ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actress Tara: ಹಿರಿಯ ನಟ, ರಾಜಕಾರಣಿ ಅಂಬರೀಷ್‌ಗೂ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿ; ತಾರಾ ಮನವಿ

Actor Ambareesh: ನಟ ಮತ್ತು ರಾಜಕಾರಣಿ ಅಂಬರೀಷ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಹಿರಿಯ ನಟಿ ತಾರಾ ಅನುರಾಧ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ತಾರಾ ಪತ್ರ ಬರೆದು, ಅಂಬರೀಷ್‌ ಅವರಿಗೂ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಬೇಕೆಂದು ಆಗ್ರಹಿಸಿದ್ದಾರೆ.

ಬೆಂಗಳೂರು: ಇತ್ತೀಚೆಗೆ ರಾಜ್ಯ ಸರ್ಕಾರ ನಟ ಡಾ. ವಿಷ್ಣುವರ್ಧನ್ (Vishnuvardhan) ಮತ್ತು ಹಿರಿಯ ನಟಿ ಡಾ. ಸರೋಜಾದೇವಿ (B. Saroja Devi) ಅವರಿಗೆ ಮರಣೋತ್ತರ 'ಕರ್ನಾಟಕ ರತ್ನ' (Karnataka Ratna) ಪ್ರಶಸ್ತಿ ಘೋಷಿಸುವ ಮೂಲಕ ಅಭಿಮಾನಿಗಳ ಬಹು ದಿನಗಳ ಬೇಡಿಕೆಯನ್ನು ಈಡೇರಿಸಿದೆ. ಇದರ ಬೆನ್ನಲ್ಲೇ ದಿವಂಗತ ನಟ ಮತ್ತು ರಾಜಕಾರಣಿ ಅಂಬರೀಷ್ (Ambareesh) ಅವರಿಗೂ ಈ ಗೌರವ ನೀಡುವಂತೆ ಹಿರಿಯ ನಟಿ ತಾರಾ ಅನುರಾಧ (Actress Tara) ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ತಾರಾ ಪತ್ರ ಬರೆದು, ಅಂಬರೀಷ್‌ ಅವರಿಗೂ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಬೇಕೆಂದು ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Karnataka Ratna: ವಿಷ್ಣುವರ್ಧನ್​​, ಬಿ. ಸರೋಜಾದೇವಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಘೋಷಣೆ

ತಾರಾ ಬರೆದ ಪತ್ರದಲ್ಲಿ ಏನಿದೆ?

ʼʼನಟ, ರಾಜಕಾರಣಿ ಅಂಬರೀಷ್‌ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಬೇಕು ಎನ್ನುವುದು ಎಲ್ಲ ಕಲಾವಿದರ ಹಾಗೂ ಅಭಿಮಾನಿಗಳ ಕೋರಿಕೆ. ತಾವು ಅವರನ್ನು ಬಹಳ ಹತ್ತಿರದಿಂದ ಬಲ್ಲವರಾಗಿದ್ದು, ಆತ್ಮೀಯರಾಗಿದ್ದು ಅವರಿಗೆ ಸಲ್ಲಬೇಕಾದ ಸನ್ಮಾನ ನೀಡಿʼʼ ಎಂದು ಡಿ.ಕೆ. ಶಿವಕುಮಾರ್‌ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

1952ರಲ್ಲಿ ಮಳವಲ್ಲಿಯಲ್ಲಿ ಜನಿಸಿದ ಅಂಬರೀಷ್‌ ಅವರ ಮೊದಲ ಹೆಸರು ಮಳವಳ್ಳಿ ಹುಚ್ಚೇಗೌಡ ಅಮರನಾಥ್‌. 1955ರಲ್ಲಿ ತೆರೆಕಂಡ ʼಶಿವಶರಣೆ ನಂಬೆಕ್ಕʼ ಚಿತ್ರದಲ್ಲಿ ಬಾಲಕಲಾವಿದನಾಗಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಅಂಬರೀಷ್‌ ಬಳಿಕ 1972ರಲ್ಲಿ ರಿಲೀಸ್‌ ಆದ ʼನಾಗರಹಾವುʼ ಸಿನಿಮಾದ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದರು. ಅದರಲ್ಲಿನ ಜಲೀಲ ಪಾತ್ರ ಇಂದಿಗೂ ಜನಪ್ರಿಯ. ಕನ್ನಡ ಜತೆಗೆ ತಮಿಳು, ಹಿಂದಿ, ಮಲಯಾಳಂ ಚಿತ್ರಗಳಲ್ಲಿಯೂ ನಟಿಸಿದ್ದ ಅವರು ಪೊಲೀಸ್‌ ಪಾತ್ರದ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಪ್ರಶಸ್ತಿಗಳು

ಅಂಬರೀಷ್‌ ಅವರನ್ನು ಹುಡುಕಿಕೊಂಡು ಇದುವರೆಗೆ ಹಲವು ಪ್ರಶಸ್ತಿಗಳು ಬಂದಿವೆ. ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ಫಿಲ್ಮ್‌ಫೇರ್‌ ಅವಾರ್ಡ್‌, ಎನ್‌ಟಿಆರ್‌ ನ್ಯಾಶನಲ್‌ ಅವಾರ್ಡ್‌, ಆಂಧ್ರ ಪ್ರದೇಶ ಸರ್ಕಾರದ ನಂದಿ ಪ್ರಶಸ್ತಿ, ಕರ್ನಾಟಕ ಸರ್ಕಾರದ ಡಾ. ವಿಷ್ಣುವರ್ಧನ್‌ ಪ್ರಶಸ್ತಿ ಮುಂತಾದ ಗೌರವ ಅಂಬರೀಷ್‌ ಅವರಿಗೆ ಸಂದಿದೆ.

ವಿಷ್ಣುವರ್ಧನ್‌, ಡಾ. ರಾಜ್‌ ಕುಮಾರ್‌ ಸಮಕಾಲೀನವರಾಗಿದ್ದ ಅಂಬರೀಷ್‌ ಅಭಿನಯದ ಕೊನೆ ಚಿತ್ರ 2019ರಲ್ಲಿ ತೆರೆಕಂಡ ʼಕುರುಕ್ಷೇತ್ರʼ. ದರ್ಶನ್‌ ನಾಯಕನಾಗಿ ನಟಿಸಿದ್ದ ಈ ಚಿತ್ರದಲ್ಲಿ ಅಂಬರೀಷ್‌ ಭೀಷ್ಮ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕೂ ಮೊದಲು ʼಡ್ರಾಮಾʼ, ʼಬುಲ್‌ಬುಲ್‌ʼ, ʼಅಂಬರೀಷʼ, ʼದೊಡ್ಮನೆ ಹುಡ್ಗʼ, ʼಅಂಬಿ ನಿಂಗ್‌ ವಯಸ್ಸಾಯ್ತೋʼ ಮೊದಲಾದ ಚಿತ್ರಗಳಲ್ಲಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು.

1994ರಲ್ಲಿ ಕಾಂಗ್ರೆಸ್‌ ಮೂಲಕ ರಾಜಕೀಯಕ್ಕೆ ಕಾಲಿಟ್ಟ ಅಂಬರೀಷ್‌ ಸಂಸದ, ಸಚಿವರಾಗಿಯೂ ಆಯ್ಕೆಯಾಗಿದ್ದರು. ಅಂಬರೀಷ್‌ 2018ರ ನವೆಂಬರ್ 24ರಂದು ತಮ್ಮ 66ನೇ ವರ್ಷದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೂ ಮರಣೋತ್ತರವಾಗಿ ಕರ್ನಾಟಕ ಪ್ರಶಸ್ತಿ ಘೋಷಿಸಬೇಕೆಂಬ ಆಗ್ರಹ ಹಲವು ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಇದೀಗ ವಿಷ್ಣುವರ್ಧನ್‌ ಮತ್ತು ಸರೋಜಾದೇವಿ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಘೋಷಣೆಯಾದ ಬೆನ್ನಲ್ಲೇ ಈ ಆಗ್ರಹ ಮುನ್ನಲೆಗೆ ಬಂದಿದೆ.