ಶ್ರೀ ಜೈ ಮಾತ ಕಂಬೈನ್ಸ್ ಲಾಂಛನದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ, ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿ ನಟಿಸುತ್ತಿರುವ ಬಹು ನಿರೀಕ್ಷಿತ ದಿ ಡೆವಿಲ್ ಚಿತ್ರದ (The Devil Movie) ಶೂಟಿಂಗ್ ಬಹುತೇಕ ಮುಕ್ತಾಯವಾಗಿದೆ. ಕೆಲ ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದ್ದು, ಇದಕ್ಕಾಗಿ ದರ್ಶನ್ ಸೇರಿದಂತೆ ಚಿತ್ರತಂಡ ಥೈಲ್ಯಾಂಡ್‌ಗೆ ಹಾರಿದೆ.
ಡೆವಿಲ್ ಸಿನಿಮಾದ ಹಾಡಿನ ಚಿತ್ರೀಕರಣ ಥೈಲ್ಯಾಂಡ್‌ನಲ್ಲಿ ನಡೆಯುತ್ತಿದ್ದು ಹಸಿರು ಬಣ್ಣದ ಸೂಟ್ ಕಾಸ್ಟ್ಯೂಮ್‌ನಲ್ಲಿ ಡಿ ಬಾಸ್ ದರ್ಶನ್ ಮಿಂಚಿದ್ದಾರೆ. ವಿದೇಶಿ ಪ್ರವಾಸಿಗರ ಜೊತೆ ದರ್ಶನ್ ಫೋಟೋ ರಿವೀಲ್ ಆಗಿದ್ದು, ಇದು ಭರ್ಜರಿ ವೈರಲ್ ಆಗುತ್ತಿದೆ. ಸ್ವಿಟ್ಜರ್ಲೆಂಡ್‌ನಲ್ಲಿ ಡೆವಿಲ್ ಸಿನಿಮಾ ಸಾಂಗ್ ಶೂಟಿಂಗ್ ಪ್ಲ್ಯಾನ್ ಮಾಡಿತ್ತು ಚಿತ್ರತಂಡ. ಆದರೆ ರೇಣುಕಾಸ್ವಾಮಿ ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ದರ್ಶನ್‌ಗೆ ಯೂರೋಪ್ ವೀಸಾ ಸಿಗಲಿಲ್ಲ. ಹಾಗಾಗಿ ಥೈಲ್ಯಾಂಡ್‌ನ ಫುಕೆಟ್‌ನಲ್ಲಿ ಚಿತ್ರೀಕರಣಕ್ಕೆ ಮುಂದಾಗಿದೆ.
ಕಳೆದ ಮಂಗಳವಾರ ರಾತ್ರಿ ದರ್ಶನ್, ಪತ್ನಿ ವಿಜಯಲಕ್ಷ್ಮಿ ಪುತ್ರ ವಿನೀಶ್ ಜೊತೆ ಹಾಗೂ ಡೆವಿಲ್ ಟೀಮ್ ಜೊತೆ ಥೈಲ್ಯಾಂಡ್‌ಗೆ ತೆರಳಿದ್ದರು. ಇದೀಗ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು, ನಟಿ ರಚನಾ ರೈ ಜೊತೆ ದರ್ಶನ್ ಡ್ಯುಯೆಟ್ ಸಾಂಗ್ ಇದಾಗಿದೆ. ನಾಲ್ಕೈದು ದಿನಗಳ ಕಾಲ ಥೈಲ್ಯಾಂಡ್ ದೇಶದ ಬ್ಯಾಂಕಾಕ್, ಫುಕೆಟ್, ಕ್ರಾಬಿಯಲ್ಲಿ ಹಾಡಿನ ಚಿತ್ರೀಕಣ ನಡೆಯಲಿದ್ದು ಬಳಿಕ ಕೆಲ ದಿನ ದರ್ಶನ್ ಅಲ್ಲಿಯೇ ವಿಶ್ರಾಂತಿ ಪಡೆಯಲಿದ್ದಾರೆ. ಈ ತಿಂಗಳ ಕೊನೆಯಲ್ಲಿ ದರ್ಶನ್ ಭಾರತಕ್ಕೆ ಮರಳಲಿದ್ದಾರೆ.
ಸುಧಾಕರ್.ಎಸ್.ರಾಜ್ ಅವರ ಛಾಯಾಗ್ರಹಣವಿರುವ ದಿ ಡೆವಿಲ್ ಚಿತ್ರಕ್ಕೆ ಬಿ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಮೋಹನ್ ಬಿ. ಕೆರೆ ಕಲಾ ನಿರ್ದೇಶನ ಹಾಗೂ ರಾಮ್ ಲಕ್ಷ್ಮಣ್ ಅವರ ಸಾಹಸ ನಿರ್ದೇಶನವಿದೆ. ದರ್ಶನ್ ಅವರಿಗೆ ನಾಯಕಿಯಾಗಿ ರಚನಾ ರೈ ಅಭಿನಯಿಸುತ್ತಿದ್ದಾರೆ. ತುಳಸಿ, ಅಚ್ಯುತಕುಮಾರ್, ಮಹೇಶ್ ಮಂಜ್ರೇಕರ್, ಶ್ರೀನಿವಾಸಪ್ರಭು, ಶೋಭರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
Bhagya Lakshmi Serial: ಕೊನೆಗೂ ನಿಂತೇ ಹೋಯಿತು ಪೂಜಾ-ಕಿಶನ್ ಮದುವೆ: ನಿಲ್ಲಿಸಿದ್ದು ಸ್ವತಃ ಭಾಗ್ಯ