆ. ʼಟಾಕ್ಸಿಕ್ʼ (Toxic) ಒಂದು ಕಮರ್ಶಿಯಲ್ ಸಿನಿಮಾವಾಗಿದ್ದು ಯಶ್ ಇದರಲ್ಲಿ ವಿಭಿನ್ನ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದ್ದು, ಚಿತ್ರ ಬಿಡುಗಡೆಗೂ ಮುನ್ನವೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸುತ್ತಿದೆ. ಇದೀಗ ಅನೇಕ ಸೆಲೆಬ್ರಿಟಿಗಳು ನಟ ಯಶ್ ಅವರ ʼಟಾಕ್ಸಿಕ್ʼ ಸಿನಿಮಾಕ್ಕೆ ಶುಭಾಶಯ ಕೋರಿದ್ದಾರೆ. ಯಶ್ ಬಗ್ಗೆ ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶಾರುಖ್ ಖಾನ್ ತಮ್ಮ ಎಕ್ಸ್ ಖಾತೆಯಲ್ಲಿ ಇತ್ತೀಚೆಗಷ್ಟೇ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಶಾರುಖ್ ಖಾನ್ ಅವರ ಅಭಿಮಾನಿಯೊಬ್ಬರು ನಟ ಯಶ್ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಕೇಳಿದ್ದು ಅದಕ್ಕೆ ಕಿಂಗ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.
ʼʼರಾಕಿಂಗ್ ಸ್ಟಾರ್ ಯಶ್ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಅವರ ʼಟಾಕ್ಸಿಕ್ʼ ಸಿನಿಮಾ ಬಗ್ಗೆ ನಿಮ್ಮ ಅನಿಸಿಕೆ ಏನು?ʼʼ ಎಂದು ಶಾರುಖ್ ಖಾನ್ ಬಳಿ ಅಭಿಮಾನಿಯೊಬ್ಬರು ಪ್ರಶ್ನೆ ಕೇಳಿದರು. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಶಾರುಖ್ ಖಾನ್, ʼʼಯಶ್ ತುಂಬಾ ಸ್ವೀಟ್ ಪರ್ಸನ್. ಅವರ ಮುಂದಿನ ಸಿನಿಮಾಕ್ಕೆ ನಾನು ಪ್ರೀತಿಯಿಂದ ಹಾರೈಸುತ್ತೇನೆ...ಒಳ್ಳೆದಾಗಲಿʼʼ ಎಂದಿದ್ದಾರೆ.
ಈ ಹಿಂದೆ ನಟ ಶಾರುಖ್ ಖಾನ್ ದುಬೈಯಲ್ಲಿ ನಡೆದ ಗ್ಲೋಬಲ್ ವಿಲೇಜ್‌ನ ಕಾರ್ಯಕ್ರಮದಲ್ಲಿ ಯಶ್ ಅವರ ಬಗ್ಗೆ ಪ್ರಸ್ತಾಪಿಸಿದ್ದರು. ʼʼಭಾರತದ ನಟರು ವಿಶ್ವ ಮಟ್ಟಕ್ಕೆ ಬೆಳೆಯುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ...ನಮ್ಮ ಯಶ್ ಅವರ ಸಿನಿಮಾ ಜರ್ನಿ ಹೀಗೆ ಸಾಗಲಿʼʼ ಎಂದಿದ್ದರು. ಸದ್ಯ ʼಟಾಕ್ಸಿಕ್ʼ ಸಿನಿಮಾದಲ್ಲಿ ನಟ ಯಶ್ ಬ್ಯುಸಿಯಾಗಿದ್ದು ಇದರ ಶೂಟಿಂಗ್ ವಿವಿಧ ಕಡೆಗಲಲ್ಲಿ ಭರದಿಂದ ಸಾಗುತ್ತಿದೆ. ಮುಂಬೈಯಲ್ಲಿ ಶಾರುಖ್ ಖಾನ್ ಅವರನ್ನು ಯಶ್ ಭೇಟಿಯಾಗಿದ್ದರು ಎಂಬ ಮಾಹಿತಿ ಇದೆ.
ʼಕೆಜಿಎಫ್ 2' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ಬಳಿಕ ಯಶ್ ಅವರ ಯಾವುದೇ ಸಿನಿಮಾ ತೆರೆ ಕಂಡಿಲ್ಲ. ʼಟಾಕ್ಸಿಕ್ʼ ಸಿನಿಮಾ ರಿಲೀಸ್ ವಿಳಂಬವಾಗಲಿದೆ ಎನ್ನಲಾಗಿತ್ತು. ಇದೀಗ ಆ ವದಂತಿಗೆ ತೆರೆ ಬಿದ್ದಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ʼಟಾಕ್ಸಿಕ್ʼ ಸಿನಿಮಾವನ್ನು ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗುತ್ತದೆ. ಡಿಸೆಂಬರ್ ಒಳಗೆ ಶೂಟಿಂಗ್ ಪೂರ್ಣವಾಗುವ ನಿರೀಕ್ಷೆ ಇದೆ. 2026ರ ಜನವರಿ ವೇಳೆಗೆ ʼಟಾಕ್ಸಿಕ್ʼ ಚಿತ್ರದ ತಾಂತ್ರಿಕ ಕೆಲಸ ಪೂರ್ಣವಾಗಿ ಪ್ರಚಾರ ಕಾರ್ಯ ಆರಂಭವಾಗಲಿದೆ. 2026ರ ಮಾರ್ಚ್ 19ರಂದು ಚಿತ್ರ ಬಿಡುಗಡೆಯಾಗಲಿದೆ.